ತುಮಕೂರು- ಸಮಾಜದಲ್ಲಿ ಸಾಮಾನ್ಯ ಮಹಿಳೆಯರಿಗೆ ಯಾವಾಗ ಗೌರವ ಸಿಗುತ್ತದೋ ಆಗ ಮಾತ್ರ ಮಹಿಳಾ ದಿನಾಚರಣೆಗೆ ನಿಜವಾದ ಅರ್ಥ ಬರುತ್ತದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಹೇಳಿದರು.
ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಗರದ ಬಿಜಿಎಸ್ ವೃತ್ತದಿಂದ ಅಮಾನಿಕೆರೆಯ ಗಾಜಿನಮನೆವರೆಗೆ ಹಮ್ಮಿಕೊಂಡಿದ್ದ ಹಕ್ಕೋತ್ತಾಯ ಜಾಥಾಕ್ಕೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಬ್ಯಾನರ್ ಉದ್ಘಾಟಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಸಮಾಜದಲ್ಲಿ ತನ್ನ ಪಾಡಿಗೆ ತಾನು ಕರ್ತವ್ಯವನ್ನು ನಿಭಾಯಿಸುವುದು ಸುಲಭದ ಮಾತಲ್ಲ. ಹಲವು ಕಷ್ಟ-ನಷ್ಟಗಳಲ್ಲೇ ತನ್ನ ಬದುಕನ್ನೆ ಸವೆಸುವ ಮಹಿಳೆಯರಿಗೆ ಗೌರವ ದೊರೆತಾಗ ಮಾತ್ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅರ್ಥಪೂರ್ಣವಾಗುತ್ತದೆ ಎಂದರು.
ನಾನು ಸಿಇಓ ಆಗಿದ್ದೇನೆ, ಅಧಿಕಾರಿಯಾಗಿದ್ದೇನೆ ಎಂಬ ಕಾರಣಕ್ಕೆ ಗೌರವ ಬೇಡ. ನಾನು ಸಾಮಾನ್ಯ ಮಹಿಳೆಯಾಗಿರುವಾಗಲೂ ಕೂಡ ಗೌರವ ಸಿಗಬೇಕು. ಪ್ರತಿಯೊಬ್ಬ ಸಾಮಾನ್ಯ ಮಹಿಳೆಗೆ ಗೌರವ ಸಿಕ್ಕರೆ ಅದಕ್ಕಿಂತ ಹೆಚ್ಚಿನ ಗೌರವದ ಅಗತ್ಯವಿಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಅಡುಗೆ ಕೋಣೆಯಲ್ಲಿ ಬೇಯುವಂತಹ ಹೆಣ್ಣು ಮಕ್ಕಳು, ಬಿರುಗಾಳಿಯಲ್ಲಿ ಕೆಲಸ ಮಾಡುವಂತಹ ಹೆಣ್ಣು ಮಕ್ಕಳು ಹಾಗೂ ಸಾಮಾನ್ಯ ಹೆಣ್ಣುಮಕ್ಕಳಿಗೆ ಯಾವಾಗ ಗೌರವ ಸಲ್ಲಿಸುತ್ತೇವೆಯೋ ಆ ದಿನ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಒಂದು ಅರ್ಥ ಬರುತ್ತದೆ ಎಂದು ಕುವೆಂಪು ಹೇಳಿದ್ದರು. ಅವರ ಮಾತು ಅಕ್ಷರಶಃ ಸತ್ಯ. ಅಲ್ಲಿಯವರೆಗೂ ಮಹಿಳಾ ದಿನಾಚರಣೆಗೆ ಅರ್ಥ ಬರುವುದಿಲ್ಲ ಎಂದರು.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಇದೆ ಎಂಬ ಅರಿವು ಸಾಕಷ್ಟು ಮಹಿಳೆಯರಿಗೆ ಇಲ್ಲವೇ ಇಲ್ಲ. ಕುಟುಂಬ ನಿರ್ವಹಣೆ, ಬದುಕಿನ ಜಂಜಾಟದಲ್ಲೇ ಮಹಿಳೆಯರು ಮುಳುಗಿ ಹೋಗಿದ್ದಾರೆ. ಸಾಮಾನ್ಯ ಮಹಿಳೆಯರಿಗೆ ಈ ದಿನಾಚರಣೆಯ ಅರಿವು ಯಾವಾಗ ಬರುತ್ತದೋ ಆಗ ಮಾತ್ರ ಮಹಿಳಾ ದಿನಾಚರಣೆಗೆ ಅರ್ಥ ಬರುತ್ತದೆ ಎಂದು ಅವರು ಹೇಳಿದರು.
ಕಳೆದ ವರ್ಷ ಜಿಲ್ಲೆಯಲ್ಲಿ ಅರಿವಿನ ಪಯಣ ಎಂಬ ಹೆಸರಿನಲ್ಲಿ ಹೋರಾಟ ಪ್ರಾರಂಭ ಮಾಡಿದ್ದರು. ಒಂದು ವರ್ಷದ ನಂತರ ಹೋರಾಟ ಅಂತಿಮಘಟ್ಟಕ್ಕೆ ಬಂದು ನಿಂತಿದೆ. ಇಂದು ರಾಜ್ಯದ ಅನೇಕ ಕಡೆಗಳಿಂದ ಹೋರಾಟಗಾರ್ತಿಯರು ಆಗಮಿಸಿದ್ದಾರೆ. ಇದರಿಂದ ಮಹಿಳೆಯರಿಗೆ ಹೆಚ್ಚಿನ ಗೌರವ ದೊರೆಯುವಂತಾಗಬೇಕು ಎಂದರು.
ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಈ ಜಾಥಾ ಹೊರಡುವ ಮುನ್ನ ಬಿಜಿಎಸ್ ವೃತ್ತದಲ್ಲಿ ಮಹಿಳೆಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ನಂತರ ಜಾಥಾ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸಮಾವೇಶ ನಡೆದ ಅಮಾನಿಕೆರೆಯ ಗಾಜಿನ ಮನೆ ತಲುಪಿತು.
ಜಾಥಾದಲ್ಲಿ ಒಕ್ಕೂಟದ ವಾಣಿ ಪೆರಿಯೋಡಿ, ವಿಮಲ, ಪದ್ಮಶಾಲಿ, ಮಲ್ಲಿಕಾ ಬಸವರಾಜು, ಬಾ.ಹ. ರಮಾಕುಮಾರಿ, ಕಲ್ಯಾಣಿ, ಡಾ. ಅರುಂಧತಿ ಮತ್ತಿತರರು ಪಾಲ್ಗೊಂಡಿದ್ದರು.