ತಂತ್ರಜ್ಞಾನದಲ್ಲಿನ ಕ್ರಾಂತಿಯಿಂದಾಗಿ ಮಾಧ್ಯಮಗಳು ‘ಡಿಗ್ಲಾಮರೈಸ್’ ಆಗಿವೆ: ಪ್ರೊ. ಕೆ. ವಿ. ನಾಗರಾಜ್

ತುಮಕೂರು: ತಂತ್ರಜ್ಞಾನದಲ್ಲಿನ ಕ್ರಾಂತಿಯಿಂದಾಗಿ ಮಾಧ್ಯಮಗಳು ‘ಡಿಗ್ಲಾಮರೈಸ್’ ಆಗಿವೆ. ಎಲ್ಲರೂ ಸಂವಹನಕಾರರಾಗಿದ್ದು, ಪತ್ರಿಕೋದ್ಯಮ ಪದ ‘ಸಂವಹನಕಾರ’ ಎಂದು ಬದಲಾಗುತ್ತಿದೆ ಎಂದು ಅಸ್ಸಾಂ ಕೇಂದ್ರೀಯ ವಿಶ್ವವಿದ್ಯಾನಿಲಯದ ಮಾಜಿ ಸಹ ಕುಲಪತಿ ಪ್ರೊ. ಕೆ. ವಿ. ನಾಗರಾಜ್ ಹೇಳಿದರು.

ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ಆಯೋಜಿಸಿರುವ ‘ವಿಕಸಿತ್ ಭಾರತ್@2047: ಭಾರತದ ಸಮಗ್ರ ಅಭಿವೃದ್ಧಿಯಲ್ಲಿ ಡಿಜಿಟಲ್ ರೂಪಾಂತರ ಮತ್ತು ಮಾಧ್ಯಮ ಸಂಗಮದ ಪಾತ್ರ’ ಕುರಿತ ಬಹುಶಿಸ್ತೀಯ ರಾಷ್ಟ್ರೀಯ ಸಮ್ಮೇಳನವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

ಮುಂದುವರೆದ ದೇಶಗಳಲ್ಲಿ ಸಂವಹನ ಕಾರ್ಯಕ್ಷೇತ್ರದಲ್ಲಿ ಶೇ.50 ರಷ್ಟು ಅವಕಾಶಗಳಿವೆ. ಭಾರತದ ಅನೇಕ ಪತ್ರಕರ್ತರು ಸವಲತ್ತುಗಳನ್ನು ಹುಡುಕುತ್ತಾರೆ. ಇದೊಂದು ಸರಣಿ ಪ್ರಕ್ರಿಯೆಯಾಗಿದ್ದು, ಅಪರಾಧೀಕರಣಕ್ಕೆ ಕಾರಣವಾಗುತ್ತದೆ. ಇದರಿಂದ ವೃತ್ತಿಯು ತನ್ನ ಹೊಳಪನ್ನು ಕಳೆದುಕೊಳ್ಳುತ್ತದೆ ಎಂದರು.

ಪತ್ರಿಕೋದ್ಯಮದಲ್ಲಿ ಎಲ್ಲರೂ ಸಮಾನರೆಂಬ ಬೌದ್ಧ ಪರಿಕಲ್ಪನೆಯು ಅವಶ್ಯಕವಿದ್ದು, ಭಾರತ ಪತ್ರಿಕೋದ್ಯಮದಲ್ಲಿ ಇತ್ತೀಚೆಗೆ ಪಾಶ್ಚಾತ್ಯೀಕರಣ ಪ್ರವೇಶಿಸಿದೆ. ಆದರೆ, ಏಷ್ಯಾದ ಪತ್ರಿಕೋದ್ಯಮವು ಸಂಸ್ಕøತಿ ಮತ್ತು ನಂಬಿಕೆಗೆ ಋಣಿಯಾಗಿರುವುದರಿಂದ, ಇಲ್ಲಿ ನಾವು ಏನನ್ನೂ ಬದಲಾಯಿಸಲು ಸಾಧ್ಯವಿಲ್ಲ. ತಂತ್ರಜ್ಞಾನದ ರೂಪಾಂತರದಿಂದ ಉತ್ತರ ಭಾರತದಲ್ಲಿ ಡಿಜಿಟಲ್ ಅನಾಗರಿಕತೆಯನ್ನು ನೋಡುತ್ತೇವೆ. ಪ್ರತಿಯೊಬ್ಬರೂ ಡಿಜಿಟಲ್ ಪ್ರಜಾಪ್ರಭುತ್ವವನ್ನು ಬಯಸುತ್ತಿದ್ದಾರೆ. ಉತ್ಕøಷ್ಟರಾಗಲು ತಂತ್ರಜ್ಞಾನವನ್ನು ಬಳಸಿಕೊಂಡಾಗ ಕೆಡುಕುಗಳಿರುವುದಿಲ್ಲ ಎಂದರು.

‘ನ್ಯೂಸ್18 ಕನ್ನಡ’ ಸಂಪಾದಕ ಹರಿಪ್ರಸಾದ್ ಎ. ‘ಇಂಪ್ರೆಶನ್-2024’ ಮಾಧ್ಯಮ ಹಬ್ಬವನ್ನು ಉದ್ಘಾಟಿಸಿ ಮಾತನಾಡಿ, ಪತ್ರಕರ್ತ ಭ್ರಷ್ಟಾಚಾರಿ, ಕೋಮುವಾದಿ, ಜಾತಿವಾದಿಯಾಗಬಾರದು. ಧ್ವನಿ ಇಲ್ಲದವರ, ಶೋಷಿತರ ಧ್ವನಿಯಾಗಬೇಕು. ಮಾಧ್ಯಮವನ್ನು ಮುನ್ನಡೆಸಲು ಸಹಕಾರ, ಸಂವಹನ, ಬದ್ಧತೆ ಮತ್ತು ನೈತಿಕತೆ ಅತ್ಯಂತ ಅವಶ್ಯಕ ಸೂತ್ರಗಳು. ಪತ್ರಿಕೋದ್ಯಮವಷ್ಟೇ ಎಲ್ಲರನ್ನೂ ಸಮಾನವಾಗಿ ಕಾಣಲು ಸಾಧ್ಯ ಎಂದರು.

ಮಾಧ್ಯಮಗಳನ್ನು ನಡೆಸುತ್ತಿರುವುದು ಉದ್ಯಮಿಗಳೇ ಹೊರೆತು ಪತ್ರಕರ್ತರಲ್ಲ. ಎಲ್ಲರ ವಿಚಾರಧಾರೆಗಳನ್ನು ಒಪ್ಪಿಕೊಳ್ಳಬೇಕು. ತಪ್ಪಿದ್ದಲ್ಲಿ ಪ್ರಶ್ನಿಸಬೇಕು. ಪತ್ರಿಕೋದ್ಯಮದಲ್ಲಿ ನಿರ್ಧಿಷ್ಟ ಗುರಿ ಸಾಧಿಸಲು ಪೂರಕ ಕಲಿಕೆ ಮುಖ್ಯ. ಮೊದಲು ವರದಿಗಾರನಾಗಬೇಕು. ನಂತರ ಪತ್ರಿಕೋದ್ಯಮದ ಎಲ್ಲ ಭಾಗಗಳಲ್ಲೂ ಕಾರ್ಯನಿರ್ವಹಿಸುವ ಧೈರ್ಯ, ಆತ್ಮವಿಶ್ವಾಸ, ನಿಪುಣತೆ ತಾನಾಗಿಯೇ ಬರುತ್ತದೆ ಎಂದರು.

ಕೊಪ್ಪಳ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಬಿ. ಕೆ. ರವಿ ಮಾತನಾಡಿ, ಮೂಲ ಸಂವಹನ ಕ್ರಿಯೆ ಎಂದಿಗೂ ಬದಲಾಗುವುದಿಲ್ಲ. ಕೃತಕ ಬುದ್ಧಿಮತ್ತೆ ಮನುಷ್ಯನ ಆಜ್ಞೆಯಂತೆ ಕಾರ್ಯನಿರ್ವಹಿಸುತ್ತದೆ. ಕೃತಕ ಬುದ್ಧಿಮತ್ತೆ ಪ್ರಪಂಚವನ್ನು ಆಳುತ್ತದೆ ಎಂಬ ಭ್ರಮೆ ಬೇಡ. ಕಠಿಣ ಶ್ರಮ, ಸಂವಹನ, ಕ್ರೀಯಾಶೀಲತೆ, ಜ್ಞಾನ, ಬರೆವಣಿಗೆ ಪತ್ರಕರ್ತರನ್ನು, ಪತ್ರಿಕೋದ್ಯಮವನ್ನು ಸದಾ ಕಾಪಾಡುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ತಂತ್ರಜ್ಞಾನವು ನಮ್ಮ ಸ್ಮರಣೆಯ ಗುಣಮಟ್ಟವನ್ನು ಕುಂದಿಸುತ್ತಿದೆ. ತಂತ್ರಜ್ಞಾನ ವ್ಯಸನಿಗಳಾಗಿದ್ದೇವೆ. ಅಭಿವೃದ್ಧಿಗಾಗಿ, ನಿಖರತೆಗಾಗಿ ಡಿಜಿಟಲ್ ವೇದಿಕೆಯನ್ನು ಬಳಸಬೇಕು ಎಂದರು.
ಭಾರತೀಯ ಸಂವಹನ ಕಾಂಗ್ರೆಸ್‍ನ ಅಧ್ಯಕ್ಷ, ಪಶ್ಚಿಮ ಬಂಗಾಳದ ವಿಶ್ವಭಾರತಿ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಪ್ರಾಧ್ಯಾಪಕ ಪ್ರೊ. ಬಿಪ್ಲಬ್ ಲೋಹೋ ಚೌಧರಿ ಮಾತನಾಡಿ, ವಸಾಹತುಶಾಹಿ ಕ್ರಮದಲ್ಲಿ ಸಂವಹನ ಪರಿಕಲ್ಪನೆಯ ರೂಪಾಂತರವು ನಡೆಯುತ್ತಿದೆ. ಸಂವಹನವು ಎಲ್ಲವನ್ನೂ, ಎಲ್ಲರನ್ನೂ ಒಂದೇ ಸೂರಿನಡಿ ತರುತ್ತದೆ. ವಿಕಸಿತ್ ಭಾರತ್ ಇದರ ಮೊದಲ ಹೆಜ್ಜೆ ಎಂದರು.

‘ಮೀಡಿಯಾ ಲಿಟೆರೆಸಿ ಇನ್ ದಿ ಟಿಜಿಟಲ್ ಇರಾ’ ಎಂಬ ಸಂಪಾದಿತ ಪುಸ್ತಕ, ಸಮ್ಮೇಳನದ ಪ್ರಬಂಧ ಸಾರಲೇಖಗಳ ಕೈಪಿಡಿ, ‘ಕಲ್ಪತರು ಟೈಮ್ಸ್’ ಪ್ರಾಯೋಗಿಕ ಪತ್ರಿಕೆಯ ವಿಶೇಷ ಸಂಚಿಕೆ ಬಿಡುಗಡೆ ಮಾಡಲಾಯಿತು.

ಭೋಪಾಲ್‍ನ ಮಖನ್‍ಲಾಲ್ ಚತುರ್ವೇದಿ ಪತ್ರಿಕೋದ್ಯಮ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಕೆ. ಜಿ. ಸುರೇಶ್ ‘ಭಾರತದಲ್ಲಿ ಡಿಜಿಟಲ್ ಪರಿವರ್ತನೆಗೆ ಮಾಧ್ಯಮ ಸಾಕ್ಷರತೆಯ ಅಗತ್ಯ’ ಕುರಿತು ವಿಶೇಷ ಉಪನ್ಯಾಸ ನೀಡಿದರು.

‘ಬಹುಶಿಸ್ತೀಯ ನೆಲೆಯಲ್ಲಿ ಸಂವಹನದ ಅಧ್ಯಯನ’ ಹಾಗೂ ‘ಭಾರತೀಯ ಮಾಧ್ಯಮ ಶಿಕ್ಷಣ ಪರಿಷತ್ತು’ ಕುರಿತು ವಿಶೇಷ ಗೋಷ್ಠಿಗಳು ನಡೆದವು. ಪ್ರೊ. ಕೆ. ವಿ. ನಾಗರಾಜ್, ಪ್ರೊ. ಕೆ. ಜಿ. ಸುರೇಶ್, ಪ್ರೊ. ಬಿ. ಕೆ. ರವಿ, ಪ್ರೊ. ನಿರಂಜನ ವಾನಳ್ಳಿ, ಪ್ರೊ. ಬಿಪ್ಲಬ್ ಲೋಹೋ ಚೌಧರಿ, ಪ್ರೊ. ಎಚ್. ಕೆ. ಶಿವಲಿಂಗಸ್ವಾಮಿ, ಡಾ. ಯು. ಬಿ. ಪವನಜ, ಪ್ರೊ. ರಮೇಶ್ ಸಾಲಿಯಾನ್, ಡಾ. ಸಂಸ್ಕøತಿ ಗುಲ್ವಾಡಿ, ಪ್ರೊ. ಸಪ್ನಾ ಎಂ. ಎಸ್., ಸಂವಾದದಲ್ಲಿ ಭಾಗವಹಿಸಿದ್ದರು.

ಸಮ್ಮೇಳನದಲ್ಲಿ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಪ್ರತಿನಿಧಿಗಳು ಸಂಶೋಧನ ಪ್ರಬಂಧಗಳನ್ನು ಮಂಡಿಸಿದರು. ಸಮ್ಮೇಳನದ ವಿವಿಧ ತಾಂತ್ರಿಕ ಗೋಷ್ಠಿಗಳ ಅಧ್ಯಕ್ಷತೆಯನ್ನು ರಾಜ್ಯದ ವಿವಿಧ ವಿಶ್ವವಿದ್ಯಾನಿಲಯಗಳ ಪ್ರಾಧ್ಯಾಪಕರು ವಹಿಸಿದ್ದರು.

ಮಾಧ್ಯಮ ಹಬ್ಬದ ಅಂಗವಾಗಿ ರಾಜ್ಯದ ವಿವಿಧ ಕಾಲೇಜು ಹಾಗೂ ವಿವಿಗಳ ವಿದ್ಯಾರ್ಥಿಗಳಿಗಾಗಿ ಸ್ಪರ್ಧೆಗಳು ನಡೆದವು.

ಸಮ್ಮೇಳನ ಹಾಗೂ ಮಾಧ್ಯಮ ಹಬ್ಬದ ಸಂಘಟನಾ ಕಾರ್ಯದರ್ಶಿ ಡಾ. ಸಿಬಂತಿ ಪದ್ಮನಾಭ ಕೆ. ವಿ. ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ವಿವಿ ಕುಲಸಚಿವೆ ನಾಹಿದಾ ಜûಮ್ ಜûಮ್, ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನಕುಮಾರ್ ಕೆ. ಉಪಸ್ಥಿತರಿದ್ದರು. ಒಡಿಶಾದ ಉತ್ಕಲ್ ವಿಶ್ವವಿದ್ಯಾನಿಲಯದ ಮಾಧ್ಯಮ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಪ್ರೊ. ಉಪೇಂದ್ರ ಪಾಢಿ ವಂದಿಸಿದರು.

Leave a Reply

Your email address will not be published. Required fields are marked *