ವೈದ್ಯಕೀಯ ಕ್ಷೇತ್ರದ ಸಂಶೋಧನೆಗಳು ಆರೋಗ್ಯ ಸುಧಾರಿಸಲು ಸಹಕಾರಿಯಾಗಲಿವೆ-ಡಾ.ಜಿ.ಪರಮೇಶ್ವರ್

ತುಮಕೂರು : ವೈದ್ಯಕೀಯ ಸಂಶೋಧನೆಯು ಆರೋಗ್ಯ, ರೋಗಗಳ ಶೀಘ್ರ ಪತ್ತೆ ಮತ್ತು ಮಾನವ ಶರೀರಶಾಸ್ತ್ರದ ವ್ಯವಸ್ಥಿತ ತನಿಖೆಗೆ ಸಹಕಾರಿಯಾಗುತ್ತದೆ. ವೈದ್ಯಕೀಯ ಸಂಶೋಧನೆಗಳಿಂದ ಆರೋಗ್ಯದ ಫಲಿತಾಂಶಗಳನ್ನು ಬೇಗ ಸುಧಾರಿಸುವ ಮತ್ತು ಜೀವಿತಾವಧಿಯನ್ನು ವಿಸ್ತರಿಸುವುದಕ್ಕೆ ಸಹಕಾರಿಯಾಗುವುದರಿಂದ ವೈದ್ಯಕೀಯ ಕ್ಷೇತ್ರದಲ್ಲಿ ನಿರಂತರವಾಗಿ ಸಂಶೋಧನೆಗಳು ಅಗತ್ಯವಿದೆ ಎಂದು ಸಾಹೇ ವಿವಿಯ ಕುಲಾಧಿಪತಿಗಳು ಹಾಗೂ ಗೃಹ ಸಚಿವರಾದ ಡಾ. ಜಿ ಪರಮೇಶ್ವರ ಅವರು ಹೇಳಿದರು.

ನಗರದ ಸಮೀಪದ ಅಗಳಕೋಟೆಯಲ್ಲಿರುವ ಶ್ರೀ ಸಿದ್ದಾರ್ಥ ದಂತ ವೈದ್ಯಕೀಯ ಕಾಲೇಜಿನ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ ‘ಸವ್ಯಸಾಚಿ ಸಭಾಂಗಣ’ವನ್ನು ಉದ್ಘಾಟಿಸಿ ಮಾತನಾಡಿದ ಅವರು, ವೈದ್ಯಕೀಯ ಆವಿಷ್ಕಾರಗಳು ಮತ್ತು ಸಂಶೋಧನೆಗಳು, ರೋಗಗಳ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಗೆ ಸಹಕಾರಿಯಾಗುತ್ತವೆ. ಅಲ್ಲದೆ ಆರೋಗ್ಯದ ಬಗ್ಗೆ ಜ್ಞಾನವನ್ನು ಪಡೆಯಲು, ವೈಜ್ಞಾನಿಕ ವಿಧಾನಗಳನ್ನು ಬಳಸಲು ಹಾಗೂ ಸಾಂಕ್ರಾಮಿಕ ರೋಗಗಳ ಅಧ್ಯಯನ ಮಾಡಲು ಸಹಕಾರಿಯಾಗುತ್ತವೆ ಎಂದರು.

ರಾಜ್ಯದ 50 ಡೆಂಟಲ್ ಕಾಲೇಜುಗಳ ಪೈಕಿ ಶ್ರೀ ಸಿದ್ದಾರ್ಥ ದಂತ ವೈದ್ಯಕೀಯ ಕಾಲೇಜು ಒಂದಾಗಿದೆ. ಗ್ರಾಮೀಣ ಪ್ರದೇಶಗಳ ಸಾಮಾನ್ಯ ಬಡಜನರಿಗೆ ಚಿಕಿತ್ಸೆ ನೀಡಲು ಸ್ಥಾಪಿಸಲಾದ ಕಾಲೇಜು, ಅದರ ಜೊತೆಗೆ ದಂತ ವಿದ್ಯಾರ್ಥಿಗಳ ಕಲಿಕೆ ಮತ್ತು ಉದ್ಯೋಗ ಸೇರಿದಂತೆ ಇತರೆ ಸೇವೆಗಳಿಗೆ ಅನುಕೂಲಕರವಾಗಿದೆ. ಸುಸಜ್ಜಿತ ಹಾಗೂ ಉತ್ತಮ ಗುಣಮಟ್ಟದ ದಂತ ವೈದ್ಯಕೀಯ ಸಾಧನ-ಸಲಕರಣೆಗಳನ್ನು ಅಳವಡಿಸಿಕೊಂಡು ಆರೋಗ್ಯ ಸೇವೆ ನೀಡಲಾಗುತ್ತಿದೆ ಎಂದು ಡಾ. ಜಿ.ಪರಮೇಶ್ವರ ನುಡಿದರು.

ದಂತ ಕಾಲೇಜಿನಲ್ಲಿ ನಡೆಯುವ ಕಾರ್ಯಾಗಾರಗಳು ವಿದ್ಯಾರ್ಥಿಗಳಿಗೆ ಉಪಯೋಗವಾಗಲಿವೆ. ಮುಂದೆ ಅನೇಕ ಸಂಶೋಧನೆ ನಡೆಯಲಿವೆ. ಶೈಕ್ಷಣಿಕ ಸಂಶೋಧನೆ ಸೇರಿದಂತೆ ಇತರೆ ಗುಣಮಟ್ಟದ ಚಿಕಿತ್ಸೆಗಳನ್ನು ನೀಡಲು ಸಂಶೋಧನೆಗಳು ನಡೆಯುತ್ತಿವೆ ಎಂದ ಅವರು, ಜನಸಾಮನ್ಯರಿಗೆ ಆರೋಗ್ಯ ಸೇವೆ ಕೊಡಲು ಅನೇಕ ರೀತಿಯ ಯೋಜನೆ ರೂಪಿಸಿದ್ದೇವೆ. ಇದು ನಮ್ಮ ತಂದೆಯ ಗಂಗಾಧರಯ್ಯನವರ ಕನಸ್ಸಾಗಿತ್ತು. ತುಮಕೂರಿನ ನಾಗರಿಕರಿಗೆ ಎಲ್ಲಾ ರೀತಿಯ ಚಿಕಿತ್ಸೆ ನೀಡಲು ಅನೇಕ ಉಚಿತ ಸರ್ಕಾರಿ ಅರೋಗ್ಯ ಯೋಜನೆಗಳನ್ನು ಆಸ್ಪತ್ರೆಯಲ್ಲಿ ಅಳವಡಿಸಿಕೊಳ್ಳಲಾಗಿದೆ ಎಂದು ಪರಮೇಶ್ವರ್ ಅವರು ತಿಳಿಸಿದರು.

ಸಾಹೇ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಕೆ.ಬಿ.ಲಿಂಗೇಗೌಡ ಅವರು ಮಾತನಾಡಿ, ರೋಗಿಗಳಿಗೆ ಚಿಕಿತ್ಸೆ ನೀಡಲು ಆಧುನಿಕ ಸಲಕರಣೆಗಳು ಮತ್ತು ಚಿಕಿತ್ಸಾ ಕ್ರಮಗಳನ್ನು ಅನುಸರಿಸಿ ಎಂದು ಸಲಹೆ ನೀಡಿದರು.

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌದರಿ ಮಾತನಾಡಿ, ತುಮಕೂರಿನಂತಹ ಪ್ರದೇಶದಲ್ಲಿ ಆಧುನಿಕ ವೈದ್ಯಕೀಯ ಸಲಕರಣೆಗಳನ್ನು ಹೊಂದಿರುವ ಆಸ್ಪತ್ರೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಕಲಿಕೆ ಜೊತೆಗೆ ಸುತ್ತಮುತ್ತಲಿನ ಗ್ರಾಮಾಂತರ ಪ್ರದೇಶದ ಜನಸಮುದಾಯಕ್ಕೆ ನೆರವಾಗಲಿದೆ ಎಂದು ಆಶಯ ವ್ಯಕ್ತಪಡಿಸಿದರು.

ಕಾರ್ಯಾಗಾರದಲ್ಲಿ ಪ್ರಾಸ್ತವಿಕ ನುಡಿಗಳನ್ನಾಡಿದ ಶ್ರೀ ಸಿದ್ದಾರ್ಥ ದಂತ ಕಾಲೇಜಿನ ಪ್ರಾಂಶುಪಾಲರಾದ ಡಾ.ಪ್ರವೀಣ್ ಬಿ. ಕುಡುವಾ, ಆಸ್ಪತ್ರೆಯಲ್ಲಿ ನುರಿತ ವೈದ್ಯರ ತಂಡದ ಜೊತೆಗೆ ಆಧುನಿಕ ಸಲಕರಣೆಗಳನ್ನು ಬಳಸಲಾಗುತ್ತಿದೆ. ವಿದ್ಯಾರ್ಥಿಗಳ ಪ್ರಾಯೋಗಿಕ ಕಲಿಕೆಗೆ ಅವಕಾಶ ಮಾಡಿಕೊಡಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಸರ್ಕಾರದಿಂದ ಪ್ರತಿಷ್ಠಿತ ‘ಐಸಿಎಂಆರ್’ ಸಂಶೋಧನೆಗಳಿಗೆ ಅನುದಾನ ಪಡೆದ ದಂತ ವೈದ್ಯಕೀಯ ವಿದ್ಯಾರ್ಥಿಗಳಿಗೆ ಮತ್ತು ಮಾರ್ಗದರ್ಶನ ಮಾಡಿದ ಪ್ರಾಧ್ಯಾಪಕರಿಗೆ ನೆನಪಿನ ಕಾಣಿಕ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸಾಹೇ ರಿಜಿಸ್ಟ್ರಾರ್ ಡಾ.ಅಶೋಕ ಮೆಹ್ತಾ, ಪರೀಕ್ಷಾ ನಿಯಂತ್ರಕ ಡಾ.ಗುರುಶಂಕರ್, ಕುಲಾಧಿಪತಿಗಳ ಸಲಹೆಗಾರರಾದ ಡಾ.ವಿವೇಕ್ ವೀರಯ್ಯ, ಜಿಲ್ಲಾಧಿಕಾರಿ ಶುಭಕಲ್ಯಾಣ್, ಮಹಾನಗರ ಪಾಲಿಕೆಯ ಆಯುಕ್ತರಾದ ಅಶ್ವಿಜಾ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ, ಕಾಲೇಜಿನ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

Leave a Reply

Your email address will not be published. Required fields are marked *