ದೈಹಿಕ ಅರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಮುಖ್ಯ: ನೂರುನ್ನೀಸ

ತುಮಕೂರು: ಇತ್ತೀಚಿನ ದಿನಗಳಲ್ಲಿ ದೈಹಿಕ ಆರೋಗ್ಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದು, ಮಾನಸಿಕ ಆರೋಗ್ಯವನ್ನು ಮರೆಯುತ್ತಿದ್ದಾರೆ. ಇದರಿಂದ ಅನೇಕ ಮಾನಸಿಕ ಕಾಯಿಲೆಗಳು, ಆತ್ಮಹತ್ಯೆಗಳಂತಹ ಸಮಸ್ಯೆಗಳು ಎದುರಾಗುತ್ತಿವೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ನೂರುನ್ನಿಸ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ತುಮಕೂರು ವಿಶ್ವವಿದ್ಯಾನಿಲಯದ ಸಮಾಜಕಾರ್ಯ ವಿಭಾಗ, ಸ್ನೇಹ ಮನೋವಿಕಾಸ ಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ನಡೆದ ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಮಾನಸಿಕ ಸಮಸ್ಯೆಗಳು ಯುವಕರನ್ನು ಆತ್ಮಹತ್ಯೆಯನ್ನು ಮಾಡಿಕೊಳ್ಳುವಂತೆ ಪ್ರಚೋದಿಸುತ್ತವೆ. ಮಾನಸಿಕವಾಗಿ ಸದೃಢ ಮತ್ತು ಬಲಶಾಲಿಯಾಗಿರಬೇಕು. ಧನಾತ್ಮಕ ಚಿಂತನೆಗಳನ್ನು ಬೆಳೆಸಿಕೊಂಡು ಎಂತಹದ್ದೇ ಪರಿಸ್ಥಿತಿ ಬಂದರು ಎದುರಿಸಬೇಕು ಎಂದರು.

ಸಮಸ್ಯೆಗಳನ್ನು ಪ್ರಾರಂಭದಲ್ಲಿ ಗುರುತಿಸಿ ಸಂಕೋಚ ಪಡದೆ ಸೂಕ್ತ ವೈದ್ಯರ ಸಲಹೆ ಪಡೆದುಕೊಳ್ಳಿ. ಪ್ರತಿ ಜಿಲ್ಲೆಯೂ ಮೆಂಟಲ್ ಹೆಲ್ತ್ ರಿವ್ಯೂ ಬೋರ್ಡ್ ಅನ್ನು ಹೊಂದಿರುತ್ತದೆ. ಅಲ್ಲಿ ನಿಮಗೆ ಬೇಕಾದ ಮಾಹಿತಿ, ಚಿಕಿತ್ಸೆ, ಸಲಹೆಯನ್ನು ಪಡೆಯಬಹುದು ಎಂದು ಸಲಹೆ ನೀಡಿದರು.

ನಿಮ್ಮನ್ನು ನೀವು ಪ್ರೀತಿಸುವುದನ್ನು ಕಲಿಯಿರಿ. ಪ್ರತಿಯೊಂದು ಕ್ಷಣವನ್ನು ಆನಂದಿಸಿ. ನಿಮ್ಮ ಆತ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ. ಇತರರನ್ನು ಪ್ರೀತಿಯಿಂದ ಕಾಣಿರಿ. ಇದರಿಂದ ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಎಂದರು.

ಅಧ್ಯಕ್ಷೀಯ ನುಡಿಗಳನ್ನಾಡಿದ ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಿ, ಸಾವನ್ನಲ್ಲ. ವಿಶ್ವವಿದ್ಯಾಲಯ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುವ ಕೇಂದ್ರ ಆಗಬೇಕು ಎಂದರು.

ನಮ್ಮತನವನ್ನು ಯಾವಾಗಲೂ ಖುಷಿಯಾಗಿ ಇಟ್ಟುಕೊಳ್ಳಬೇಕು, ನಮ್ಮ ವಿಚಾರಗಳು ಬದಲಾವಣೆ ಆಗಬೇಕು, ಧನಾತ್ಮಕ ಯೋಚನೆಯನ್ನು ಬೆಳೆಸಿಕೊಳ್ಳಬೇಕು. ಖಿನ್ನತೆ, ಕುಟುಂಬ ಸಮಸ್ಯೆ, ಪ್ರೇಮ ಇಂತಹ ಸಮಸ್ಯೆಗಳನ್ನು ಎದುರಿಸಿ ಗೆಲ್ಲಬೇಕು ಎಂದರು.

ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿಗಳು ಡಾ. ರವೀಂದ್ರ ನಾಯ್ಕ್ ಕೆ., ವಾರ್ಷಿಕವಾಗಿ ಸುಮಾರು 7 ಲಕ್ಷ ಜನ ಆತ್ಮಹತ್ಯೆಗಳಿಗೆ ಬಲಿಯಾಗುತ್ತಾರೆ. ಯುದ್ಧದಲ್ಲಿ ಆಗದಿರುವಂತಹ ಸಾವುಗಳು ಆತ್ಮಹತ್ಯೆಯಲ್ಲಿ ಕಾಣುತ್ತಿದ್ದೇವೆ. ನಿಮ್ಮ ಸ್ನೇಹಿತರು, ಕುಟುಂಬಗಳಲ್ಲಿ ಮಾನಸಿಕವಾಗಿ ಬಳಲುತ್ತಿರುವವರಿಗೆ ಸೂಕ್ತ ಚಿಕಿತ್ಸೆ ನೀಡಿ ಎಂದು ಹೇಳಿದರು.

ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಪ್ರೊ.ಪರಶುರಾಮ ಕೆ.ಜಿ., ಸ್ನೇಹ ಮನೋವಿಕಾಸ ಕೇಂದ್ರದ ಮನೋವೈದ್ಯ ಡಾ.ಲೋಕೇಶ್ ಬಾಬು ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *