ತುಮಕೂರು: ಜ್ಞಾನ ದಾಹದ ಜೊತೆ ಗ್ರಾಮೀಣ ಭಾಗದಿಂದ ಬರುವ ಸಾವಿರಾರು ವಿದ್ಯಾರ್ಥಿಗಳ ಹಸಿವಿನ ದಾಹವನ್ನು ನೀಗಿಸುತ್ತಿರುವ ವಿಶ್ವವಿದ್ಯಾನಿಲಯವು ಭವಿಷ್ಯ ಭಾರತದ ಕಣ್ಣುಗಳಿಗೆ ಬೆಳಕಾಗಿದೆ ಎಂದು ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮ ಹಾಗೂ ಶ್ರೀ ಅನ್ನಪೂರ್ಣೇಶ್ವರಿ ಆಹಾರ ವಿತರಣಾ ಸಮಿತಿಯ ಅಧ್ಯಕ್ಷ ಸ್ವಾಮಿ ಜಪಾನಂದಜೀ ಹೇಳಿದರು.
ತುಮಕೂರು ವಿವಿ, ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮ ಮತ್ತು ಶ್ರೀ ಅನ್ನಪೂರ್ಣೇಶ್ವರಿ ಆಹಾರ ವಿತರಣಾ ಸಮಿತಿಯ ಸಹಯೋಗದ ಮಧ್ಯಾಹ್ನದ ಭೋಜನ ಯೋಜನೆಯ ಎರಡನೇ ವರ್ಷಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.
ವಿದ್ಯಾರ್ಥಿಗಳು ದೈಹಿಕವಾಗಿ ಸದೃಢರಾಗಬೇಕಾದರೆ ವಿದ್ಯೆಯ ಜೊತೆಗೆ ಆರೋಗ್ಯವೂ ಮುಖ್ಯ. ಪೌಷ್ಠಿಕಾಂಶಯುತ ಆಹಾರ ಸೇವನೆ ವಿದ್ಯಾರ್ಥಿಗಳಿಗೆ ಅವಶ್ಯಕ. ವಿವೇಕಾನಂದರ ಭವಿಷ್ಯ ಭಾರತ ಕಟ್ಟುವ ಯುವಜನತೆ ತುಮಕೂರು ವಿವಿಯಲ್ಲಿ ಬೆಳಗುತ್ತಿರುವುದು ದೇಶವೇ ತಿರುಗಿನೋಡುವ ಸಂಗತಿ ಎಂದರು.
ತುಮಕೂರು ವಿವಿ ಕುಲಪತಿ ಪೆÇ್ರ. ಎಂ. ವೆಂಕಟೇಶ್ವರಲು ಮಾತನಾಡಿ, ವಿದ್ಯಾರ್ಥಿಗಳಿಗೆ ನೈತಿಕ, ಮೌಲ್ಯಯುತ, ಗುಣಮಟ್ಟದ ಶಿಕ್ಷಣದ ಜೊತೆಗೆ ಹಸಿವನ್ನು ನೀಗಿಸುವ ಶಕ್ತಿ ನಮ್ಮ ವಿವಿಗೆ ದೊರೆತಿರುವುದು ನಮ್ಮೆಲ್ಲರ ಸೌಭಾಗ್ಯ. ಸಾವಿರದ ಐನೂರು ವಿದ್ಯಾರ್ಥಿಗಳಿಗೆ ಸತ್ವಭರಿತ ಆಹಾರ ನೀಡುವುದಕ್ಕೆ ಕೈಜೋಡಿಸಿದ ಎಲ್ಲ ದಾನಿಗಳಿಗೂ ಧನ್ಯವಾದಗಳು. ಮುಂದಿನ 5 ವರ್ಷ ಸರಾಗವಾಗಿ ಈ ಯೋಜನೆಯನ್ನು ನಡೆಸುವಷ್ಟು ಹಣ ಸಂಗ್ರಹಣೆ ದಾನಿಗಳಿಂದ ಆಗಿದೆ ಎಂದರು.
ಪ್ರಜಾಪ್ರಗತಿ ದಿನಪತ್ರಿಕೆಯ ಸಂಪಾದಕ ಎಸ್. ನಾಗಣ್ಣ ಮಾತನಾಡಿ, ಈ ಯೋಜನೆಯಿಂದಾಗಿ ಸಕಾರಾತ್ಮಕ ಬೆಳವಣಿಗೆ ಅಧ್ಯಯನದಲ್ಲಿ ಕಾಣುತ್ತಿರುವುದು ಗಮನಾರ್ಹ. ವಿದ್ಯಾರ್ಥಿಗಳು ಆರೋಗ್ಯ ಸಮಸ್ಯೆಯಿಂದ, ಹಸಿವಿನಿಂದ ಸುಸ್ತಾಗಿ ಕೆಳಗೆ ಬಿದ್ದಿರುವ ಯಾವುದೇ ಉದಾಹರಣೆ ಈ ಒಂದು ವರ್ಷದಲ್ಲಿ ಕೇಳಿಬಂದಿಲ್ಲ. ಹಸಿವಿನ ಮುಂದೆ ಆಸ್ತಿ-ಅಂತಸ್ತು ನಗಣ್ಯ. ಮಕ್ಕಳು ಹಸಿದು ಬಂದಾಗ ಅನ್ನ ನೀಡುವ ಅವಕಾಶ ನಮ್ಮದಾಗಿರುವುದು ಸಂತಸದ ಸಂಗತಿ ಎಂದು ಹೇಳಿದರು.
ಕೈಗಾರಿಕೋದ್ಯಮಿ ಎಚ್. ಜಿ. ಚಂದ್ರಶೇಖರ್ ಮಾತನಾಡಿ, ನೆಲ-ಜಲ ಸಮೃದ್ಧಿಯಿಂದ ಇರಬೇಕಾದರೆ ದಾನ-ಧರ್ಮದ ಅಗತ್ಯವಿದೆ. ಮಾನವೀಯ ಮೌಲ್ಯಗಳಿಗೆ ಈ ಯೋಜನೆ ಸಾಕ್ಷಿಯಾಗಿದೆ. ಮಹನೀಯರು ಕಟ್ಟಿರುವ ಸಮಾಜದಲ್ಲಿ ಮೌಲ್ಯಯುತ ಬದುಕುನ್ನು ನಡೆಸುವುದು ವಿದ್ಯಾರ್ಥಿಗಳ ಜವಾಬ್ದಾರಿ ಎಂದರು.
ಉದ್ಯಮಿ ಡಾ. ಆರ್. ಎಲ್. ರಮೇಶ್ ಬಾಬು ಮಾತನಾಡಿ, ದೇಶಕ್ಕೆ ಕೊಡುಗೆಯನ್ನು ನೀಡಲು, ಮತ್ತೊಬ್ಬರಿಗೆ ಅನ್ನ, ಜ್ಞಾನ ದಾನ ಮಾಡುವಷ್ಟು ಶಕ್ತರಾಗಬೇಕು ಎಂದು ಹೇಳಿದರು.
ಶ್ರೀ ಶಿರಡಿ ಸಾಯಿ ಮಂದಿರದ ಅಧ್ಯಕ್ಷ ಬಿ. ಆರ್. ನಟರಾಜ ಶೆಟ್ಟಿ ಮಾತನಾಡಿ, ಏಕಾಗ್ರತೆ ಬರುವುದು ಹೊಟ್ಟೆ ತುಂಬಿದಾಗ ಮಾತ್ರ. ದೇಹದ ಆರೋಗ್ಯ ಎಲ್ಲಕ್ಕಿಂತ ಮುಖ್ಯ. ಉತ್ತಮ ಆಹಾರ, ನೈತಿಕ ಶಿಕ್ಷಣ ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂದರು.
ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ. ಕರಿಯಣ್ಣ, ಪ್ರೊ. ಕೆ. ಜಿ. ಪರಶುರಾಮ, ಡಾ. ಗುಂಡೇಗೌಡ ಉಪಸ್ಥಿತರಿದ್ದರು.