ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ಹಣ ವರ್ಗಾವಣೆ-ಸಚಿವ ನಾಗೇಂದ್ರ ಬಿ. ರಾಜೀನಾಮೆ

ಬೆಂಗಳೂರು : ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ 87 ಕೋಟಿ ರೂ.ಗಳ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಯುವ ಸಬಲೀಕರಣ, ಕ್ರೀಡೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ರಾಜೀನಾಮೆ ಸಲ್ಲಿಸಿದ್ದಾರೆ.

ಬೆಂಗಳೂರಿನ ವಸಂತ ನಗರದಲ್ಲಿರುವ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಕಚೇರಿಯಲ್ಲಿ ಅಧೀಕಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಚಂದ್ರಶೇಖರನ್ ಎಂಬ ಅಧಿಕಾರಿಯೊಬ್ಬರು ಶಿವಮೊಗ್ಗದ ವಿನೋಬಾ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಮೇ 26ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು.

ಅದಕ್ಕೂ ಮುನ್ನ ಅವರು ಡೆತ್ ನೋಟ್ ಬರೆದಿಟ್ಟು, ವಾಲ್ಮೀಕಿ ನಿಗಮದಲ್ಲಿ 87 ಕೋಟಿ ರೂ.ಗಳ ಅಕ್ರಮ ಹಣ ವರ್ಗಾವಣೆಯಾಗಿದೆ. ವರ್ಗಾವಣೆಯಾದ ಹಣಕ್ಕೆ ಲೆಕ್ಕ ಇಟ್ಟಿಲ್ಲ. ಸಚಿವ ನಾಗೇಂದ್ರ ಅವರ ಬಾಯಿ ಮಾತಿನ ಅಪ್ಪಣೆಯ ಮೇರೆಗೆ ಕಚೇರಿಯ ಅಧಿಕಾರಿಗಳು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿ ಹಣ ವರ್ಗಾವಣೆ ಮಾಡಿದ್ದಾರೆ. ಇದರಲ್ಲಿ ಬ್ಯಾಂಕ್ ಅಧಿಕಾರಿಗಳೂ ಮೀಲಾಗಿದ್ದಾರೆ ಎಂದು ಉಲ್ಲೇಖಿಸಿದ್ದರು.

ಜೊತೆಗೆ, ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆಂದು ತಾವು ಆರೋಪ ಮಾಡಿರುವ ಅಧಿಕಾರಿಗಳ ಹೆಸರು ಹಾಗೂ ಬ್ಯಾಂಕ್ ಅಧಿಕಾರಿಗಳ ಹೆಸರುಗಳನ್ನೂ ಡೆತ್ ನೋಟ್ ನಲ್ಲಿ ಪ್ರಸ್ತಾಪಿಸಿದ್ದರು. ಅಲ್ಲದೆ, ಯಾವ್ಯಾವ ದಿನ ಎಷ್ಟು ಹಣ ವರ್ಗಾವಣೆಯಾಗಿದೆ ಎಂದು ಸಹ ಹೇಳಿದ್ದರು.

ಈ ಹಗರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ. ಆದರೆ, ನಾನು ಈ ಹಗರಣದಲ್ಲಿ ಭಾಗಿಯೂ ಆಗಿಲ್ಲ ಎಂದು ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದಾರೆ.

ಈ ಪ್ರಕರಣದ ಬಗ್ಗೆ ತನಿಖೆ ನಡೆಸೋದಕ್ಕೆ ಎಸ್‍ಐಟಿಗೆ ರಾಜ್ಯ ಸರ್ಕಾರ ವಹಿಸಿತ್ತು. ಈಗ ತನಿಖೆ ನಡೆಯುತ್ತಿದೆ. ಅದರ ನಡುವೆ ಸಚಿವ ಬಿ.ನಾಗೇಂದ್ರ ಅವರ ತಲೆದಂಡವಾಗಿದೆ. ಸಿಎಂ ಸಿದ್ಧರಾಮಯ್ಯ ಭೇಟಿಯ ನಂತರ ತಮ್ಮ ಯುವ ಸಬಲೀಕರಣ, ಕ್ರೀಡೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ರಾಜೀನಾಮೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *