ತುಮಕೂರು : ದೆಹಲಿಗೆ ಭೇಟಿ ನೀಡಿದ ಬೆನ್ನೆಲ್ಲಿಯೇ ಸಚಿವ ಸತೀಶ್ ಜಾರಕಿ ಹೊಳಿಯವರು ಗೃಹ ಸಚಿವ ಡಾ.ಜಿ,ಪರಮೇಶ್ವರ್ ಅವರನ್ನು ಭೇಟಿಯಾಗಿದ್ದರ ಮರ್ಮವೇನು ಎಂಬುದು ಕಾಡುತ್ತಾ ಇದೆ.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿ ಹೊಳಿ ಅವರು ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯ ಸರ್ವ ಸದಸ್ಯರ ಮಹಾ ಅಧಿವೇಶನದ ಸಮಾರೋಪ ಸಮಾರಂಭದಲ್ಲಿ ಭಾಗ ವಹಿಸಿದ ನಂತರ ಇಬ್ಬರು ಸಚಿವರು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಇಬ್ಬರು ಸಚಿವರು ಎದುರು-ಬದುರು ಕುಳಿತ್ತಿದ್ದು, ಸಚಿವ ಜಾರಕಿ ಹೊಳಿ ಮುಂದೆ ಖಾಲಿ ತಟ್ಟೆ ಇದ್ದು, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಆರಾಮಾಗಿ ಕುಳಿತ್ತಿದ್ದಾರೆ, ಅಂದರೆ ಜಾರಕಿ ಹೊಳಿಯವರಿಗೆ ಸಿಎಂ ಸ್ಥಾನವಿಲ್ಲ ಎಂಬರ್ಥವನ್ನು ಖಾಲಿ ತಟ್ಟೆ ಸೂಚಿಸುತ್ತಾ ಇದೆಯೇ?
ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಎಫ್‍ಐಆರ್ ದಾಖಲಾದ ಬೆನ್ನಲ್ಲೆ ಬೆಂಗಳೂರಿನ ಗೃಹ ಸಚಿವ ಮನೆಯಲ್ಲಿ ಭೇಟಿಯಾಗಿದ್ದ ಸತೀಶ್ ಜಾರಕಿ ಹೊಳಿಯವರು, ದಿಢೀರನೇ ದೆಹಲಿಗೆ ತೆರಳಿ ಹೈಕಮಾಂಡ್‍ನ್ನು ಭೇಟಿಯಾದ ಬೆನ್ನಲ್ಲೇ ಇಂದು ತುಮಕೂರಿನಲ್ಲಿ ಸತೀಶ್ ಜಾರಕಿ ಹೊಳಿ ಅವರು ಎಸ್‍ಐಟಿ ಬಿರ್ಲಾ ಆಡಿಟೋರಿಯಂನಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಖಾಸಗಿಯಾಗಿ ಇಬ್ಬರೂ ಸಚಿವರು ಭೇಟಿಯಾಗಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ನಿನ್ನೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನನಗೂ ಸಾಕಾಗಿ ಹೋಗಿದೆ ರಾಜೀನಾಮೆ ಪ್ರಹಸನ ಎಂದು ಹೇಳಿದ ಸಂದರ್ಭದಲ್ಲೇ, ಗೃಹ ಸಚಿವ ಡಾ.ಜಿಪರಮೇಶ್ವರ್ ಅವರು ಮಾತನಾಡಲು ನಿಂತಾಗ ಸಭಿಕರಿಂದ ಮುಂದಿನ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರಿಗೆ ಜೈವಾಗಲಿ ಎಂಬ ಜೈಕಾರ ಮೊಳಗಿತ್ತು.
ಪರಮೇಶ್ವರ್ ಮತ್ತು ಜಾರಕಿ ಹೊಳಿ ಇಬ್ಬರೂ ಮುಖ್ಯಮಂತ್ರಿ ಪದವಿಯ ಅಕಾಂಕ್ಷಿಗಳಾಗಿದ್ದು ತಮ್ಮದೇಯಾದ ರಾಜಕೀಯ ಪಟ್ಟುಗಳನ್ನು ಹಾಕುತ್ತಿದ್ದು, ಸಿದ್ದರಾಮಯ್ಯ ಏನಾದರೂ ರಾಜೀನಾಮೆ ನೀಡಿದರೆ ಈ ಇಬ್ಬರಲ್ಲಿ ಒಬ್ಬರು ಮುಖ್ಯಮಂತ್ರಿಯಾಗುವ ಸಂಭವವಿದೆ ಎನ್ನಲಾಗುತ್ತಿದೆ, ಈ ಹಿನ್ನಲೆಯಲ್ಲಿಯೇ ಈ ಇಬ್ಬರ ಭೇಟಿ ಮಹತ್ವ ಪಡೆದುಕೊಂಡಿದೆ.
ಪ್ರತಿ ವರ್ಷವೂ ತುಮಕೂರಿನಲ್ಲಿ ನಾಗರಿಕರ ದಸರಾ ನಡೆದರೆ, ಈ ಬಾರಿ ಸರ್ಕಾರದ ವತಿಯಿಂದ ನಡೆಯುತ್ತಿದ್ದು, ನಾಡದೇವಿಯ ದಸರಾ ಪೂಜೆಯ ಸಂದರ್ಭದಲ್ಲಿ ಸಚಿವ ಡಾ.ಜಿ.ಪರಮೇಶ್ವರ್ ಅವರು ದಂಪತಿಗಳ ಸಮೇತ ಹೋಮ-ಹವನಗಳಲ್ಲಿ ಭಾಗವಹಿಸಿ, ನಾಡದೇವತೆಯನ್ನು ಇಷ್ಟಾರ್ಥ ನೆರವೇರಿಸುವಂತೆ ಪ್ರಾರ್ಥಿಸಿರುವುದರ ಮರ್ಮವೇನು ಎಂಬ ಚರ್ಚೆಗಳು ನಡೆಯುತ್ತಾ ಇವೆ.
ಇಂದು ಸಚಿವ ಸತೀಶ್ ಜಾರಕಿ ಹೊಳಿಯ ಭೇಟಿ ರಾಜಕೀಯ ವಲಯದಲ್ಲಿ ಅಚ್ಚರಿ ಮತ್ತು ಕುತೂಹಲ ಮೂಡಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜೀನಾಮೆ ನೀಡುವುದು ಖಚಿತವೆಂಬಂತೆ ಈ ಇಬ್ಬರೂ ಪದೇ ಪದೇ ಭೇಟಿಯಾಗಿ ಮಾತುಕತೆ ನಡೆಸುತ್ತಿರುವುದರ ಮರ್ಮವೇನು? ಎಂಬ ಚರ್ಚೆಗೆ ಗ್ರಾಸವಾಗಿದೆ.

ಸಿದ್ದರಾಮಯ್ಯ ರಾಜೀನಾಮೆ ನೀಡಿದರೆ ತುಮಕೂರು ಜಿಲ್ಲೆಯ ಕೊರಟಗೆರೆ ಕ್ಷೇತ್ರದ ಶಾಸಕರಾಗಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಮುಖ್ಯಮಂತ್ರಿಯಾಗುವ ಎಲ್ಲಾ ಅರ್ಹತೆಗಳಿದ್ದು, 2014ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಪರಾಭವಗೊಂಡಿದ್ದರಿಂದ ಮುಖ್ಯಮಂತ್ರಿ ಸ್ಥಾನದಿಂದ ವಂಚಿತರಾದರು, ಈ ಬಾರಿ ನಾಡದೇವತೆಯನ್ನು ಪೂಜಿಸಿದ್ದು, ಜಿಲ್ಲೆಗೆ ಮುಖ್ಯಮಂತ್ರ ಸ್ಥಾನ ಲಭಿಸುವುದೇ ಎಂಬ ಕುತೂಹಲ ತುಮಕೂರು ಜನರಲ್ಲಿ ಮೂಡಿದೆ.