ತುಮಕೂರು : ತುಮಕೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮುದ್ದ ಹನುಮೇಗೌಡ ಅವರು,ಅತ್ಯಂತ ಕ್ರಿಯಾಶೀಲ,ಬುದ್ದಿವಂತ ಸಂಸದರೆಂದು ಹೆಸರು ಮಾಡಿದವರು,ಇಂತಹವರು ಸಂಸದರಾಗಿ ಆಯ್ಕೆಯಾದರೆ, ಕೇಂದ್ರದಲ್ಲಿ ಜನಪರ, ರೈತಪರ, ಬಡವರಪರ, ಅಲ್ಪಸಂಖ್ಯಾತರ ಪರ ಕಾಯ್ದೆಗಳು ಜಾರಿಯಾಗಲು ಸಾಧ್ಯ ಆದ್ದರಿಂದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆಎಂದು ಕರ್ನಾಟಕ ಸರಕಾರದ ವಸತಿ ಸಚಿವ ಜಮೀರ್ ಅಹಮದ್ ಖಾನ್ ಮನವಿ ಮಾಡಿದರು.
ನಗರದ ಧ್ಹಾನಾ ಫ್ಯಾಲೇಸ್‍ನಲ್ಲಿ ಜಿಲ್ಲಾ ಕಾಂಗ್ರೆಸ್‍ನ ಆಶ್ರಯದಲ್ಲಿ ಕೆಪಿಸಿಸಿ ಮೈನಾರಿಟಿ ಘಟಕದವತಿಯಿಂದ ಆಯೋಜಿಸಿದ್ದ ಅಲ್ಪಸಂಖ್ಯಾತ ಮುಖಂಡರ ಸಭೆಯಲ್ಲಿ ಪಾಲ್ಗೊಂಡು ಮಾತನಾಡುತಿದ್ದ ಅವರು,ಏಪ್ರಿಲ್ 26 ರಂದು ನಡೆಯುವ ಲೋಕಸಭಾ ಚುನಾವಣೆಯ ಮತದಾನದಲ್ಲಿ ಎಲ್ಲಾ ಮುಸ್ಲಿಂರೂ ಪಾಲ್ಗೊಂಡು,ಅತಿ ಹೆಚ್ಚಿನ ಮತಗಳನ್ನು ಮದ್ದಹನುಮೇ ಗೌಡ ರಿಗೆ ನೀಡುವ ಮೂಲಕ ಅವರನ್ನು ಲೋಕಸಭೆಗೆ ಕಳುಹಿಸುವ ಮೂಲಕ ನಮ್ಮೆಲ್ಲರ ರಕ್ಷಣೆಯ ಜೊತೆಗೆ ಸಂವಿಧಾನ ರಕ್ಷಣೆಗೂ ನಾವೆಲ್ಲರೂ ನಾಂದಿ ಹಾಡಬೇಕಾಗಿದೆ ಎಂದರು.
ಕಳೆದ ಎರಡು ಮೂರು ಚುನಾವಣೆಗಳಲ್ಲಿ ಮುಸ್ಲಿಂ ಏರಿಯಾಗಳಲ್ಲಿ ಮತದಾನದ ಪ್ರಮಾಣ ಕಡಿಮೆಯಾಗಿದೆ. ಇದರ ಪರಿಣಾಮ ಕಾಂಗ್ರೆಸ್ ಪಕ್ಷದ ಅನೇಕರು ಕೆಲವೇ ಸಾವಿರ ಮತಗಳ ಅಂತರದಲ್ಲಿ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ.ಆದರೆ ಈ ಬಾರಿ ಹಾಗಾಗದಂತೆ ಎಚ್ಚರಿಕೆ ವಹಿಸಬೇಕಾಗಿದೆ.ಈ ಹಿಂದಿನ ಬಾರಿಗಿಂತ ಕನಿಷ್ಠ ಶೇ 10-15ರಷ್ಟು ಮತಗಳು ಹೆಚ್ಚಾದರೆ ಕಾಂಗ್ರೆಸ್ ಪಕ್ಷದ ಮತ್ತಷ್ಟು ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ.ಹಾಗಾಗಿ ಮತದಾನದ ಪ್ರಮಾಣ ಹೆಚ್ಚಳಕ್ಕೆ ಒತ್ತು ನೀಡುವಂತೆ ಜಮೀರ್ ಅಹಮದ್ ಸಲಹೆ ನೀಡಿದರು.
ಅಲ್ಪಸಂಖ್ಯಾತರ ಮುಂದೆ ಹಲವಾರು ಸವಾಲುಗಳಿವೆ ಹಿಜಾಬ್, ಹಲಾಲ್,ಮೀಸಲಾತಿ ರದ್ದು ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ.ಇದಕ್ಕೆ ಚುನಾವಣೆಯೇ ಶಾಶ್ವತ ಪರಿಹಾರವಾಗಿದ್ದು,ಕಾಂಗ್ರೆಸ್ ಪಕ್ಷದ ಎಂ.ಪಿಗಳು ಹೆಚ್ಚು ಜನರು ಆಯ್ಕೆಯಾದರೆ,ನಮ್ಮ ಶೈಕ್ಷಣಿಕ,ಧಾರ್ಮಿಕ,ಅರ್ಥಿಕ ಹಕ್ಕುಗಳಿಗೆ ಕೊಡಲಿಪೆಟ್ಟು ಕೊಡಲು ಹೊರಟವರಿಗೆ ಕಾನೂನಿನ ರೀತಿಯೇ ಸರಿಯಾದ ಪಾಠ ಕಲಿಸಬಹುದು.ಇಸ್ಲಾಂ ಎಂದು ದ್ವೇಷವನ್ನು ಬೋಧಿಸಿಲ್ಲ.ನಾವು ಯಾರನ್ನು ದ್ವೇಷಿಸದೆ, ಸರಿಯಾದ ಮಾರ್ಗದಲ್ಲಿಯೇ ನಮ್ಮ ಹಕ್ಕುಗಳನ್ನು ಪಡೆಯಲು ಮುಂದಿನ ದಿನಗಳಲ್ಲಿ ಅವಕಾಶ ದೊರೆಯಲಿದೆ ಎಂದರು.
ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಎಸ್.ಪಿ.ಮುದ್ದಹನುಮೇಗೌಡ ಅವರು ತುಮಕೂರು ಜಿಲ್ಲೆಯವರು,ನಾನು ಸಹ ತುಮಕೂರು ಜಿಲ್ಲೆಯವ,ಆದರೆ ಬಿಜೆಪಿ ಅಭ್ಯರ್ಥಿಯಾಗಿರುವ ವಿ.ಸೋಮಣ್ಣ ಎಲ್ಲಿಯವರು,ಅವರಿಗೂ ಈ ಜಿಲ್ಲೆಗೂ ಸಂಬಂಧವೇನು ಎಂದು ಪ್ರಶ್ನಿಸಿದ ಅವರು,ವಸತಿ ಸಚಿವರಾಗಿದ್ದಾಗ ವಿ.ಸೋಮಣ್ಣ ಜಿಲ್ಲೆಗೆ ಎಷ್ಟು ಮನೆಗಳನ್ನು ನೀಡಿದ್ದಾರೆ. ಸಿದ್ದರಾಮಯ್ಯ ಕಾಲದಲ್ಲಿ ಮಂಜೂರಾಗಿದ್ದ ಮನೆಗಳಿಗೆ ಇಂದಿಗೂ ಹಣ ನೀಡಿಲ್ಲ. 2019-2023ರವರೆಗೆ ಒಂದೇ ಒಂದು ಮನೆ ಮಂಜೂರು ಮಾಡಿಲ್ಲ.ಕಳೆದ ಒಂದು ವರ್ಷದಲ್ಲಿ 36 ಸಾವಿರ ಮನೆಗಳನ್ನು ನಿರ್ಮಾಣ ಮಾಡಲಾಗಿದೆ.ಎಲ್ಲರಿಗೂ ಅನ್ನ,ಅರಿವೆ ಮತ್ತು ಆಶ್ರಯ ನೀಡಿರುವ ಪಕ್ಷ ಎಂದರೆ ಅದು ಕಾಂಗ್ರೆಸ್ ಪಕ್ಷ ಮಾತ್ರ.ಹಾಗಾಗಿ ಜನರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡರಿಗೆ ಮತ ನೀಡುವ ಮೂಲಕ ಸಿದ್ದರಾಮಯ್ಯ ಅವರ ಕೈ ಬಲಪಡಿಸುವಂತೆ ಮನವಿ ಮಾಡಿದರು.
ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ರಾಜ್ಯಾಧ್ಯಕ್ಷ ಅಬ್ದುಲ್ ಜಬ್ಬಾರ್ ಮಾತನಾಡಿ,ದೇಶಕ್ಕೆ ಮೋದಿ ಕೊಡುಗೆ ಏನು ಇಲ್ಲ. ಕಾಂಗ್ರೆಸ್ ಸ್ಥಾಪಿಸಿದ ನವರತ್ನ ಕಂಪನಿಗಳಲ್ಲಿ ಒಂದನ್ನು ಉಳಿಸದೆ ಮಾರಾಟ ಮಾಡಿರುವುದೇ ಬಿಜೆಪಿಯ ಸಾಧನೆ. ಇದರಿಂದ ಬಡವರು-ಶ್ರೀಮಂತರ ನಡುವಿನ ಕಂದಕ ಹೆಚ್ಚಾಗಿದೆ. ಕಾಂಗ್ರೆಸ್ ರೈತರ 72 ಸಾವಿರ ಕೋಟಿ ರೂ ಸಾಲ ಮನ್ನಾ ಮಾಡಿದರೆ, ಬಿಜೆಪಿ ಉದ್ಯಮಿಗಳ 10 ಲಕ್ಷ ಕೋಟಿ ರೂ ಸಾಲ ಮನ್ನಾ ಮಾಡಿದೆ.ಹಾಗಾಗಿ ಬಡವರು, ದಲಿತರು, ರೈತರ ಪರವಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಮನವಿ ಮಾಡಿದರು.
ಮುಖಂಡರಾದ ಇಕ್ಬಾಲ್ ಅಹಮದ್ ಮಾತನಾಡಿ, ಮುದ್ದಹನುಮೇಗೌಡರು ಸ್ಥಳೀಯರಾಗಿದ್ದು, ಪ್ರತಿ ದಿನ ನಮ್ಮ ಕೈಗೆ ಸಿಗಲಿದ್ದಾರೆ. ಒಂದು ವೇಳೆ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಜಯಗಳಿಸಿದರೆ ಅವರನ್ನು ನೋಡಲು 10 ಸಾವಿರ ರೂ ಖರ್ಚು ಮಾಡಬೇಕಾಗುತ್ತದೆ. ಭರಪೂರ ಆಶ್ವಾಸನೆ ಕೊಟ್ಟು ಅಧಿಕಾರಕ್ಕೆ ಬಂದ ಬಿಜೆಪಿ ವಿದೇಶದಲ್ಲಿರುವ ಕಪ್ಪು ಹಣ,ವರ್ಷಕ್ಕೆ ಎರಡು ಕೋಟಿ ಉದ್ಯೋಗ,ಅಗತ್ಯವಸ್ತುಗಳ ಬೆಲೆ ಇಳಿಕೆ, ಇಂಧನ ಬೆಲೆಗಳ ಇಳಿಕೆ, ಡಾಲರ್ ಎದುರು ರೂಪಾಯಿ ಮೌಲ್ಯ ಹೆಚ್ಚಳ ಸಾಧ್ಯವಾಯಿತೆ ಎಂದು ಪ್ರಶ್ನಿಸಬೇಕಿದೆ.ಸ್ಥಳೀಯರಾದ ಎಸ್.ಮುದ್ದಹನುಮೇಗೌಡರಿಗೆ ಮತ ನೀಡುವಂತೆ ಕೋರಿದರು.
ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ,ಮುಸ್ಲಿಂ ಸಮುದಾಯ ಮತ್ತು ನನ್ನ ನಡುವೆ ಅವಿನಾಭಾವ ಸಂಬಂಧವಿದೆ.ನನ್ನ ಜೀವಿತಾವಧಿಯಲ್ಲಿ ಎಂದಿಗೂ ಧರ್ಮದ ಹೆಸರಿನಲ್ಲಿ ಜನರನ್ನು ಕಡೆಗಣಿಸಿಲ್ಲ. 2014-19ರ ಅವಧಿಯಲ್ಲಿ ಎಲ್ಲಾ ಸಮುದಾಯಗಳಿಗೆ ಸಂಸದರ ನಿಧಿಯನ್ನು ಬಳಸಿದ್ದೇನೆ.ಸಂಸತ್ತಿನಲ್ಲಿ ಎಲ್ಲಾ ಜಾತಿ, ಜನಾಂಗದ ಪರವಾಗಿಯೂ ಪ್ರಶ್ನೆಗಳನ್ನು ಕೇಳಿದ್ದೇನೆ,ವಿವಿಧ ಚರ್ಚೆಗಳಲ್ಲಿ ಭಾಗವಹಿಸಿದ್ದೇನೆ.ಜಿಲ್ಲೆಯಲ್ಲಿ ಶಾಂತಿ, ಸಹಬಾಳ್ವೆ ನೆಲೆಸಲು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಮನವಿ ಮಾಡಿದರು.
ವೇದಿಕೆಯಲ್ಲಿ ಮಾಜಿ ಶಾಸಕರಾದ ಎಸ್.ಷಪಿ ಅಹಮದ್, ಡಾ.ರಫೀಕ್ ಅಹಮದ್,ಮುರುಳೀಧರ ಹಾಲಪ್ಪ, ನಿಖೇತ್‍ರಾಜ್ ಮೌರ್ಯ, ರಾಮಕೃಷ್ಣ, ಗೋವಿಂದರಾಜು,ಇಲಾಯಿ ಸಿಖಂದರ್,ಪ್ರಭಾವತಿ, ಫರೀಧಾ ಬೇಗಂ,ನಯಾಜ್ ಅಹಮದ್, ಮಹೇಶ್, ಜೆ.ಕುಮಾರ್,ಅಸ್ಲಾಂ ಪಾಷ, ಅನ್ವರ್ ಪಾಷ,ಫಯಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.