ತುಮಕೂರು : ಕಳೆದ ಹತ್ತು ದಿನಗಳಿಂದ ತುಮಕೂರು ನಗರ ಮಧುವಣಗಿತ್ತಿಯಂತೆ ಸಿಂಗಾರಗೊಂಡು, ರಾತ್ರಿಯ ವೇಳೆ ದೀಪಾಲಂಕಾರದಿಂದ ಜಿಗಿ-ಜಿಗಿ ನಕ್ಷತ್ರದ ಬೆಳಕನ್ನು ಚೆಲ್ಲಿತ್ತು.
ಹಗಲೆಲ್ಲಾ ತುಮಕೂರಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಪ್ರತಿಷ್ಠಾಪಿಸಲಾಗಿದ್ದ ನಾಡದೇವತೆಗೆ ವಿವಿಧ ಪೂಜೆ-ಪುನಸ್ಕಾರ ನಡೆದರೆ, ಮತ್ತೊಂದು ಕಡೆ ವಿವಿಧ ಸ್ಪರ್ಧೆಗಳು, ನೃತ್ಯ, ಸಂಗೀತ, ಕವಿಗೋಷ್ಠಿಯಂತಹ ರಸದೌತಣ ಉಣಬಡಿಸುತ್ತಿದ್ದರೆ, ಮತ್ತೊಂದು ಕಡೆ ಅಂಬಾರಿಯನ್ನು ಹೊತ್ತು ಸಾಗಲು ಆನೆ ಲಕ್ಮ್ಮಿಯ ತಾಲೀಮು, ಮತ್ತೊಂದೆಡೆ ಇಡೀ ತುಮಕೂರು ದಸಾರಕ್ಕೆ ಅಂಬಾರಿ ಹೊರುವ ತಯಾರಿ ನಡೆಯುತ್ತಿದ್ದರೆ, ಜಿಲ್ಲಾಡಳಿತಕ್ಕೆ ದಸರಾದಲ್ಲಿ ಏನಾದರೂ ಎಡವಟ್ಟಾದರೆ ಏನಪ್ಪ ಎಂಬ ತಲೆ ಬಿಸಿ.

ಈ ಬಾರಿ ಗೃಹಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಾ.ಜಿ.ಪರಮೇಶ್ವರ್ ಅವರು, ತುಮಕೂರಿನಲ್ಲಿ ಮೈಸೂರಿನಂತಹ ಮಿನಿ ದಸರಾವನ್ನು ಮಾಡಿ, ಯಶಸ್ವಿಗೊಳಿಸಬೇಕೆಂದು ಹಠಕ್ಕೆ ಬಿದ್ದವರಂತೆ ಸರ್ಕಾರದಿಂದ 1ಕೋಟಿ ಹಣ ಬಿಡುಗಡೆ ಮಾಡಿಸಿಕೊಂಡು ಬಂದರೆ, ಸ್ವತಃ 25ಲಕ್ಷ ರೂ.ಗಳನ್ನು ನೀಡಿದ್ದಾರೆ.
9 ದಿನಗಳ ಪೂಜಾ ಕಾರ್ಯಕ್ರಮಗಳಲ್ಲಿ ಡಾ.ಜಿ.ಪರಮೇಶ್ವರ್ ಅವರು ತಮ್ಮ ಪತ್ನಿ ಕನ್ನಿಕಾಪರಮೇಶ್ವರ್ ಅವರ ಜೊತೆಗೂಡಿ ಭಾಗವಹಿಸಿ, ಶಮಿ ಪೂಜೆ ನೆರವೇರಿಸಿ, ಅಂಬು ಕಡಿಯುವ ತನಕ ಅವರೇ ಪಾಲ್ಗೊಂಡು ದಸರಾವನ್ನು ಯಶಸ್ಸಾಗಲು ಕಾರಣೀಭೂತರಾದರು.

ಅಕ್ಟೋಬರ್ 11 ಮತ್ತು 12ರಂದು ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ರಸಸಂಜೆಯ ಸಂಗೀತ ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿ ಜನಸ್ತೋಮ ಸೇರಿದ್ದು ಎಂತಹವರನ್ನು ಬೆರಗುಗೊಳಿಸುವಂತಹವುದು. ಈ ಎರಡು ದಿನ ತುಮಕೂರು ಜನತೆ ಆನಂದದ ಕಡಲಲ್ಲಿ ತೇಲಿ ಮಿಂದೆದ್ದರು.
ಗುರುಕಿರಣ್ ಮತ್ತು ವಿಜಯಪ್ರಕಾಶ್ ಅವರು ನಡೆಸಿಕೊಟ್ಟ ಸಂಗೀತದ ರಸಸಂಜೆಗೆ ಇಡೀ ಜೂನಿಯರ್ ಕಾಲೇಜು ಮೈದಾನ ತುಂಬಿ, ರಸ್ತೆಯ ಇಕ್ಕಲೆಗಳಲ್ಲೂ ನಿಂತು, ಸಂಗೀತ ರಸಸಂಜೆಯನ್ನು ಕಣ್ಣುತುಂಬಿಕೊಂಡು ಆನಂದಿಸಿದರು.
ಅಕ್ಟೋಬರ್ 12ರಂದು ಅಂಬಾರಿ ಹೊತ್ತ ಆನೆ ಲಕ್ಷ್ಮೀಯು ಎಲ್ಲಿಯೂ ಯಾವುದೇ ಲೋಪವಾಗದಂತೆ ಬಿಜಿಎಸ್ ವೃತ್ತದಿಂದ , ಜಿಲ್ಲಾಧಿಕಾರಿಗಳ ಕಛೇರಿ, ಕೋತಿತೋಪು, ಡಾ. ಶಿವಕುಮಾರಸ್ವಾಮಿ ವೃತ್ತದಿಂದ ಜೂನಿಯರ್ ಕಾಲೇಜು ಮೈದಾನದತ್ತ ಅಂಬಾರಿ ಹೊರುವ ಅಭಿಮನ್ಯು, ಅರ್ಜುನ ಅವರಿಗಿಂತ ಏನು ಕಡಿಮೆ ಅಂತ ತನ್ನ ಸೊಂಡಿಲು ಬೀಸುತ್ತಾ ಜನರನ್ನು ಆಕರ್ಷಿಸುತ್ತಾ ಅಂಬಾರಿ ಹೊತ್ತುಕೊಂಡು ಗಜಗಾಂಭೀರ್ಯದಿಂದ ನಡೆದದ್ದು ಮಾತ್ರ ಮೈಸೂರು ದಸರಾಕ್ಕಿಂತ ಕಡಿಮೆಯಿಲ್ಲ ಎನ್ನುವಂತಾಯಿತು.
ಜೂನಿಯರ್ ಕಾಲೇಜು ಮೈದಾನಕ್ಕೆ ಅಂಬಾರಿ ಹೊತ್ತ ಲಕ್ಷ್ಮೀ ಬಂದಾಗ ಪೂರ್ಣಕುಂಭದೊಂದಿಗೆ ಸ್ವಾಗತವನ್ನು ಕೋರಲಾಯಿತು.
ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರು ಟೌನ್‍ಹಾಲ್ ವೃತ್ತದಲ್ಲಿ ಅಂಬಾರಿಯಲ್ಲಿದ್ದ ನಾಡದೇವತೆಗೆ ಪುಷ್ಪಾರ್ಜನೆ ಮಾಡಿ ಮೆರವಣಿಗೆ ಉದ್ದಕ್ಕೂ ನಡೆದು ಬಂದಿದ್ದು ವಿಶೇಷವಾಗಿತ್ತು.
ಒಟ್ಟಿನಲ್ಲಿ ತುಮಕೂರು ದಸರಾ ತುಮಕೂರು ಜನರ ಹೃದಯ-ಮನಗಳಲ್ಲಿ ಮೆಲುಕು ಹಾಕುವಂತೆ ಮಾಡಿದ್ದು, ದಸರಾ ಗುಂಗಿನಿಂದ ಜನರು ಹೊರಬರಲು ಕನಿಷ್ಠ ಒಂದು ತಿಂಗಳಾದರೂ ಬೇಕು.
ಟೌನ್‍ಹಾಲ್ ಮತ್ತು ಅಂಬಾರಿ ಸಾಗುವ ರಸ್ತೆಯ ಇಕ್ಕಲೆಗಳಲ್ಲಿ ಜನಸಾಗರವೇ ಸೇರಿದಿದ್ದು ದಸರಾ ಯಶಸ್ಸನ್ನು ತೋರಿಸುತ್ತಿತ್ತು. ಸಚಿವ ಡಾ.ಜಿ.ಪರಮೇಶ್ವರ್ ಅವರ ದಸರಾ ಕನಸ್ಸು ನನಸ್ಸಾಗಿದೆ, ಇನ್ನೊಂದು ಕನಸ್ಸು ನನಸಾಗುವುದೇ, ಆ ಕನಸ್ಸಿಗೆ ನಾಡದೇವತೆಯ ಆಶೀರ್ವಾದ ಲಭಿಸಿದೆಯೇ ಎಂದು ತುಮಕೂರು ಜನ ಕಾದು ನೋಡುವವರಿದ್ದಾರೆ.
ಜಿಲ್ಲಾಡಳಿತವು ದಸರಾ ಯಶಸ್ಸಿಗೆ ಟೊಂಕ ಕಟ್ಟಿ ನಿಂತು ಎಲ್ಲಿಯೂ ಲೋಪವಾಗದಂತೆ ಯಶಸ್ಸು ಮಾಡಿದ್ದು, ಜನತೆಯ ಮೆಚ್ಚಿಗೆಗೆ ಪಾತ್ರರಾಗಿದ್ದಾರೆ.