ತುಮಕೂರು: ಕಾರ್ಮಿಕ ಕಲ್ಯಾಣ ಮಂಡಳಿಯ ನಿಧಿ ಬಳಕೆಯಲ್ಲಿ ಆಗಿರುವ ಅವ್ಯವಹಾರ ಕುರಿತು ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗಸ್ಟ್ 05ರ ಸೋಮವಾರ ಕಟ್ಟಡ ಕಾರ್ಮಿಕರ ಸಮನ್ವಯ ಸಮಿತಿವತಿಯಿಂದ ಮುಖ್ಯಮಂತ್ರಿ ನಿವಾಸ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಗಿರೀಶ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಹೈಕೋರ್ಟ ಆದೇಶದಂತೆ ಶೈಕ್ಷಣಿಕ ಧನಸಹಾಯವನ್ನು ಅರ್ಜಿ ಸಲ್ಲಿಸಿರುವ ಎಲ್ಲಾ ಆರ್ಹರಿಗೂ ಪಾವತಿಸಬೇಕು.ಭ್ರಷ್ಟಾಚಾರದಿಂದ ಕಲ್ಯಾಣ ಮಂಡಳಿಯನ್ನು ಮುಕ್ತಗೊಳಿಸಬೇಕೆಂಬುದು ಈ ಹೋರಾಟದ ಹಿಂದಿನ ಉದ್ದೇಶವಾಗಿದೆ ಎಂದರು.
ಕಾರ್ಮಿಕರ ಹಲವಾರು ಹೋರಾಟಗಳ ಫಲವಾಗಿ ರಾಜ್ಯದಲ್ಲಿ 2006ರಲ್ಲಿ ಕಲ್ಯಾಣ ಮಂಡಳಿ ಆರಂಭವಾಗಿದ್ದು,2006,2011 ಮತ್ತು 2019ರ ನೊಂದಣಿ ವೇಳೆ ಕೆಲ ಲೋಪದೋಷಗಳ ಫಲವಾಗಿ ನಾಲ್ಕು ಲಕ್ಷಕ್ಕೂ ಅಧಿಕ ನಕಲಿ ಕಾರ್ಮಿಕ ಕಾರ್ಡುಗಳು ಸೃಷ್ಟಿಯಾಗಿದ್ದು,ರಾಜಕಾರಣಿಗಳ ಹಿಂಬಾಲಕರ ಪಾಲೇ ಹೆಚ್ಚಿದೆ.ಅಲ್ಲದೆ ವಿವಿಧ ಕಿಟ್‍ಗಳ ಖರೀದಿ ನೆನಪದಲ್ಲಿ ಕಾರ್ಮಿಕ ಕಲ್ಯಾಣ ಮಂಡಳಿಯ ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡಲಾಗುತ್ತಿದೆ.ಕಾರ್ಮಿಕರು ಹಾಗೂ ಅವರ ಮಕ್ಕಳಿಗೆ ಸವಲತ್ತು ನೀಡಿ ಎಂದು ಇಲ್ಲದ ಸಬೂಬು ಹೇಳುವ ಸರಕಾರ,ಕೀಟ್‍ಗಳ ಖರೀದಿ,ಕಾರ್ಮಿಕ ಆರೋಗ್ಯ ತಪಾಸಣೆ ಹೆಸರಿನಲ್ಲಿ ಬೇಕಾಬಿಟ್ಟಿ ಹಣ ಖರ್ಚು ಮಾಡುತ್ತಿದೆ.2006 ರಿಂದ 2018ರವರೆಗೆ ಕೇವಲ 1500 ಕೋಟಿ ಖರ್ಚಾಗಿದ್ದ ಕಲ್ಯಾಣ ನಿಧಿ,2019ರಿಂದ 2024ರ ಅವಧಿಯಲ್ಲಿ 4500-5000 ಕೋಟಿ ರೂ ಖರ್ಚಾಗಿದೆ.ಒಂದಕ್ಕೂ ಸರಿಯಾದ ಲೆಕ್ಕವಿಲ್ಲ.ಬಹುತೇಕ ಖರೀದಿಗಳು ಘಟನೋತ್ತರ ಅನುಮೋಧನೆ ಪಡೆದುಕೊಂಡ ಪ್ರಕರಣಗಳೇ ಆಗಿವೆ. ಹಾಗಾಗಿ ಸದರಿ ಖರೀದಿಯಲ್ಲಿ ಅವ್ಯವಹಾರ ನಡೆದಿರುವುದು ಬಲವಾಗಿದ್ದು,ನ್ಯಾಯಾಂಗ ತನಿಖೆಗೆ ಒಳಪಡಿಸಬೇಕೆಂಬುದು ಕಟ್ಟಡ ಕಾರ್ಮಿಕರ ಸಮನ್ವಯ ಸಮಿತಿಯ ಒತ್ತಾಯವಾಗಿದೆ ಎಂದರು.
ಕಟ್ಟಡ ಕಾರ್ಮಿಕ ಫೆಡರೇಷನ್‍ನ ತುಮಕೂರು ಜಿಲ್ಲಾಧ್ಯಕ್ಷ ಬಿ.ಉಮೇಶ್ ಮಾತನಾಡಿ,ರಾಜ್ಯದಲ್ಲಿ 2007 ರಿಂದ ಅಸ್ತಿತ್ವದಲ್ಲಿರುವ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ಕಾರ್ಮಿಕರಿಗಾಗಿ 19 ಸೌಲಭ್ಯ ಗಳನ್ನು ಘೋಷಿಸಿದೆ.ಇದರಲ್ಲಿ ಕಟ್ಟಡ ಕಾರ್ಮಿಕರ ಮಕ್ಕಳ ಶಿಕ್ಷಣ,ಮದುವೆ, ಆರೋಗ್ಯ,ಅಪಘಾತ ಸಹಜ ಮರಣ: ಹೆರಿಗೆ ಮೊದಲಾದ ಸೌಲಭ್ಯಗಳು ಜಾರಿಯಲ್ಲಿವೆ.ಆದರೆ ಇತ್ತೀಚಿಗೆ ಕಲ್ಯಾಣ ಮಂಡಳಿಯು ಬೋಗಸ್ ಕಾರ್ಡ ನಿಯಂತ್ರಣ ಕ್ಕಾಗಿ ಹಲವು ಬಿಗಿ ಕ್ರಮಗಳ ನೆಪದಲ್ಲಿ ಸಾವಿರಾರು ನೈಜ ಕಟ್ಟಡ ಕಾರ್ಮಿಕರು ಸೌಲಭ್ಯದಿಂದ ವಂಚಿತರಾಗುವಂತಾಗಿದೆ. ಶೈಕ್ಷಣಿಕ ಧನ ಸಹಾಯವನ್ನು ಶೇ.60 ರಿಂದ 80 ರವರೆಗೆ ಕಡಿತ ಮಾಡಿರುವುದರಿಂದ ಸಾವಿರಾರು ಬಡ ಕಟ್ಟಡ ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗುವ ಆಪಾಯ ಎದುರಾಗಿದೆ.ಕಲ್ಯಾಣ ಮಂಡಳಿಯು ಶೈಕ್ಷಣಿಕ ಧನ ಸಹಾಯ ಕಡಿತ ಮಾಡಿದ್ದನ್ನು ಪ್ರಶ್ನಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಫೆಡರೇಷನ್ ಹೈಕೋರ್ಟನಲ್ಲಿ ಅರ್ಜಿ ಹಾಕಿ ಇಬ್ಬರು ಬಡ ಕಾರ್ಮಿಕರ ಮಕ್ಕಳಿಗೆ ದಂಡ ಸಹಿತ ಧನ ಸಹಾಯ ಕೊಡಿಸಲು ಸಾಧ್ಯವಾಗಿದೆ.ಆದರೆ ಇದು ಅರ್ಜಿ ಸಲ್ಲಿಸಿರುವ ಎಲ್ಲರಿಗೂ ಅನ್ವಯವಾಗಬೇಕು ಎಂಬುದು ಕಟ್ಟಡ ಕಾರ್ಮಿಕರ ಒತ್ತಾಯವಾಗಿದೆ ಎಂದರು.
ಬಿಜೆಪಿ ಸರಕಾರವಿದ್ದಾಗ ಕೀಟ್‍ಗಳ ಖರೀದಿ ಹೆಸರಿನಲ್ಲಿ ಆದ ಅವ್ಯವಹಾರ ತಡೆಗಟ್ಟುವಂತೆ ಹೋರಾಟ ನಡೆಸಿದ ಸಂದರ್ಭದಲ್ಲಿ ಈಗಿನ ಕಾರ್ಮಿಕ ಸಚಿವರಾದ ಸಂತೋಷ್‍ಲಾಡ್ ಖರೀದಿಗಳನ್ನು ನಿಲ್ಲಿಸಿ, ಡಿಬಿಟಿ ಮೂಲಕ ನೇರ ಖಾತೆಗೆ ವರ್ಗಾವಣೆ ಮಾಡುವ ಭರವಸೆ ನೀಡಿದ್ದು, ಅದು ಭರವಸೆಯಾಗಿಯೇ ಉಳಿದಿದೆ.ಕಾರ್ಮಿಕರ ಹೆಸರಲ್ಲಿ ಮತ್ತೆ ಲ್ಯಾಪ್‍ಟಾಪ್ ಖರೀದಿ,ಖಾಸಗಿ ಆಸ್ಪತ್ರೆಗಳಿಂದ ವೈದ್ಯಕೀಯ ತಪಾಸಣೆ,ಪೌಷ್ಟಿಕಾಂಶ ಕಿಟ್ ಖರೀದಿ (ಆಯುರ್ವೇದ ಪೌಡರ್) ಇತ್ಯಾದಿಗಳ ಮೂಲಕ ಈಗಾಗಲೇ ನೂರಾರು ಕೋಟಿ ರೂಪಾಯಿ ಅನಗತ್ಯ ಖರ್ಚು ಮಾಡುತ್ತಾ ಕಾರ್ಮಿಕರನ್ನು ವಂಚಿಸಲಾಗುತ್ತಿದೆ ಎಂದು ತಿಳಿಸಿದರು.
ಕಲ್ಯಾಣ ಮಂಡಳಿ ರಚನೆಗಾಗಿ ಹೋರಾಟ ನಡೆಸಿದ ಕಾರ್ಮಿಕ ಸಂಘಟನೆಗಳನ್ನು ಕಾರ್ಮಿಕ ಸಚಿವರು, ಸರಕಾರಗಳು ಉದ್ದೇಶ ಪೂರ್ವಕವಾಗಿ ದೂರವಿಟ್ಟಿದ್ದಾರೆ. ಕಲ್ಯಾಣ ಮಂಡಳಿ ಸಭೆ ನಡೆಸದೇ ಬೇಕಾಬಿಟ್ಟ ತೀರ್ಮಾನ ಕೈಗೊಳ್ಳುತ್ತಿದ್ದಾರೆ. ಕಾರ್ಮಿಕರು ಸಲ್ಲಿಸಿದ ಮನವಿ, ಹೋರಾಟಕ್ಕೂ ಕಿವಿಗೊಡುತ್ತಿಲ್ಲ. ಈ ಹಿನ್ನಲೆಯಲ್ಲಿ ಎಲ್ಲ ಕೇಂದ್ರ ಕಾರ್ಮಿಕ ಸಂಘಟನೆಗಳಿಗೆ ಸಂಯೋಜನೆ ಗೊಂಡಿರುವ ಕಟ್ಟಡ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿಯಿಂದ ಆಗಸ್ಟ್ 5 ರಂದು ಮುಖ್ಯಮಂತ್ರಿ ಮನೆ ಚಲೋ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಎಐಟಿಯುಸಿಯ ಬೋಜರಾಜ್,ಇಬಾಹಿಂ ಖಲೀಲ್ ಮತ್ತಿತರರು ಪಾಲ್ಗೊಂಡಿದ್ದರು.