ಇ-ಆಸ್ತಿ ತೊಂದರೆ ಕೊಡದೆ ಆತ್ಮ ಸಾಕ್ಷಿ ಒಪ್ಪುವಂತೆ ಕೆಲಸ ಮಾಡಿ ಪಾಲಿಕೆ ಅಧಿಕಾರಿಗಳಿಗೆ ಶಾಸಕ ಜಿ.ಬಿ.ಜ್ಯೋತಿಗಣೇಶ್ ಸೂಚನೆ

ತುಮಕೂರು : ಸ್ವತ್ತುಗಳನ್ನು ನೋಂದಣಿ ಮಾಡಲು ಸರ್ಕಾರಿ ಇ-ಆಸ್ತಿ ಖಾತೆಗಳನ್ನು ಕಡ್ಡಾಯ ಮಾಡಿದ ನಂತರ ತುಮಕೂರು ಮಹಾನಗರಪಾಲಿಕೆಯ ಇಡೀ ವಾತಾವರಣವೇ ಕೆಟ್ಟುಹೋಗಿದ್ದು, ಸಾರ್ವಜನಿಕರು ಇ-ಆಸ್ತಿ ಖಾತೆ ಮಾಡಿಸಲು ಪರದಾಡುವಂತಾಗಿದೆ, ಅರ್ಜಿ ಸಲ್ಲಿಸಿ ತಿಂಗಳುಗಟ್ಟಲೆ ಕಳೆದರೂ ಅರ್ಜಿ ಸ್ಥಿತಿ ಏನೆಂದು ತಿಳಿದುಕೊಳ್ಳಲು ಸಾರ್ವಜನಿಕರು ಪರದಾಡುವಂತಾಗಿದೆ. ಯಾವುದೋ ಒಂದು ದಾಖಲೆಯಿಲ್ಲ ಎಂದು ತಿಂಗಳುಗಟ್ಟಲೆ ಸಾರ್ವಜನಿಕರನ್ನ ಅಲೆದಾಡಿಸಿ, ತದನಂತರ ರಿಜೆಕ್ಟ್ ಮಾಡಿದ ಸಾಕಷ್ಟು ದೂರುಗಳು ನನ್ನ ಹತ್ತಿರ ಬಂದಿದೆ. ಆತ್ಮ ಸಾಕ್ಷಿಗೆ ಒಪ್ಪುವಂತೆ ಅಧಿಕಾರಿಗಳು ಕೆಲಸ ನಿರ್ವಹಿಸಬೇಕಾಗಿದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ರವರು ತಿಳಿಸಿದರು.

 ಅವರು ತುಮಕೂರು ನಗರದ ಶಾಸಕರ ಕಾರ್ಯಾಲಯದಲ್ಲಿ ತುಮಕೂರು ಮಹಾನಗರಪಾಲಿಕೆಯ ಕಂದಾಯ ಶಾಖೆಯ ಅಧಿಕಾರಿಗಳ ಸಭೆ ನಡೆಸಿ, ಅಧಿಕಾರಿಗಳ ಕಾರ್ಯ ವೈಖರಿ ಬಗ್ಗೆ ಅಸಮಧಾನ ವ್ಯಕ್ತಪಡಿಸಿದರು. ಇ-ಆಸ್ತಿ ಖಾತೆ ಮಾಡಲು 3 ಜನ ಪ್ರಾದೇಶಿಕ ಆಯುಕ್ತರಿಗೆ ಅಧಿಕಾರ ಏಕೇಂದ್ರಿಕರಣ ಮಾಡಿದ್ದು, ಪ್ರಸ್ತುತ ಅರ್ಜಿ ಸಲ್ಲಿಸಲು ಹಾಗೂ ನಮೂನೆ-2 ಪಡೆಯಲು ಹೆಚ್ಚುವರಿ ಕೌಂಟರ್ ತೆರೆಯಬೇಕೆಂದು ಹಾಗೂ ಎಂ.ಎ.ಆರ್-19 ಪ್ರತಿಯನ್ನು ರೆಕಾರ್ಡ್ ರೂಂ ಶಾಖೆಯಿಂದ ಪಡೆಯುವುದನ್ನು ದಿನಗಟ್ಟಲೆ ಕಾಯುವುದನ್ನ ತಪ್ಪಿಸಿ, ಎಂ.ಎ.ಆರ್-19 ಪ್ರತಿಯನ್ನು ಪಡೆಯುವುದನ್ನು ಸರಳೀಕರಣಗೊಳಿಸಬೇಕೆಂದು ಕಂದಾಯ ಆಯುಕ್ತರಿಗೆ ಶಾಸಕರು ಸೂಚನೆ ನೀಡಿದರು.

ಇ-ಆಸ್ತಿ ಹಾಗೂ ಬಿ-ಖಾತೆಯನ್ನು ಮಾಡಲು ತುಮಕೂರು ಮಹಾನಗರಪಾಲಿಕೆಯಲ್ಲಿ ಪ್ರಾರಂಭ ಮಾಡಿ ಹಲವಾರು ತಿಂಗಳು ಕಳೆದಿದ್ದರೂ ಸಹ ಶೇ.25% ಗುರಿ ತಲುಪಿಸಲು ಸಾಧ್ಯವಾಗಿಲ್ಲ. ಈಗಾಗಲೇ ಇ-ಆಸ್ತಿ ಮಾಡಿಸಲು ಸಾಧ್ಯವಾಗದೇ ಸಾರ್ವಜನಿಕರು ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಇನ್ನಾದರೂ ಅಧಿಕಾರಿಗಳು ವರ್ತನೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ವರ್ತನೆಯಲ್ಲಿ ಬದಲಾವಣೆ ಮಾಡಿಕೊಂಡು ಸಾರ್ವಜನಿಕರಿಗೆ ನೆರವಾಗಬೇಕೆಂದು ಸೂಚನೆ ನೀಡಿದರು.

ಪರವಾನಗಿ ಪಡೆದು ಕಟ್ಟಡ ನಿರ್ಮಾಣ ನಂತರ ಕಟ್ಟಡವೆಂದು ನಮೂದು ಮಾಡಿಸಲು ತಿಂಗಳುಗಟ್ಟಲೆ ಅಲೆದಾಡಿಸಬೇಡಿ ಎಂದರು. ಸಾರ್ವಜನಿಕರಿಗೆ ಅಧಿಕಾರಿಗಳು ಕಛೇರಿ ಸಮಯದಲ್ಲಿ ಸುಲಭವಾಗಿ ಸಿಗುವಂತಾಗಬೇಕು. ಯಾವುದೇ ಬೇರೆ ಸಬೂಬುಗಳನ್ನು ಹೇಳದೇ ಜನಸ್ನೇಹಿಯಾಗಬೇಕೆಂದು ಶಾಸಕರು ತಿಳಿಸಿದರು. 

 ಈ ಸಭೆಯಲ್ಲಿ ತುಮಕೂರು ಮಹಾನಗರಪಾಲಿಕೆಯ ಕಂದಾಯ ಆಯುಕ್ತರು, ವಲಯ ಆಯುಕ್ತರು, ಕಂದಾಯ ಶಾಖೆಯ ಅಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *