ತುಮಕೂರು: ಆರೋಗ್ಯ ಕಾಪಾಡಿಕೊಳ್ಳುವ ಇಂದಿನ ಸವಾಲಿನಲ್ಲಿ ಆರೋಗ್ಯಕರ ಆಹಾರ, ಪಾನಿಯ ಆಯ್ಕೆ ಮಾಡಿ ಸೇವನೆ ಮಾಡುವುದೂ ಮುಖ್ಯವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಅಪಾಯಕಾರಿ ಪಾನಿಯಗಳ ಬದಲು ರೋಗನಿರೋಧಕ ನೀರಾ ಸೇವನೆ ಮಾಡಿ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಸಲಹೆ ಮಾಡಿದರು.
ನಗರದ ಅಮಾನಿಕೆರೆ ಬಳಿ ಸೋಮವಾರ ನೀರಾ ಸಿಪ್ ಕೌಂಟರ್ ಉದ್ಘಾಟನೆ ಮಾಡಿದ ಶಾಸಕರು, ಇತ್ತೀಚಿನ ಪ್ಯಾಕ್ಡ್ ಫುಡ್‍ನಲ್ಲಿ ಕ್ಯಾನ್ಸರ್‍ಕಾರದ ಅಂಶಗಳಿರುವುದು ಕಂಡುಬಂದಿದೆ. ಆಹಾರದಲ್ಲಿ ಆರೋಗ್ಯಮಾರಕ ಟೇಸ್ಟಿಂಗ್ ಪೌಡರ್ ಬಳಕೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಆರೋಗ್ಯಕರ ಆಹಾರ ಆಯ್ಕೆ ಮಾಡಿಕೊಳ್ಳುವುದು ಅನಿವಾರ್ಯ ಎಂದರು.
ನೈಸರ್ಗಿಕ ಉತ್ಪನ್ನವಾದ ಪಾನಿಯಾಗಳನ್ನು ಪ್ರೋತ್ಸಾಹಿಸಬೇಕು. ರೋಗನಿರೋಧಕ, ಆರೋಗ್ಯವರ್ಧಕ ಪಾನಿಯಾಗಿರುವ ನೀರಾವನ್ನು ಸಾರ್ವಜನಿಕರು ಸೇವನೆ ಮಾಡಿದರೆ ರೈತರಿಗೂ ಅನುಕೂಲ, ಆರೋಗ್ಯಕ್ಕೂ ಸಹಕಾರಿ ಎಂದು ಜ್ಯೋತಿಗಣೇಶ್ ಹೇಳಿದರು.
ಆರ್ಯ ಈಡಿಗರ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಸಂದ್ರ ಶಿವಣ್ಣ ಮಾತನಾಡಿ, ನೀರಾ ಸೇವನೆಯಿಂದ ಕ್ಯಾನ್ಸರ್ ತಡೆಗೆ, ಚರ್ಮದ ಆರೋಗ್ಯ ವರ್ಧನೆಗೆ, ಕಿಡ್ನಿ ಸಮಸ್ಯೆಗಳಿಗೆ ಪರಿಹಾರ, ರಕ್ತಹೀನತೆ ನಿವಾರಣೆ, ಕಣ್ಣಿನ ಆರೋಗ್ಯ ವೃದ್ಧಿ ಮುಂತಾದ ಹಲವಾರು ರೀತಿಯಲ್ಲಿ ಆರೋಗ್ಯವರ್ಧನೆಗೆ ಸಹಕಾರಿಯಾಗಿದೆ ಎಂದು ಹೇಳಿದರು.
ನೀರಾ ಸಿಪ್ ವಿತರಕರಾದ ಸುರಭಿ ಮೋಹನ್‍ಬಾಬು ಮಾತನಾಡಿ, ನಗರದಲ್ಲಿ ಅಮಾನಿಕೆರೆ ಬಳಿ, ಸರ್ಕಾರಿ ಜ್ಯೂನಿಯರ್ ಕಾಲೇಜು, ವಿಶ್ವವಿದ್ಯಾಲಯ, ಕುವೆಂಪು ನಗರದ ಕುವೆಂಪು ವೃತ್ತ, ಎಸ್‍ಐಟಿ ಕಾಲೇಜು ಮುಂಭಾಗ ನೀರಾ ಸಿಪ್ ಕೌಂಟರ್‍ಗಳು ಆರಂಭವಾಗಿವೆ. ಬೆಳಿಗ್ಗೆ 6ರಿಂದ 9 ಗಂಟೆವರೆಗೆ ನೀರಾ ಮಾರಾಟ ವ್ಯವಸ್ಥೆ ಇದೆ ಎಂದು ಹೇಳಿದರು.
ಜಿಲ್ಲಾ ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಂ.ನಾಗರಾಜು, ಪ್ರಧಾನ ಕಾರ್ಯದರ್ಶಿ ಮಲ್ಲಸಂದ್ರ ಶಿವಣ್ಣ, ಕಾರ್ಯದರ್ಶಿ ಸುರಭಿ ನಾಗರಾಜು, ಖಜಾಂಚಿ ಹೆಚ್.ಎಂ.ಕುಮಾರ್, ಸಹಕಾರ್ಯದರ್ಶಿಗಳಾದ ಓ.ಎಲ್.ಪುರುಷೋತ್ತಮ್, ಎಲ್‍ಐಸಿ ನಾರಾಯಣ್, ಉದ್ಯಮಿ ಸೈದಪ್ಪ ಗುತ್ತೇದಾರ್, ನಗರಪಾಲಿಕೆ ಮಾಜಿ ಸದಸ್ಯರಾದ ರಾಮಕೃಷ್ಣಪ್ಪ, ಟಿ.ಹೆಚ್.ವಾಸುದೇವ್, ಟಿ.ಹೆಚ್.ಬಾಲಕೃಷ್ಣ, ರಾಜ್ಯ ಚೆಸ್ ಅಸೋಸಿಯೇಷನ್ ಅಧ್ಯಕ್ಷ ಟಿ.ಎನ್.ಮಧುಕರ್, ಜಿಲ್ಲಾ ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ಕೆ.ವೇದಮೂರ್ತಿ, ಮುಖಂಡರಾದ ಕರಾಟೆ ಕೃಷ್ಣಮೂರ್ತಿ, ಮಾಧವನ್, ರಾಜನ್, ನಟರಾಜ್, ಶ್ರೀನಿವಾಸ್ ಮೊದಲಾದವರು ಭಾಗವಹಿಸಿದ್ದರು.