ತುಮಕೂರು: ಮಕ್ಕಳಿಗೆ ನೈತಿಕತೆ ಕಲಿಸಿ ಅವರಲ್ಲಿ ಆತ್ಮವಿಶ್ವಾಸ ಬೆಳೆಸಬೇಕು. ಶಿಕ್ಷಕರು ಮಕ್ಕಳಿಗೆ ಪಠ್ಯದ ಜೊತೆಗೆ ಆತ್ಮವಿಶ್ವಾಸ, ನೈತಿಕತೆಯ ಪಾಠವನ್ನು ಕಡ್ಡಾಯವಾಗಿ ಬೋಧಿಸಬೇಕು ಎಂದು ಶಾಸಕ ಬಿ.ಸುರೇಶ್‍ಗೌಡರು ಸಲಹೆ ಮಾಡಿದರು.
ತುಮಕೂರು ಗ್ರಾಮಾಂತರ ಕ್ಷೇತ್ರದ ಹೆಗ್ಗೆರೆಯಲ್ಲಿ ಶಾಹಿ ಎಕ್ಸ್‍ಪೋರ್ಟ್ ಪ್ರೈವೆಟ್ ಲಿಮಿಟೆಡ್ ಗಾರ್ಮೆಂಟ್ಸ್‍ನವರು 75 ಲಕ್ಷ ರೂ.ಗಳ ತಮ್ಮ ಸಿಎಸ್‍ಆರ್ ಅನುದಾನದಲ್ಲಿ ಹೆಗ್ಗೆರೆ ಸರ್ಕಾರಿ ಶಾಲೆಯಲ್ಲಿ ನಿರ್ಮಾಣ ಮಾಡಿದ್ದ ನೂತನ ಕೊಠಡಿಗಳನ್ನು ಉದ್ಘಾಟಿಸಿ, ಸಮಾರಂಭದಲ್ಲಿ ಮಾತನಾಡಿದ ಶಾಸಕರು, ಶಾಹಿ ಎಕ್ಸ್‍ಪೋರ್ಟ್‍ನವರು ನೀಡಿದ ಅನುದಾನ ಹೆಣ್ಣುಮಕ್ಕಳ ದುಡಿಮೆಯ ಪರಿಶ್ರಮದ ಹಣ, ಕುಟುಂಬದ ನಿರ್ವಹಣೆಗಾಗಿ ಹೆಣ್ಣುಮಕ್ಕಳು ಗಾರ್ಮೆಂಟ್‍ಗಳಲ್ಲಿ ದುಡಿಯುತ್ತಿದ್ದಾರೆ. ಅಂತಹವರು ದುಡಿದ ಹಣದಲ್ಲಿ ಈ ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ. ಮಕ್ಕಳ ಶಿಕ್ಷಣಕ್ಕಾಗಿ ನೆರವಾದ ಶಾಹಿ ಕಂಪನಿಗೆ ಹಾಗೂ ದುಡಿದು ಕೊಟ್ಟ ತಾಯಂದಿರ ಔದಾರ್ಯ ಶ್ಲಾಘನೀಯ ಎಂದರು.
ಶಿಕ್ಷಣದ ತಳಹದಿಯಾಗಿರುವ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಗುಣಾತ್ಮಕ, ಜವಾಬ್ದಾರಿಯುತವಾಗಿರಬೇಕು. ಮಕ್ಕಳಿಗೆ ಶಿಕ್ಷಣದಲ್ಲಿ ಉತ್ತಮ ತಳಪಾಯ ಬಿದ್ದರೆ ಅವರು ಮುಂದೆ ಯಶಸ್ವಿಯಾಗಿ ಉತ್ತಮ ಪ್ರಜೆಗಳಾಗಿ ಬೆಳೆಯುತ್ತಾರೆ. ಹೀಗಾಗಿ ಶಾಲಾ ಶಿಕ್ಷಕರು ಅತ್ಯಂತ ಕಾಳಜಿಯಿಂದ ಮಕ್ಕಳಿಗೆ ನೈತಿಕ, ಆತ್ಮವಿಶ್ವಾಸ ಮೂಡಿಸುವ ಪಾಠ ಕಲಿಸಬೇಕು. ಇಂದು ಸರ್ಕಾರ ಶಾಲಾ ಶಿಕ್ಷಣಕ್ಕಾಗಿ ಪ್ರತಿ ವರ್ಷ 40 ಸಾವಿರ ಕೋಟಿ ರೂ. ಖರ್ಚು ಮಾಡುತ್ತಿದೆ. ಅತ್ಯುತ್ತಮ ಶಿಕ್ಷಕರು ಸರ್ಕಾರಿ ಶಾಲೆಗಳಲ್ಲಿದ್ದಾರೆ. ಹೀಗಿರುವಾಗ ಎಲ್ಲೂ ಲೋಪವಾಗದಂತೆ ಸರ್ಕಾರಿ ಶಾಲಾ ಶಿಕ್ಷಣದ ಗುಣಮಟ್ಟವನ್ನು ಕಾಪಾಡಿಕೊಂಡುಹೋಗಬೇಕು ಎಂದು ಶಾಸಕ ಸುರೇಶ್‍ಗೌಡ ಹೇಳಿದರು.
110 ವರ್ಷಗಳ ಹಿಂದೆ ನಿವೃತ್ತ ಶಿಕ್ಷಕರೊಬ್ಬರು ಈ ಶಾಲೆಗಾಗಿ ಎರಡು ಎಕರೆ ಜಮೀನು ದಾನ ನೀಡಿದ್ದರು. ಇಂದು ಈ ಜಾಗದ ಬೆಲೆ 10 ಕೋಟಿ ರೂ.ಗಳಿಗೂ ಹೆಚ್ಚಿದೆ. ಮಕ್ಕಳ ಶಿಕ್ಷಣ, ಭವಿಷ್ಯಕ್ಕಾಗಿ ಆ ಮಹಾನುಭಾವರು ಶಾಲೆಗೆ ಜಾಗವನ್ನು ತ್ಯಾಗ ಮಾಡಿದ್ದರು. ಅವರು ಸತ್ತ ನಂತರವೂ ಅವರನ್ನು ನಾವು ಸ್ಮರಿಸಬೇಕು. ಮಕ್ಕಳಲ್ಲೂ ತ್ಯಾಗ, ಮಾನವೀಯತೆಯಂತಹ ಆದರ್ಶ ಗುಣಗಳನ್ನು ಬೆಳೆಸಬೇಕು. ಈ ಶಾಲೆಗೆ ಮೂಲಸೌಕರ್ಯ ಒದಗಿಸಲೆಂದು ಶಾಹಿ ಎಕ್ಸ್‍ಪೋಟ್ ಸಂಸ್ಥೆಯವರು ಸಿಎಸ್‍ಆರ್ ಅನುದಾನ ನೀಡಿ ಕೊಠಡಿ ನಿರ್ಮಿಸಿಕೊಟ್ಟಿದ್ದಾರೆ. ಎಲ್ಲಾ ಕಾರ್ಖಾನೆಗಳವರೂ ತಮ್ಮ ಸಿಎಸ್‍ಆರ್ ನಿಧಿಯನ್ನು ಈ ರೀತಿ ಸದುಪಯೋಗವಾಗಲು ವಿನಿಯೋಗಿಸಬೇಕು ಎಂದು ಹೇಳಿದರು.
ಶಾಹಿ ಎಕ್ಸ್‍ಪೋರ್ಟ್ ಸಂಸ್ಥೆಯ ಜನರಲ್ ಮೇನೇಜರ್ ಶಶಿಕುಮಾರ್, ಹೆಚ್‍ಆರ್ ಶಿವಪ್ರಸಾದ್, ಸಿಎಸ್‍ಆರ್ ನಿಧಿ ವ್ಯವಸ್ಥಾಪಕ ಧನಂಜಯಕುಮಾರ್, ಗ್ರಾಮ ಪಂಚಾಯ್ತಿ ಅಧ್ಯಕ್ಷ ರೇವಣ್ಣ, ಉಪಾಧ್ಯಕ್ಷೆ ಅನುಸೂಯ, ಸದಸ್ಯರಾದ ವೀರಭದ್ರಸ್ವಾಮಿ, ಭೋಜಣ್ಣ, ನವರತ್ನಕುಮಾರ್, ಮುಬಾರಕ್, ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತರಾಯಪ್ಪ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸುರೇಶ್, ಸಮನ್ವಯಾಧಿಕಾರಿ ಚೇತನ, ಮುಖ್ಯಶಿಕ್ಷಕಿ ಶೈಲಜಾ, ಮುಖಂಡರಾದ ರಾಜಶೇಖರ್, ರಾಜಣ್ಣ, ಮುಕುಲ್, ಜಯಶ್ರೀ, ಸರಸ್ವತಿ, ಶೈಲಜಾ, ಉಷಾ ಮೊದಲಾದವರು ಭಾಗವಹಿಸಿದ್ದರು.
ಕಾಮಗಾರಿಗಳಿಗೆ ಚಾಲನೆ :
ತುಮಕೂರು: ಗ್ರಾಮಾಂತರ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಶಾಸಕ ಬಿ.ಸುರೇಶ್‍ಗೌಡರು ಕೋಟ್ಯಾಂತರ ರೂ.ಗಳ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.

ಮನೆಮನೆಗೆ ಕುಡಿಯುವ ನೀರು ಪೂರೈಕೆಗಾಗಿ ಸಂಪರ್ಕ ಒದಗಿಸುವ ಜಲಜೀವನ್ ಮಿಷನ್ ಯೋಜನೆಯಡಿ ಅರೆಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತುಮಕೂರು ಮಲ್ಲಪ್ಪನಹಳ್ಳಿಯಲ್ಲಿ 25 ಲಕ್ಷ ರೂ. ವೆಚ್ಚದ ಕಾಮಗಾರಿ, ಮಲ್ಲಸಂದ್ರದಲ್ಲಿ 1.66 ಕೋಟಿ ರೂ., ಹೆಗ್ಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಕ್ಕೋಡಿ ಗ್ರಾಮದಲ್ಲಿ 1.26 ಕೋಟಿ ರೂ.ಗಳ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.
ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಮಲ್ಲಸಂದ್ರದ ಸರ್ಕಾರಿ ಪ್ರಾಥಮಿಕ ಪಾಠ ಶಾಲೆಯಲ್ಲಿ 25 ಲಕ್ಷ ರೂ. ಅಂದಾಜು ವೆಚ್ಚದ ನೂತನ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು. ನಂತರ ತಿಮ್ಮರಾಜನಹಳ್ಳಿಯಲ್ಲಿ 30 ಲಕ್ಷ ರೂ.ಗಳ ಸಭಾ ಭವನ ನಿರ್ಮಾಣ ಕಾರ್ಯಕ್ಕೆ ಶಾಸಕ ಸುರೇಶ್‍ಗೌಡ ಶಂಕುಸ್ಥಾಪನೆ ಮಾಡಿದರು.
ಎಲ್ಲಾ ಕಾರ್ಯಕ್ರಮಗಳಲ್ಲಿ ಆಯಾ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಬಿಜೆಪಿ ಮುಖಂಡರು, ಗ್ರಾಮಸ್ಥರು ಭಾಗವಹಿಸಿದ್ದರು.