ತುಮಕೂರು: ತುಮಕೂರು ಮಹಾನಗರಪಾಲಿಕೆಯಲ್ಲಿ ಕಳೆದ 20 ರಿಂದ 25 ವರ್ಷಗಳ ಕಾಲ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ವಾಟರ್ ಆಪರೇಟರ್‍ಗಳಿಗೆ ಗುತ್ತಿಗೆ ಪದ್ದತಿ ರದ್ದು ಮಾಡಿ ನೇರಪಾವತಿ, ಖಾಲಿ ಹುದ್ದೆ ಭರ್ತಿಗೆ ಒತ್ತಾಯಿಸಿ ಮಹಾನಗರಪಾಲಿಕೆಯ ನೀರು ಸರಬರಾಜು ನೌಕರರು ಪಾಲಿಕೆ ಆವರಣದಲ್ಲಿ ಆರಂಭಿಸಿರುವ ಅನಿರ್ದಿಷ್ಟಾವಧಿ ಧರಣಿ ಮಂಗಳವಾರ ಎರಡನೇ ದಿನದಲ್ಲಿ ಮುಂದುವರೆಯಿತು. ಸೇವೆ ಸ್ಥಗಿತಗೊಳಿಸಿರುವ ನೌಕರರ ಪ್ರತಿಭಟನೆ ಹಿನ್ನೆಲೆಯಲ್ಲಿ ನಗರದಲ್ಲಿ ಎರಡು ದಿನಗಳಿಂದ ನೀರು ವಿತರಣೆಯಲ್ಲಿ ವ್ಯತ್ಯಯವಾಗಿದೆ.
ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಂಗಳವಾರ ಬೆಳಿಗ್ಗೆ ಮುಷ್ಕರ ನಿರತ ನೀರು ಸರಬರಾಜು ನೌಕರರನ್ನು ಭೇಟಿ ಮಾಡಿ, ಹೋರಾಟಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿ, ಮನವಿ ಪತ್ರ ಸ್ವೀಕರಿಸಿದರು. ನೌಕರರ ಬೇಡಿಕೆ ಈಡೇರಿಸುವ ಕುರಿತು ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸುವುದಲ್ಲದೇ ಸದನದಲ್ಲಿಯೂ ನಿಮ್ಮ ಪರ ಧ್ವನಿ ಎತ್ತುವುದಾಗಿ ಭರವಸೆ ನೀಡಿದರು. ನೌಕರರ ಹೋರಾಟ ಮುಂದುವರೆದರೆ, ಬೇಸಿಗೆ ಕಾಲವಾದ್ದರಿಂದ ನಗರದಲ್ಲಿ ನೀರಿಗೆ ಹಾಹಾಕಾರ ಪರಿಸ್ಥಿತಿ ಎದುರಾಗುತ್ತದೆ. ನಗರದ ವಾರ್ಡ್‍ಗಳಲ್ಲಿ ಯಾವ ಯಾವ ಸ್ಥಳದಲ್ಲಿ ನೀರಿನ ವಾಲ್ ಇರುವುದು ತಮಗೆ ಮಾತ್ರ ತಿಳಿದಿದ್ದು, ಸಾರ್ವಜನಿಕರಿಗೆ ತೊಂದರೆಯಾಗದಂತೆ ತಾವೆಲ್ಲ ಸಹಕರಿಸಬೇಕೆಂದು ಮನವಿ ಮಾಡಿದರು ಹಾಗೂ ರಾಜ್ಯ ಸರ್ಕಾರ ಕೂಡಲೇ ಈ ನೌಕರರ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ಮನವಿ ಮಾಡಿದರು.
ತಾರತಮ್ಯ ಮಾಡದೆ ಒಂದೇ ಬಾರಿಗೆ ಖಾಯಂಗೊಳಿಸುವಂತೆ ನೌಕರರು ಸರ್ಕಾರದ ಎದುರು ಬೇಡಿಕೆ ಇಟ್ಟಿದ್ದಾರೆ. ಈ ವಿಚಾರವಾಗಿ ನಾನು ಸದನದಲ್ಲಿ ಚರ್ಚೆ ಮಾಡಿ, ಬೇಡಿಕೆ ಈಡೇರಿಕೆಗೆ ಒತ್ತಾಯಿಸುವುದಾಗಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.
ಜಿಲ್ಲಾ ನೀರು ಸರಬರಾಜು ನೌಕರರ ಸಂಘದ ಅಧ್ಯಕ್ಷ ಕೆ.ಕುಮಾರ್ ಮಾತನಾಡಿ, ಸರ್ಕಾರ ನಮ್ಮ ಬೇಡಿಕೆ ಈಡೇರಿಸಲು ತಾವು ರಾಜ್ಯ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಮನವಿ ಮಾಡಿದರು.
ಪೌರಕಾರ್ಮಿಕರ ಮಾದರಿಯಲ್ಲಿ ನೀರು ಸರಬರಾಜುದಾರರನ್ನು ವಿಶೇಷ ನೇರ ನೇಮಕಾತಿ ಮಾಡಬೇಕು, ಪಾಲಿಕೆಯಲ್ಲಿ ಖಾಲಿ ಇರುವ ಎಲ್ಲಾ 210 ಹುದ್ದೆಗಳಿಗೆ ಹಾಲಿ ಕೆಲಸ ನಿರ್ವಹಿಸುತ್ತಿರುವ ನೌಕರರನ್ನೇ ನೇಮಕ ಮಾಡಬೇಕು. ಈ ಬಗ್ಗೆ ಸರ್ಕಾರ ಈ ಸಾಲಿನ ಬಜೆಟ್‍ನಲ್ಲಿ ಸರ್ಕಾರ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಗುತ್ತಿಗೆ ಪದ್ದತಿ ರದ್ದು ಮಾಡುವಂತೆ ರಾಜ್ಯಪಾಲರ ಆದೇಶವಿದ್ದರೂ ಸರ್ಕಾರ ಈವರೆಗೂ ಆದೇಶ ಪಾಲನೆ ಮಾಡಿಲ್ಲ. ನೀರು ಸರಬರಾಜುದಾರರಿಗೆ ಕೆಲಸಕ್ಕೆ ತಕ್ಕ ವೇತನ ನೀಡಬೇಕು. ವಾಲ್‍ಮ್ಯಾನ್ ನೌಕರರಿಗೆ ಗೃಹ ಭಾಗ್ಯ ನೀಡಬೇಕು. ಉಚ್ಛ ನ್ಯಾಯಾಲಯದ ಆದೇಶದಂತೆ ತುರ್ತಾಗಿ ನೇಮಕಾತಿ ಖಾಯಂ ಮಾಡಬೇಕು ಎಂದು ಮನವಿ ಮಾಡಿದರು.