ಅಚ್ಚೆ ದಿನ್ ಕಲ್ಪಿಸುವಲ್ಲಿ ಮೋದಿ ಸರ್ಕಾರ ವಿಫಲ-ಮಾವಳ್ಳಿ ಶಂಕರ್

ತುಮಕೂರು: ನರೇಂದ್ರಮೋದಿ ನೇತೃತ್ವದ 10 ವರ್ಷಗಳ ಎನ್.ಡಿ.ಎ ಆಡಳಿತ ಜನಸಾಮಾನ್ಯರಿಗೆ ಅಚ್ಚೆ ದಿನ್ ಕಲ್ಪಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದು,ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರೈತ,ಬಡವರ, ದೀನ ದಲಿತರು, ಹಿಂದುಳಿದ ವರ್ಗಗಳ ವಿರೋಧಿಯಾಗಿರುವ ಬಿಜೆಪಿ ಪಕ್ಷವನ್ನು ಸೋಲಿಸಿ, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಂತೆ ಕರ್ನಾಟಕ ಶೋಷಿತ ಸಮುದಾಯಗಳ ಒಕ್ಕೂಟದ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಕಳೆದ ಹತ್ತುವರ್ಷಗಳಲ್ಲಿ ಎನ್.ಡಿ.ಎ. ಒಕ್ಕೂಟ ನೀಡಿದ ಒಂದೇ ಒಂದು ಭರವಸೆಯನ್ನು ಈಡೇರಿಸಿಲ್ಲ.ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೆರಿವೆ.ನಿರುದ್ಯೋಗ ತಾಂಡವವಾಡುತ್ತಿದೆ.ಸೈನಿಕರ ನೇಮಕಾತಿ ಯಲ್ಲಿಯೂ ಅಗ್ನಿಪಥ್ ಹೆಸರಿನಲ್ಲಿ ಹೊರಗುತ್ತಿಗೆ ಪದ್ದತಿಯನ್ನು ಜಾರಿಗೆ ತರಲಾಗಿದೆ.ಕರ್ನಾಟಕದಲ್ಲಿ ಸದೃಢ ವಾಗಿದ್ದ ಬ್ಯಾಂಕುಗಳನ್ನು ಗುಜರಾತ್‍ನ ನಷ್ಟದಲ್ಲಿರುವ ಬ್ಯಾಂಕಿನೊಂದಿಗೆ ವಿಲೀನ ಮಾಡಿ,ಕನ್ನಡಿಗರ ಅಸ್ವಿತ್ವವೇ ಇಲ್ಲದಂತೆ ಮಾಡಲಾಗಿದೆ ಎಂದರು.

ಇತ್ತೀಚಿನ ಭಾಷಣವೊಂದರಲ್ಲಿ ಪ್ರಧಾನಿ ನರೇಂದ್ರಮೋದಿ ಇದುವರೆಗೂ ನಡೆದಿರುವುದು ಪ್ರಯೋಗಿಕ, ಇನ್ನು ಮುಂದೆ ನಿಜವಾದ ಅಭಿವೃದ್ದಿ ಇದೆ ಎಂದು ಹೇಳಿಕೆ ನೀಡಿರುವುದನ್ನು ಗಮನಿಸಿದರೆ, 10 ವರ್ಷಗಳ ಕಾಲ ದೇಶದಲ್ಲಿ ಆಡಳಿತ ನಡೆಸಿದ್ದು ಓರ್ವ ಅನನುಭವಿ ಎಂಬುದು ತಿಳಿಯುತ್ತದೆ.ಮೋದಿ ಸರಕಾರದಲ್ಲಿ ಸಾಮಾಜಿಕ ನ್ಯಾಯವೆಂಬುದು ಮರೀಚಿಕೆ ಯಾಗಿದೆ.ಪದೇ ಪದೇ ಆ ಪಕ್ಷದ ಸಂಸದರೇ ಸಂವಿಧಾನ ಬದಲಾಯಿಸುವ ಕೆಲಸ ಮಾಡುತ್ತಿದ್ದರೂ ಇದುವರೆಗೂ ಪ್ರತಿಕ್ರಿಯೆ ನೀಡಿಲ್ಲ. ಈಗ 400 ಸೀಟು ಕೊಡಿ ಎಂದು ಕೇಳುತ್ತಿದ್ದಾರೆ. ಇವರಿಗೆ ನಾಲ್ಕು ನೂರು ಸೀಟು ಕೊಟ್ಟರೆ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಉಳಿಗಾಲವಿಲ್ಲ.ಹಾಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ, ದೇಶದ ಗದ್ದುಗೆ ಹಿಡಿಯುವಂತೆ ಮಾಡಬೇಕೆಂದು ಮಾವಳ್ಳಿ ಶಂಕರ್ ನುಡಿದರು.

ಕರ್ನಾಟಕ ಶೋಷಿತ ಸಮುದಾಯಗಳ ಒಕ್ಕೂಟದ ಸಂಚಾಲಕ ರಾಮಚಂದ್ರಪ್ಪ ಮಾತನಾಡಿ, ಕಳೆದ 10 ವರ್ಷಗಳಲ್ಲಿ ನರೇಂದ್ರಮೋದಿ ಸರಕಾರ ಶೋಷಿತರ ಏಳಿಗೆಗೆ ಒಂದೇ ಒಂದು ಕಾರ್ಯಕ್ರಮ ನೀಡಿಲ್ಲ.ಆರ್.ಎಸ್.ಎಸ್.ಸೇರಿದಂತೆ ಬಿಜೆಪಿಯ ಮಿತ್ರ ಪಕ್ಷಗಳು ಮಿಲ್ಲರ್ ಆಯೋಗದಿಂದ ಇದುವರೆಗಿನ ಎಲ್ಲಾ ಆಯೋಗದ ಶಿಫಾರಸ್ಸಗಳನ್ನು ಜಾರಿ ಮಾಡಲು ಬಿಡುತ್ತಿಲ್ಲ.ರಾಜ್ಯದ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನೀಡಿದ್ದ ಸಾಮಾಜಿಕ, ಆರ್ಥಿಕ ವರದಿಯನ್ನು ಸಹ ಜಾರಿಗೆ ತರಲು ಅಡ್ಡಿ ಮಾಡುತ್ತಿದೆ. ಬಿಜೆಪಿ ಪಕ್ಷಕ್ಕೆ ಆರ್.ಎಸ್.ಎಸ್ ಹೇಳಿದ ಕೆಲಸಗಳಿಗಷ್ಟೇ ಮನ್ನಣೆ ನೀಡುತ್ತಿದ್ದು, ಜನಸಾಮಾನ್ಯರ ಸಮಸ್ಯೆಗಳಿಗೆ ಅವರ ಬಳಿ ಉತ್ತರವು ಇಲ್ಲ, ಪರಿಹಾರವೂ ಇಲ್ಲ. ಹಾಗಾಗಿ ಕರ್ನಾಟಕದಲ್ಲಿ ಸಾಮಾಜಿಕ ನ್ಯಾಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾಂಗ್ರೆಸ್ ಪಕ್ಷವನ್ನು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ನಾವೆಲ್ಲರೂ ಬೆಂಬಲಿಸಬೇಕಿದೆ ಎಂದರು.
ಅನಂತನಾಯಕ್ ಮಾತನಾಡಿ,ದೇಶದ ರೈತರ ಆದಾಯ ದ್ವಿಗುಣ ಮಾಡುತ್ತೇವೆ ಎಂದು ಭರವಸೆ ನೀಡಿದ್ದ ಬಿಜೆಪಿ ಸರಕಾರದಲ್ಲಿ 1.74 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಬೆಲೆಇಲ್ಲ.ಪಂಜಾಬ್ ಮತ್ತು ಹರಿಯಾಣ ಗಡಿಗಳಲ್ಲಿ ಪ್ರತಿಭಟನಾ ನಿರತ ಸುಮಾರು 752 ರೈತರು ಸಾವಿಗೆ ಶರಣಾದರು. ಇದು ಮೋದಿ ಸರಕಾರದ ವ್ಯವಸ್ಥಿತ ಕೊಲೆ.ದುಡಿಯುವ ವರ್ಗದ ಕಾರ್ಮಿಕರ ಸಮಯವನ್ನು 8-12 ಗಂಟೆಗಳಿಗೆ ಹೆಚ್ಚಿಲಾಗಿದೆ.ಇಂತಹ ಸರಕಾರ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ದೇಶದ ಜನತೆಗೆ ಯಾವುದೇ ಭದ್ರತೆ ನೀಡಲು ಸಾಧ್ಯವಿಲ್ಲ.ಹಾಗಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕೆಂಬುದು ನಮ್ಮೆಲ್ಲರ ಬೇಡಿಕೆಯಾಗಿದೆ ಎಂದರು.

ತುಮಕೂರು ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ಉಪಾಧ್ಯಕ್ಷ ಎಸ್.ಟಿ.ಶ್ರೀನಿವಾಸ್ ಮಾತನಾಡಿ,ಕೇಂದ್ರದ ನರೇಂದ್ರ ಮೋದಿ ಸರಕಾರ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳ ಮೇಲೆ ಮಲತಾಯಿ ಧೋರಣೆ ಅನುಸರಿ ಸುತ್ತಿದೆ.ಎನ್.ಡಿ.ಆರ್.ಎಫ್ ಹಾಗೂ ಜಿ.ಎಸ್.ಟಿ ಪಾಲು ಕುರಿತು ಚರ್ಚಿಸಲು ಆಹ್ವಾನಿಸಿದರೆ ವಿತ್ತ ಮಂತ್ರಿಗಳು ಗೈರಾಗುವ ಮೂಲಕ ಕರ್ನಾಟಕಕ್ಕೆ ಮಾಡಿರುವ ಅನ್ಯಾಯವನ್ನು ಒಪ್ಪಿಕೊಂಡಿದ್ದಾರೆ, ಭದ್ರ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ 5300 ಕೋಟಿ ರೂ ನೀಡುವುದಾಗಿ ಹೇಳಿದ್ದ ಕೇಂದ್ರ ಸರಕಾರ ಇದುವರೆಗೂ ಒಂದು ನೈಯಾಪೈಸೆ ನೀಡಿಲ್ಲ. ಇಂತಹ ಜನ ವಿರೋಧಿ ಸರಕಾರವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವುದು ಸ್ವತಹಃ ನಾವೇ ನೇಣಿಗೆ ಶರಣಾದಂತೆ ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಎಸ್.ನಾಗಣ್ಣ,ವಿರೂಪಾಕ್ಷ ಡ್ಯಾಗೇರಹಳ್ಳಿ, ಪ್ರತಾಪ್, ನರಸಿಂಹಣ್ಣ, ಕೊಳಗೇರಿ ನರಸಿಂಹಮೂರ್ತಿ, ಆರ್.ಕಾಮರಾಜು, ಮೈಲಪ್ಪ, ಜೋಸೇಫ್, ಎಣ್ಣೆಗೆರೆ ವೆಂಕಟರಾಮಯ್ಯ, ಡಾ.ರಫೀಕ್ ಅಹಮದ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *