ತುಮಕೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 75ನೇ ಜನ್ಮದಿನಾಚರಣೆ ಅಂಗವಾಗಿ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣನವರು ಬುಧವಾರ ನಗರದ ರೈಲ್ವೆ ನಿಲ್ದಾಣದಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸಿ, ಸ್ವಚ್ಛೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇದಕ್ಕೂ ಮೊದಲು ನಿಲ್ದಾಣದಲ್ಲಿ ನಾಗಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಸಚಿವ ಸೋಮಣ್ಣನವರು ಪ್ರಧಾನಿ ನರೇಂದ್ರ ಮೋದಿಯವರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಸಾರ್ವಜನಿಕರಿಗೆ ಸ್ವಚ್ಛತಾ ಪ್ರತಿಜ್ಞೆ ಬೋಧಿಸಿದರು.
ಇದೇ ವೇಳೆ ನಡೆದ ಸಮಾರಂಭದಲ್ಲಿ ಮಾತನಾಡಿದ ವಿ.ಸೋಮಣ್ಣ, ಪ್ರಧಾನಿ ನರೇಂದ್ರ ಮೋದಿಯವರು, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ಸಹಕಾರ, ತಮ್ಮ ಪ್ರಯತ್ನದಿಂದ ತುಮಕೂರು-ಬೆಂಗಳೂರು ನಡುವೆ ನಾಲ್ಕು ಪಥದ ರೈಲು ಮಾರ್ಗ ನಿರ್ಮಾಣ ಮಾಡಿ, ರಾಜಧಾನಿ ಬೆಂಗಳೂರಿಗೆ ತುಮಕೂರಿನಿಂದ ಹೋಗಿಬರುವ ಪ್ರಯಾಣಿಕರ ಪ್ರಯಾಣವನ್ನು ಮತ್ತಷ್ಟು ಸುಲಭಗೊಳಿಸುವ ಕಾರ್ಯಕ್ರಮ ರೂಪಿಸಲಾಗಿದೆ. ಈ ರೈಲು ನಿಲ್ದಾಣಕ್ಕೆ ಡಾ.ಶಿವಕುಮಾರ ಸ್ವಾಮೀಜಿಗಳ ಹೆಸರು ನಾಮಕರಣ ಮಾಡಿ, 90 ಕೋಟಿ ರೂ. ವೆಚ್ಚದಲ್ಲಿ ನಿಲ್ದಾಣವನ್ನು ಸುಸಜ್ಜಿತವಾಗಿ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.
ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲಿದ್ದ 24 ರೈಲ್ವೆಗೇಟುಗಳನ್ನು ತೆರವುಗೊಳಿಸಿ ಅಲ್ಲಿ ಕೆಳಸೇತುವೆ, ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಎರಡು ವರ್ಷಗಳಲ್ಲಿ ಜಿಲ್ಲೆಯಲ್ಲಿ ರೈಲ್ವೆಗೇಟ್ ಮುಕ್ತ ರೈಲು ಮಾರ್ಗ ನಿರ್ಮಾಣ ಮಾಡಲಾಗುತ್ತದೆ ಎಂದು ಸಚಿವ ಸೋಮಣ್ಣ ಹೇಳಿದರು.
ನಂತರ ಅಂಧ ಮಕ್ಕಳಿಗೆ ಬ್ರೈಲ್ ಸ್ಲೇಟ್ ಹಾಗೂ ವಿಕಲಚೇತನ ಮಕ್ಕಳಿಗೆ ನೋಟ್ ಪುಸ್ತಕ ವಿತರಿಸಿದರು. ರೈಲ್ವೆ ಇಲಾಖೆಯ 20 ಮಂದಿ ಸ್ವಚ್ಛತಾ ಸಿಬ್ಬಂದಿಯನ್ನು ಸನ್ಮಾನಿಸಿ ಗೌರವಿಸಿದರು.
ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಅಂಗವಾಗಿ ವಿ.ಸೋಮಣ್ಣನವರು ಆರೋಗ್ಯ ಶಿಬಿರ ನಡೆಸಿದರು, ಕ್ಯಾತ್ಸಂದ್ರದ ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ ಮಾಡಿದರು.

ಮಾಜಿ ಸಂಸದ ಜಿ.ಎಸ್.ಬಸವರಾಜು, ಮಾಜಿ ಸಚಿವ ಸೊಗಡು ಶಿವಣ್ಣ, ಮಾಜಿ ಶಾಸಕರಾದ ಡಾ.ಎಂ.ಆರ್.ಹುಲಿನಾಯ್ಕರ್, ಎಂ.ಡಿ.ಲಕ್ಷ್ಮೀನಾರಾಯಣ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಆಂಜನಪ್ಪ, ಬಿಜೆಪಿ ಮುಖಂಡ ಎಸ್.ಪಿ.ಚಿದಾನಂದ್, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ, ಬೆಂಗಳೂರು ವಿಭಾಗದ ರೈಲ್ವೆ ಮಂಡಳಿ ನಿರ್ದೇಶಕರಾದ ಧನಿಯಾಕುಮಾರ್, ಮಲ್ಲಸಂದ್ರ ಶಿವಣ್ಣ, ಡಿ.ಎಂ.ಸತೀಶ್, ಟಿ.ಜೆ.ಗಿರೀಶ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ವೀಭಾಗೀರ ರೈಲ್ವೆ ವ್ಯವಸ್ಥಾಪಕ ಅಶುತೋಷ್ ಕುಮಾರ್ ಸಿಂಗ್, ಹೆಚ್ಚುವರಿ ವಿಭಾಗೀಯ ವ್ಯವಸ್ಥಾಪಕ ಪರೀಕ್ಷಿತ್ ಮೋಹನ್ ಕುರಿಯಾ, ಅನುರಾಗ್ ಸಿಂಗ್ ಮತ್ತಿತರ ಅಧಿಕಾರಿಗಳು, ರೈಲ್ವೆ ಪ್ರಯಾಣಿಕರ ವೇದಿಕೆ ಅಧ್ಯಕ್ಷ ಕರಣಂ ರಮೇಶ್ ಹಾಗೂ ಪದಾಧಿಕಾರಿಗಳು, ಮುಖಂಡರಾದ ಪಂಚಾಕ್ಷರಯ್ಯ, ಆರ್.ಎನ್.ವೆಂಕಟಾಚಲ, ಆರ್.ಬಸವರಾಜು, ಪ್ರಸನ್ನಕುಮಾರ್, ನಂದಿ ಪ್ರಭಾಕರ್, ಗುರುರಾಘವೇಂದ್ರ, ಕೊಪ್ಪಲ್ ನಾಗರಾಜು, ಕನ್ನಡ ಪ್ರಕಾಶ್, ಗೋಲ್ಡ್ ಮಧು, ವಿನಯಕುಮಾರ್, ಭೈರಣ್ಣ, ಯಶಸ್, ಅನು ಶಾಂತರಾಜು, ಸುರೇಂದ್ರ ಷಾ ವಿವಿಧ ಸಂಘಸಂಸ್ಥೆಗಳ ಮುಖಂಡರು, ರೈಲ್ವೆ ಇಲಾಖೆ ಅಧಿಕಾರಿ, ಸಿಬ್ಬಂದಿ ಭಾಗವಹಿಸಿದ್ದರು.