ಎಸ್.ಪಿ.ಎಂ.ಗೆ ಟಿಕೆಟ್ ಸಿಗುವ ಸಾಧ್ಯತೆಯಿದೆ !-ಕೆ.ಎನ್.ರಾಜಣ್ಣ

ತುಮಕೂರು- ಮಾಜಿ ಸಂಸದ ಮುದ್ದಹನುಮೇಗೌಡ ಅವರು ಯಾವುದೇ ಷರತ್ತಿಲ್ಲದೆ ಪಕ್ಷಕ್ಕೆ ಮರು ಸೇರ್ಪಡೆಯಾಗಿದ್ದು, ಲೋಕಸಭಾ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಭಾನುವಾರ ಹೇಳಿದರು.

ಮುದ್ದಹನುಮೇಗೌಡರನ್ನು ನಾನೊಬ್ಬನೇ ಪಕ್ಷಕ್ಕೆ ಸೇರಿಸಿಕೊಂಡಿಲ್ಲ, ಜಿಲ್ಲೆಯ ಮುಖಂಡರೆಲ್ಲರೂ ಸೇರಿ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಅವರು ಸಹ ಯಾವುದೇ ಷರತ್ತಿಲ್ಲದೆ ಪಕ್ಷಕ್ಕೆ ಬಂದಿದ್ದಾರೆ. ಮುದ್ದಹನುಮೇಗೌಡರನ್ನು ಯಾರು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೋ ಅವರೇ ಲೋಕಸಭಾ ಚುನಾವಣೆಗೆ ಟಿಕೆಟ್ ಕೊಡಿಸುತ್ತಾರೆ ಎಂದು ಹೇಳುವ ಮೂಲಕ ಲೋಕಸಭಾ ಚುನಾವಣೆಯ ಟಿಕೆಟ್ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದರು.

ನಗರದ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಗೆ ಟಿಕೆಟ್ ಕೇಳುವ ಹಕ್ಕು ಎಲ್ಲರಿಗೂ ಇದೆ. ಆದರೆ ಯಾರಿಗೆ ಟಿಕೆಟ್ ಕೊಡಬೇಕು ಎಂಬ ಬಗ್ಗೆ ಅಂತಿಮವಾಗಿ ಪಕ್ಷದ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ ಎಂದರು.

ಬಿಜೆಪಿಯಿಂದ ಮಾಜಿ ಸಚಿವ ವಿ. ಸೋಮಣ್ಣನವರು ಸ್ಪರ್ಧೆ ಮಾಡುತ್ತಾರಂತೆ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ರಾಜಣ್ಣನವರು, ಆಕಾಶ ನೋಡೋಕೆ ನೂಕು ನುಗ್ಗಲಾ.. ಸೋಮಣ್ಣ ಸ್ಪರ್ಧೆ ಮಾಡಲಿ ಬಿಡಿ. ನಾನು ಸೋಮಣ್ಣ ಒಳ್ಳೆಯ ಸ್ನೇಹಿತರು. ಅವರ ಸ್ಪರ್ಧೆಗೆ ನಮಗೂ ಯಾವುದೇ ಸಂಬಂಧ ಇಲ್ಲ ಎಂದರು.

ಹಾಲಪ್ಪ ಯಾರು..?

ತುಮಕೂರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಮುರುಳೀಧರ ಹಾಲಪ್ಪ ಟಿಕೆಟ್ ರೇಸ್‍ನಲ್ಲಿದ್ದಾರಲ್ಲಾ ಎಂಬ ಪ್ರಶ್ನೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಚಿವ ಕೆ.ಎನ್.ರಾಜಣ್ಣ ಹಾಲಪ್ಪ ಯಾರು, ಇದುವರೆಗೂ ಯಾರಿಗೆ ಎಷ್ಟು ಮತ ಹಾಕಿಸಿದ್ದಾರೆ ಎಂದು ಪ್ರಶ್ನಿಸಿದರು.

ನನ್ನ ಕ್ಷೇತ್ರದಲ್ಲಿ ಇದುವರೆಗೂ ಕಾಂಗ್ರೆಸ್ ಪಕ್ಷಕ್ಕೆ ಎಷ್ಟು ಮತ ಹಾಕಿಸಿದ್ದಾರೆ ಎಂಬುದನ್ನು ಹೇಳಲಿ, ಮಾಧ್ಯಮದವರೇ ಅವರನ್ನು ಟಿಕೆಟ್ ರೇಸ್‍ಗೆ ತರುತ್ತೀರಾ ಎಂದು ಹೇಳಿದರು.

ಮಾ. 10 ರೊಳಗೆ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಫೈನಲ್ ಆಗುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು.

Leave a Reply

Your email address will not be published. Required fields are marked *