ತುಮಕೂರು- ಕೋಲ್ಕತ್ತಾದ ಆರ್.ಜಿ.ಕರ್ ವೈದ್ಯಕೀಯ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿನಿಯ ಅಮಾನುಷ ಹತ್ಯೆ ಮತ್ತು ಮುಂದುವರೆದು ಪ್ರತಿಭಟನೆ ನಿರತ ವೈದ್ಯರನ್ನು ಗುರಿಯಾಗಿಸಿಕೊಂಡು ಗುಂಪೊಂದು ಹಲ್ಲೆ ಮಾಡಿ ಅರಾಜಕತೆ ಮೆರೆದಿರುವುದನ್ನು ಖಂಡಿಸಿ ತುರ್ತು ಸೇವೆ ವಿಭಾಗವನ್ನು ಹೊರತುಪಡಿಸಿ ಎಲ್ಲ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಹೊರರೋಗಿ (ಓಪಿಡಿ) ವೈದ್ಯಕೀಯ ಸೇವೆ ಬಂದ್ ಮಾಡುವ ಪ್ರತಿಭಟನೆ ವ್ಯಕ್ತಪಡಿಸಲಾಯಿತು.
ಆಗಸ್ಟ್ 17ರ ಬೆಳಿಗ್ಗೆ 6 ಗಂಟೆಯಿಂದಲೇ ಎಲ್ಲ ಸರ್ಕಾರಿ ಮತ್ತು ಖಾಸಗಿ ಕ್ಲಿನಿಕ್‌ಗಳು ಓಪಿಡಿ ಬಂದ್ ಮಾಡಿದ್ದು, ಆಗಸ್ಟ್18ರ ಭಾನುವಾರ ಬೆಳಿಗ್ಗೆ 6 ಗಂಟೆಯವರೆಗೆ ಯಾವುದೇ ರೀತಿಯ ಓಪಿಡಿ ಸೇವೆಗಳು ಜಿಲ್ಲೆಯಾದ್ಯಂತ ಲಭ್ಯವಿರುವುದಿಲ್ಲ.
ನಗರದ ಸಿದ್ದಗಂಗಾ ಆಸ್ಪತ್ರೆ, ಸಿದ್ದಾರ್ಥ ಆಸ್ಪತ್ರೆ, ಶ್ರೀದೇವಿ ಆಸ್ಪತ್ರೆ ಸೇರಿದಂತೆ ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್‌ಗಳು, ಸರ್ಕಾರಿ ಆಸ್ಪತ್ರೆಗಳಲ್ಲಿ ಓಪಿಡಿ ಬಂದ್ ಆಗಿರುವುದರಿಂದ ಜ್ವರ, ನೆಗಡಿ, ಕೆಮ್ಮು ಸೇರಿದಂತೆ ಇನ್ನಿತರೆ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ರೋಗಿಗಳು ಪರದಾಡುವಂತಾಯಿತು.
ವೈದ್ಯಕೀಯ ಸಂಸ್ಥೆಗಳು ಮತ್ತು ವೈದ್ಯಕೀಯ ಸಿಬ್ಬಂದಿ ಅತಿ ಸೂಕ್ಷ್ಮ ಪರಿಸ್ಥಿತಿಯಲ್ಲಿ ಆತಂಕದಿಂದ ತಮ್ಮ ಸೇವಾಕ್ಷೇತ್ರದಲ್ಲಿ ಅಭದ್ರತೆಯೊಂದಿಗೆ ಕರ್ತವ್ಯ ನಿರ್ವಹಿಸುವ ಸನ್ನಿವೇಶಗಳನ್ನು ಸೃಷ್ಠಿಸಲಾಗುತ್ತಿದೆ. ಆದ್ದರಿಂದ ಮಾನವೀಯ ಕಾಳಜಿಯ ಸೇವಾಕ್ಷೇತ್ರವನ್ನು ಕಲುಷಿತಗೊಳಿಸುವ ಈ ಪ್ರಯತ್ನಗಳನ್ನು ಮೊಳೆಕೆಯಲ್ಲೆ ನಿಷ್ಕಿçಯಗೊಳಿಸದಿದ್ದಲ್ಲಿ ಮುಂದೆ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಐಎಂಎ ಜಿಲ್ಲಾಧ್ಯಕ್ಷ ಡಾ. ಹೆಚ್.ವಿ. ರಂಗಸ್ವಾಮಿ ಹೇಳಿದ್ದಾರೆ.
ಈ ನಿಟ್ಟಿನಲ್ಲಿ ಅಗತ್ಯ ಎಲ್ಲಾ ಕ್ರಮಗಳನ್ನು ಸರ್ಕಾರದ ಮಟ್ಟದಲ್ಲಿ ಕೈಗೊಳ್ಳಲು ನಮ್ಮ ಹಕ್ಕೊತ್ತಾಯವನ್ನು ದಾಖಲಿಸಲು ಸರ್ಕಾರ ಮತ್ತು ಸಾರ್ವಜನಿಕರ ಗಮನ ಸೆಳೆಯುವ ಸಲುವಾಗಿ ಇಂದು ಬೆಳಿಗ್ಗೆ 6 ಗಂಟೆಯಿಂದ ನಾಳೆ ಬೆಳಿಗ್ಗೆ 6 ಗಂಟೆವರೆಗೆ ಎಲ್ಲ ಆಸ್ಪತ್ರೆಗಳಲ್ಲಿ ಓಪಿಡಿ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಈ ಅವಧಿಯಲ್ಲಿ ತುರ್ತು ಮತ್ತು ಅಗತ್ಯ ಸೇವೆಗಳ ಲಭ್ಯ ಇರುತ್ತವೆ ಎಂದು ಅವರು ತಿಳಿಸಿದ್ದಾರೆ.