ನಾಗಮೋಹನ್ ದಾಸ್ ವರದಿ ಅವೈಜ್ಞಾನಿಕ, ಅಪೂರ್ಣ, ದೋಷದಿಂದ ಕೂಡಿದೆ-ಸರಿಪಡಿಸಲು ಬಲಗೈ ಜಾತಿ ಒಕ್ಕೂಟ ಒತ್ತಾಯ

ತುಮಕೂರು : ರಾಜ್ಯದಲ್ಲಿರುವ ಪರಿಶಿಷ್ಟ ಜಾತಿಯ 101 ಜಾತಿಗಳಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಸರಕಾರ ರಚಿಸಿದ್ದ ನ್ಯಾ.ನಾಗಮೋಹನ್ ದಾಸ್ ನೇತೃತ್ವದ ಏಕ ಸದಸ್ಯ ಸಮಿತಿ ನೀಡಿರುವ ವರದಿ ಅವೈಜ್ಞಾನಿಕ ಮತ್ತು ಅಪೂರ್ಣವಾಗಿದ್ದು, ದೋಷದಿಂದ ಕೂಡಿದೆ.ಬಲಗೈ ಸಮುದಾಯದ ಜನಸಂಖೆಯಯನ್ನು ಕಡಿಮೆ ತೋರಿಸಿ, ತೀರ ಅನ್ಯಾಯವೆಸಲಾಗಿದೆ ಎಂದು ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಒಕ್ಕೂಟದ ಸಂಚಾಲಕ ಸಿ.ಭಾನುಪ್ರಕಾಶ್ ಅರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಬಲಗೈ ಸಮುದಾಯದ ಮನವಿಯ ನಡುವೆಯೂ ಬಲಗೈ ಜೊತೆ ಗುರುತಿಸಿಕೊಂಡಿದ್ದ ಕೆಲ ಸಮುದಾಯಗಳನ್ನು ಎಡಗೈ ಸಮುದಾಯದ ಪ್ರವರ್ಗಕ್ಕೆ ಸೇರಿಸಿ,ಅನ್ಯಾಯ ಮಾಡಲಾಗಿದೆ. ಇದನ್ನು ಸರಿಪಡಿಸಲು ಸರಕಾರ ಉಪಸಮಿತಿಯೊಂದನ್ನು ರಚಿಸಿ ವರದಿಯನ್ನು ಪರಿಷ್ಕರಿಸಬೇಕೆಂದು ಒತ್ತಾಯಿಸಿದರು.

ಸರಕಾರ ನ್ಯಾ.ನಾಗಮೋಹನ್‍ದಾಸ್ ಸಮಿತಿಗೆ ನೀತಿ ನಿಯಮ ರೂಪಿಸಿದಾಗ ಒಟ್ಟು ರಾಜ್ಯದಲ್ಲಿ 1.38 ಕೋಟಿ ಪರಿಶಿಷ್ಟ ಜಾತಿಯ ಜನಸಂಖ್ಯೆಯನ್ನು ನಮೂದಿಸಿದೆ.ಆದರೆ ಸಮೀಕ್ಷೆಯಲ್ಲಿ 1.05 ಕೋಟಿಯನ್ನು ಮಾತ್ರ ತೋರಿಸಲಾಗಿದೆ.ಇನ್ನು 33 ಲಕ್ಷ ಜನರನ್ನು ಸಮೀಕ್ಷೆಯಿಂದ ಹೊರಗೆ ಉಳಿಸಲಾಗಿದೆ.ಅಲ್ಲದೆ ಇದುವರೆಗೂ ಒಳಮೀಸಲಾತಿ ಹಂಚಿಕೆಗೆ ಸಮಸ್ಯೆಯಾಗಿದೆ ಅಧಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಸಮುದಾಯಗಳ ಬಗ್ಗೆ ಸಷ್ಟ ನಿಲುವು ಪ್ರಕಟಿಸದೆ ಗೊಂದಲು ಮುಂದುವರೆಸಿ, ಅವುಗಳಿಗೆ ಶೇ1ರ ಮೀಸಲಾತಿ ಹಂಚಿಕೆ ಮಾಡಲಾಗಿದೆ.ಅಲ್ಲದೆ ಇದುವರೆಗೂ ಬಲಗೈ ಜಾತಿಯೊಳಗೆ ಗುರುತಿಸಿಕೊಂಡಿದ್ದ ಪೆರೆಯ ಜಾತಿಯನ್ನು ಎಡಗೈ ಸಮುದಾಯ ಇರುವ ವರ್ಗಕ್ಕೆ ಸೇರಿಸಲಾಗಿದೆ.ಇದರಿಂದ ಸಹಜವಾಗಿಯೇ ಬಲಗೈ ಸಮುದಾಯದ ಜನಸಂಖ್ಯೆ ಕಡಿಮೆಯಾಗಿದೆ.ಸರಕಾರ ಒಳಮೀಸಲಾತಿ ವರದಿಯನ್ನು ಅಂಗೀಕರಿಸುವ ಜೊತೆಗೆ, ಆಗಿರುವ ಈ ಲೋಪದೋಷಗಳನ್ನು ಸರಿಪಡಿಸಿ, ವೈಜ್ಞಾನಿಕವಾಗಿ ಎಡ, ಬಲ ಜಾತಿಗಳನ್ನು ವಿಂಗಡಿಸಿ, ಒಳಮೀಸಲಾತಿ ಹಂಚಿಕೆ ಮಾಡಬೇಕೆಂದು ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಒಕ್ಕೂಟ ಒತ್ತಾಯಿಸುತ್ತದೆ ಎಂದು ಸಿ.ಭಾನುಪ್ರಕಾಶ್ ತಿಳಿಸಿದರು.

ನಿವೃತ್ತ ನೌಕರರ ಶ್ರೀನಿವಾಸ್ ಮಾತನಾಡಿ, ಸರಕಾರ ಒಳಮೀಸಲಾತಿ ಸಮೀಕ್ಷೆ ನಡೆಸುವ ಸಂದರ್ಭದಲ್ಲಿ ಸಮೀಕ್ಷೆದಾರರಿಗೆ ಸರಿಯಾದ ತರಬೇತಿ ನೀಡದೆ ಬೇಕಾಬಿಟ್ಟಿ ಸಮೀಕ್ಷೆ ನಡೆಸಿದೆ.ಬೆಂಗಳೂರಿನಂತಹ ನಗರದಲ್ಲಿ ಶೇ53ರಷ್ಟು ಜನ ಮಾತ್ರ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದಾರೆ.ಇದರಿಂದ ಸಾಕಷ್ಟು ಅನ್ಯಾಯವಾಗಲಿದೆ. ಹಾಗಾಗಿ ಸರಕಾರ ಮತ್ತೊಮ್ಮೆ ಪರಿಶೀಲನೆ ನಡೆಸಿ, ಉಪಸಮಿತಿ ರಚಿಸಿ,ವರದಿಯನ್ನು ಕೂಲಂಕಷವಾಗಿ ಅಧ್ಯಯನ ನಡೆಸಿ, ಬಲಗೈ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕೆಂಬುದು ನಮ್ಮಗಳ ಆಗ್ರಹವಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬಲಗೈ ಸಮುದಾಯದ ಮುಖಂಡರಾದ ಡಾ.ಪಿ.ಚಂದ್ರಪ್ಪ, ನಿರಂಜನ್, ಕುಣಿಗಲ್ ಚಿಕ್ಕಣ್ಣ, ಗಂಗಾಂಜನೇಯ, ಗಿರೀಶ್,ಹೆಗ್ಗೆರೆ ಕೃಷ್ಣಮೂರ್ತಿ, ರಜನಿಕಾಂತ್, ಸಿದ್ದಲಿಂಗಪ್ಪ, ಛಲವಾದಿ ಶೇಖರ್ ಯಲ್ಲಪ್ಪ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *