ತುಮಕೂರು:ಜೆಡಿಎಸ್ ಮುಖಂಡರ ಹೆಬ್ಬೂರಿನ ದೀಪಕ್ಗೌಡ ಹಾಗೂ ಬಿಜೆಪಿ ಮುಖಂಡ ನರಸೇಗೌಡ ಅವರುಗಳು ಇಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ಕಾಂಗ್ರೆಸ್ ಪಕ್ಷದ ಶಾಲು ಹಾಕಿ, ಕೈಗೆ ಬಾವುಟ ನೀಡಿ ಜೆಡಿಎಸ್ನ ದೀಪಕ್ಗೌಡ, ಬಿಜೆಪಿಯ ನರಸೇಗೌಡ,ದಯಾನಂದಗೌಡ ಅವರುಗಳನ್ನು ಪಕ್ಷಕ್ಕೆ ಬರ ಮಾಡಿಕೊಂಡ ಡಾ.ಜಿ.ಪರಮೇಶ್ವರ್ ಅವರು, ಕಾಂಗ್ರೆಸ್ ಪಕ್ಷದ ಸಿದ್ದಾಂತ ಒಪ್ಪಿ ಯಾರೇ ಬಂದರೂ ಸ್ವಾಗತಿಸುವುದಾಗಿ ತಿಳಿಸಿದರು.
ಈ ವೇಳೆ ಮಾತನಾಡಿದ ಡಾ.ಜಿ.ಪರಮೇಶ್ವರ್,ಇಂದು ಇಬ್ಬರು ಯುವ ಮುಖಂಡರು ಜೆಡಿಎಸ್ ಮತ್ತು ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಇದರಿಂದ ತುಮಕೂರು ನಗರ ಮತ್ತು ಗ್ರಾಮಾಂತರದಲ್ಲಿ ಪಕ್ಷಕ್ಕೆ ಮತ್ತಷ್ಟು ಬಲ ಬಂದಂತಾಗಿದೆ.ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಧೋರಣೆಗಳಿಂದ ಬೇಸತ್ತು ಕಾಂಗ್ರೆಸ್ ಪಕ್ಷ ಸೇರಿದ್ದು, ನಮ್ಮ ಅಭ್ಯರ್ಥಿ ಮುದ್ದಹನುಮೇಗೌಡ ಪರವಾಗಿ ಕೆಲಸ ಮಾಡಲಿದ್ದಾರೆ.ಯುವಕರಾಗಿರುವ ದೀಪಕ್ಗೌಡ ಅವರಿಗೆ ಒಳ್ಳೆಯ ಭವಿಷ್ಯವಿದ್ದು, ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನಗಳನ್ನು ಪಕ್ಷ ನೀಡಲಿದೆ .ತಮ್ಮ ತಮ್ಮ ವಾರ್ಡುಗಳು, ಗ್ರಾಮಗಳಲ್ಲಿ ಮನೆ ಮನೆಗೆ ತೆರಳಿ ಕಾಂಗ್ರೆಸ್ ಪಕ್ಷದ ಸಾಧನೆಗಳು ಮತ್ತು ಹೊಸ ಗ್ಯಾರಂಟಿಗಳ ಕರಪತ್ರ ಹಂಚುವ ಮೂಲಕ ಎಸ್.ಪಿ.ಮುದ್ದಹನುಮೇಗೌಡರ ಗೆಲುವಿಗೆ ದುಡಿಯುವಂತೆ ಸಲಹೆ ನೀಡಿದರು.
.
ಈ ವೇಳೆ ಮಾತನಾಡಿದ ದೀಪಕ್ಗೌಡ, ಜೆಡಿಎಸ್ ಪಕ್ಷವನ್ನು ಬಿಟ್ಟು ಕಾಂಗ್ರೆಸ್ ಪಕ್ಷ ಸೇರಲು ಹಲವು ಕಾರಣಗಳಿವೆ.2014ರಲ್ಲಿ ನೀಡಿದ್ದ ಒಂದು ಭರವಸೆಯನ್ನು ಬಿಜೆಪಿ ಈಡೇರಿಸಿಲ್ಲ. ಪೆಟ್ರೋಲ್, ಡಿಸೇಲ್,ಅಡುಗೆ ಅನಿಲ ಯಾವುದು ಕಡಿಮೆಯಾಗಿಲ್ಲ.ಬೆಲೆ ಹೆಚ್ಚಳದಿಂದ ದೇಶದ ಜನತೆ ತತ್ತರಿಸಿದ್ದಾರೆ. ಅಲ್ಲದೆ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮುದ್ದಹನುಮೇಗೌಡರು ಸ್ಥಳಿಯ ಅಭ್ಯರ್ಥಿಯಾಗಿದ್ದು, ಅವರನ್ನು ಬೆಂಬಲಿಸಬೇಕೆಂಬ ಕಾರಣಕ್ಕೆ ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದೇನೆ ಎಂದರು.
ಈ ವೇಳೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ,ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಅಹಮದ್,ಮಾಜಿ ಉಪಮೇಯರ್ ಅಸ್ಲಾಂಪಾಷ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಹೇಶ್,ದೀಪಕ್ಗೌಡ, ನರಸೇಗೌಡ, ದಯಾನಂದಗೌಡ ಮತ್ತಿತರರು ಉಪಸ್ಥಿತರಿದ್ದರು.