
ತುಮಕೂರು: ಭೂಮಿಯ ಮೇಲೆ ಹೃದಯವಂತರಿರಬಹುದು, ಮಾನವಂತರಿರಬಹುದು, ಹಣವಂತರಿರಬಹುದು ಆದರೆ ಬೆಳಕು ನೀಡುವವರು, ಅದೂ ಕಣ್ಣು ದೃಷ್ಠಿ ನೀಡುವವರರನ್ನು ಬೆಳಕು ಬಿಟ್ಟು ಹುಡುಕಬೇಕು.
ಕಣ್ಣು ಮಾತ್ರ ಈ ಜಗತ್ತಿನ ಬೆಳಕನ್ನು ತೋರಿಸಬಲ್ಲದು, ಆ ಕಣ್ಣು ಇಲ್ಲದೆ ಏನನ್ನೂ ಮಾಡಲಾಗುವುದಿಲ್ಲ ಏನನ್ನೂ ನೋಡಲಾಗುವುದಿಲ್ಲ, ಅಂತಹ ಕಣ್ಣಿಗಾಗಿ ಒಂದು “ಕಣ್ಣಿನ ದೇವಾಲಯ”ವನ್ನು ತೆರೆದು, ಕಣ್ಣು ತೆರೆಸುತ್ತಿರುವ,ಹೀಗೂ ಉಂಟೇ ಎಂದು ಕಣ್ಣುಬ್ಬೇರಿಸುವಂತೆ ಉಚಿತವಾಗಿ ಕಣ್ಣಿಗೆ ಬೆಳಕು ನೀಡುತ್ತಿರುವ ದೇವಾಲಯವೇ ಕಣ್ಣಿನ ಆಸ್ಪತ್ರೆ “ನಾರಾಯಣಾ ದೇವಾಲಯ”.
ಈ ನಾರಾಯಣ ನೇತ್ರಾಲಯ ಐ ಪೌಂಡೇಶನ್ ಆಶ್ರಯದಲ್ಲಿ ಡಾ||ಕೆ.ಭುಜಂಗ ಶೆಟ್ಟಿಯವರ ಕನಸ್ಸನ್ನು ನನಸು ಮಾಡುತ್ತಾ ಸಾಗಿದೆ.

ನಾರಾಯಣ ನೇತ್ರಾಲಯ ಐ ಪೌಂಡೇಶನ್‍ನ ಉಪಾಧ್ಯಕ್ಷರಾದ ಡಾ|| ನರೇನ್ ಶೆಟ್ಟಿ ಅವರೊಂದಿಗೆ ಡಾ|| ಬಾಲಕೃಷ್ಣ, ನಾರಾಯಣ ನೇತ್ರಾಲಯದ ಸಿಇಓ ಎಸ್.ಕೆ.ಮಿತ್ತಲ್, ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಒಳಗಾದವರು.
ಈ ನಾರಾಯಣ ದೇವಾಲಯವು ತುಮಕೂರಿನ ರಿಂಗ್ ರಸ್ತೆಯ ಮಂಜುನಾಥ ನಗರದಲ್ಲಿದ್ದು, ಇಲ್ಲಿ ಬಡವರಿಗೆ ಉಚಿತವಾಗಿ ಶಸ್ತ್ರ ಚಿಕಿತ್ಸೆಯನ್ನು ನೀಡಲಾಗುವುದು, ಡಾ|| ಕೆ.ಭುಜಂಗ ಶೆಟ್ಟಿಯವರು ಬಡವರಲ್ಲಿ ದೇವರನ್ನು ಕಾಣುವುದಕ್ಕಾಗಿ, ಬಡವರಿಗೆ ಕಣ್ಣಿನ ಬೆಳಕನ್ನು ಯಾವುದೇ ಹಣ ತೆಗೆದುಕೊಳ್ಳದೇ ಸೇವೆಯನ್ನು ಮಾಡಬೇಕೆಂದು 2022, ಡಿಸೆಂಬರ್ 7ರಂದು ಈ ನಾರಾಯಣ ದೇವಾಲಯವನ್ನು ಪ್ರಾರಂಭಿಸಿದರು.
ಈ ನಾರಾಯಣ ದೇವಾಲಯದಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಕಣ್ಣಿನ ಪೊರೆ ಬೆಳೆದ ಎಲ್ಲರಿಗೂ ಉಚಿತ ಶಸ್ತ್ರ ಚಿಕಿತ್ಸೆಯನ್ನು ನೀಡುತ್ತಾ ಬೆಳಕನ್ನು ನೀಡುತ್ತಾ ಬಂದಿದೆ.
ಇಂತಹ ಆಸ್ಪತ್ರೆಗೆ ಈಗ ಒಂದು ವರ್ಷದ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ಹಿನ್ನಲೆಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠೀಯಲ್ಲಿ ಮಾತನಾಡಿದ ಶಸ್ತ್ರ ಚಿಕಿತ್ಸೆಗೆ ಒಳಗಾದವರ ಅಭಿಪ್ರಾಯ ಹೀಗಿದೆ.
ತಮ್ಮ ತಾಯಿ ಗೌರಮ್ಮನವರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸಿದ ತಿಪಟೂರು ತಾಲ್ಲೂಕಿನ ಹಿಂಡಿಸ್ಕೆರೆ ಸರ್ವಮಂಗಳ ಅವರು ಯಾವುದೇ ದೊಡ್ಡ ಆಸ್ಪತ್ರೆಗೆ ಹೋದರೂ ಇಷ್ಟು ಆಧುನಿಕವಾದ, ಮತ್ತು ಪ್ರೀತಿಯ ಚಿಕಿತ್ಸೆ ಎಲ್ಲೂ ಸಿಗುವುದಿಲ್ಲ, ಇಲ್ಲಿ ಉಚಿತವಾಗಿ ಕಣ್ಣಿನ ಶಸ್ತ್ರಚಿಕಿತ್ಸೆಯನ್ನು ಮಾಡುತ್ತಿದ್ದು, ಈ ರೀತಿಯ ಸೌಲಭ್ಯ ಕರ್ನಾಟಕದ ಯಾವುದೇ ಕಣ್ಣಿನ ಆಸ್ಪತ್ರೆಯಲ್ಲಿ ಸಿಗುವುದಿಲ್ಲ, ಡಾ||ಭುಜಂಗ ಶೆಟ್ಟಿಯವರು ಬಡವರ ಸೇವೆಯ ಮೂಲಕ ದೇವರಾಗಿದ್ದಾರೆ ಎಂದು ಹೇಳಿದರು.
ಇದೇ ರೀತಿ ಶಿರಾ ತಾಲ್ಲೂಕಿನ ಕಗ್ಗಲಡುವಿನ ರಂಗಸ್ವಾಮಿ, ಹುಬ್ಬಳ್ಳಿಯ ಹೇಮಾ, ಕ್ಯಾತ್ಸಂದ್ರದ ಮಂಜುಳ, ಮತ್ತು ತುಮಕೂರು ಶಿರಾಗೇಟಿನ ಹನುಮಂತರಾಯಪ್ಪ ಅವರುಗಳು ಶಸ್ತ್ರಚಿಕಿತ್ಸೆಯ ಅನುಭವ ಮತ್ತು ಆಸ್ಪತ್ರೆಯಲ್ಲಿ ನೀಡುವ ಆಧುನಿಕ ಶಸ್ತ್ರಚಿಕಿತ್ಸೆ ಬಗ್ಗೆ ಮಾತನಾಡಿ, ಸುಮಾರು 25 ರಿಂದ 30 ಸಾವಿರವಾಗುವ ಶಸ್ತ್ರ ಚಿಕಿತ್ಸೆಯನ್ನು ಉಚಿತವಾಗಿ ಮತ್ತು ಆಧುನಿಕವಾಗಿ ಶಸ್ತ್ರ ಚಿಕಿತ್ಸೆ ನೀಡಿ ದೃಷ್ಠಿ ನೀಡುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರಲ್ಲದೆ, ನಾರಾಯಣ ನೇತ್ರಾಲಯವನ್ನು ಪ್ರಾರಂಭಿಸಿದ ಡಾ.ಭುಜಂಗ ಶೆಟ್ಟಿಯವರನ್ನು ನೆನೆದು, ಅಭಿನಂದಿಸಿದರು.

ನಾರಾಯಣ ನೇತ್ರಾಲಯ ಐ ಪೌಂಡೇಶನ್‍ನ ಉಪಾಧ್ಯಕ್ಷರಾದ ಡಾ|| ನರೇನ್ ಶೆಟ್ಟಿ ಅವರೊಂದಿಗೆ ಡಾ|| ಬಾಲಕೃಷ್ಣ, ನಾರಾಯಣ ನೇತ್ರಾಲಯದ ಸಿಇಓ ಎಸ್.ಕೆ.ಮಿತ್ತಲ್, ಮುಳಕುಂಟೆ ಪ್ರಕಾಶ್ ಮತ್ತು ನಾರಾಯಣ ದೇವಾಲಯದ ಸಿಬ್ಬಂದಿ ವರ್ಗ.
ಪತ್ರಿಕಾಗೋಷ್ಠಿಯಲ್ಲಿ ನಾರಾಯಣ ನೇತ್ರಾಲಯ ಐ ಪೌಂಡೇಶನ್‍ನ ಉಪಾಧ್ಯಕ್ಷರಾದ ಡಾ|| ನರೇನ್ ಶೆಟ್ಟಿಯವರು ಮಾತನಾಡಿ ಬೆಂಗಳೂರು-ಪರಿವರ್ತಿತ ಆರೋಗ್ಯ ಕ್ಷೇತ್ರದಲ್ಲಿ, ದೂರದೃಷ್ಟಿಯುಳ್ಳ ಪ್ರಖ್ಯಾತ ನೇತ್ರತಜ್ಞರಾದ ಡಾ.ಕೆ ಭುಜಂಗ ಶೆಟ್ಟಿಯವರು ಸ್ಥಾಪಿಸಿದ ಕನಸಿನ ಯೋಜನೆಯಾದ ನಾರಾಯಣ ನೇತ್ರಾಲಯ ಐ ಫೌಂಡೇಶನ್‍ನ ಆಶ್ರಯದಲ್ಲಿ “ನಾರಾಯಣ ದೇವಾಲಯ”ವು ಇಂದು ಸಮಾಜವನ್ನು ನಿರ್ಮಿಸುವ ಅವರ ತನ್ನ ಮೊದಲ ವರ್ಷದ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ ಎಂದು ಹೇಳಿದರು.
ಅಂಧತ್ವ ಮುಕ್ತ ದೃಷ್ಟಿ ನಾರಾಯಣ ದೇವಾಲಯವಾಗಿ ಸಾಕಾರಗೊಂಡಿದ್ದು, ಭರವಸೆಯ ಬೆಳಕಾಯಿತು. ಇದು ನಾರಾಯಣ ನೇತ್ರಾಲಯವು ಸಮಾಜಕ್ಕೆ ಮರಳಿ ನೀಡುವ ಭಾದ್ಯತೆಯನ್ನು ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದರು.
ಭಾರತದಲ್ಲಿ ಕುರುಡುತನಕ್ಕೆ ಕಣ್ಣಿನ ಪೊರೆ ಪ್ರಮುಖ ಕಾರಣವಾಗಿದ್ದು, ಅತ್ಯುತ್ತಮ ಖಾಸಗಿ ಆಸ್ಪತ್ರೆಗಳಿಗೆ ಸಮಾನವಾಗಿ ಮೂರು ಅಲ್ಟ್ರಾ-ಆಧುನಿಕ ಆಪರೇಷನ್ ಥಿಯೇಟರ್‍ಗಳನ್ನು ಹೊಂದಿರುವ ನಾರಾಯಣ ದೇವಾಲಯವು ಕಣ್ಣಿನ ಪೊರೆಗಾಗಿ ಇಂಟ್ರಾಕ್ಯುಲರ್ ಲೆನ್ಸ್ ಗಳೊಂದಿಗೆ ಅತ್ಯಾಧುನಿಕ ಶಸ್ತ್ರಚಿಕಿತ್ಸಾ ತಂತ್ರಗಳನ್ನು ನೀಡುತ್ತಿದ್ದು, ಅನುಭವವುಳ್ಳ ಮತ್ತು ನುರಿತ ಕಣ್ಣಿನ ಪೊರೆ ಶಸ್ತ್ರಚಿಕಿತ್ಸಕರು ಈ ಶಸ್ತ್ರಚಿಕಿತ್ಸೆಗಳನ್ನು ಮಾಡುತ್ತಾರೆ, ಬಡ ಜನರ ಕಣ್ಣಿನ ದೃಷ್ಟಿಯನ್ನು ಮರುಸ್ಥಾಪಿಸಿದ ನಂತರ ಅವರ ಮುಗುಳು ನಗೆಗೆ ವೈದ್ಯರುಗಳು ಕಾರಣರಾಗುತ್ತಿದ್ದಾರೆ ಎಂದರು.

ನಾರಾಯಣ ನೇತ್ರಾಲಯ ಐ ಪೌಂಡೇಶನ್‍ನ ಉಪಾಧ್ಯಕ್ಷರಾದ ಡಾ|| ನರೇನ್ ಶೆಟ್ಟಿ ಅವರೊಂದಿಗೆ ಮೈತ್ರಿನ್ಯೂಸ್‍ನ ಸಂಪಾದಕರಾದ ವೆಂಕಟಾಚಲ.ಹೆಚ್.ವಿ.
“ನಾವು ದೇವಾಲಯಗಳಿಗೆ ಹೋಗುವಾಗ ಧೂಪದ್ರವ್ಯವನ್ನು ಅರ್ಪಿಸಿ ಆಶೀರ್ವಾದ ಪಡೆಯುತ್ತೇವೆ, ಆದರೆ ನಾರಾಯಣ ದೇವಾಲಯಕ್ಕೆ ಬಂದು ಹೋಗುವಾಗ ನಮಗೆ ಸ್ಪಷ್ಟ ದೃಷ್ಟಿಯ ಆಶೀರ್ವಾದ ಪಡೆಯುತ್ತೇವೆ” ಎಂದು ನಾರಾಯಣ ದೇವಾಲಯದಲ್ಲಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಪಡೆದ ತುಮಕೂರು ನಗರದ ಕ್ಯಾತ್ಸಂದ್ರದ ಬಿಜೆನುಲ್ಲಾಬಿದಿನ್ ಹೇಳಿದರು ಎಂದು ತಿಳಿಸಿದರು.
ಕಳೆದ ಒಂದು ವರ್ಷದಲ್ಲಿ 1900ಕ್ಕಿಂತ ಹೆಚ್ಚು ಉಚಿತ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗಳನ್ನು ಮಾಡಿದೆ ಹಾಗೂ ಕಣ್ಣಿನ ಸಂಬಂಧಿತ ಸಮಸ್ಯೆಗಳಿಗಾಗಿ 228 ಮಕ್ಕಳನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ತಿಳಿಸಿದರು.
ಡಾ.ಕೆ.ಭುಜಂಗ ಶೆಟ್ಟಿಯವರ ಕನಸಿನ ಯೋಜನೆಯು ಅನೇಕರ ಜೀವನವನ್ನು ಬದಲಾಯಿಸುತ್ತಿದೆ. ಹಾಗೂ ಕೊಡುಗೆ ನೀಡುವ ಶಕ್ತಿಯನ್ನು ಒತ್ತಿ ಹೇಳುತ್ತದೆ. ನಾರಾಯಣ ದೇವಾಲಯವು ತನ್ನ ಧೈಯೋದ್ದೇಶವನ್ನು ಮುಂದುವರೆಸುತ್ತಿದ್ದು ನಮ್ಮ ತಂದೆ ಡಾ|| ಕೆ.ಭುಜಂಗ ಶೆಟ್ಟಿಯವರ ಕನಸ್ಸನು ಸಾಕಾರಗೊಳಿಸುತ್ತಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಣ್ಣಿನ ಶಸ್ತ್ರಚಿಕಿತ್ಸಕರಾದ ಸರ್ಜನ್ ಡಾ|| ಬಾಲಕೃಷ್ಣ ಮತ್ತು ನಾರಾಯಣ ನೇತ್ರಾಲಯದ ಸಿಇಓ ಎಸ್.ಕೆ.ಮಿತ್ತಲ್ ಉಪಸ್ಥಿತರಿದ್ದರು. ನಾರಾಯಣ ನೇತ್ರಾಲಯದ ಮಾಧ್ಯಮ ಸಲಹೆಗಾರರಾದ ಮುಳಕುಂಟೆ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.
-ವೆಂಕಟಾಚಲ,ಹೆಚ್.ವಿ.