ತುಮಕೂರು: ಕನ್ನಡ ಸಾಹಿತ್ಯ ಕ್ಷೇತ್ರವನ್ನು ಮುಗಿಲೆತ್ತರಕ್ಕೆ ಕೊಂಡೊಯ್ದ ರಾಷ್ಟ್ರಕವಿ ಕುವೆಂಪು ಅವರು ನಾಡಿನ ಹೆಮ್ಮೆಯ ಕವಿ ಎಂದು ಹಿರಿಯ ಸಾಹಿತ್ಯ ವಿಮರ್ಶಕ ಡಾ.ಕೆ.ಪಿ.ನಟರಾಜು ಅಭಿಪ್ರಾಯಪಟ್ಟರು.
ನಗರದ ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜು ಹಾಗೂ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ಸಹಯೋಗದಲ್ಲಿ, ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ ಪತ್ರಿಕಾ ದಿನಾಚರಣೆ ಹಾಗೂ ಕುವೆಂಪು ಜನ್ಮದಿನಾಚರಣೆ ಅಂಗವಾಗಿ ಡಾ.ಎಚ್.ಎಂ ಗಂಗಾಧರಯ್ಯ ನವರ 13ನೇ ಸ್ಮಾರಕ ಉಪನ್ಯಾಸ ಮಾಲಿಕೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕುವೆಂಪು ವಿಚಾರಗಳು” ಎಂಬ ವಿಷಯದ ಕುರಿತು ಮಾತನಾಡಿದ ಅವರು, ಜಾತಿ ತಾರತಮ್ಯ, ನಾನು ಮತ್ತು ಅನ್ಯ ಹಾಗೂ ಭೇದ-ಭಾವವನ್ನು ತೊಡೆದು ಹಾಕಿದ ರಾಷ್ಟ್ರಕವಿ ಕುವೆಂಪು ಅವರನ್ನು ವಿಶ್ವಮಾನವ ಸಂದೇಶವನ್ನು ಜಗತ್ತಿಗೆ ಸಾರುವ ಮೂಲಕ ಸಮಾಜದಲ್ಲಿ ಎಲ್ಲರು ಸಮಾನರು ಎಂಬ ಪರಿಕಲ್ಪನೆಯನ್ನು ಹುಟ್ಟುಹಾಕಿದರು. ಅಲ್ಲದೆ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಮುಗಿಲೆತ್ತರಕ್ಕೆ ಕೊಂಡೊಯ್ದ, ನಾಡಿನ ಹೆಮ್ಮೆಯ ಕವಿ ಎಂದು ವಿಮರ್ಶಕ ಡಾ.ಕೆ ಪಿ ನಟರಾಜು ಹೇಳಿದರು.
ಭಾಷೆಯನ್ನು ಶ್ರೀಮಂತಗೊಳಿಸಿದ ಸಾಹಿತ್ಯಲೋಕದ ಧೀಮಂತರಲ್ಲಿ ಕುವೆಂಪು ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ. ಅವರ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಜನಪರ ನಿಲುವುಗಳಿವೆ. ಅಲ್ಲದೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಪ್ರಧಾನವಾದ ಸ್ಥಾನ ನೀಡುವುದನ್ನು ಕಾಣಬಹುದು. ಹಾಗಾಗಿ ಕನ್ನಡ ಸಾಹಿತ್ಯ ಲೋಕದಲ್ಲಿ ಕುವೆಂಪು ಸಾಧನೆ ಮುಗುಲೆತ್ತರಕ್ಕೆ ತಲುಪಿದೆ. ಅವರ ವಿಚಾರಧಾರೆಗಳು-ಚಿಮತನೆಗಳು-ಸಂದೇಶಗಳು ಇಂದಿನ-ಮುಂದಿನ ಸಮಾಜಕ್ಕೂ ಪ್ರಸ್ತುತ ಎಂದು ಅವರು ಹೇಳಿದರು.
ಉಪನ್ಯಾಸ ಮಾಲಿಕೆಯಲ್ಲಿ ‘ಪತ್ರಿಕೋದ್ಯಮ ಕ್ಷೇತ್ರದಲ್ಲಿನ ಉದ್ಯೋಗವಕಾಶಗಳಲ್ಲಿ ಸಂವಹನ ಕಲೆ’ ವಿಷಯ ಕುರಿತು ಮಾತನಾಡಿದ ಹವ್ಯಾಸಿ ಪತ್ರಕರ್ತ ಶರತ್ ಜಯರಾಮ್ ಅವರು,
ಸಂವಹನವು ಪ್ರತಿಯೊಬ್ಬರಿಗೂ ಅವಶ್ಯಕ. ಇಂದಿನ ಆಧುನಿಕ ಯುಗದಲ್ಲಿ ಸಮೂಹ ಮಾಧ್ಯಮಗಳ ಪಾತ್ರ ಅನನ್ಯ, ಇವುಗಳನ್ನು ಸಕಾರಾತ್ಮಕವಾಗಿ ಬಳಸಿಕೊಂಡು ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಪತ್ರಿಕೋದ್ಯಮ ಕ್ಷೇತ್ರವು ವಿಶಾಲವಾಗಿದೆ. ವೃತ್ತಿಪರವಾಗಿಯೂ ಅಲ್ಲದೆ ಹವ್ಯಾಸಿ ಪತ್ರಕರ್ತರಾಗಿ ಕೆಲಸ ನಿರ್ವಹಿಸಲು ಸಾಕಷ್ಟು ಅವಕಾಶಗಳಿದ್ದು, ಇವೆಲ್ಲವನ್ನೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಅವರು ಸಲಹೆ ನೀಡಿದರು.
ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಹೇಮಲತಾ ಪಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕುವೆಂಪು ಅವರು ಕೇವಲ ವ್ಯಕ್ತಿ ಅಲ್ಲ- ವ್ಯಕ್ತಿತ್ವ. ಹಾಗಾಗಿ ಅವರ ಚಿಂತನೆಯನ್ನು ಮೈಗೂಡಿಸಿಕೊಂಡು ಸಮಾಜವನ್ನು ತಿದ್ದುವ ಕಾರ್ಯ ತಾವೆಲ್ಲರೂ ಮಾಡಬೇಕು ಎಂದು ನುಡಿದರು.
ಐಕ್ಯೂಎಸಿ ಸಂಯೋಜಕ ಸಯದ್ ಬಾಬು, ಕನ್ನಡ ವಿಭಾಗದ ಮುಖ್ಯಸ್ಥ ಡಾ.ರಮೇಶ್ ಮಣ್ಣೆ, ಪ್ರಾಧ್ಯಾಪಕರಾದ ಹನುಮಂತರಾಯಪ್ಪ, ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಬಿ.ಟಿ.ಮುದ್ದೇಶ್ , ಐಕ್ಯೂಎಸಿ ಸಂಯೋಜಕ ಸಯದ್ ಬಾಬು, ಸಹ ಪ್ರಾಧ್ಯಾಪಕಿ ಆಶಾ ಕೆ ಎಲ್ ಸೇರಿದಂತೆ ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.