ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಭರ್ಜರಿ ಗೆಲುವು ಪಡೆದ ಎನ್‍ಡಿಎ ಅಭ್ಯರ್ಥಿ ವಿ.ಸೋಮಣ್ಣ ಅವರು ತಮ್ಮ ಗೆಲುವಿಗೆ ಸಹಕರಿಸಿದ ಮತದಾರರಿಗೆ, ಶ್ರಮಿಸಿದ ಬಿಜೆಪಿ, ಜೆಡಿಎಸ್ ಮುಖಂಡರು, ಕಾರ್ಯಕರ್ತರಿಗೆ ಧನ್ಯವಾದ ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ತಮ್ಮ ಗೆಲುವನ್ನು ಸಮರ್ಪಿಸುವುದಾಗಿ ಹೇಳಿದರು.
ಮಂಗಳವಾರ ಮತ ಎಣಿಕೆ ಮುಗಿದು ತಮ್ಮ ಗೆಲುವು ಘೋಷಣೆಯಾದ ನಂತರ ನಗರದ ಬಿಜೆಪಿ ಹಾಗೂ ಜೆಡಿಎಸ್ ಕಚೇರಿಗೆ ಭೇಟಿ ನೀಡಿದ ವಿ.ಸೋಮಣ್ಣ ಎರಡೂ ಪಕ್ಷಗಳ ಮುಖಂಡರು, ಕಾರ್ಯಕರ್ತರ ಅಭಿನಂದನೆ ಸ್ವೀಕರಿಸಿ, ಧನ್ಯವಾದ ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಸೋಮಣ್ಣ, ತಮ್ಮ ಗೆಲುವು ನಿಮ್ಮೆಲ್ಲರ ಪ್ರೀತಿ, ವಿಶ್ವಾಸ, ನಂಬಿಕೆಯ ಗೆಲುವು. ಎರಡೂ ಪಕ್ಷದವರು ಒಟ್ಟಾಗಿ ಕೆಲಸ ಮಾಡಿದ್ದರ ಫಲ ಮತದಾರರ ವಿಶ್ವಾಸ ಪಡೆದು ಗೆಲುವು ಸಾಧ್ಯವಾಯಿತು. ಕೂಡಿ ಬಾಳಿದರೆ ಎಲ್ಲವೂ ಸಾಧ್ಯವಾಗುತ್ತದೆ, ಎಲ್ಲವೂ ಸಿಗುತ್ತದೆ ಎಂಬುದಕ್ಕೆ ಈ ಚುನಾವಣೆಯಲ್ಲಿ ನಿಮ್ಮೊಡನೆ ಕೆಲಸ ಮಾಡಿದ ಅನುಭವ ನನಗಾಗಿದೆ. ಮುಂದೆ ರಾಜ್ಯದಲ್ಲಿ ಬಿಜೆಪಿ, ಜೆಡಿಎಸ್ ಒಂದಾಗಿ ಕೆಲಸ ಮಾಡೋಣ ಎಂದು ಹೇಳಿದರು.
ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಹೆಚ್.ಡಿ.ಕುಮಾರಸ್ವಾಮಿ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕರ್ ಮೊದಲಾದ ನಾಯಕರು ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ತಾವು ಜಯಗಳಿಸಲು ನೆರವಾದರು. ತುಮಕೂರು ಕ್ಷೇತ್ರದ ಜನರ ಪ್ರೀತಿ, ವಿಶ್ವಾಸವನ್ನು ಎಂದೂ ಮರೆಯುವುದಿಲ್ಲ, 24/7 ಜನರೊಂದಿಗೆ ಬೆರೆತು ಅವರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡುತ್ತೇನೆ ಎಂದರು.
ಶಾಸಕ ಸುರೇಶ್‍ಗೌಡ ಮಾತನಾಡಿ, ತುಮಕೂರು ಲೋಕಸಭಾ ಕ್ಷೇತ್ರದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ 1.8 ಲಕ್ಷಕ್ಕೂ ಅಧಿಕ ದಾಖಲೆ ಮತಗಳಿಂದ ಜಯ ಗಳಿಸಿದೆ, ಇದೊಂದು ಐತಿಹಾಸಿದ ಗೆಲುವು ಎಂದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ, ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್ ಸೇರಿದಂತೆ ಹಲವಾರು ಮುಖಂಡರು, ಅಪಾರ ಸಂಖ್ಯೆಯ ಕಾರ್ಯಕರ್ತರು ಹಾಜರಿದ್ದು ಸೋಮಣ್ಣರನ್ನು ಅಭಿನಂದಿಸಿದರು. ಸಿಹಿ ಹಂಚಿ ಗೆಲುವನ್ನು ಸಂಭ್ರಮಿಸಿದರು.
ಜೆಡಿಎಸ್ ಕಚೇರಿಗೆ ಭೇಟಿ
ನಂತರ ಜಿಲ್ಲಾ ಜೆಡಿಎಸ್ ಕಚೇರಿಗೆ ಭೇಟಿ ನೀಡಿದ ನೂತನ ಸಂಸದ ವಿ.ಸೋಮಣ್ಣ ಅವರನ್ನು ಪಕ್ಷದ ಶಾಸಕರು, ಮಾಜಿ ಶಾಸಕರು, ಮುಖಂಡರು ಸ್ವಾಗತಿಸಿ ಬರಮಾಡಿಕೊಂಡರು.
ಈ ಚುನಾವಣೆಯಲ್ಲಿ ಜೆಡಿಎಸ್‍ನವರು ನೀಡಿದ ಸಹಕಾರ, ಗೆಲುವಿಗಾಗಿ ಹಾಕಿದ ಶ್ರಮ, ಕಾರ್ಯವೈಖರಿಯನ್ನು ಶ್ಲಾಘಿಸಿದ ವಿ.ಸೋಮಣ್ಣ, ನನ್ನ ಜೀವ ಇರುವವರೆಗೂ ಜೆಡಿಎಸ್‍ನವರ ಸಹಕಾರ ಮರೆಯುವುದಿಲ್ಲ ಎಂದು ಹೇಳಿದರು.
ದಂಡಿನ ಮಾರಮ್ಮನ ಆಶೀರ್ವಾದ
ಮಧುಗಿರಿ, ಕೊರಟಗೆರೆಯಲ್ಲಿ ಲೀಡ್ ಪಡೆದರೆ ಚುನಾವಣೆ ಗೆಲ್ಲುವುದು ಸುಲಭ ಎಂಬುದು ಎರಡೂ ಪಕ್ಷಗಳ ಮುಖಂಡರ ಅಭಿಪ್ರಾಯವಾಗಿತ್ತು. ಒಮ್ಮೆ ಮಧುಗಿರಿಗೆ ಪ್ರಚಾರಕ್ಕೆ ಹೋಗಿದ್ದಾಗ ಅಲ್ಲಿನ ದಂಡಿನ ಮಾರಮ್ಮ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿದೆ. ಅಲ್ಲಿದ್ದ ಮಹಿಳೆಯೊಬ್ಬರು, ಬೇಕಾದ್ದನ್ನು ಕೋರಿಕೊಳ್ಳಿ ಮಾರಮ್ಮ ಈಡೇರಿಸುತ್ತಾಳೆ ಎಂದರು. ಮಧುಗಿರಿ ಕ್ಷೇತ್ರದಲ್ಲಿ ಕನಿಷ್ಟ ಒಂದು ಮತವಾದರೂ ಲೀಡ್ ಸಿಗುವಂತೆ ಕೃಪೆಮಾಡು ತಾಯಿ ಎಂದು ಕೋರಿಕೊಂಡೆ, ತಾಯಿಯ ಕೃಪೆಯಿಂದ ಮಧುಗಿರಿಯಲ್ಲಿ 12 ಸಾವಿರಕ್ಕೂ ಹೆಚ್ಚು ಲೀಡ್ ದೊರೆತು, ಗೆಲುವೂ ಆಯಿತು. ಈಗ ಮಧುಗಿರಿ ದಂಡಿನ ಮಾರಮ್ಮ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸುತ್ತೇನೆ ಎಂದರು.
ಶಾಸಕರಾದ ಎಂ.ಟಿ.ಕೃಷ್ಣಪ್ಪ, ಸಿ.ಬಿ.ಸುರೇಶ್‍ಬಾಬು, ಮಾಜಿ ಶಾಸಕರಾದ ಎಂ.ವಿ.ವೀರಭದ್ರಯ್ಯ, ಸುಧಾಕರಲಾಲ್, ಹೆಚ್.ನಿಂಗಪ್ಪ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಆಂಜನಪ್ಪ, ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜ್ ಮೊದಲಾದವರು ಈ ವೇಳೆ ಹಾಜರಿದ್ದರು.