ತುಮಕೂರು : ತೈವಾನ್ ವಾಣಿಜ್ಯ ಮಂಡಳಿಯ ಉಪಾಧ್ಯಕ್ಷ ಸೈಮನ್ ಲೀ ನೇತೃತ್ವದ ಉನ್ನತ ಮಟ್ಟದ ನಿಯೋಗವು ಜಿಲ್ಲೆಯ ಕೈಗಾರಿಕಾ ಕ್ಷೇತ್ರಕ್ಕೆ ಬಂಡವಾಳ ಹೂಡಲು ಆಸಕ್ತಿ ತೋರಿದೆ.
ತುಮಕೂರಿನಲ್ಲಿ ಕೈಗಾರಿಕಾ ಮೂಲಸೌಕರ್ಯ ಮತ್ತು ಭೂ ಲಭ್ಯತೆಯ ಬಗ್ಗೆ ತಿಳಿದುಕೊಳ್ಳಲು ಪರಿಶೋಧನಾತ್ಮಕ ವಸಂತನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಶುಕ್ರವಾರ ಭೇಟಿ ನೀಡಿದ್ದ ನಿಯೋಗವು ಪಿಸಿಬಿ ಕ್ಲಸ್ಟರ್ ಅನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸಿ, ತೈವಾನ್ ಕೈಗಾರಿಕಾ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಉದ್ಯಾನವನವನ್ನು ಸ್ಥಾಪಿಸಲು ಸಂಭಾವ್ಯ ತಾಣಗಳನ್ನು ಅನ್ವೇಷಿಸಿತು.
ಭೇಟಿ ಸಮಯದಲ್ಲಿ ನಿಯೋಗವು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್, ಸಿಬಿಐಸಿ-ಟಿಐಟಿಎಲ್‍ನ ಕಾರ್ಯನಿರ್ವಾಹಕ ಎಂಜಿನಿಯರ್ ಮನು ಮತ್ತು ಕೆಐಎಡಿಬಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಸನ್ನ ಸೇರಿದಂತೆ ಪ್ರಮುಖ ಅಧಿಕಾರಿಗಳೊಂದಿಗೆ ಸಂವಾದವನ್ನು ನಡೆಸಿ ಈ ಕೈಗಾರಿಕಾ ಪ್ರದೇಶದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನೆಯನ್ನು ಹೆಚ್ಚಿಸುವಲ್ಲಿ ದೀರ್ಘಕಾಲೀನ ಸಹಯೋಗದ ಅವಕಾಶಗಳ ಕುರಿತು ಚರ್ಚಿಸಲಾಯಿತು.
ಡಿಐಸಿ ಮತ್ತು ಕೆಐಎಡಿಬಿ ಅಧಿಕಾರಿಗಳು ಪರಸ್ಪರ ಕೈಗಾರಿಕಾ ಪ್ರದೇಶದ ವಿನ್ಯಾಸ ಯೋಜನೆಗಳು, ಭೂ ಬ್ಯಾಂಕ್ ವಿವರಗಳನ್ನು ಹಂಚಿಕೊಂಡರು. ಲಭ್ಯವಿರುವ ಪೆÇ್ರೀತ್ಸಾಹ ಧನ ಮತ್ತು ಬೆಂಬಲ ಕಾರ್ಯವಿಧಾನಗಳ ಕುರಿತು ನಿಯೋಗಕ್ಕೆ ವಿವರಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್(ಕೆಡಿಇಎಂ) ತಂಡದ ಅಜಯ್ ಕೃಷ್ಣ, ಮಂಜುನಾಥ್ ಮತ್ತು ಸುವಿನ್ ನಾರಾಯಣ್ ಮತ್ತಿತರರು ಉಪಸ್ಥಿತರಿದ್ದರು.