ಇಂದು (ಡಿಸೆಂಬರ್ 25), ಕೇಂದ್ರ ಮತ್ತು ರಾಜ್ಯ ಎಂಬ ಎರಡು ಕಂಬಗಳ ಆಡಳಿತವನ್ನು ಗ್ರಾಮ, ಜಿಲ್ಲೆ, ರಾಜ್ಯ ಹಾಗೂ ಕೇಂದ್ರ ಹೀಗೆ ನಾಲ್ಕು ಕಂಬಗಳ ಆಡಳಿತಕ್ಕೆ ಪರಿವರ್ತಿಸುವ ಮೂಲಕ ಗಾಂಧಿ ಕನಸಿನ ‘ಗ್ರಾಮ ಸ್ವರಾಜ್ಯ’ಕ್ಕೆ ಮುನ್ನುಡಿ ಬರೆದ, ದೇಶದ ಪಂಚಾಯತ್ ರಾಜ್ ವ್ಯವಸ್ಥೆಗೆ ದಾರಿದೀಪವಾದ ನಜೀರ್ ಸಾಬ್‍ರವರ ಜನ್ಮದಿನ.
1950 ರಿಂದ 1957 ರವರೆಗೆ ಸ್ವಾತಂತ್ರ್ಯೋತ್ತರ ಗ್ರಾಮೀಣ ಭಾರತದ ಅಭಿವೃದ್ಧಿಗಾಗಿ ಅಂದಿನ ಕೇಂದ್ರ ಸರ್ಕಾರ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರು ರವರ ನೇತೃತ್ವದಲ್ಲಿ ರೂಪಿಸಿದ ಗ್ರಾಮೀಣಾಭಿವೃದ್ಧಿ ಯೋಜನೆಗಳು ವಿಫಲವಾಗಿ, ನೆಹರು ನೇಮಿಸಿದ ಬಲವಂತ ರಾಯ್ ಮೆಹತಾ ರವರ ಅಧ್ಯಯನ ಸಮಿತಿ ಅಭಿವೃದ್ಧಿ ಯೋಜನೆಗಳನ್ನು ರೂಪಿಸುವಲ್ಲಿ, ಅನುಷ್ಠಾನ ಮಾಡುವಲ್ಲಿ, ಮೇಲುಸ್ತುವಾರಿ ಮಾಡುವಲ್ಲಿ ಹಾಗೂ ಮೌಲ್ಯ ಮಾಪನ ಮಾಡುವಲ್ಲಿ ಯೋಜನೆಯ ಫಲಾನುಭವಿಗಳು ಭಾಗಿಯಾಗದಿದ್ದುದೇ ವಿಫಲತೆಗೆ ಮುಖ್ಯ ಕಾರಣ. ಆದುದ್ದರಿಂದ ಗ್ರಾಮ ಮಟ್ಟದಲ್ಲಿ ಸ್ಥಳೀಯ ಆಡಳಿತ ವ್ಯವಸ್ಥೆ ರೂಪಿಸಬೇಕು. ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತರಬೇಕು, ಜನರ ಭಾಗವಹಿಸುವಿಕೆ ಬಹಳ ಮುಖ್ಯ, ಕೇವಲ ಅಧಿಕಾರಿಗಳಿಂದ ಅಭಿವೃದ್ಧಿ ಯೋಜನೆಗಳ ಅನುಷ್ಠಾನ ಸಾಧ್ಯವಿಲ್ಲ ಎಂದು ನೀಡಿದ ಶಿಫಾರಸ್ಸಿನ ಹಿನ್ನೆಲೆಯಲ್ಲಿ 1959, ಅಕ್ಟೋಬರ್ 2 ರಂದು ರಾಜಸ್ಥಾನದ ನಾಗೂರಿನಲ್ಲಿ ಮೊದಲ ಪಂಚಾಯತಿಯನ್ನು ಅಂದಿನ ಪ್ರಧಾನಿ ಪಂಡಿತ್ ನೆಹರು ರವರು ಉದ್ಘಾಟಿಸಿ “ದೇಶದ ಪ್ರಜಾಪ್ರಭುತ್ವದ ವ್ಯವಸ್ಥೆಗೆ ಪಂಚಾಯತ್ ರಾಜ್ ವ್ಯವಸ್ಥೆಯ ಮೂಲಕ ಸುಭದ್ರ ಅಡಿಪಾಯ ಹಾಕುತ್ತಿದ್ದೇನೆ” ಎಂದು ಘೋಷಿಸಿದರು.
ಆದರೆ ಸಂವಿಧಾನದ ಸೂಕ್ತ ಬೆಂಬಲವಿಲ್ಲದ ಪಂಚಾಯತ್ ರಾಜ್ ವ್ಯವಸ್ಥೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಸೊರಗಿ ಹೋಗಿತ್ತು. ಸೊರಗಿದ್ದ ಪಂಚಾಯತ್ ರಾಜ್ ವ್ಯವಸ್ಥೆಗೆ ಚೈತನ್ಯ ತುಂಬಿದ್ದು ಅಬ್ದುಲ್ ನಜೀರ್ ಸಾಬ್‍ರವರು. ‘1983ರಲ್ಲಿ ಕರ್ನಾಟಕದಲ್ಲಿ ಮೊದಲ ಕಾಂಗ್ರೇಸೇತರ ಸರ್ಕಾರ ರಾಮಕೃಷ್ಣ ಹೆಗಡೆ ರವರ ನೇತೃತ್ವದಲ್ಲಿ ರಚನೆಯಾದಾಗ, ಯಾರಿಗೂ ಬೇಡವಾದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆಯನ್ನು ಕೇಳಿ ಪಡೆದು, ತಮ್ಮ ವಿಕೇಂದ್ರಿಕರಣದ ಪ್ರಯೋಗದ ಮೂಲಕ ಖಾತೆಗೆ ಮೌಲ್ಯ ತುಂಬಿದವರು ನಜೀರ್ ಸಾಬ್ ರವರು.
“ಜನತಾಂತ್ರಿಕ ವಿಕೇಂದ್ರಿಕರಣದ ಅರ್ಥ ಜನರ ಬದುಕಿಗೆ ಸಂಬಂಧಿಸಿದ ಎಲ್ಲಾ ಮಹತ್ವದ ವಿಷಯಗಳ ಬಗ್ಗೆ ನಿರ್ಧಾರಗಳನ್ನು ಕೈಗೊಳ್ಳುವ ಅಧಿಕಾರವನ್ನು ಜನರ ಕೈಗೆ ನೀಡುವುದು, ರಾಜ್ಯ ಸಚಿವಾಲಯ ಮಟ್ಟದ ಅಧಿಕಾರಿಗಳಿಗೆ ಗ್ರಾಮ ಮಟ್ಟದ ಅಭಿವೃದ್ಧಿಯ ಜವಾಬ್ದಾರಿ ನೀಡಿದರೆ ಜನತಾಂತ್ರಿಕ ವಿಕೇಂದ್ರಿಕರಣ ಒಂದು ಪೊಳ್ಳು ಭರವಸೆಯಾಗಿ ಮಾತ್ರ ಉಳಿಯುತ್ತದೆ” ಎಂಬ ಸ್ಪಷ್ಟ ನಂಬಿಕೆಯನ್ನು ಹೊಂದಿದ್ದ ಶ್ರೀಯುತರು “ಮಂಡಲ್ ಪಂಚಾಯತ್, ತಾಲ್ಲೂಕು ಸಮಿತಿ, ಜಿಲ್ಲಾ ಪರಿಷತ್ ಹಾಗೂ ನ್ಯಾಯ ಪಂಚಾಯಿತಿ ಕಾಯ್ದೆ 1883 ರನ್ನು ಅಂದಿನ ಮುಖ್ಯಮಂತ್ರಿ ಶ್ರೀ ರಾಮಕೃಷ್ಣ ಹೆಗಡೆ ಯವರ ಬೆಂಬಲದೊಂದಿಗೆ ಜಾರಿಗೆ ತರುವ ಮೂಲಕ ದೇಶದಲ್ಲಿ ಅಧಿಕಾರ ವಿಕೇಂದ್ರಿಕರಣದ ಕ್ರಾಂತಿಗೆ ನಾಂದಿ ಹಾಡಿದರು.
ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪರಿಷತ್‍ಗಳನ್ನು, ಗ್ರಾಮ ಮಟ್ಟದಲ್ಲಿ ಮಂಡಲ ಪಂಚಾಯತಿಗಳನ್ನು ಹಾಗೂ ಜನರ ಹಂತದಲ್ಲಿ ‘ಗ್ರಾಮ ಸಭಾ’ಗಳನ್ನು ಅಸ್ತಿತ್ವಕ್ಕೆ ತರುವ ಮೂಲಕ “ಜನರ ಕೈಗೆ ಅಧಿಕಾರ” ಎಂಬ ತಮ್ಮ ನಿಲುವನ್ನು ಸಾಕಾರಗೊಳಿಸಿದರು.
ಮಂಡಲ ಪಂಚಾಯತಿಯ ಅಧ್ಯಕ್ಷನನ್ನು “ಪ್ರಧಾನ” ಎಂದು ಕರೆಯುವ ಮೂಲಕ ದಿಲ್ಲಿಯ ಪ್ರಧಾನಿ ಹುದ್ದೆಯ ಗೌರವವನ್ನು ಹಳ್ಳಿಯ ಪ್ರಧಾನನಿಗೆ ನೀಡಿದರು. ಜಿಲ್ಲಾ ಪರಿಷತ್ತಿನ ಅಧ್ಯಕ್ಷನನ್ನು ಜಿಲ್ಲೆಯ ಮುಖ್ಯ ಮಂತ್ರಿ ಎಂದು ಸಂಭೋದಿಸುವ ಮೂಲಕ ರಾಜ್ಯಾಡಳಿತವನ್ನು ಜಿಲ್ಲೆಯ ಹಂತಕ್ಕೆ ವಿಕೇಂದ್ರಿಕರಿಸಿದರು. ಜಿಲ್ಲಾ ಪರಿಷತ್ ಮತ್ತು ಮಂಡಲ ಪಂಚಾಯತಿ ಸದಸ್ಯ ಸ್ಥಾನಗಳಲ್ಲಿ ಮಹಿಳೆಯರಿಗೆ 25 ರಷ್ಟು, ಪರಿಶಿಷ್ಟ ಜಾತಿಯವರಿಗೆ ಶೇ 15 ರಷ್ಟು ಹಾಗೂ ಪರಿಶಿಷ್ಟ ಪಂಗಡದವರಿಗೆ ಶೇ.3ರಷ್ಟು ಮೀಸಲಾತಿಯನ್ನು ಕಲ್ಪಿಸುವ ಮೂಲಕ ಡಾ|| ಅಂಬೇಡ್ಕರ್ ರವರು ಬಯಸಿದ್ದ ಸಮಸಮಾಜಕ್ಕೆ ರಾಜಕೀಯ ಮೀಸಲಾತಿಯ ಮೂಲಕ ಮುನ್ನುಡಿ ಬರೆದರು. ಜಿಲ್ಲಾ ಪರಿಷತ್ತು ಮತ್ತು ಮಂಡಲ ಪಂಚಾಯಿತಿಗಳು ಸ್ಥಳೀಯ ಸ್ವಯಂ ಸರ್ಕಾರಗಳಾಗಿ ಕಾರ್ಯನಿರ್ವಹಿಸಲು ಬೇಕಾದ ಅಧಿಕಾರ, ಹಣಕಾಸು ಹಾಗೂ ಮಾನವ ಸಂಪನ್ಮೂಲಗಳನ್ನು ಅವುಗಳಿಗೆ ವರ್ಗಾಯಿಸುವ ಮೂಲಕ, ಯೋಜನೆ ರೂಪಿಸುವ ಮತ್ತು ಅನುಷ್ಠಾನ ಮಾಡುವ ಸಂಪೂರ್ಣ ಸ್ವಾತಂತ್ರ್ಯವನ್ನು ಅವುಗಳಿಗೆ ನೀಡಿದ್ದರು. ಜಿಲ್ಲಾ ಪರಿಷತ್ತಿನ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಜಿಲ್ಲಾಧಿಕಾರಿಗಿಂತ ಹಿರಿಯರಾದ ಭಾರತೀಯ ಆಡಳಿತ ಸೇವೆಯ ಅಧಿಕಾರಿಯನ್ನು ನೇಮಿಸುವ ಮೂಲಕ ಜಿಲ್ಲಾ ಪರಿಷತ್ತನ್ನು ಜಿಲ್ಲಾ ಸರ್ಕಾರವನ್ನಾಗಿಸಿದರು.ಮುಂದೆ ಭಾರತೀಯ ಆಡಳಿತ ಸೇವೆಯ ಅಧಿಕಾರಿಗಳ ಲಾಬಿ,ü ವ್ಯವಸ್ಥೆಯನ್ನು ತಿರುಗುಮುರುಗು ಮಾಡಿದ್ದು ಪ್ರಜಾಪ್ರಭುತ್ವದ ವ್ಯಂಗ್ಯ.
ಕರ್ನಾಟಕದಲ್ಲಿ ನಜೀರ್ ಸಾಬ್ ರವರು ಮಾಡಿದ್ದ ಪ್ರಯೋಗ ಭಾರತೀಯ ವಿಕೇಂದ್ರೀಕರಣ ವ್ಯವಸ್ಥೆಗೆ ದಾರಿದೀಪವಾದದ್ದು ಐತಿಹಾಸಿಕವಾಗಿ ಬಹು ಮಹತ್ವದ ವಿಷಯ. ಅಂದಿನ ಪ್ರಧಾನಿ ಶ್ರೀ ರಾಜೀವ್ ಗಾಂಧಿಯವರು, ಕರ್ನಾಟಕದಲ್ಲಿ ವಿರೋಧ ಪಕ್ಷದ ಸರ್ಕಾರ ಮಾಡಿದ ವಿಶಿಷ್ಟ ಪ್ರಯೋಗವನ್ನು ಅಧ್ಯಯನ ಮಾಡಿ, ಇಡೀ ದೇಶಕ್ಕೆ ಅನ್ವಯಿಸುವಂತೆ 64ನೇ ಸಂವಿಧಾನ ತಿದ್ದುಪಡಿಯ ಮೂಲಕ ಪಂಚಾಯತ್ ರಾಜ್ ಸಂಸ್ಥೆಗಳನ್ನು ಸಂವಿಧಾನ ಬದ್ಧಗೊಳಿಸಲು ಪ್ರಯತ್ನಿಸಿದ್ದು ರಾಜಕೀಯವಾಗಿ ಒಂದು ಅನುಕರಣೀಯ ಮಾದರಿ. ಲೋಕಸಭೆಯಲ್ಲಿ ಮಸೂದೆಗೆ ಅನುಮೋದನೆ ದೊರೆತರೂ ರಾಜ್ಯ ಸಭೆಯಲ್ಲಿ ವಿಫಲವಾಯಿತು. ಮುಂದೆ ಶ್ರೀ ಪಿ. ವಿ. ನರಸಿಂಹ ರಾವ್ ರವರು, ಶ್ರೀ ರಾಜೀವ್ ಗಾಂಧಿ ಯವರ ವಿಕೇಂದ್ರೀಕರಣದ ಕನಸನ್ನು ಸಂವಿಧಾನದ 73ನೇ ಮತ್ತು 74ನೇ ತಿದ್ದುಪಡಿಯ ಮೂಲಕ 1993ರಲ್ಲಿ ನನಸು ಮಾಡಿದರು.
ತಿದ್ದುಪಡಿಯ ನಂತರದಲ್ಲಿ ದೇಶದಲ್ಲೇ ಪ್ರಪ್ರಥಮವಾಗಿ ಕಾಯ್ದೆ ರೂಪಿಸಿದ ಕೀರ್ತಿ ಕರ್ನಾಟಕ ರಾಜ್ಯದ್ದು. ನಜೀರ್ ಸಾಬ್ ರವರ 1983ರ ಕಾಯ್ದೆಗೆ ಹೋಲಿಸಿದರೆ 1993ರ ಕರ್ನಾಟಕದ ಪಂಚಾಯತ್ ರಾಜ್ “ಕಾಯ್ದೆ ಹಲ್ಲು ಕಿತ್ತ ಹಾವಿನ ಹಾಗೆ ದುರ್ಬಲ” ಎಂಬ ಟೀಕೆಗಳ ನಡುವೆಯು ಪಂಚಾಯತ್ ರಾಜ್ ವ್ಯವಸ್ಥೆಯನ್ನು ಸದೃಢಗೊಳಿಸುವಲ್ಲಿ ಅಂದಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದ ಶ್ರೀ ಎಂ. ವೈ. ಘೋರ್ಪಡೆರವರ ಪ್ರಯತ್ನವನ್ನು ಅಲ್ಲಗಳೆಯುವಂತಿಲ್ಲ. ಅನೇಕ ಏಳುಬೀಳುಗಳನ್ನು ಕಾಣುತ್ತ ಬೆಳೆದ ಕರ್ನಾಟಕ ಪಂಚಾಯತ್ ರಾಜ್ ವ್ಯವಸ್ಥೆಗೆ ಕ್ರಾಂತಿಕಾರಿ ತಿರುವು ದೊರೆತದ್ದು 2015ರಲ್ಲಿ. ಅಂದಿನ ಶ್ರೀ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದ ಶ್ರೀ ಹೆಚ್. ಕೆ. ಪಾಟೀಲ್ ರವರಿಗಿದ್ದ ವಿಕೇಂದ್ರೀಕರಣದ ಬಗೆಗಿನ ಬದ್ಧತೆಯ ಕಾರಣದಿಂದಾಗಿ, ಪಂಚಾಯತ್ ರಾಜ್ ವ್ಯವಸ್ಥೆಯನ್ನು ಅಮೂಲಾಗ್ರವಾಗಿ ಪರಿಷ್ಕರಿಸುವ ದೃಷ್ಟಿಯಿಂದ ಶ್ರೀ ಕೆ. ಆರ್. ರಮೇಶ್ ಕುಮಾರ್ ರವರ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಿ, ಸಮಿತಿಯ ಶಿಫಾರಸ್ಸಿನ ಮೇರೆಗೆÉ ಅನೇಕ ತಿದ್ದುಪಡಿಗಳ ಮೂಲಕ “ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ 1993” ರನ್ನು ಜಾರಿಗೆ ತಂದರು.
ಪ್ರಸ್ತುತ ಜಾರಿಯಲ್ಲಿರುವ ಈ ಕಾಯ್ದೆ ದೇಶದಲ್ಲೇ ಅತ್ಯುತ್ತಮವಾದ ಕ್ರಾಂತಿಕಾರಿಕ ಪಂಚಾಯತ್ ರಾಜ್ ಕಾಯ್ದೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ ಅನುಷ್ಠಾನದ ದೃಷ್ಟಿಯಲ್ಲಿ ನೋಡಿದಾಗ ನಿರಾಸೆ ಆವರಿಸುತ್ತದೆ.
ಪಂಚಾಯತ್ ರಾಜ್ ಸಂಸ್ಥೆಗಳು ಸ್ಥಳೀಯ ಸರ್ಕಾರಗಳಾಗಿ ಕಾರ್ಯನಿರ್ವಹಿಸಲು ಬೇಕಾದ ಅಧಿಕಾರ, ಹಣಕಾಸು ಹಾಗೂ ಮಾನವ ಸಂಪನ್ಮೂಲಗಳನ್ನು ವರ್ಗಾವಣೆ ಮಾಡಲು ಬೇಕಾದ ಜವಾಬ್ದಾರಿ ನಕ್ಷೆಯನ್ನು ಇದುವರೆವಿಗೂ ರಚಿಸಿಲ್ಲ. ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ “ಪ್ರಜೆಗಳೇ ಪ್ರಭುಗಳು” ಅವರ ಕೈಗೆ ಅಧಿಕಾರ ನೀಡಲು ರೂಪಿಸಿರುವ “ಗ್ರಾಮ ಸಭೆ” ಗಳಿಗೆ ಶಕ್ತಿ ತುಂಬಲು ಬೇಕಾದ ನಿಯಮಗಳನ್ನು (ಪ್ರಕರಣ (3ಇ)) ರೂಪಿಸಲು ಪ್ರಜ್ಞಾ ಪೂರ್ವಕವಾಗಿ ಗಮನ ನೀಡದೆ ಯೋಜನಾ ಪ್ರಕ್ರಿಯೆಯನ್ನು ಕೇಂದ್ರೀಕೃತಗೊಳಿಸಲಾಗಿದೆ. ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ರಚನೆಯಾಗಿದ್ದರೂ ಯೋಜನಾ ಪ್ರಕ್ರಿಯೆಯಿಂದ ದೂರ ಇಡಲಾಗಿದೆ. ಆಡಳಿತಾತ್ಮಕ ಸಮಸ್ಯೆಗಳು ಎದುರಾದಾಗ ಬಗೆ ಹರಿಸಿಕೊಳ್ಳಲು ಬೇಕಾದ ದೂರು ನಿರ್ವಹಣಾ ಪ್ರಾಧಿಕಾರಗಳನ್ನು ಎಲ್ಲಾ ಜಿಲ್ಲೆಗಳಲ್ಲಿ ರಚನೆ ಮಾಡಿರುವುದಿಲ್ಲ. ಗ್ರಾಮ ಸರ್ಕಾರಗಳಾದ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಈವರೆವಿಗೂ ಆಡಳಿತ ಕೈಪಿಡಿ ರಚನೆ ಮಾಡಿಲ್ಲ. ಕಛೇರಿ ನಿರ್ವಹಣೆ ವ್ಯವಸ್ಥೆಯೇ ಇಲ್ಲ. ಸ್ಥಾಯಿ ಸಮಿತಿಗಳಿಗೆ ಬಲ ತುಂಬಲು ಬೇಕಾದ ನಿಯಮಗಳ ರಚನೆಯಾಗಿಲ್ಲ.
ಪಂಚಾಯತ್ ರಾಜ್ ಆಡಳಿತ ಸೇವೆಯ ಮೂಲಕ ಅನುಭವಿ ಆಡಳಿತ ವ್ಯವಸ್ಥೆಯನ್ನು ರೂಪಿಸಲು ಐ.ಎ..ಎಸ್. ಅಧಿಕಾರಿಗಳು ಬಿಡುತ್ತಿಲ್ಲ. ಹೀಗೆ ಕಾಯ್ದೆಯಲ್ಲಿದ್ದರೂ ಪಂಚಾಯತ್ ರಾಜ್ ವ್ಯವಸ್ಥೆಗೆ ಶಕ್ತಿ ತುಂಬಲು ಬೇಕಾದ ಅನೇಕ ಮಹತ್ವದ ಅಂಶಗಳು ಜಾರಿಯಾಗದಂತೆ ನೋಡಿಕೊಳ್ಳಲಾಗುತ್ತಿದೆ.
ಸ್ಥಳೀಯ ಸಂಸ್ಥೆಗಳು ಸ್ವಯಂ ಸರ್ಕಾರಗಳಾಗಿ ಕಾರ್ಯನಿರ್ವಹಿಸಲು ಬೇಕಾದ ಮೇಲಿನ ಅಂಶಗಳನ್ನು ಜಾರಿಗೆ ತರಲು ಕ್ರಮಕೈಗೊಳ್ಳಬೇಕಾದ ಪಂಚಾಯತ್ ರಾಜ್ ಇಲಾಖೆ, ಗ್ರಾಮೀಣಾಭಿವೃಧ್ಧಿ ಇಲಾಖೆಯಂತೆ ತಾನೂ ಕಾರ್ಯಕ್ರಮಗಳನ್ನು ರಾಜ್ಯಮಟ್ಟದಲ್ಲೆ ರೂಪಿಸಿ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅನುಷ್ಠಾನ ಮಾಡುವಂತೆ ತನ್ನ ಅಧಿಕಾರಿಗಳ ಮೂಲಕ ಒತ್ತಡ ಹಾಕುತ್ತಿದೆ. ಗ್ರಾಮ ಪಂಚಾಯಿತಿಗಳನ್ನು ತನ್ನ ಶಾಖಾ ಕಛೇರಿಗಳಂತೆ ನಡೆಸಿಕೊಳ್ಳುತ್ತಿದೆ. ಅಲ್ಲಿರುವ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಡೆಗಣಿಸಿದೆ. ಗ್ರಾಮ ಪಂಚಾಯಿತಿಗಳ ಆಡಳಿತ ಸಂಪೂರ್ಣವಾಗಿ ಅಧಿಕಾರಿ ಕೇಂದ್ರೀತವಾಗಿದೆ. ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಗಳಿಗೆ ಚುನಾವಣೆಗಳನ್ನು ನಡೆಸದಿರಲು ದಾರಿಗಳನ್ನು ಹುಡುಕುತ್ತಾ ಮುಂದಕ್ಕಾಕುವ ಪ್ರಯತ್ನ ಮಾಡಲಾಗುತ್ತಿದೆ. ರಾಜ್ಯ ಮಟ್ಟದಲ್ಲಿ ಆಡಳಿತ ಕೇಂದ್ರೀಕೃತವಾಗಿ, ವಿಕೇಂದ್ರೀಕರಣ ಕನಸಾಗಿದೆ.
ವಿಕೇಂದ್ರೀಕರಣದ ಬಗ್ಗೆ ಮಾತನಾಡುವ ಧ್ವನಿಯೇ ಇಲ್ಲವಾಗಿದೆ. ನೆಹರೂ ರವರು ಹಾಕಿದ ಪ್ರಜಾಪ್ರಭುತ್ವದ ತಳಹದಿ ಸಡಿಲಗೊಂಡಿರುವ ಹಾಗೂ ರಾಜೀವ್ ಗಾಂಧಿ ಯವರ ವಿಕೇಂದ್ರೀಕರಣದ ಕನಸು ವಿಫಲವಾಗುತ್ತಿರುವ ಈ ಸಂದರ್ಭದಲ್ಲಿ ಪ್ರಜಾಪ್ರಭುತ್ವಕ್ಕೆ ಶಕ್ತಿ ತುಂಬಲು, ಜನರಿಗೆ ಅಧಿಕಾರ ನೀಡಲು “ಮತ್ತೊಬ್ಬ ನಜೀರ್ ಸಾಬ್ ಬೇಕಾಗಿದೆ!!.
-ಕಾಡಶೆಟ್ಟಿಹಳ್ಳಿ ಸತೀಶ್
ಅಧ್ಯಕ್ಷರು, ಕರ್ನಾಟಕ ರಾಜ್ಯ ಗ್ರಾಮ
ಪಂಚಾಯಿತಿ ಸದಸ್ಯರ ಮಹಾಒಕ್ಕೂಟ
Please share your email id
hvvenkatachala @gmail.com
hvvenkatachala@gmail.com