ತುಮಕೂರು:ಬಿಜೆಪಿ ಪಕ್ಷ ಕುತಂತ್ರದಿಂದ ಸಂವಿಧಾನದ ಆಶಯಗಳನ್ನು ನಾಶ ಮಾಡುತ್ತಾ ಬಂದಿದ್ದು,ಸಂವಿಧಾನದ ಫಲಾನುಭವಿಗಳಾದ ದಲಿತರು ಬಿಜೆಪಿಗೆ ತಕ್ಕಪಾಠ ಕಲಿಸಬೇಕಿದೆ ಎಂದು ದಸಂಸ ರಾಜ್ಯ ಮುಖಂಡ ಬೆಲ್ಲದಮಡು ಕೃಷ್ಣಪ್ಪ ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,2014ರಲ್ಲಿ ಹಲವು ಭರವಸೆಗಳನ್ನು ಕೊಟ್ಟು ಅಧಿಕಾರಕ್ಕೆ ಬಂದ ಬಿಜೆಪಿ ಇದುವರೆಗೂ ಭರವಸೆಗಳನ್ನು ಈಡೇರಿಸಿಲ್ಲ.ಬದಲಿಗೆ ನೋಟ್ ಬ್ಯಾನ್, ಜಿ.ಎಸ.ಟಿ. ಅಗತ್ಯ ವಸ್ತುಗಳ ಬೆಲೆ ಹೆಚ್ಚಳದ ಮೂಲಕ ಬಡವರು ಬದುಕಲು ತತ್ತರಿಸುವಂತಹ ವಾತಾವರಣ ಸೃಷ್ಟಿಸಿದೆ.ಹಾಗಾಗಿ ಬಿಜೆಪಿಯ ವಿರುದ್ದ ದಲಿತರು ಮತ ಹಾಕಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದರು.
ದಲಿತರಿಗೆ, ಬಡವರಿಗೆ, ಹಿಂದುಳಿದ ವರ್ಗಗಳಿಗೆ ಮೀಸಲಾತಿ ಎಂಬುದು ಒಂದು ಊರುಗೊಲಾಗಿತ್ತು.ಆದರೆ ಕಳೆದ 10 ವರ್ಷಗಳಲ್ಲಿ ಹಲವಾರು ಸರಕಾರಿ ಸಂಸ್ಥೆಗಳನ್ನು ಖಾಸಗೀಕರಣ ಮಾಡಿಲ್ಲದೆ,ಖಾಲಿ ಇರುವ ಹುದ್ದೆಗಳನ್ನು ತುಂಬದೆ, ಹೊರಗುತ್ತಿಗೆ ಪದ್ದತಿ ಜಾರಿಗೆ ತಂದು ಮೀಸಲಾತಿಯೆ ಅಪ್ರಸ್ಥುತ ಎಂಬಂತೆ ಮಾಡಿದ್ದಾರೆ.ರೈತರ ಬೆಳೆಗಳಿಗೆ ವೈಜ್ಞಾನಿಕ ಎಂ.ಎಸ್.ಪಿ ನೀಡದೆ, ಕರಾಳ ಕಾಯ್ದೆಗಳನ್ನು ತಂದು, ಇದರ ವಿರುದ್ದ ಪ್ರತಿಭಟನೆಗೆ ಇಳಿದ ನೂರಾರು ರೈತರು ಸಾವಿಗೀಡಾವಂತೆ ಮಾಡಿದ್ದು ಮೋದಿ ಸರಕಾರ.ಹಾಗಾಗಿ ರೈತರು,ಕಾರ್ಮಿಕರು,ಬಡವರು ಬಿಜೆಪಿ ವಿರುದ್ದ ಮತ ಚಲಾಯಿಸಬೇಕೆಂಬುದು ನಮ್ಮ ಮನವಿಯಾಗಿದೆ ಎಂದರು.
ರೈಲ್ವೆ, ವಿಮಾನ ಸೇರಿದಂತೆ ಸರಕಾರಿ ಸಂಸ್ಥೆಗಳನ್ನು ತನಗೆ ಇಷ್ಟ ಬಂದಂತೆ ಕಾಪೆರ್Çರೇಟ್ ವಲಯಗಳನ್ನಾಗಿ ಮಾರ್ಪಡಿಸುತ್ತಾ ಜನರಿಗೆ ಮಂಕು ಬೂದಿ ಎರಚಿ ದೇಶದ ಅಭಿವೃದ್ಧಿ ಹೆಸರಿನಲ್ಲಿ ಕೋಮುವಾದವನ್ನು ಬಿಜೆಪಿ ಪಕ್ಷ ಬಿತ್ತುವ ಕೆಲಸ ಮಾಡುತ್ತಿದೆ.ಸರ್ವಜನಾಂಗದ ಶಾಂತಿಯ ತೋಟ ಎಂದು ಕರೆಯುವ ಕರ್ನಾಟಕದಲ್ಲಿ ಜಾತಿ,ಜಾತಿ ಧರ್ಮ ಧರ್ಮಗಳ ನಡುವೆ ಸಾಮರಸ್ಯವನ್ನು ಕದಡುತ್ತಿರುವ ಬಿಜೆಪಿಗೆ ವಿರುದ್ಧವಾಗಿ ಮತ ನೀಡಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಬೆಲ್ಲದಮಡು ಕೃಷ್ಣಪ್ಪ ಮನವಿ ಮಾಡಿದರು.
ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಉತ್ತರಪ್ರದೇಶ ಸೇರಿದಂತೆ ರಾಷ್ಟ್ರದಲ್ಲಿ ದಲಿತರು, ಹಿಂದುಳಿದವರು, ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರಗಳು ಮಿತಿಮೀರಿದ್ದು, ಪ್ರಕರಣಗಳಲ್ಲಿ ಶೇ4ರಷ್ಟು ಆರೋಪಿಗಳಿಗೆ ಮಾತ್ರ ಶಿಕ್ಷೆಯಾಗುತ್ತಿದ್ದು, ಸರ್ವರಿಗೂ ಸಮಪಾಲು,ಸರ್ವರಿಗೂ ಸಮಪಾಲು ಎನ್ನುವ ಸಂವಿಧಾನದ ಆಶಯವನ್ನು ಬಿಜೆಪಿ ಸರಕಾರ ಪಾಲನೆ ಮಾಡುತ್ತಿಲ್ಲ.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಎಂಬುವುದು ಬಹಳ ಅಮೂಲ್ಯ.ಪ್ರತಿಯೊಬ್ಬ ಪ್ರಜೆಯೂ ತನಗೆ ಅವಶ್ಯಕವಾದ ಮೂಲ ಸೌಕರ್ಯವನ್ನು ಪಡೆಯುವ ಸಲುವಾಗಿ ಆಯ್ಕೆ ಮಾಡುವ ಹಕ್ಕನ ಮತದಾನ ನೀಡಿದ್ದು,ಇದನ್ನು ಚಲಾಯಿಸುವುದರ ಮೂಲಕ ದೇಶದ ಅಭಿವೃದ್ಧಿಗೆ ಮಾರಕವಾಗಿರುವ ಬಿಜೆಪಿ ಸರಕಾರವನ್ನು ಕಿತ್ತೊಗೆದು, ಸರ್ವರನ್ನು ಒಂದೆಡೆ ತಂದು ಸರ್ವರಿಗೂ ಸಮ ಸಮಾಜ ನ್ಯಾಯವನ್ನು ನೀಡುವ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ಮನವಿ ಮಾಡಿದರು.
ದಸಂಸ ಜಿಲ್ಲಾ ಸಂಚಾಲಕ ಶಿವಶಂಕರ್ ಮಾತನಾಡಿ,ಕೋಮುವಾದಿ ಅಧಿಕಾರಿಗಳಿಗೆ ಬಿಜೆಪಿ ಪಕ್ಷ ಬಡ್ತಿ ನೀಡಿ ನಿಷ್ಟಾವಂತರನ್ನು ಸೇವೆಯಿಂದ ಅಮಾನತ್ತುಗೊಳಿಸಿ,ಇಲ್ಲವೇ ಕಡ್ಡಾಯ ನಿವೃತ್ತಿ ಅಥವಾ ಜೈಲಿಗೆ ಅಟ್ಟಲಾಯಿತು. ಬಿಜೆಪಿ ಈ ನೀತಿಗಳ ವಿರುದ್ಧ ಧ್ವನಿ ಎತ್ತಿದ ಪರ್ತಕರ್ತರನ್ನು ಜೈಲಿಗೆ ಕಳುಹಿಸಲಾಯಿತು.ಚುನಾವಣಾ ಬಾಂಡ್ ದೊಡ್ಡ ಹಗರಣವಾಗಿದೆ. ಇದರ ವಿರುದ್ಧ ಸುಪ್ರೀಂ ಕೋರ್ಟ್ ಸಹ ಛೀಮಾರಿ ಹಾಕಿದರೂ, ಇದುವರೆಗೂ ಅದರ ಬಗ್ಗೆ ಬಾಯಿ ಬಿಡುತ್ತಿಲ್ಲ.ಐಟಿ,ಇಡಿ, ಸಿಬಿಐ ಮೂಲಕ ವಿರೋಧಪಕ್ಷಗಳಿಗೆ ಭಯ ಹುಟ್ಟಿಸಿ, ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿರುವ ಬಿಜೆಪಿಯಿಂದ ಸಂವಿಧಾನವನ್ನು ಉಳಿಸುವ ನಿಟ್ಟಿನಲ್ಲಿ ಎಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮುಖಂಡರುಗಳಾದ ಹನುಮಂತರಾಯಪ್ಪ,ಗಂಗಾಧರ್,ಶಿವಬುದ್ಧಿ,ದಂಡಿನಶಿವರ ಎಂ.ಕುಮಾರ್, ನಾಗರಾಜು ಉಪ್ಪಾರಳ್ಳಿ,ನಾಗತ್ತಿಹಳ್ಳಿ ಕೃಷ್ಣಮೂರ್ತಿ,ಜಿಲ್ಲಾ ಖಜಾಂಚಿ ನಾರಾಯಣ್‍ರಾಜು, ಕಾನೂನು ಸಲಹೆಗಾರರಾದ ಶ್ರೀನಿವಾಸ್.ಬಿ.ಟಿ, ತಿಪಟೂರಿನ ಡಾ.ವೆಂಕಟೇಶ್, ಲೋಕೇಶ್, ಹರೀಶ್ ಮತ್ತಿತರರು ಉಪಸ್ಥಿತರಿದ್ದರು.