ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಸಚಿವರ ರಾಜೀನಾಮೆಗೆ ಆಗ್ರಹ

ತುಮಕೂರು:ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಕೇಂದ್ರ ಸರಕಾರ ತನಿಖೆ ನಡೆಸಲು ಸಮಿತಿ ಯೊಂದನ್ನು ರಚಿಸಬೇಕು.ಆ ಮೂಲಕ ಅನ್ಯಾಯಕ್ಕೆ ಒಳಗಾಗಿರುವ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು ಹಾಗೂ ಪ್ರಕರಣದ ಹೊಣೆ ಹೊತ್ತು ಕೇಂದ್ರ ಮಾನವ ಸಂಪನ್ಮೂಲ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಇಂದು ಸ್ಟೂಡೆಂಟ್ ಇಸ್ಲಾಮಿಕ್ ಆಗನೈಜೇಷನ್ ವತಿಯಿಂದ ನಗರದ ಟೌನ್‍ಹಾಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಎಸ್.ಐ.ಓನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಮದ್ ಕೈಫ್, ಕೇಂದ್ರ ಸರಕಾರ ವಿದ್ಯಾರ್ಥಿಗಳ ಜೀವನದ ಜೊತೆ ಚಲ್ಲಾಟವಾಡುತ್ತಿದೆ.ಕಳೆದ ನಾಲ್ಕು ನೀಟ್ ಪರೀಕ್ಷೆಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಯಾಗಿರುವ ಅನುಮಾನಗಳಿದ್ದರೂ ಕೇಂದ್ರ ಸರಕಾರ ಅದನ್ನು ನಿರಾಕರಿಸಿತ್ತು.ಆದರೆ ಈ ಬಾರಿಯ ನೀಟ್ ಪ್ರಶ್ನೆ ಪತ್ರಿಕೆ ಸೋರಿಯಾಗಿರುವುದನ್ನು ಸ್ವತಹಃ ಹೆಚ್.ಆರ್.ಡಿ. ಮಂತ್ರಿಗಳು ಒಪ್ಪಿಕೊಂಡಿದ್ದಾರೆ.ಪ್ರಕರಣದ ಸಂಬಂಧ ಬಿಜೆಪಿ ಪಕ್ಷದ ಹಲವರನ್ನು ಬಂಧಿಸಲಾಗಿದೆ.ಇದನ್ನು ನೋಡಿದರೆ ನೀಟ್ ಪರೀಕ್ಷೆಯ ಮೂಲಕ ಬಡವರ ಮಕ್ಕಳು ವೈದ್ಯರಾಗದಂತೆ ತಡೆಯುವ ಪ್ರಯತ್ನವನ್ನು ಬಿಜೆಪಿ ನಡೆಸುತ್ತಿರುವುದು ಸ್ಪಷ್ಟವಾಗುತ್ತಿದೆ ಎಂದರು.

ವೈದ್ಯನಾಗಬೇಕೆಂಬ ಕನಸಿನೊಂದಿಗೆ ಕಷ್ಟಪಟ್ಟು ಓದಿ,ಪರೀಕ್ಷೆ ಬರೆದ ಸುಮಾರು 24 ಲಕ್ಷ ವಿದ್ಯಾರ್ಥಿಗಳು ಅತಂತ್ರ ಪರಿಸ್ಥಿತಿ ಎದುರಿಸುತ್ತಿದ್ದಾರೆ.ಅವರ ಭವಿಷ್ಯದೊಂದಿಗೆ ಕೇಂದ್ರ ಸರಕಾರ ಚಲ್ಲಾಟವಾಡುತ್ತಿದೆ.ಹಾಗಾಗಿ ಪ್ರಕರಣವನ್ನು ಉನ್ನತ ಮಟ್ಟದ ಸಮಿತಿ ರಚಿಸಿ ತನಿಖೆಗೆ ಒಪ್ಪಿಸಬೇಕು.ಪ್ರಕರಣದ ಹೊಣೆ ಹೊತ್ತು ಕೇಂದ್ರದ ಶಿಕ್ಷಣ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು,ಪ್ರಧಾನಮಂತ್ರಿಗಳು ವಿದ್ಯಾರ್ಥಿಗಳ ಸಮಸ್ಯೆ ಕುರಿತು ಮಾತನಾಡಬೇಕು ಹಾಗೂ ಎಲ್ಲಾ ವಿದ್ಯಾರ್ಥಿಗಳ ಹಿತದೃಷ್ಟಿ ಯಿಂದ ನೀಟ್ ಮರು ಪರೀಕ್ಷೆ ನಡೆಸಬೇಕೆಂಬುದು ಎಸ್.ಐ.ಓ ಒತ್ತಾಯವಾಗಿದೆ ಎಂದು ಮಹಮದ್ ಕೈಫ್ ತಿಳಿಸಿದರು.
ಸಾಮಾಜಿಕ ಹೋರಾಟಗಾರ ತಾಜುದ್ದೀನ್ ಷರೀಫ್ ಮಾತನಾಡಿ,ಕೇಂದ್ರ ಸರಕಾರ ನೇಮಿಸಿದ ಎನ.ಟಿ.ಎ ಸಂಸ್ಥೆಯಿಂದ ನೀಟ್ ಪರೀಕ್ಷೆ ಬರೆದ ಆರ್ಹ ಅಭ್ಯರ್ಥಿಗಳಿಗೆ ಸಾಕಷ್ಟು ತೊಂದರೆಯಾಗಿದೆ.ಕೆಲವರಿಗೆ ಲಾಭ ಮಾಡಿಕೊಡುವ ಉದ್ದೇಶ ದಿಂದ ಬಿಜೆಪಿಯ ಶಾಸಕರು,ಸಂಸದರ ಅಧೀನದ ಶಿಕ್ಷಣ ಸಂಸ್ಥೆಗಳು ಮತ್ತು ನೀಟ್ ಕೋಚಿಂಗ್ ಸೆಂಟರ್‍ಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿ ಲಕ್ಷಾಂತರ ಮಕ್ಕಳ ವೈದ್ಯಕೀಯ ಕನಸಿಗೆ ಕೊಳ್ಳಿ ಇಡಲಾಗಿದೆ.ಇದು ನಿಜಕ್ಕೂ ಖಂಡನೀಯ. ಕೂಡಲೇ ಕೇಂದ್ರ ಹೆಚ್.ಆರ್.ಡಿ. ಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.ಪರೀಕ್ಷಾ ಪೇ ಚರ್ಚೆ ಎಂದು ಷೋ ಕೋಡುವ ಪ್ರಧಾನ ಮಂತ್ರಿಗಳು ಮಕ್ಕಳಿಗೆ ಮತ್ತು ಅವರ ಪೋಷಕರ ಆಂತಕವನ್ನು ದೂರ ಮಾಡುವ ನಿಟ್ಟಿನಲ್ಲಿ ಸೂಕ್ತ ತನಿಖೆ ನಡೆಸಿ, ತಪಿತಸ್ಥರ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಬೇಕು.ಅಲ್ಲದೆ ಏಕಾಎಕಿ ಯುಜಿಸಿ ನೆಟ್ ಪರೀಕ್ಷೆ ರದ್ದಾಗಿರುವ ಪರಿಣಾಮ ಕಷ್ಟಪಟ್ಟು ಓದಿ ಪರೀಕ್ಷೆ ಬರೆಯಲು ತಯಾರಿದ್ದ ವಿದ್ಯಾರ್ಥಿಗಳಿಗೆ ಆಗಿರುವ ತೊಂದರೆಯನ್ನು ಅರಿತು ಅವರಿಗೆ ನ್ಯಾಯ ಒದಗಿಸಬೇಕೆಂಬುದು ನಮ್ಮಗಳ ಒತ್ತಾಯವಾಗಿದೆ ಎಂದರು.

ಕಾನೂನು ವಿದ್ಯಾರ್ಥಿನಿ ಹಾಗೂ ಸಾಮಾಜಿಕ ಹೋರಾಟಗಾರತಿ ದೀಪಿಕಾ ಮರಳೂರು ಮಾತನಾಡಿ,ಕಷ್ಟಪಟ್ಟು ಪರೀಕ್ಷೆ ಬರೆದು ವೈದ್ಯನಾಗಿ ರೋಗಿಗಳ ಸೇವೆ ಮಾಡುವ ಬದಲು,ವಾಮ ಮಾರ್ಗದಿಂದ,ಲಕ್ಷಾಂತರ ರೂ ನೀಡಿ,ಪ್ರಶ್ನೆ ಪತ್ರಿಕೆ ಖರೀದಿಸಿ ವೈದ್ಯನಾಗುವ ವ್ಯಕ್ತಿಯಿಂದ ಯಾವ ರೀತಿಯ ಸೇವೆಯನ್ನು ನಿರೀಕ್ಷಿಸಲು ಸಾಧ್ಯ.ಈ ವಿಚಾರದಲ್ಲಿ ಸರಕಾರಕ್ಕೆ ಮಾತನಾಡಲು ನೈತಿಕತೆಯೇ ಇಲ್ಲ.ಕೂಡಲೇ ಶಿಕ್ಷಣ ಮಂತ್ರಿಗಳು ರಾಜೀನಾಮೆ ನೀಡಿ,ಮರು ಪರೀಕ್ಷೆ ನಡೆಸುವ ಮೂಲಕ ನೊಂದು,ಆತ್ಮಹತ್ಯೆಯ ಹಾದಿ ಹಿಡಿಯುತ್ತಿರುವ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವ ಕೆಲಸವನ್ನು ಸರಕಾರ ಮಾಡಬೇಕೆಂದು ಆಗ್ರಹಿಸಿದರು.

ಯುಜಿಸಿ ನೆಟ್ ಪರೀಕ್ಷೆಗೆ ತಯಾರಾಗಿದ್ದ ಎಂಬಿಎ ವಿದ್ಯಾರ್ಥಿನಿ ಮದೀಹ ಮಾತನಾಡಿ,ಕಳೆದ ಒಂದು ವರ್ಷದಿಂದ ಉಪನ್ಯಾಸಕಿಯಾಗಬೇಕೆಂಬ ಕನಸಿನೊಂದಿಗೆ ಎರಡು ಮಕ್ಕಳ ತಾಯಿಯಾದ ನಾನು ಮಕ್ಕಳನ್ನು ಸಂಬಾಳಿಸಿಕೊಂಡು ಕಷ್ಟಪಟ್ಟು ಓದಿ, 20 ಕಿ.ಮಿ.ಪ್ರಯಾಣಿಸಿ ಪರೀಕ್ಷಾ ಕೇಂದ್ರಕ್ಕೆ ಹೋದರೆ,ಪರೀಕ್ಷೆ ರದ್ದಾಗಿತ್ತು. ನನ್ನ ಜಂಗಾಭಲವೇ ಹುಡುಗಿ ಹೋದಂತಾಗಿದೆ.ಸರಕಾರ ವಿದ್ಯಾರ್ಥಿಗಳ ವಿಷಯದಲ್ಲಿ ಚಲ್ಲಾಟವಾಡುತ್ತಿದೆ.ನನ್ನಂತಹ ಲಕ್ಷಾಂತರ ಮಂದಿಯ ಕನಸುಗಳನ್ನು ಸುಟ್ಟು ಹಾಕಿದೆ.ಸರಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ,ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸಬೇಕೆಂಬುದು ನನ್ನ ಮನವಿಯಾಗಿದೆ.ಇದರ ವಿರುದ್ದ ಇಡೀ ದೇಶದ ವಿದ್ಯಾರ್ಥಿ ಸಮೂಹ ದ್ವನಿ ಎತ್ತಬೇಕಾಗಿದೆ ಎಂದರು.

ಪ್ರತಿಭಟನೆಯಲ್ಲಿ ಎಸ್.ಐ.ಓ ಜಿಲ್ಲಾಧ್ಯಕ್ಷ ಮಹಮದ್ ಖಲೀಲ್ ಖಾನ್,ಸಹ ಕಾರ್ಯದರ್ಶಿ ಮಹಮದ್ ಜಲೀಲ್,ಜಮಾಆತ್‍ನ ಸ್ಥಾನಿಕ ಅಧ್ಯಕ್ಷರಾದ ಅಸಾದುಲ್ಲಾಖಾನ್,ಮದೀಹ, ಹಮೀನ, ತಮನ್ನಾ,ಮಸಿಹಾ, ಇಲ್ಲಾಮ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *