ಅಭಿವೃದ್ಧಿಯಲ್ಲಿ ರಾಜಕಾರಣ ಬೇಡ: ಕೇಂದ್ರ ಸಚಿವ ವಿ.ಸೋಮಣ್ಣ

ತುಮಕೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಂದೇ ನಾಣ್ಯದ ಎರಡು ಮುಖಗಳಂತೆ ಒಂದಾಗಿ ಕೆಲಸ ಮಾಡಿದರೆ ಮಾತ್ರ ಅಭಿವೃದ್ಧಿ ಸಾಧ್ಯ, ಈ ನಿಟ್ಟಿನಲ್ಲಿ ನಾನೂ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಒಂದಾಗಿ ಅಭಿವೃದ್ಧಿ ಕಾರ್ಯ ಮಾಡುತ್ತೇವೆ. ಕೇಂದ್ರ ಸರ್ಕಾರದ ಜೊತೆ ನೀವು ಎಷ್ಟು ದೂರ ಹೋಗುವಿರೊ ಸರ್ಕಾರ ಅಷ್ಟು ದೂರ, ನೀವು ಎಷ್ಟು ಹತ್ತಿರಬರುವಿರೋ ಅಷ್ಟು ಹತ್ತಿರ ಕೇಂದ್ರ ಸರ್ಕಾರ ಬರುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯ್ತಿ ಸಿಇಒಗೆ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.

ಶನಿವಾರ ತುಮಕೂರು ಗ್ರಾಮಾಂತರ ಕ್ಷೇತ್ರದ ಪಂಡಿತನಹಳ್ಳಿ ಹಾಗೂ ಹೆಗ್ಗೆರೆಯಲ್ಲಿ ರೈಲ್ವೆ ಗೇಟ್ ಭಾಗದಲ್ಲಿ ಮೇಲ್ಸೆತುವೆ ನಿರ್ಮಾಣ ಹಾಗೂ ತಿಮ್ಮರಾಜನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಸಂತನರಸಾಪುರದ ಕೈಗಾರಿಕಾ ಪ್ರದೇಶದ ಒಂದನೇ ಹಂತದ ಪ್ಲಾಟ್ ನಂ. 161 ಇ2ರಲ್ಲಿ ಕೋಟಿ ರೂ. ವೆಚ್ಚದ 480 ಹಾಸಿಗೆಗಳ ಏಳು ಹಂತಸ್ತಿನ ಉದ್ಯೋಗಿತ ಮಹಿಳೆಯರ ವಸತಿ ನಿಲಯ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ವಿ.ಸೋಮಣ್ಣ, ನಮ್ಮ ಕೇಂದ್ರ ಸರ್ಕಾರ 490 ಕಡೆ 5 ಲಕ್ಷ ಉದ್ಯೋಗಸ್ಥ ಮಹಿಳೆಯರಿಗೆ ವಸತಿ ನಿಲಯಗಳನ್ನು ನಿರ್ಮಿಸಿದೆ ಎಂದರು.

ತುಮಕೂರು ವಿಶ್ವವಿದ್ಯಾಲಯ ಕ್ಯಾಂಪಸ್‍ನಲ್ಲಿ ಉದ್ಯೋಗಿ ಹೆಣ್ಣುಮಕ್ಕಳ ವಸತಿ ನಿಲಯ ನಿರ್ಮಾಣಕ್ಕಾಗಿ ಒಂದು ತಿಂಗಳಲ್ಲಿ 40 ಕೋಟಿ ರೂ. ಬಿಡುಗಡೆ ಮಾಡುವುದಾಗಿ ಹೇಳಿದ ಸಚಿವರು, ಇಂತಹ ಕಾರ್ಯಕ್ರಮಗಳು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮಹಿಳಾ ಸಬಲೀಕರಣದ ಹೊಸ ಸಂದೇಶ ಎಂದರು.
ರೈಲ್ವೆ ಗೇಟ್‍ನಿಂದ ಸಾರ್ವಜನಿಕರಿಗೆ ಎಷ್ಟು ತೊಂದರೆ ಆಗುತ್ತಿದೆ ಎಂದು ತಮಗೆ ಗೊತ್ತಿದೆ. ಜಿಲ್ಲೆಯ ಎಲ್ಲಾ ರೈಲ್ವೆ ಗೇಟ್‍ಗಳನ್ನು ತೆರವುಗೊಳಿಸಿ ಅಲ್ಲಿ ಮೇಲ್ಸೇತುವೆ, ಕೆಳಸೇತುವೆ ನಿರ್ಮಾಣ ಮಾಡಿ ಜನರಿಗೆ ಅನುಕೂಲ ಮಾಡಲಾಗುವುದು. ಮುಂದಿನ ತಿಂಗಳು ನಾಲ್ಕು ಸೇತುವೆಗಳನ್ನು ಲೋಕಾರ್ಪಣೆ ಮಾಡಲಾಗುವುದು. ರೈಲ್ವೆ ಇಲಾಖೆಯಲ್ಲಿ ಜಿಲ್ಲೆಯ ವಿವಿಧ ಕಾಮಗಾರಿಗಳಿಗೆ 575 ಕೋಟಿ ರೂ. ಖರ್ಚು ಮಾಡಲಾಗಿದೆ. 89 ಕೋಟಿ ರೂ. ವೆಚ್ಚದಲ್ಲಿ ತುಮಕೂರು ರೈಲು ನಿಲ್ದಾಣ, 24 ಕೊಟಿ ರೂ.ಗಳಲ್ಲಿ ತಿಪಟೂರು ನಿಲ್ದಾಣ ಹಾಗೂ 13 ಕೋಟಿ ರೂ, ವೆಚ್ಚದಲ್ಲಿ ಗುಬ್ಬಿ ರೈಲ್ವೆ ನಿಲ್ದಾಣವನ್ನು ಆಧುನೀಕರಣಗೊಳಿಸಲಾಗುತ್ತದೆ ಎಂದು ಸಚಿವ ಸೋಮಣ್ಣ ಹೇಳಿದರು.

ಕೊಡಬೇಕಾದ ಜಿಎಸ್‍ಟಿ ಹಣ ಕೊಡಿ: ಡಾ.ಪರಮೇಶ್ವರ್

ಹೆಗ್ಗೆರೆ ಸಮಾರಂಭದಲ್ಲಿ ಮಾತನಾಡಿದ ರಾಜ್ಯದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಂದೇ ನಾಣ್ಯದ ಎರಡು ಮುಖಗಳಾಗಿ ಕೆಲಸ ಮಾಡಿದರೆ ಜನರ ಕೆಲಸ ಮಾಡಲು ಸಾಧ್ಯವಾಗುತ್ತದೆ. ಇಲ್ಲವಾದರೆ ಕೆಲಸಕಾರ್ಯಗಳು ಕುಂಠಿತವಾಗುತ್ತವೆ. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡಿಕೊಂಡು ಹೋಗಬೇಕು ಎಂದರು.

ರಾಜ್ಯದಿಂದ ಕೇಂದ್ರ ಸರ್ಕಾರಕ್ಕೆ 4.5 ಲಕ್ಷ ಕೋಟಿ ರೂ. ಜಿಎಸ್‍ಟಿ ಸಂಗ್ರಹವಾಗಿದೆ. ದೇಶದಲ್ಲಿ ಅತಿ ಹೆಚ್ಚು ಜಿಎಸ್‍ಟಿ ಪಾವತಿಸಿದ ಎರಡನೇ ರಾಜ್ಯ ಕರ್ನಾಟಕ ಆಗಿದೆ. ಆದರೆ ಕೇಂದ್ರ ಸರ್ಕಾರವು ರಾಜ್ಯಕ್ಕೆ ಕೊಡಬೇಕಾದ ಜಿಎಸ್‍ಟಿ ಹಣ ಕೊಟ್ಟಿಲ್ಲ. ನಾವು ಕೊಟ್ಟ 4.5 ಲಕ್ಷ ಕೋಟಿ ರೂ.ಗಳಿಗೆ ಕೇಂದ್ರ ಕೊಟ್ಟಿರುವುದು ಕೇವಲ 50 ಸಾವಿರ ಕೋಟಿ ರೂ. ಮಾತ್ರ. ನಮಗೆ ಬರಬೇಕಾದನ್ನು ಪಡೆಯಲು ಹೋರಾಟ ಮಾಡಿಯೋ, ಮನವಿ ಮಾಡಿಯೋ ಪಡೆಯುವ ಕೆಲಸದಲ್ಲಿ ಪಕ್ಷಾತೀತವಾಗಿ ಪ್ರಯತ್ನ ಮಾಡಬೇಕು ಎಂದು ಸಚಿವ ಡಾ.ಪರಮೇಶ್ವರ್ ಹೇಳಿದರು.

ಸುಸಜ್ಜಿತ ಮಹಿಳಾ ವಸತಿ ನಿಲಯ

ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದ ಕ್ಷೇತ್ರದ ಶಾಸಕ ಬಿ.ಸುರೇಶ್‍ಗೌಡರು, ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿ ಉದ್ಯೋಗ ಮಾಡುವ ಹೆಣ್ಣುಮಕ್ಕಳಿಗೆ ವಸತಿ ಕಲ್ಪಿಸಲು ಸುಸಜ್ಜಿತ ವಸತಿ ನಿಲಯ ನಿರ್ಮಾಣ ಮಾಡಲಾಗುತ್ತಿದೆ. 20 ಕೋಟಿ ರೂ. ವೆಚ್ಚದಲ್ಲಿ ನೆಲ ಮಹಡಿ ಹಾಗೂ ಆರು ಮೇಲ್ಮಹಡಿ ಒಳಗೊಂಡ 480 ಹಾಸಿಗೆಗಳುಳ್ಳ ಕಟ್ಟಡ ನಿರ್ಮಾಣದ ಜೊತೆಗೆ ಉದ್ಯೋಗಿತ ಮಹಿಳೆಯರಿಗೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಲಾಗುತ್ತದೆ. 14ನೇ ಜನವರಿ 2027ಕ್ಕೆ ಪೂರ್ಣಗೊಳಿಸಲು ಗುರಿ ಹೊಂದಲಾಗಿದೆ. ಇದರಿಂದ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಉದ್ಯೋಗ ಮಾಡುವ ಹೆಣ್ಣುಮಕ್ಕಳಿಗೆ ವಸತಿ ಕಲ್ಪಿಸಲಾಗುವುದು ಎಂದು ಹೇಳಿದರು.

ವಸಂತನರಸಾಪುರದಲ್ಲಿ ಕೈಗಾರಿಕೆ ಸ್ಥಾಪನೆಗೆ 13 ಸಾವಿರ ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ ವಿ.ಸೋಮಣ್ಣ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಅವರು ಮನಸು ಮಾಡಿ ಇಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೈಗಾರಿಕಗಳು ಸ್ಥಾಪನೆಯಾಗಿ ಕನಿಷ್ಠ 10 ಸಾವಿರ ಜನರಿಗೆ ಉದ್ಯೋಗ ದೊರೆಯಲು ಅವಕಾಶ ಮಾಡಬೇಕು ಎಂದು ಮನವಿ ಮಾಡಿದರು.

ಬೆಂಗಳೂರಿನಲ್ಲಿ ಒತ್ತಡ ಜಾಸ್ತಿಯಾಗಿ ತುಮಕೂರು ನಗರವು ರಾಜಧಾನಿಗೆ ಪರ್ಯಾಯ ಬೆಳವಣಿಗೆಯಾಗಿ ಬೆಳೆಯುತ್ತಿದೆ. ಈ ಬೆಳವಣಿಗೆಗೆ ಪೂರಕವಾಗಿ ಇಲ್ಲಿ ಕೈಗಾರಿಕೆಗಳ ಸ್ಥಾಪನೆ ಮೂಲಕ ಉದ್ಯೋಗ ಸೃಷ್ಟಿ, ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಲು ಆದ್ಯತೆ ನೀಡಬೇಕು. ತುಮಕೂರು ನಗರದ ಭಾಗವಾಗಿ ಬೆಳೆಯುತ್ತಿರುವ ಹೆಗ್ಗೆರೆ ಪಂಚಾಯ್ತಿಯನ್ನು ತುಮಕೂರು ನಗರಪಾಲಿಕೆ ವ್ಯಾಪ್ತಿಗೆ ಸೇರಿಸಲು ಸಚಿವ ಡಾ.ಜಿ.ಪರಮೇಶ್ವರ್ ಉತ್ಸುಕರಾಗಿದ್ದಾರೆ. ಸೇರಿಸಲು ಅಭ್ಯಂತರವಿಲ್ಲ, ತಮ್ಮ ಹುಟ್ಟೂರಾದ ಹೆಗ್ಗೆರೆಗೆ ಹೆಚ್ಚಿನ ಅನುಕೂಲ ಮಾಡಿಕೊಡಲು ಸಚಿವ ಡಾ.ಪರಮೇಶ್ವರ್ ಆಸಕ್ತಿವಹಿಸಲು ಎಂದು ಸುರೇಶ್‍ಗೌಡರು ವಿನಂತಿಸಿದರು.

ವಿ.ಸೋಮಣ್ಣನವರು ಸಚಿವರಾದ ನಂತರ ಜಿಲ್ಲೆಯ ರೈಲ್ವೆ ಯೋಜನೆಗಳು ವೇಗ ಕಂಡಿವೆ. ತುಮಕೂರು-ರಾಯದುರ್ಗ, ತುಮಕೂರು-ದಾವಣಗೆರೆ ರೈಲ್ವೆ ಮಾರ್ಗ ಕಾಮಗಾರಿಗಳು ತ್ವರಿತವಾಗಿ ಮುಂದುವರೆದಿವೆ. ಸಚಿವರ ಅಧಿಕಾರವಧಿಯಲ್ಲಿ ಈ ಮಾರ್ಗಗಳಲ್ಲಿ ರೈಲು ಸಂಚಾರ ಆರಂಭವಾಗುತ್ತದೆ. ಇದಲ್ಲದೆ, ಜಿಲ್ಲೆಯ ಎಲ್ಲಾ ರೈಲ್ವೆ ಗೇಟ್‍ಗಳನ್ನು ತೆರವುಗೊಳಿಸಿ ಅಲ್ಲಿ ಕೆಳಸೇತುವೆ, ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ್ದಾರೆ ಎಂದು ಶ್ಲಾಘಿಸಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಶುಭಾ ಕಲ್ಯಾಣ್, ಜಿಲ್ಲಾ ಪಂಚಾಯಿತಿ ಸಿಇಒ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ, ರೈಲ್ವೆ ಇಲಾಖೆ ಸಿಎಓ ಅಜಯ್ ಶರ್ಮಾ, ಎಡಿಆರ್‍ಎಂ ಪ್ರವೀಣ್, ಡಿವೈಸಿ ಪ್ರಸಾದ್, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ, ವಸಂತನರಸಾಪುರ ಕೈಗಾರಿಕೆಗಳ ಸಂಘದ ಅಧ್ಯಕ್ಷ ಹರೀಶ್ ಮೊದಲಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *