ಹೊರಗಿನವನಲ್ಲ, ಒಳಗಿನವನು-ಅಂತೆಕಂತೆ ನಂಬಬೇಡಿ -ವಿ.ಸೋಮಣ್ಣ

ತುಮಕೂರು: ನಾನು ತುಮಕೂರು ಕ್ಷೇತ್ರದ ಹೊರಗಿನವನಲ್ಲ, ಒಳಗಿನವನು. ಚುನಾವಣೆ ಮುಗಿದ ನಂತರವೂ ತುಮಕೂರಿನಲ್ಲೇ ವಾಸ ಮಾಡುತ್ತೇನೆ, ಇಲ್ಲೇ ಮನೆ ಮಾಡಿದ್ದೇನೆ. ಸದಾ ನಿಮ್ಮ ಜೊತೆ ಒಡನಾಟ ಇಟ್ಟುಕೊಳ್ಳುತ್ತೇನೆ. ವಿರೋಧಿಗಳ ಅಂತೆ ಕಂತೆಗಳಿಗೆ ಕಿವಿಗೊಡಬಾರದು ಎಂದು ಲೋಕಸಭಾ ಕ್ಷೇತ್ರದ ಎನ್.ಡಿ.ಎ ಅಭ್ಯರ್ಥಿ ವಿ.ಸೋಮಣ್ಣ ಹೇಳಿದರು.

ಶುಕ್ರವಾರ ಸಂಜೆ ಹೆಬ್ಬೂರಿನಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರ ಸಮನ್ವಯ ಸಭೆಯಲ್ಲಿ ಮಾತನಾಡಿದ ವಿ.ಸೋಮಣ್ಣ, ಕ್ಷೇತ್ರದ ಎಂಟು ವಿಧಾನ ಸಭಾ ಕ್ಷೇತ್ರಗಳಲ್ಲೂ ಅಲ್ಲಿನ ಆದ್ಯತೆಗಳಿಗೆ ಅನುಗುಣವಾಗಿ ಅಭಿವೃದ್ಧಿ ಕೆಲಸ ಮಾಡಲು ಒತ್ತು ನೀಡುತ್ತೇನೆ. ತುಮಕೂರು ಕ್ಷೇತ್ರವನ್ನು ಅಭಿವೃದ್ಧಿಯಲ್ಲಿ ಮಾದರಿ ಕ್ಷೇತ್ರ ಮಾಡುವ ಸಂಕಲ್ಪ ಮಾಡಿದ್ದೇನೆ ಎಂದರು.

ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ಮಾಡಿರುವ ಕಾರಣ ಮತಯಂತ್ರದಲ್ಲಿ ಜೆಡಿಎಸ್‍ನ ತೆನೆ ಹೊತ್ತ ಮಹಿಳೆಯ ಚಿಹ್ನೆ ಇರುವುದಿಲ್ಲ, ಗೊಂದಲಕ್ಕೀಡಾಗದೆ ಮೈತ್ರಿ ಅಭ್ಯರ್ಥಿಯಾಗಿರುವ ಕಮಲದ ಚಿಹ್ನೆಗೆ ಮತ ನೀಡಿ ನನಗೆ ಆಶೀರ್ವಾದ ಮಾಡಬೇಕು. ದೇವೇಗೌಡರು ಸೇರಿದಂತೆ ದೇಶದ ಹಲವಾರು ನಾಯಕರ ಆಶಯದಂತೆ ನರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನಿ ಮಾಡಲು ಸಹಕರಿಸಬೇಕು ಎಂದು ಕೋರಿದರು.

ಶಾಸಕ ಸುರೇಶ್‍ಗೌಡರು ಮಾತನಾಡಿ, ಗ್ರಾಮಾಂತರದಲ್ಲಿ ಕಾಂಗ್ರೆಸ್ ಇಲ್ಲ, ಈ ಹಿಂದೆ ಜೆಡಿಎಸ್ ಅಭ್ಯರ್ಥಿಯಾಗಿದ್ದವರು ಕಾಂಗ್ರೆಸ್ ಸೇರಿದ್ದಾರೆ. ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರು ವಿಚಲಿತರಾಗಬೇಡಿ, ಬಿಜೆಪಿ ಕಾರ್ಯಕರ್ತರಷ್ಟೇ ಪ್ರೀತಿಯಿಂದ ಜೆಡಿಎಸ್ ಕಾರ್ಯಕರ್ತರಿಗೆ ಸ್ಪಂದಿಸುತ್ತೇನೆ ಎಂದು ಭರವಸೆ ನೀಡಿದರು.

ಎನ್.ಡಿ.ಎ ಅಭ್ಯರ್ಥಿಯಾಗಿರುವ ವಿ.ಸೋಮಣ್ಣ ಅವರು ಸಮರ್ಥ ನಾಯಕರು. ಏಳು ಬಾರಿ ಶಾಸಕರಾಗಿ, ಐದು ಬಾರಿ ಸಚಿವರಾಗಿ ಕೆಲಸ ಮಾಡಿದ ಅನುಭವಿ ನಾಯಕರು. ಅಂದುಕೊಂಡಿದ್ದನ್ನು ಸಾಧಿಸಿಯೇ ತೀರುವ ಛಲವಾದಿ, ಇಂತಹವರು ಕ್ಷೇತ್ರದ ಸಂಸದರಾಗಬೇಕು ಎಂದು ಬಿಜೆಪಿ ನಾಯಕರ ಜೊತೆಗೆ ದೇವೇಗೌಡರೂ ಸೋಮಣ್ಣರನ್ನು ಆಯ್ಕೆ ಮಾಡಿದರು. ಸೂರ್ಯ, ಚಂದ್ರ ಇರುವುದು ಎಷ್ಟು ಸತ್ಯವೋ ಸೋಮಣ್ಣನವರು ಈ ಬಾರಿ ಗೆದ್ದು ಸಂಸದರಾಗುವುದು ಅಷ್ಟೇ ಸತ್ಯ ಎಂದರು.

ತುಮಕೂರು ಕ್ಷೇತ್ರದ ಉಸ್ತುವಾರಿ, ಮಾಜಿ ಸಚಿವ ಗೋಪಾಲಯ್ಯ ಮಾತನಾಡಿ, ಈ ದೇಶವನ್ನು ಮುನ್ನಡೆಸಲು ನರೇಂದ್ರ ಮೋದಿಯವರೇ ಸಮರ್ಥ ನಾಯಕರು ಎಂದು ಮಾಜಿ ಪ್ರಧಾನಿ, 91ನೇ ವಯಸ್ಸಿನ ದೇವೇಗೌಡರು ತೀರ್ಮಾನ ತೆಗೆದುಕೊಂಡಿದ್ದಾರೆಂದರೆ ಅದರ ಹಿಂದೆ ಮಹತ್ವವಾದ ತೀರ್ಮಾನವಿದೆ. ಸೋಮಣ್ಣರನ್ನು ಗೆಲ್ಲಿಸಿ ದೇವೇಗೌಡರ ಆಶಯ ಈಡೇರಿಸಬೇಕು, ಅವರ ಗೌರವ ಕಾಪಾಡುವ ಕೆಲಸ ಮಾಡಬೇಕು ಎಂದು ಪಣ ತೊಡುವಂತೆ ಕರೆ ನೀಡಿದರು.

ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಆಂಜನಪ್ಪ ಮಾತನಾಡಿ, ಕಳೆದ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡ ಕಾಂಗ್ರೆಸ್‍ನವರು ದೇವೇಗೌಡರನ್ನು ತುಮಕೂರಿಗೆ ಕರೆದು ತಂದು ಕುತಂತ್ರ ಮಾಡಿ ಸೋಲಿಸಿ ಅವಮಾನ ಮಾಡಿದರು, ಈ ಚುನಾವಣೆಯಲ್ಲಿ ಸೋಮಣ್ಣರನ್ನು ಆಯ್ಕೆ ಮಾಡಿ ದೇವೇಗೌಡರ ಸೋಲಿಗೆ ಸೇಡು ತೀರಿಸಿಕೊಳ್ಳಲು ಎಲ್ಲರೂ ಸಂಕಲ್ಪ ಮಾಡಬೇಕು ಎಂದರು.

ತಾಲ್ಲೂಕು ಬಿಜೆಪಿ ಅಧ್ಯಕ್ಷ ಶಂಕರ್, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ನಾಗವಲ್ಲಿ ರಾಮಣ್ಣ, ಮಾಜಿ ಶಾಸಕ ನೆ.ಲ.ನರೇಂದ್ರಬಾಬು, ಮುಖಂಡರಾದ ವೈ.ಹೆಚ್.ಹುಚ್ಚಯ್ಯ, ಗೂಳೂರು ಶಿವಕುಮಾರ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸುಮಿತ್ರಾ ಮೊದಲಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *