
ತುಮಕೂರು: ವಿದ್ಯಾರ್ಥಿಗಳು ಪೂರ್ವಪೀಡಿತರಾಗದೆ, ವೈಜ್ಞಾನಿಕ ಮನೋಧರ್ಮ ರೂಢಿಸಿಕೊಳ್ಳಬೇಕು. ಪ್ರಶ್ನೆ ಮಾಡದೆ ಯಾವದನ್ನೂ ಒಪ್ಪಿಕೊಳ್ಳಬಾರದು ಎಂದು ಭಾರತೀಯ ವಿಚಾರವಾದಿ ಸಂಘಗಳ ಒಕ್ಕೂಟದ ಅಧ್ಯಕ್ಷ ಪ್ರೊ. ನೃರೇಂದ್ರ ನಾಯಕ್ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಕಲಾ ಕಾಲೇಜು ಹಾಗೂ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಭಾರತ ಸಂವಿಧಾನ ಮತ್ತು ವೈಜ್ಞಾನಿಕ ಮನೋಧರ್ಮ’ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾಜದಲ್ಲಿ ಮೌಢ್ಯವನ್ನು ಸಾರುವವರು ಅನೇಕರಿದ್ದಾರೆ. ಜನರನ್ನು ವಾಸ್ತವ ಪ್ರಜ್ಞೆಯಿಂದ ದೂರ ಮಾಡುವ ಇಂಥವರ ಕೃತ್ಯಗಳನ್ನು ಕ್ಷಮಿಸಬಾರದು, ಶಿಕ್ಷಿಸಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿವಿ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ಎಲ್ಲ ವಿಷಯಗಳನ್ನೂ ಸಮಾನವಾಗಿ ಸ್ವೀಕರಿಸಬೇಕು. ಮೂಢನಂಬಿಕಗಳಿಂದ ಮುಕ್ತರಾಗಿ ವೈಜ್ಞಾನಿಕ ಆಲೋಚನೆಗಳನ್ನು, ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿವಿ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ. ಕರಿಯಣ್ಣ, ಮೌಢ್ಯತೆಯಿಂದ ವಿಮುಕ್ತಿ ಪಡೆದ ವಿದ್ಯಾವಂತರು ಬುದ್ಧಿವಂತರೆನಿಸಿಕೊಳ್ಳುತ್ತಾರೆ. ದೇಶದ ಪ್ರಗತಿ ವಿಚಾರಶೀಲತೆಯಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.
ಸಪ್ತಗಿರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪೆÇ್ರ. ನಿರಂಜನಾರಾಧ್ಯ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿವಿಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಘಟಕದ ಸಂಯೋಜಕಿ ಡಾ. ಗಿರಿಜಾ ಕೆ. ಎಸ್. ಸ್ವಾಗತಿಸಿದರು. ವಿವಿಯ ಆಪ್ತ ಸಮಾಲೋಚನಾ ಘಟಕದ ಸಂಯೋಜಕಿ ಡಾ. ಈ. ವನಜಾಕ್ಷಿ ಭಾಗವಹಿಸಿದ್ದರು.