
ತುಮಕೂರು : ಹಾಗೂ ಶ್ರೀ ದೇವಿ ಶಿಕ್ಷಣ ಸಮೂಹ ಸಂಸ್ಥೆಗಳ ಸಂಸ್ಥಾಪಕರು ಹಾಗೂ ವಿಧಾನಪರಿಷತ್ ಮಾಜಿ ಸದಸ್ಯರಾದ ಡಾ.ಎಂ.ಆರ್.ಹುಲಿನಾಯ್ಕರ್ ಅವರ ಅಮೃತ ಮಹೋತ್ಸವ ಹಾಗೂ ಅವರ ಆತ್ಮಕಥನ ಅಂತರಂಗದ ಅವಲೋಕನ ಕೃತಿ ಬಿಡುಗಡೆ ಯನ್ನು ನವೆಂಬರ್ 25 ಶನಿವಾರ ಬೆಳಿಗ್ಗೆ 11ಕ್ಕೆ ತುಮಕೂರಿನ ಲಿಂಗಾಪುರ ರಸ್ತೆಯ ಶ್ರೀ ದೇವಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಜರುಗಲಿದೆ ಎಂದು ಅಮೃತ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಟಿ.ಆರ್.ಅಂಜಿನಪ್ಪ ಹಾಗೂ ಅಧ್ಯಕ್ಷರಾದ ಪ್ರಜಾಪ್ರಗತಿ ಸಂಪಾದಕ ಎಸ್.ನಾಗಣ್ಣ ತಿಳಿಸಿದರು.
ಅವರಿಂದು ಸುದ್ದಿ ಗೋಷ್ಠಿಯಲ್ಲಿ ಕಾರ್ಯಕ್ರಮದ ಮಾಹಿತಿ ಹಂಚಿಕೊಂಡ ಸಮಿತಿ ಪದಾಧಿಕಾರಿಗಳು ಮಾತನಾಡಿ ಡಾ.ಹುಲಿನಾಯ್ಕರ್ ಶಿಕ್ಷಣ, ಆರೋಗ್ಯ, ಧಾರ್ಮಿಕ ರಾಜಕೀಯ ಕ್ಷೇತ್ರದಲ್ಲಿ ತುಮಕೂರು ಜಿಲ್ಲೆ ಮಾತ್ರ ವಲ್ಲದೆ ರಾಜ್ಯಾದ್ಯಂತ ತಮ್ಮದೇ ಕೊಡುಗೆಗಳ ವಿಶಿಷ್ಟ ಛಾಪನ್ನು ಮೂಡಿಸಿದ್ದಾರೆ. ಹಿಂದುಳಿದ ಹಾಲುಮತ ಸಮುದಾಯದ ಸಂಸ್ಕಾರವಂತ ಕುಟುಂಬದಲ್ಲಿ ಹುಟ್ಟಿ ವೃತ್ತಿ ಬದುಕಿಗಾಗಿ ಉತ್ತರ ಕರ್ನಾಟಕದಿಂದ ದಕ್ಷಿಣ ಕರ್ನಾಟಕಕ್ಕೆ ಬಂದು ಕಲ್ಪತರು ನಾಡು ತುಮಕೂರಿನಲ್ಲಿ ನೆಲೆ ನಿಂತು ಸಮಾಜಮುಖಿಯಾಗಿ ಸಾಧನೆ ಮಾಡುತ್ತಿರುವುದು ನಾವೆಲ್ಲರೂ ಹೆಮ್ಮೆಪಡುವ ಸಂಗತಿ. ಅಜಾತ ಶತ್ರುವಿನಂತಹ ನಿಸ್ಪೃಹ ವ್ಯಕ್ತಿತ್ವದ ಡಾಕ್ಟರ್ ಹುಲಿನಾಯ್ಕರ್ ಅವರ ಸಾರ್ಥಕ ಐದು ದಶಕದ ಸಾರ್ವಜನಿಕ ಸೇವೆಯನ್ನು ಪರಿಗಣಿಸಿ ಅವರಿಗೆ 75ನೇ ವರ್ಷ ವಾಗಿರುವ ಈ ಸಂದರ್ಭದಲ್ಲಿ ಅಮೃತ ಮಹೋತ್ಸವ ಸಮಾರಂಭದ ಮೂಲಕ ಗೌರವ ಸಮರ್ಪಣೆ ಮಾಡಬೇಕೆಂದು ಅವರ ಅಭಿಮಾನಿಗಳು, ಹಿತೈಷಿಗಳು, ಪಕ್ಷಾತೀತವಾಗಿ ರಾಜಕೀಯ ಗಣ್ಯರು, ಮುಖಂಡರು, ಸಂಘ ಸಂಸ್ಥೆಗಳ ಪ್ರಮುಖರು, ಡಾಕ್ಟರ್ ಕುಟುಂಬದವರು, ಶ್ರೀ ದೇವಿ ಸಮೂಹ ಎಲ್ಲರೂ ಒಡಗೂಡಿ ಈ ಕಾರ್ಯಕ್ರಮವನ್ನು ಬೃಹತ್ ಪ್ರಮಾಣದಲ್ಲಿ ಶನಿವಾರ ಸಂಘಟಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲೆ, ರಾಜ್ಯ, ದೇಶದ ವಿವಿಧ ಭಾಗಗಳಿಂದಲೂ ಹುಲಿನಾಯ್ಕರ್ ಅವರ ಅಭಿಮಾನಿ ಹಿತೈಷಿಗಳು, ವಿವಿಧ ಕ್ಷೇತ್ರದ ಮುಖಂಡರು ಹತ್ತು ಸಾವಿರಕ್ಕೂ ಮೇಲ್ಪಟ್ಟು ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕಳೆದ ಮೂರು ತಿಂಗಳಿಂದ ಪೂರ್ವಭಾವಿ ಸಭೆ. ವಿವಿಧ ಸಮುದಾಯಗಳ ಮುಖಂಡರ ಭೇಟಿ ಮೂಲಕ ಸರ್ವರನ್ನು ಒಳಗೊಂಡಂತೆ ಕಾರ್ಯಕ್ರಮದಯಶಸ್ಸಿಗೆ ಸಮಿತಿಯ ಪ್ರಧಾನ ಸಂಚಾಲಕ,ಸಂಚಾಲಕರು, ಪದಾಧಿಕಾರಿಗಳು. ಎಲ್ಲಾ ಸದಸ್ಯರು ಸೇರಿದಂತೆ ಹುಲಿನಾಯ್ಕರ್ ಅವರ ಕುಟುಂಬವರ್ಗ ನಿರಂತರ ಶ್ರಮ ಹಾಕುತ್ತಿದ್ದಾರೆ ಎಂದರು.
ಈ ಅಮೃತ ಮಹೋತ್ಸವ ಕಾರ್ಯಕ್ರಮದ ಸಾನಿಧ್ಯವನ್ನು ಕಾಗಿನೆಲೆ ಕನಕ ಗುರುಪೀಠದ ಅಧ್ಯಕ್ಷರಾದ ಶ್ರೀ. ಶ್ರೀ ನಿರಂಜನಾನಂದಾಪುರಿ ಸ್ವಾಮೀಜಿ ವಹಿಸಲಿದ್ದು ಉದ್ಘಾಟನೆಯನ್ನು ಸನ್ಮಾನ್ಯ ಮಾಜಿ ಮುಖ್ಯಮಂತ್ರಿಗಳು ಹಿರಿಯ ನಾಯಕರಾದ ಬಿ.ಎಸ್.ಯಡಿಯೂರಪ್ಪ ಅವರು ನೆರವೇರಿಸುತ್ತಿದ್ದಾರೆ ಎಂದು ತಿಳಿಸಿದರು.