ವಿಜಯಾ ಮೋಹನ್ ಕಥೆಗಳಲ್ಲಿ ಸಂವಿಧಾನದ ಆಶಯಗಳಿವೆ.

ತುಮಕೂರು : ಸಂವಿಧಾನದ ಮೂಲಕ ನಾವು ಕಟ್ಟ ಹೊರಟಿರುವ ಸಮಸಮಾಜದ ಆದರ್ಶ ಮತ್ತು ಕನಸುಗಳನ್ನು ವಿಜಯಾ ಮೋಹನ್ ರವರು ಕಥೆಯಾಗಿಸಿದ್ದಾರೆ ಎಂದು ಸಂಶೋಧನಾ ವಿದ್ಯಾರ್ಥಿ ನವೀನ್ ಪೂಜಾರಹಳ್ಳಿ ರವರು ತಿಳಿಸಿದರು.


ಅವರು ಕರ್ನಾಟಕ ಲೇಖಕಿಯರ ಸಂಘ ಜಿಲ್ಲಾ ಶಾಖೆ ತುಮಕೂರು ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಉಚಿತ ಕೋಚಿಂಗ್ ಸೆಂಟರ್ ತುಮಕೂರು ಸಹಯೋಗದಲ್ಲಿ ,ತುಮಕೂರಿನ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಅಗಲಿದ ಲೇಖಕಿ ವಿಜಯಾ ಮೋಹನ್ ರವರ ನುಡಿನಮನ ಕಾರ್ಯಕ್ರಮ ದಲ್ಲಿ ಮಾತನಾಡಿದರು.

 

ವಿಜಯಾ ಮೋಹನ್ ಕನ್ನಡದ ಗಟ್ಟಿ ಕಥೆಗಾರ್ತಿಯರಲ್ಲಿ ಒಬ್ಬರು ಮಧುಗಿರಿಯ ದೇಸಿ ಭಾಷೆಯನ್ನು ಸಶಕ್ತವಾಗಿ ಬಳಸಿದ್ದಾರೆ, ಇವರ ಕತೆಗಳಲ್ಲಿ ಹೆಣ್ಣಿನ ಸಂಕಟಗಳು ಮತ್ತು ಬಯಲು ಸೀಮೆಯ ಹಳ್ಳಿಯ ಪಾಡುಗಳನ್ನು

ಪ್ರೇಮ,ಮಹಿಳೆಯ ಸ್ವಾಯತ್ತತೆ ಪ್ರಶ್ನೆ, ಅತ್ಯಾಚಾರ,ಅಕ್ರಮ ಮರಳು ದಂಧೆ,ಬಡತನ ,ಅನ್ನ ಭಾಗ್ಯ, ಜಾತಿ ಅಸ್ಪೃಶ್ಯತೆಯ ಕ್ರೌರ್ಯ ಹೀಗೆ ಅನೇಕ ಮುಖ್ಯ ವಿಷಯಗಳನ್ನು ಕತೆಯ ಮೂಲಕ ಎದುರುಗೊಳ್ಳುತ್ತಾರೆ ಎಂದರು.
ಕುಟುಂಬ,ಧರ್ಮ, ಜಾತಿ ಎಂಬ ಪುರುಷ ಪ್ರಧಾನ ವ್ಯವಸ್ಥೆ ಹೆಣ್ಣನ್ನು ಹೇಗೆ ಸಂಕುಚಿತಗೊಳಿಸಿ ಅವಳ ಆಸೆ ಕನಸುಗಳನ್ನು ಚಿವುಟುತ್ತಿರುವುದನ್ನು ನೋಡಬಹುದು. ನಮ್ಮ ನಡುವೆ ಸಂಕಟದ ಲೋಕವಿದೆ ಅದನ್ನಿಲ್ಲಿ ನೋಡಬಹುದು,

ಇವರ ಕಥೆಗಳ ಓದು ನಮ್ಮನ್ನು ಮಾನವೀಯ ಗೊಳಿಸುತ್ತದೆ ನಮ್ಮೊಳಗಿರುವ ಗಂಡಸುತನವೆಂಬ ಅಹಂಕಾರ ಮಮತೆಯ ಹೆಣ್ತನದ ರೂಪು ತಾಳುತ್ತದೆ. ಕನ್ನಡ ಕಥಾ ಸಾಹಿತ್ಯ ಪರಂಪರೆಯಲ್ಲಿ ವಿಜಯಾ ಮೋಹನ್ ಶಾಶ್ವತವಾಗಿ ಬದುಕಿರುತ್ತಾರೆ ಅವರನ್ನು ಗಟ್ಟಿಯಾಗಿ ನಮ್ಮೊಳಗೆ ಓದಿಕೊಳ್ಳುವ ಮೂಲಕ ಗಟ್ಟಿ ಕತೆಗಾರ್ತಿಯನ್ನು ನಮ್ಮೆದೆಗೆ ಇಳಿಸಿಕೊಳ್ಳೋಣ ಎಂದು ತಿಳಿಸಿದರು.


ಲೇಖಕಿ ಸಿ.ಎಲ್.ಸುನಂದಮ್ಮರವರು ಮಾತನಾಡುತ್ತಾ ,ವಿಜಯಾ ಮೋಹನ್ ರವರು ಸರಳವಾದ ನಡೆ ನುಡಿ ,ಕ್ರಿಯಾಶೀಲ ವ್ಯಕ್ತಿತ್ವ ಹೊಂದಿದ್ದ ಸ್ನೇಹಜೀವಿ ,ಇವರು ಬಳಸುತ್ತಿದ್ದ ಭಾಷೆ ವಿಶಿಷ್ಟ ವಾಗಿತ್ತು.ಇವರಿಗೆ ಡಾ// ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿ ,ತ್ರಿವೇಣಿ ಪ್ರಶಸ್ತಿ ,ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಮೊದಲಾದವು ಬಂದಿವೆ.ವಿಜಯಾ ರವರಿಗೆ ತನ್ನ ಬರಹದ ಬಗ್ಗೆ ಸಂಕೋಚವಿತ್ತೆ ಹೊರತು ,ತಾನು ಬರೆದದ್ದೇ ಶ್ರೇಷ್ಠ ಎಂಬ ಭಾವನೆ ಇರಲಿಲ್ಲ.ಇವರ ಬರಹದ ಹಿಂದೆ ಸಾಮಾಜಿಕ ಹೊಣೆಗಾರಿಕೆ ಇತ್ತು ಎಂದು ಶ್ಲಾಘಿಸಿದರು.


ಬಾ.ಹ.ರಮಾಕುಮಾರಿ ರವರು ವಿಜಯಾ ರವರ ಒಡನಾಟವನ್ನು ನೆನಪಿಸಿಕೊಂಡು. ಗುಬ್ಬಿ ತಾಲ್ಲೋಕು ಕಡಬ ಬಳಿ ಶಿಕ್ಷಕಿಯಾಗಿ ನೌಕರಿಗೆ ಸೇರಿದ ವಿಜಯಾ ರವರು ,ಸಾಹಿತ್ಯ ದ ಒಡನಾಟದಿಂದ ಗಟ್ಟಿ ಬರಹಗಾರ್ತಿಯಾಗಿ ರೂಪುಗೊಂಡಿದ್ದನ್ನು, ತಮ್ಮ ಪುಸ್ತಕ ಬಿಡುಗಡೆ ದಿನ ಕನ್ನಡ ಭವನಕ್ಕೆ ಬರಲು ಹೊರಟಿದ್ದ ಅವರು ,ಹೃದಯಾಘಾತಕ್ಕೆ ಒಳಗಾದ ಸುದ್ದಿ ಬಂದ ಭಾವುಕ ಕ್ಷಣಗಳನ್ನು ಹಂಚಿಕೊಂಡರು.

 

ಲೇಖಕಿ ಕಮಲಾ ನರಸಿಂಹ , ವಿಜಯಾ ರವರ ಪತಿ ಮತ್ತು ಮಗ ನುಡಿ ನಮನ ಸಲ್ಲಿಸಿದರು.
ಲೇಖಕಿಯರ ಸಂಘದ ತುಮಕೂರು ಜಿಲ್ಲಾ ಶಾಖೆಯ ಅಧ್ಯಕ್ಷರಾದ ಮಲ್ಲಿಕಾ ಬಸವರಾಜು ರವರು ಮಾತನಾಡುತ್ತಾ, ತನ್ನ ತವರು ನೆಲದ ಗೆಳತಿ ವಿಜಯಾ ರವರು ತಮ್ಮ ಗ್ರಾಮೀಣ ಪರಿಸರದ ಆಡುನುಡಿಯನ್ನು, ಬದುಕನ್ನು ಸೃಜನಶೀಲವಾಗಿ ಬರಹದಲ್ಲಿ ಕಟ್ಟಿಕೊಟ್ಟಿರುವುದಾಗಿ ತಿಳಿಸಿ .ಲೇಖಕಿಯರ ಸಂಘದಿಂದ ಅವರ ಸಾಹಿತ್ಯ ದ ಅನುಸಂಧಾನ ಕಾರ್ಯಕ್ರಮ ಮಾಡಿದ್ದನ್ನು ಮತ್ತು ಅವರ ಮೇವು ಕಥಾ ಸಂಕಲನವನ್ನು ಲೇಖಕಿಯರ ಸಂಘದ ಸಹಯೋಗದಲ್ಲಿ ಬಿಡುಗಡೆ ಮಾಡಿದ್ದನ್ನು ನೆನಪಿಸಿಕೊಂಡರು .


ಮುಂದಿನ ದಿನಗಳಲ್ಲಿ ಅವರ ಸಾಹಿತ್ಯ ವನ್ನು ಹೆಚ್ಚು ಹೆಚ್ಚು ಓದಿಸೋಣ ,ವಿಚಾರ ಸಂಕಿರಣ ಹಮ್ಮಿಕೊಳ್ಳೋಣ ಎಂದು ಹೇಳಿದರು.
ರಾಣಿ ಚಂದ್ರಶೇಖರ್ ರವರು ನಿರೂಪಣೆ ಮಾಡುತ್ತಾ ,ವಿಜಯಾ ಮೋಹನ್ ರವರ ಪಾರ್ಥಿವ ಶರೀರವನ್ನು ಕನ್ನಡ ಭವನಕ್ಕೆ ತಂದ ಭಾವುಕ ಕ್ಷಣಗಳನ್ನು ನೆನೆದರು .ಲೇಖಕಿ ಪರಿಮಳಾ ರವರು ಸ್ವಾಗತಿಸಿದರು .ವಿಜಯಾ ಮೋಹನ್ ರವರ ಪತಿ ,ಮಗ ,ತಾಯಿ ಅತ್ತೆ ಮತ್ತು ಸಹೋದರಿಯರು ಬಂಧುಮಿತ್ರರು ,ಸಂಘದ ಸದಸ್ಯರು ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು.
ಅನ್ಯಕಾರ್ಯನಿಮಿತ್ತ ತುಮಕೂರಿಗೆ ಬಂದಿದ್ದ ,ಲೇಖಕಿ ಪ್ರತಿಭಾ ನಂದಕುಮಾರ್ ,ಡಾ. ವಸುಂಧರಾ ಭೂಪತಿ, ಎನ್ .ಗಾಯಿತ್ರಿ ಮತ್ತು ಕರ್ನಾಟಕ ಲೇಖಕಿಯರ ಸಂಘ ಕೇಂದ್ರಶಾಖೆ ಬೆಂಗಳೂರು ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಆರ್ .ಸುನಂದಮ್ಮ ರವರು ಸಹ ನುಡಿ ನಮನ ಕಾರ್ಯಕ್ರಮದಲ್ಲಿ ಹಾಜರಿದ್ದರು .


ಲೇಖಕಿ ಪ್ರತಿಭಾ ನಂದಕುಮಾರ್ ರವರು ,ವಿಜಯಾ ಮೋಹನ್ ರವರ ಕಥೆಯನ್ನು ಇಂಗ್ಲೀಷ್ ಗೆ ಅನುವಾದಿಸುವುದಾಗಿ ತಿಳಿಸಿದರು

Leave a Reply

Your email address will not be published. Required fields are marked *