ಕರ್ನಾಟಕದಲ್ಲೂ ಓಬಳಾಪುರಂ ಗಣಿಗಾರಿಕೆ-ಸರ್ಕಾರ-ವಿರೋಧ ಪಕ್ಷ ಶಾಮೀಲು- ಕೋಡಿಹಳ್ಳಿ ಚಂದ್ರಶೇಖರ್

ತುಮಕೂರು:ಕರ್ನಾಟಕದಲ್ಲಿ ಮೈನಿಂಗ್ ಲಾಭಿ ಎಗ್ಗಿಲ್ಲದೆ ನಡೆಯುತ್ತಿದ್ದು, ಆಂಧ್ರ ಸರಕಾರ ಓಬಳಾಪುರಂ ಗಣಿಗಾರಿಕೆ ನಡೆದಿರುವ ಕರ್ನಾಟಕದಲ್ಲಿ ಎಂದು ಸ್ಪಷ್ಟಪಡಿಸಿದರೂ, ಇದುವರೆಗೂ ಕರ್ನಾಟಕ ಸರಕಾರ ಮೌನಕ್ಕೆ ಶರಣಾಗಿರುವುದನ್ನು ನೋಡಿದರೆ,ಸರಕಾರ, ವಿರೋಧಪಕ್ಷಗಳೆಲ್ಲವೂ ಶಾಮೀಲಾಗಿರುವ ಶಂಕೆ ವ್ಯಕ್ತವಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಗಣಿಗಾರಿಕೆ ವಿರೋಧಿಸಿ ಚಾಮರಾಜನಗರದಿಂದ ಬಳ್ಳಾರಿಯವರೆಗೂ ಪಾದಯಾತ್ರೆ ನಡೆಸಿದ ಸಿದ್ದರಾಮಯ್ಯ,ಈಗ ಕಣ್ಣುಮುಚ್ಚಿ ಕುಳಿತಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಗಣಿಗಾರಿಕೆಗೆ ಚೌಕಟ್ಟು ವಿಧಿಸಬೇಕಿದ್ದ ಸರಕಾರ, ಅಕ್ರಮ ಗಣಿಗಾರಿಕೆಯನ್ನು ಸಕ್ರಮ ಮಾಡಲು ಮುಂದಾದಂತೆ ಕಾಣುತ್ತಿದೆ. ಅಕ್ರಮ ಗಣಿಗಾರಿಕೆಯಲ್ಲಿ ಪೊಲೀಸ್,ಅರಣ್ಯ,ಕಂದಾಯ ಪರಿಸರ ಇಲಾಖೆಗಳು ಶಾಮೀಲಾಗಿವೆ ಎಂದು ಆರೋಪಿಸಿದರು.

ಪ್ರಜಾಪ್ರಭುತ್ವದಲ್ಲಿ ಶಾಂತಿಯುತ ಚಳವಳಿಗೆ ಅವಕಾಶವಿದೆ.ಆದರೆ ತುಮಕೂರು ಜಿಲ್ಲಾಧಿಕಾರಿಗಳು ಜಿಲ್ಲಾಧಿಕಾರಿಗಳ ಕಚೇರಿ ಸುತ್ತಮುತ್ತ ಪ್ರತಿಭಟನೆ, ಚಳುವಳಿಗಳಿಗೆ ನಿಷೇಧ ವಿಧಿಸಿರುವುದನ್ನು ನೋಡಿದರೆ, ನಾವು ಪ್ರಜಾಪ್ರಭುತ್ವದಲ್ಲಿ ಇದ್ದೇವೆಯೇ ಇಲ್ಲ, ಸರ್ವಾಧಿಕಾರಿ ಆಡಳಿತದಲ್ಲಿ ಇದ್ದೇವೆಯೇ ಎಂಬ ಅನುಮಾನ ಮೂಡುತ್ತಿದೆ.ಸಾರ್ವಜನಿಕರ ಸೇವಕರಾದ ಅಧಿಕಾರಿಗಳು ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಪ್ರತಿಭಟನೆ ಮಾಡುವ ವೇಳೆ ಅವರ ಸಮಸ್ಯೆಗಳನ್ನು ಆಲಿಸಿ, ಪರಿಹಾರ ಒದಗಿಸಬೇಕಾದ್ದು ಅವರ ಕರ್ತವ್ಯ.ಆದರೆ ಪ್ರತಿಭಟನೆ ನಡೆಸದಂತೆ ನಿರ್ಭಂಧ ವಿಧಿಸುವುದು ಪ್ರಜಾಪ್ರಭುತ್ವವೇ ಎಂದು ಪ್ರಶ್ನಿಸಿದ ಅವರು, ಕೂಡಲೇ ಜಿಲ್ಲಾಧಿಕಾರಿಗಳು ತಾವು ಹೊರಡಿಸಿರುವ ಆದೇಶವನ್ನು ಹಿಂಪಡೆಯಬೇಕು ಎಂದು ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದರು.

ಗಣಿಗಾರಿಕೆ ನಡೆಸಲು ಅದರದ್ದೇ ಆದ ನಿಯಮಗಳಿವೆ.ಅವುಗಳ ಪ್ರಕಾರವೇ ಗಣಿಗಾರಿಕೆಗೆ ಅವಕಾಶ ನೀಡಬೇಕು.ರೈತರಿಗೊಂದು ನ್ಯಾಯ,ಗಣಿ ಮಾಲೀಕರಿಗೆ ಒಂದು ನ್ಯಾಯವಲ್ಲ, ಈ ವಿಚಾರದಲ್ಲಿ ಡಿಸಿಯವರಿಗೆ ಭೇಟಿಯಾಗಿ ಮನವಿ ಸಲ್ಲಿಸುತ್ತೇವೆ.ಅಲ್ಲದೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಸಮಸ್ಯೆಯನ್ನು ಮನವರಿಕೆ ಮಾಡಿಕೊಡುವ ಕೆಲಸ ಮಾಡಲಾಗುವುದು.2014 ರಲ್ಲಿ ತುಮಕೂರು ನಗರದ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಬಹಳ ವಿಜೃಂಭಣೆಯಿಂದ ಪುಡ್‍ಪಾರ್ಕ್ ಆರಂಭ ಮಾಡಲಾಯಿತು. ಆರಂಭವಾದ ಒಂದೇ ವರ್ಷಕ್ಕೆ ಮುಚ್ಚಿ, 100 ಎಕರೆ ಜಾಗವನ್ನು ಸಣ್ಣ ಸಣ್ಣ ತುಂಡು ಮಾಡಿ, ಮಾರಾಟ ಮಾಡಲಾಗಿದೆ.ಸ್ವತಹಃ ಪ್ರಧಾನ ಮಂತ್ರಿ,ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿಯೇ ಇತಂಹ ಹಗಲು ದರೋಡೆ ನಡೆದರೂ ಇದುವರೆಗೂ ಯಾರ ವಿರುದ್ದವೂ ಕ್ರಮವಿಲ್ಲ.ವಿರೋಧ ಪಕ್ಷ ಸಹ ಸಂಪೂರ್ಣ ನಿಷ್ಕ್ರೀಯವಾಗಿದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ವಿಷಾದ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಧನಂಜಯ ಆರಾಧ್ಯ ಮಾತನಾಡಿ,ತುರುವೇಕೆರೆ ತಾಲೂಕು ಕೋಳಗಟ್ಟ ಗ್ರಾಮದ ಸರ್ವೆ ನಂಬರ್ 65 ರಲ್ಲಿ ರಾಜೀವ್ ಎಂಬ ವ್ಯಕ್ತಿ 2 ಎಕೆರೆ ಜಾಗವನ್ನು ಕ್ರಷರ್‍ಗೆ ಲೀಸ್ ಪಡೆದು, ಅಕ್ಕಪಕ್ಕದಲ್ಲಿದ್ದ ಸುಮಾರು 08 ಎಕೆರೆ ಸರಕಾರಿ ಗೋಮಾಳ, ಅರಣ್ಯ ಇಲಾಖೆಯ ಜಾಗವನ್ನು ಒತ್ತುವರಿ ಮಾಡಿ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದಾರೆ.ಗಣಿಗಾರಿಕೆಯಿಂದ ಧೂಳಿನ ಕಣಗಳು ತೆಂಗು ಮತ್ತು ಅಡಿಕೆ ಇನ್ನಿತರ ಆಹಾರ ಬೆಳೆಗಳ ಮೇಲೆ ಕುಳಿತು, ಇಡೀ ಬೆಳೆ ನಾಶವಾಗುತ್ತಿದೆ. ಈ ಬಗ್ಗೆ ಹಲವಾರು ಬಾರಿ ಮನವಿ ನೀಡಿದ್ದರೂ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಜಿಲ್ಲಾಡಳಿತ ಮತ್ತು ಅಕ್ರಮ ಗಣಿಗಾರಿಕೆ ವಿರುದ್ದ ಮೇ.05 ರಿಂದ ಗ್ರಾಮದಲ್ಲಿ ಆಹೋರಾತ್ರಿ ಧರಣಿ ನಡೆದಿದೆ.ಆದರೆ ಗಣಿಮಾಲೀಕರು ಪ್ರತಿಭಟನಾ ನಿರತರ ಮೇಲೆ ಹಲ್ಲೆ ನಡೆಸಿ, ಅವರ ವಿರುದ್ದವೇ ಕೇಸು ದಾಖಲು ಮಾಡಿ,ಇನ್ನಿಲ್ಲದ ಕಿರುಕುಳ ನೀಡುತ್ತಿದ್ದಾರೆ.ಅಲ್ಲದೆ ನನ್ನಗೂ ದೂರವಾಣಿ ಕೆರೆ ಮಾಡಿ, ಕೊಲೆ ಬೆದರಿಕೆ ಹಾಕಿದ್ದಾರೆ. ದಂಡಿನಶಿವ ಪೊಲೀಸರು ರೈತರು ನೀಡಿದ ದೂರುಗಳಿಗೆ ಎನ್.ಸಿ ನೀಡಿ, ಗಣಿ ಮಾಲೀಕರು ನೀಡಿದ ದೂರುಗಳಿಗೆ ಎಫ್.ಐ.ಆರ್. ದಾಖಲಿಸಿ ಪರೋಕ್ಷವಾಗಿ ಅಕ್ರಮ ಗಣಿಗಾರಿಕೆಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಜಿಲ್ಲಾಡಳಿತ ಕೂಡಲೇ ಅಕ್ರಮ ಗಣಿಗಾರಿಕೆಗೆ ತಡೆಯೊಡ್ಡಬೇಕು. ತಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂಬುದು ನಮ್ಮ ಒತ್ತಾಯವಾಗಿದೆ.ಅಲ್ಲದೆ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆಗೆ ಪೂರ್ವಾನುಮತಿ ಅಗತ್ಯ ಎಂಬ ಜಿಲ್ಲಾಧಿಕಾರಿಗಳ ಆದೇಶವನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.

ಈ ಸಂಬಂಧ ಮನವಿಯನ್ನು ಅಪರ ಜಿಲ್ಲಾಧಿಕಾರಿಗಳ ಡಾ.ಎಸ್.ತಿಪ್ಪೇಸ್ವಾಮಿ ಅವರಿಗೆ ಸಲ್ಲಿಸಿದರು. ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಭೈರೇಗೌಡ, ತುರುವೇಕೆರೆ ತಾಲೂಕು ಅಧ್ಯಕ್ಷ ಗಂಗಾಧರಪ್ಪ, ಚಿಕ್ಕನಾಯಕನಹಳ್ಳಿ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ್,ತುಮಕೂರು ಜಿಲ್ಲಾ ಮಹಿಳಾ ಘಟಕದ ಶಶಿಕಲ, ಗುಬ್ಬಿ ಮಹಿಳಾ ಘಟಕದ ಎಸ್.ಕಲ್ಪನಾ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *