ತುಮಕೂರು : ಜಿಲ್ಲೆಯ ಯಾವ ಭಾಗದಲ್ಲೂ ಸಹ ಕುಡಿಯುವ ನೀರಿಗೆ ತೊಂದರೆಯಾಗದಂತೆ ಮತ್ತು ಜಾನುವಾರುಗಳಿಗೆ ಮೇವಿಗೆ ಕೊರತೆಯಾಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಿ ಬರ ನಿರ್ವಹಣೆಯನ್ನು ಸಮರ್ಥವಾಗಿ ನಿಭಾಯಿಸಬೇಕು. ಮುಂದಿನ ಬೇಸಿಗೆ ದಿನಗಳನ್ನು ಗಮನದಲ್ಲಿಟ್ಟುಕೊಂಡು ಟ್ಯಾಂಕರ್‍ಗಳ ಮೂಲಕ ನೀರು ಪೂರೈಸಲು ಟೆಂಡರ್ ಕರೆಯುವಿಕೆ ಮತ್ತು ಖಾಸಗಿ ಬೋರ್‍ವೆಲ್‍ಗಳ ರೈತರೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿಮದ್ದಿನೇನಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಕೇಸ್ವಾನ್ ವಿಡಿಯೋ ಕಾನ್ಫರೆನ್ಸ್ ಹಾಲ್‍ನಲ್ಲಿ ಕರೆಯಲಾಗಿದ್ದ ‘ಕುಡಿಯುವ ನೀರು’, ಬರನಿರ್ವಹಣೆ, ಜಾನುವಾರು ಮೇವು, ಉದ್ಯೋಗ ಹಾಗೂ ಕೃಷಿ ವಿಷಯಗಳ ಕುರಿತು ಚರ್ಚಿಸಲು ಸನ್ಯಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ವಿಡಿಯೋ ಸಂವಾದ ಸಭೆಯಲ್ಲಿ ಭಾಗವಹಿಸಿದ ನಂತರ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡುತ್ತಾ, ಗ್ರಾಮ ಪಂಚಾಯತಿ ಮಟ್ಟದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಸಂಬಂಧ ಟೆಂಡರ್‍ಗಳನ್ನು ಕರೆಯಬೇಕು ಮತ್ತು ಗ್ರಾಮ ಪಂಚಾಯತಿಗಳಲ್ಲಿ ಎಷ್ಟು ಟ್ಯಾಂಕರ್‍ಗಳು ಲಭ್ಯವಿದೆ ಎಂಬ ಮಾಹಿತಿಯನ್ನು ಪಂಚಾಯತಿ ಅಧಿಕಾರಿಗಳು ಪಡೆಯಬೇಕು ಎಂದು ಸೂಚಿಸಿದರು.
ಕೊಳವೆ ಬಾವಿಗಳ ಮೋಟಾರ್ ಪಂಪ್‍ಗಳು ದುರಸ್ತಿಗೆ ಬಂದಲ್ಲಿ ಒಂದೆರಡು ದಿನಗಳಲ್ಲಿ ದುರಸ್ತಿ ಮಾಡುವವರ ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಬೇಕು ಮತ್ತು ವಿದ್ಯುತ್ ಸಮರ್ಪಕ ಪೂರೈಕೆಗೆ ಕ್ರಮವಹಿಸಬೇಕೆಂದು ಸೂಚಿಸಿದರು.
ಬರ ನಿರ್ವಹಣೆಯನ್ನು ಒಂದು ತಂಡವಾಗಿ ನಿರ್ವಹಿಸಬೇಕು. ತಹಶೀಲ್ದಾರ್ ಮತ್ತು ಇಓಗಳ ಪಾತ್ರ ಅತ್ಯಂತ ನಿರ್ಣಾಯಕವಾಗಿದ್ದು, ತಹಶೀಲ್ದಾರ್ ಮತ್ತು ಇಓ ಸೇರಿದಂತೆ ಬರ ನಿರ್ವಹಣೆಯ ಹೊಣೆ ಹೊತ್ತಿರುವ ಎಲ್ಲಾ ಅಧಿಕಾರಿ ಸಿಬ್ಬಂದಿಗಳು ಕೇಂದ್ರಸ್ಥಾನದಲ್ಲಿ ಲಭ್ಯವಿರಬೇಕು. ಜಿಲ್ಲೆಯನ್ನು ಬಿಟ್ಟು ತೆರಳಬೇಕಾದಲ್ಲಿ ಜಿಲ್ಲಾಧಿಕಾರಿಗಳಿಗೆ ವರದಿ ಮಾಡಬೇಕು. ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಿ ಕೆಲಸ ನಿರ್ವಹಿಸುವಂತೆ ಸೂಚಿಸಿದರು.
ಟ್ಯಾಂಕರ್ ಮೂಲಕ ನೀರು ಪೂರೈಕೆ ಮತ್ತು ಮೇವು ಪೂರೈಕೆ ಕೆಲಸಗಳಿಗೆ ಸಂಬಂಧಿಸಿದ ಮೊತ್ತಗಳನ್ನು ಎಸ್.ಡಿ.ಆರ್.ಎಫ್. ನಿಂದ ಭರಿಸಬೇಕು. ತಕ್ಷಣವೇ ಸಂಬಂಧಿಸಿದವರಿಂದ ಬಿಲ್ಲುಗಳನ್ನು ಪಡೆದು ಪಾವತಿಗೆ ಕ್ರಮಕೈಗೊಳ್ಳಬೇಕು. ಇದಕ್ಕೆ ಸಂಬಂಧಿಸಿದಂತೆ ಪ್ರತಿ 15 ದಿನಗಳಿಗೊಮ್ಮೆ ತಮಗೆ ವರದಿ ಸಲ್ಲಿಸುವಂತೆ ಸೂಚಿಸಿದರು.
ಬರ ನಿರ್ವಹಣೆಯಲ್ಲಿ ಕಂದಾಯ ಇಲಾಖೆಯ ಅಧಿಕಾರಿ/ನೌಕರರು ಪ್ರಮುಖ ಪಾತ್ರ ವಹಿಸಲಿದೆ ಎಂದ ಅವರು, ತಹಶೀಲ್ದಾರರು ತಮ್ಮ ವ್ಯಾಪ್ತಿಯಲ್ಲಿನ ಎಲ್ಲಾ ಕೊಳವೆ ಬಾವಿಗಳ ಬಗ್ಗೆ ಮಾಹಿತಿ ಹೊಂದಿರಬೇಕು ಎಂದು ಸೂಚಿಸಿದರು.
ಮಾರ್ಚ್, ಏಪ್ರಿಲ್, ಮೇ ಮಾಹೆಗಳು ಬರ ನಿರ್ವಹಣೆಯ ಅತ್ಯಂತ ಸೂಕ್ಷ್ಮ ಮಾಹೆಗಳು ಎಂದು ಪರಿಗಣಿಸಿ ಸಿದ್ಧತೆ ಮಾಡಿಟ್ಟುಕೊಳ್ಳುವಂತೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿ.ಪಂ. ಸಿಇಓ ಜಿ.ಪ್ರಭು, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ, ಉಪವಿಭಾಗಾಧಿಕಾರಿಗಳು, ತಹಶೀಲ್ದಾರರು, ಕಾರ್ಯನಿರ್ವಾಹಕ ಅಧಿಕಾರಿಗಳು ಉಪಸ್ಥಿತರಿದ್ದರು.