ತುಮಕೂರು : ಸಮರ್ಪಕ ವಿದ್ಯುತ್ ಸರಬರಾಜು ಹಾಗೂ ಕುಡಿಯುವ ನೀರಿನ ಪೂರೈಕೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ದೂರು ಬಾರದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಸ್ಥಳೀಯವಾಗಿ ಸಾರ್ವಜನಿಕರಿಗೆ ಲಭ್ಯವಿದ್ದು, ಸಮಸ್ಯೆಗಳನ್ನು ಆಲಿಸಿ ಆದ್ಯತೆ ಮೇರೆಗೆ ಪರಿಹರಿಸಬೇಕು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಅಧಿಕಾರಿಗಳಿಗಿಂದು ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ “ತುಮಕೂರು ಜಿಲ್ಲೆಯ ತಾಲ್ಲೂಕುಗಳಲ್ಲಿ ಕುಡಿಯುವ ನೀರು ಮತ್ತು ಮೇವಿನ ಪರಿಸ್ಥಿತಿ ಕುರಿತಂತೆ” ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡುತ್ತಾ, ಇಓ, ತಹಶೀಲ್ದಾರ್ ಮತ್ತು ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮ ಮತ್ತು ವಾರ್ಡ್‍ಗಳ ವಸ್ತು ಸ್ಥಿತಿಯನ್ನು ಸ್ವತಃ ಭೇಟಿ ನೀಡುವ ಮೂಲಕ ಪರಿಶೀಲಿಸಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ಈಗಾಗಲೇ 1ಲಕ್ಷ ಹಾಗೂ ಸಿಎಸ್‍ಆರ್‍ಅಡಿ 3ಸಾವಿರ ಮಿನಿ ಕಿಟ್‍ಗಳನ್ನು ರೈತರಿಗೆ ವಿತರಿಸಲಾಗಿದೆ. ಹೋಬಳಿವಾರು ಮೇವಿನ ಲಭ್ಯತೆ ಕುರಿತು ತಾಲ್ಲೂಕು ಮಟ್ಟದ ಅಧಿಕಾರಿಗಳು ಮಾಹಿತಿಯನ್ನು ಪಡೆಯಬೇಕು. ಜಮೀನು ಮತ್ತು ಕೊಳವೆ ಬಾವಿ ಇಲ್ಲದಂತಹ ರೈತರನ್ನು ಗುರುತಿಸಿ ಮೇವಿನ ಕಿಟ್‍ಗಳನ್ನು ಆಧ್ಯತೆ ಮೇರೆಗೆ ಒದಗಿಸುವಂತೆ ಸೂಚಿಸಿದರು.
ಬೋರ್‍ವೆಲ್‍ಗಳಲ್ಲಿ ನೀರಿದೆ. ಆದರೆ ವಿದ್ಯುತ್ ಸಮಸ್ಯೆಯಿಂದ ನೀರನ್ನು ಕೃಷಿ ಚಟುವಟಿಕೆಗಳಿಗೆ ಬಳಸಲು ಸಾಧ್ಯವಾಗುತ್ತಿಲ್ಲ ಎಂಬುದು ರೈತರ ದೂರಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ರೈತರನ್ನು ಭೇಟಿಯಾಗಿ ಅವರ ಸಮಸ್ಯೆಯನ್ನು ಆಲಿಸಿ ವಿದ್ಯುತ್‍ಚ್ಛಕ್ತಿ ಕೊರತೆಯನ್ನು ನೀಗಿಸುವ ಕುರಿತು ಆಶ್ವಾಸನೆ ನೀಡಿ ಸಮಸ್ಯೆಯನ್ನು ಬಗೆಹರಿಸಬೇಕು. ತಾವು ಮುಂದಿನ ಬಾರಿ ಕ್ಷೇತ್ರ ಭೇಟಿಗೆ ಹೋದಾಗ ಸಾರ್ವಜನಿಕರಿಂದ ಯಾವುದೇ ದೂರು ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಬೆಸ್ಕಾಂ ಅಧಿಕಾರಿ/ಸಿಬ್ಬಂದಿಗಳಿಗೆ ಬಹುತೇಕ ಚುನಾವಣಾ ಕರ್ತವ್ಯದಿಂದ ವಿನಾಯತಿ ನೀಡಲಾಗಿದ್ದು, ಸದರಿ ಇಲಾಖೆಯ ಅಧಿಕಾರಿ ನೌಕರರು ಜನರಿಗೆ ಲಭ್ಯವಿದ್ದು, ವಿದ್ಯುತ್ ಸಮಸ್ಯೆಯನ್ನು ಪರಿಹರಿಸಬೇಕು ಎಂದು ತಿಳಿಸಿದರು.
ಪಾವಗಡದಲ್ಲಿ ಈಗಾಗಲೇ ಮೇವಿನ ಬ್ಯಾಂಕ್ ಸ್ಥಾಪಿಸಲಾಗಿದ್ದು, ಅಂತೆಯೇ ಮಧುಗಿರಿ, ತುಮಕೂರು, ಕೊರಟಗೆರೆ ಸೇರಿದಂತೆ ತೀವ್ರವಾಗಿ ನೀರಿನ ಹಾಗೂ ಮೇವಿನ ಕೊರತೆ ಇರುವ ಪ್ರದೇಶಗಳನ್ನು ಗುರುತಿಸಿ ಮೇವಿನ ಬ್ಯಾಂಕ್ ಸ್ಥಾಪನೆಗೆ ತ್ವರಿತಗತಿಯಲ್ಲಿ ಎಸಿ ಹಾಗೂ ತಹಶೀಲ್ದಾರ್‍ಗಳು ಕ್ರಮಕೈಗೊಳ್ಳಬೇಕು ಮತ್ತು ಸಿಸಿ ಕ್ಯಾಮೆರಾ ಅಳವಡಿಸಬೇಕು ಎಂದು ಸೂಚಿಸಿದರು.
ಪಶು ಸಂಗೋಪನಾ ಇಲಾಖೆಯ ವೈದ್ಯಾಧಿಕಾರಿಗಳು ಮತ್ತು ಸಹಾಯಕ ನಿರ್ದೇಶಕರುಗಳು ತಮ್ಮಗಳ ಜವಾಬ್ದಾರಿಯನ್ನು ಅರಿತು ನಿಭಾಯಿಸಬೇಕು. ಯಾವ ಹೋಬಳಿಗಳಲ್ಲಿ ಮೇವಿನ ಸಮಸ್ಯೆ ಇದೆ ಅಲ್ಲಿಗೆ ತೆರಳಿ ವಸ್ತುಸ್ಥಿತಿ ಬಗ್ಗೆ ಮಾಹಿತಿ ಪಡೆಯಬೇಕು ಎಂದು ತಿಳಿಸಿದರು.
ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳಿಗೆ ಭೇಟಿ ನೀಡಿ ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಸಭೆ ನಡೆಸಬೇಕು ಎಂದು ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಹಂತದಲ್ಲಿ ಕುಡಿಯುವ ನೀರಿನ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಕಡತಗಳು ಬಾಕಿ ಇದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಖುದ್ದು ಕಡತದೊಂದಿಗೆ ಆಗಮಿಸಿ ತಮ್ಮ ಸಹಿ ಪಡೆದುಕೊಂಡು ತೆರಳುವಂತೆ ಸೂಚಿಸಿದರು.
ಚುನಾವಣೆಯಷ್ಟೇ ಬರ ನಿರ್ವಹಣೆಯೂ ಮುಖ್ಯವಾಗಿದೆ. ಖಾಸಗಿ ಬೋರ್‍ವೆಲ್‍ಗಳ ಮಾಲೀಕರೊಂದಿಗೆ ಒಪ್ಪಂದ ಮಾಡಿಕೊಳ್ಳುವಾಗ ಪೈಪ್‍ಲೈನ್ ಅಳವಡಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು. ಜಿಲ್ಲೆಗೆ ಅನ್ವಯವಾಗುವಂತೆ ಟ್ಯಾಂಕರ್ ಮೂಲಕ ನೀರು ಪೂರೈಸಲು ಏಕರೂಪ ದರ ಹಾಗೂ ಏಜೆನ್ಸಿಯನ್ನು ನಿಗಧಿಪಡಿಸಲಾಗಿದ್ದು, ಎಸ್‍ಡಿಆರ್‍ಎಫ್ ಮೂಲಕ ಪಾವತಿಗೆ ಕ್ರಮ ಕೈಗೊಳ್ಳುವುದು ಎಂದು ಸೂಚಿಸಿದರು.
ನೀರಿಗಾಗಿ ಕೊರೆದಂತಹ ಕೊಳವೆ ಬಾವಿಗಳನ್ನು ಕಡ್ಡಾಯವಾಗಿ ಮುಚ್ಚಬೇಕು. ಯಾವುದೇ ಕಾರಣಕ್ಕೂ ಕೊಳವೆ ಬಾವಿಗಳು ತೆರೆದ ಸ್ಥಿತಿಯಲ್ಲಿ ಇರಬಾರದು. ಈ ಕುರಿತಂತೆ ಪಿಡಿಓ ಮತ್ತು ವಿಎ ಗಳು ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿ ಜಿಪಿಎಸ್ ಫೋಟೋ ಸಹಿತ ಮಾಹಿತಿ ಒದಗಿಸಬೇಕು. ಇಓ ಮತ್ತು ತಹಶೀಲ್ದಾರ್‍ಗಳು ಈ ಕುರಿತಂತೆ ಕಡ್ಡಾಯವಾಗಿ ವರದಿಯನ್ನು ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಬೇಕು ಎಂದು ಸೂಚಿಸಿದರು.
ಕೊಳವೆ ಬಾವಿಗಳನ್ನು ಮತ್ತಷ್ಟು ಆಳವಾಗಿ ಕೊರೆಸುವಿಕೆ ಮತ್ತು ಇತರೆ ದುರಸ್ತಿ ಕಾರ್ಯಗಳನ್ನು ನಿಯಮಾನುಸಾರ ಕೈಗೊಳ್ಳುವುದು. ಈ ಬಗ್ಗೆ ಪರಿಶೀಲಿಸಲು ಆಯಾ ನೋಡಲ್ ಅಧಿಕಾರಿಗಳನ್ನು ಕಳುಹಿಸಲಾಗುವುದು ಎಂದು ತಿಳಿಸಿದರು.
ಜಾನುವಾರುಗಳಿಗಾಗಿ ನಿರ್ಮಿಸಲಾಗಿರುವ ಜಾನುವಾರು ಕುಡಿಯುವ ನೀರಿನ ತೊಟ್ಟಿಯನ್ನು ತುಂಬಿಸಲು ಪಿಡಿಓಗಳು ಕ್ರಮವಹಿಸಬೇಕು. ಇಓಗಳು ಈ ಕುರಿತು ಗಮನಹರಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.