ತುಮಕೂರು:ಒಳ ಮೀಸಲಾತಿ ವರ್ಗೀಕರಣದ ಪರವಾಗಿ ಸುಪ್ರಿಂಕೋರ್ಟು ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಇಂದು ತುಮಕೂರು ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟದವತಿಯಿಂದ ನಗರ ಟೌನ್ಹಾಲ್ ವೃತ್ತದಲ್ಲಿ ವಿಜಯೋತ್ಸವ ಆಚರಿಸಲಾಯಿತು.
ನಗರ ಟೌನ್ಹಾಲ್ ವೃತ್ತದಲ್ಲಿ ಪಟಾಕಿ ಸಿಡಿಸಿ,ಸಿಹಿ ಹಂಚಿ ವಿಜಯೋತ್ಸವ ಆಚರಿಸಿದ ನೂರಾರು ದಲಿತ ಮುಖಂಡರು, ಸುಪ್ರಿಂಕೋರ್ಟು ತೀರ್ಪು ಮೂರು ದಶಕಗಳ ಮಾದಿಗ ಮತ್ತು ಒಳ ಮೀಸಲಾತಿ ಪರ ಹೋರಾಟಕ್ಕೆ ಸಂದ ಜಯ ಎಂದರು.
ಈ ವೇಳೆ ಮಾತನಾಡಿದ ದಲಿತಯುವ ಮುಖಂಡರಾದ ಮಾರುತಿ ಪ್ರಸಾದ್,ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಜಾತಿಗಳಲ್ಲಿ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ಹಂಚಿಕೆ ಮಾಡಬೇಕೆಂಬ ನಿಟ್ಟಿನಲ್ಲಿ ಸುಮಾರು ಐದು ದಶಕಗಳ ಹಿಂದಿನಿಂದಲೂ ಹೋರಾಟ ನಡೆಸುತ್ತಿದ್ದರೂ,ಕರ್ನಾಟಕದಲ್ಲಿ ಇದಕ್ಕೆ ಕಾನೂನಾತ್ಮಕ ಚಾಲನೆ ಸಿಕ್ಕಿದ್ದು ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿ, ಅವರು ನ್ಯಾ.ಎ.ಜೆ.ಸದಾಶಿವ ಆಯೋಗವನ್ನು ನೇಮಕ ಮಾಡುವ ಮೂಲಕ ಒಳಮೀಸಲಾತಿ ವರ್ಗೀಕರಣಕ್ಕೆ ಮುನ್ನುಡಿ ಬರೆದರು. ಆನಂತರದಲ್ಲಿ ಹಲವಾರು ಪ್ರಯತ್ನಗಳು ನಡೆದಿದ್ದವು.2023ರ ವಿಧಾನಸಭೆ ಚುನಾವಣೆಯ ಪ್ರಾಣಾಳಿಕಾ ಸಮಿತಿಯ ಅಧ್ಯಕ್ಷರಾಗಿ ಡಾ.ಜಿ.ಪರಮೇಶ್ವರ್ ಅವರು ಒಳಮೀಸಲಾತಿ ಜಾರಿಯ ಭರವಸೆ ನೀಡಿತ್ತು ಎಂದರು.
ಇಂದು ಸುಪ್ರಿಂಕೋರ್ಟು ತೀರ್ಪು ಅದಕ್ಕೆ ಪೂರಕವಾಗಿದ್ದು,ಪ್ರಸ್ತುತ ಸಿದ್ದರಾಮಯ್ಯ ನೇತೃತ್ವದ ಸರಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದು, ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಒಳಮೀಸಲಾತಿ ಜಾರಿ ಮಾಡಿಯೇ ತೀರುತ್ತಾರೆ ಎಂಬ ನಂಬಿಕೆ ನಮ್ಮಲಿದೆ.ಕಾಂಗ್ರೆಸ್ ಪಕ್ಷ ಹಾಗೂ ಪಕ್ಷದ ಎಲ್ಲಾ ನಾಯಕರು ಒಳಮೀಸಲಾತಿ ಪರವಾಗಿದ್ದಾರೆ ಎಂದರು.
ಉಪನ್ಯಾಸಕ ಹಾಗೂ ಹೋರಾಟಗಾರ ಕೊಟ್ಟಶಂಕರ್ ಮಾತನಾಡಿ,ಇದೊಂದು ಐತಿಹಾಸಿಕ ತೀರ್ಪು.ಆಂಧ್ರ ಪ್ರದೇಶದಲ್ಲಿ ಜಾರಿಯಲ್ಲಿದ್ದ ಒಳಮೀಸಲಾತಿ ಜಾರಿ ಕುರಿತಂತೆ ಇದ್ದ ಕೇಸಿಗೆ ಗುರುವಾರ 7 ನ್ಯಾಯಾಮೂರ್ತಿಗಳು ತೀರ್ಪು ನೀಡಿದ್ದು, ಒಳಮೀಸಲಾತಿ ವರ್ಗೀಕರಣವನ್ನು ಆಯಾಯ ರಾಜ್ಯಗಳು ಮಾಡಲು ಒಪ್ಪಿಗೆ ನೀಡಿದೆ.ಈಗಾಗಲೇ ಆಂದ್ರ ಪ್ರದೇಶದ ಮುಖ್ಯಮಂತ್ರಿ ರೇವಂತರೆಡ್ಡಿ ಅವರು ಒಳಮೀಸಲಾತಿ ಜಾರಿ ಮಾಡುವ ಭರವಸೆ ನೀಡಿದ್ದು,ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಸಹ ಒಳಮೀಸಲಾತಿ ಜಾರಿ ಮಾಡಲಿದ್ದಾರೆ.ಕ್ರಿಮಿಲೇಯರ್ ಸಂಬಂಧಿಸಿದ್ದ ಇದ್ದ ತಾಂತ್ರಿಕ ತೊಡಕಿನ ಬಗ್ಗೆ ತಜ್ಞರ ಅಭಿಪ್ರಾಯ ಕೇಳಿದ್ದಾರೆ ಎಂದರು.
ದಲಿತ ಮುಖಂಡ ಕೋಡಿಯಾಲ ಮಹದೇವ್, ದಸಂಸ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ ಮಾತನಾಡಿದರು.
ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ಬಂಡೆಕುಮಾರ್, ಶ್ರೀನಿವಾಸಮೂರ್ತಿ, ಗಂಲಗಂಜಿಹಳ್ಳಿ ಸುರೇಶ್,ಗೂಳಹರಿವೆ ನಾಗರಾಜು, ಜಯಚಂದ್ರ, ಉರ್ಡಿಗೆರೆ ಕೆಂಪರಾಜು,ಆಟೋ ಶಿವರಾಜು ಸೇರಿದಂತೆ ಹಲವರು ಭಾಗವಹಿಸಿದ್ದರು.
ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ ಸಂಘಟನೆಗಳು:

ಸುಮಾರು ವರ್ಷಗಳಿಂದ ಪರಿಶಿಷ್ಟ ಜಾತಿಗೆ ಸೇರಿದ ಮಾದಿಗ ಸೇರಿದಂತೆ ಇತರೆ ಉಪಜಾತಿ ಸಮುದಾಯಗಳು ಜಸ್ಟೀಸ್ ಸದಾಶಿವ ಅವರ ವರದಿಯನ್ನು ಅಂಗೀಕರಿಸುವಂತೆ ಅನೇಕ ಹೋರಾಟ ಪ್ರತಿಭಟನೆ ಪಾದಯಾತ್ರೆಗಳು ನಡೆದರು ಸರ್ಕಾರಗಳು ಈ ಬೇಡಿಕೆಯನ್ನು ಈಡೇರಿಸಲಿಲ್ಲ ಆದ್ಯಗೆಯು ಸಮುದಾಯದ ಮುಖಂಡರು ಸುಪ್ರೀಂಕೋರ್ಟ್ ಮೆಟ್ಟಿಲೇರಿದಾಗ ಇದೀಗ ಸುಪ್ರೀಂ ಕೋರ್ಟ್ ಪರಿಶಿಷ್ಟ ಜಾತಿಯ ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿಯನ್ನು ನೀಡಲು ಮಹತ್ವದ ತೀರ್ಪು ಪ್ರಕಟಿಸಿದ್ದು ಈ ಐತಿಹಾಸಿಕ ತೀರ್ಪನ್ನು ಸ್ವಾಗತಿಸಿ ಮಾದಿಗ ಸಮುದಾಯ ಸೇರಿದಂತೆ ಇತರೆ ಉಪಜಾತಿ ಸಮುದಾಯದ ಮುಖಂಡರುಗಳು ತುಮಕೂರಿನ ಟೌನ್ ಹಾಲ್ ಸರ್ಕಲ್ ನಲ್ಲಿ ಕರ್ನಾಟಕ ಮಾದಿಗ ದಂಡೋರ ಸಮಿತಿ, ಬಿಜೆಪಿ ಜಿಲ್ಲಾ ಎಸ್ಸಿ ಮೋರ್ಚಾ ಸೇರಿದಂತೆ ಮಾದಿಗ ಸಮುದಾಯದ ವಿವಿಧ ಸಂಘಟನೆಗಳ ಮುಖಂಡರು ಘೋಷಣೆಗಳನ್ನು ಕೂಗಿ ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಸುಪ್ರೀಂ ಕೋರ್ಟ್ ನ ಐತಿಹಾಸಿಕ ನಿರ್ಧಾರವನ್ನು ಸ್ವಾಗತಿಸಿದರು.
ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹಾಗೂ ಮಾದಿಗ ಸಮುದಾಯದ ಮುಖಂಡ ವೈ.ಹೆಚ್. ಹುಚ್ಚಯ್ಯ ಮಾತನಾಡಿ ಸುಪ್ರೀಂಕೋರ್ಟ್ ಸುಮಾರು ವರ್ಷಗಳ ಕಾಲ ನೆನೆಗುದಿಗೆ ಬಿದ್ದಿದ್ದ ನ್ಯಾಯಮೂರ್ತಿ ಸದಾಶಿವರ ಅವರ ವರದಿಯನ್ನು ಹಾಗೂ ಮೀಸಲಾತಿ ವರ್ಗೀಕರಣ ಹೋರಾಟ ಸಮಿತಿ ಮಾದಿಗ ದಂಡೋರ ಸೇರಿದಂತೆ ಇತರೆ ಸಂಘಟನೆಗಳು ನಡೆಸಿದ ಹೋರಾಟಕ್ಕೆ ಸುಪ್ರೀಂಕೋರ್ಟ್ ಇಂದು ಐತಿಹಾಸಿಕವಾದ ಮಹತ್ವದ ತೀರ್ಪನ್ನ ಪ್ರಕಟಿಸಿದ್ದು ಇದು ಮಾದಿಗ ಸಮುದಾಯ ಸೇರಿದಂತೆ ಅದರ ಉಪಜಾತಿಗಳಿಗೆ ಇನ್ನಿಲ್ಲದ ಸಂತಸವನ್ನು ಉಂಟು ಮಾಡಿದೆ ಎಂದು ಹರ್ಷ ವ್ಯಕ್ತ ಪಡಿಸಿದರು.
ಮಾದಿಗ ದಂಡೋರ ರಾಜ್ಯಾಧ್ಯಕ್ಷ ಪಾವಗಡ ಶ್ರೀರಾಮ್, ಜಿಲ್ಲಾ ಮಾದಿಗ ದಂಡೋರ ಪ್ರಧಾನ ಕಾರ್ಯದರ್ಶಿ ಊರ್ಡಿಗೆರೆ ಕೆಂಪರಾಜು, ವಕೀಲ ಹಾಗೂ ಸಮುದಾಯದ ಮುಖಂಡ ಜೆ.ಸಿ ರಂಗಧಾಮಯ್ಯನವರು ಮಾತನಾಡಿದರು.
ಈ ಸಂದರ್ಭದಲ್ಲಿ ಸಮುದಾಯದ ಮುಖಂಡರುಗಳಾದ ವೈಎಚ್ ಹುಚ್ಚಯ್ಯ, ಪಾವಗಡ ಶ್ರೀ ರಾಮ್, ಮಾದಿಗ ದಂಡೋರದ ನರಸೀಯಪ್ಪ, ಬಿಜೆಪಿ ಜಿಲ್ಲಾ ಎಸ್ಸಿಮೋರ್ಚಾದ ಒಳಕಲ್ ಆಂಜಿನಪ್ಪ, ಜಿಲ್ಲಾ ಎಸ್ ಸಿ ಮೋರ್ಚಾ ಅಧ್ಯಕ್ಷರು ಸುರೇಶ್, ಗುಲಗಂಜಿಹಳ್ಳಿ ರಮೇಶ್, ಪಾಪಣ್ಣ, ಸೋರೆಕುಂಟೆ ಯೋಗೇಶ್, ರಂಗಸ್ವಾಮಿ, ಚನ್ನಬಸವಯ್ಯ ಸೇರಿದಂತೆ ಸಮುದಾಯದ ಇತರೆ ಮುಖಂಡರುಗಳು ಉಪಸ್ಥಿತರಿದ್ದರು,