ಸೆ.15ರಂದು 2500 ಕಿ.ಮೀ. ಉದ್ದದ ಐತಿಹಾಸಿಕ ಮಾನವ ಸರಪಳಿ : ಡಾ.ಜಿ. ಪರಮೇಶ್ವರ್

ತುಮಕೂರು : ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದ ಪ್ರಯುಕ್ತ ಪ್ರಜಾ ಪ್ರಭುತ್ವ ಮತ್ತು ಸಂವಿಧಾನದ ಪ್ರಾಮುಖ್ಯತೆಯನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಸೆಪ್ಟೆಂಬರ್ 15ರಂದು ಬೀದರ್ ಜಿಲ್ಲೆಯಿಂದ ಚಾಮರಾಜನಗರ ಜಿಲ್ಲೆವರೆಗೆ ನಿರ್ಮಾಣ ಮಾಡಲು ಉದ್ದೇಶಿಸಿರುವ 2500 ಕಿ.ಮೀ. ಉದ್ದದ ಮಾನವ ಸರಪಳಿಯು ವಿಶ್ವ ದಾಖಲೆಯನ್ನು ಸೃಷ್ಟಿಸಲಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ.ಪರಮೇಶ್ವರ್ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಪಂಚದಲ್ಲಿ ಯಾವುದೇ ಇಂತಹ ಮಾನವ ಸರಪಳಿ ಮಾಡಿದ ಉದಾಹರಣೆಗಳಿಲ್ಲ. ಸುಮಾರು 25 ಲಕ್ಷ ಜನರಿಂದ ನಿರ್ಮಾಣವಾಗಲಿರುವ ಈ ಮಾನವ ಸರಪಳಿಯು ವಿಶ್ವದಾಖಲೆಯನ್ನು ಸೃಷ್ಟಿಸಲಿದೆ ಎಂದು ಭಾವಿಸಿದ್ದೇನೆ ಎಂದರಲ್ಲದೆ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸಂವಿಧಾನ ಹಾಗೂ ಡಾ: ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಜನ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಈ ನಿಟ್ಟಿನಲ್ಲಿ ಯುವಜನತೆ, ಬಡವರು, ಮಹಿಳೆಯರಿಗೆ ಸಂವಿಧಾನದ ಮಹತ್ವವನ್ನು ತಿಳಿಸಲು ರಾಜ್ಯದ 6000ಕ್ಕು ಹೆಚ್ಚು ಗ್ರಾಮ ಪಂಚಾಯಿತಿಗಳಲ್ಲಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮಗಳನ್ನು ನಡೆಸಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ 90 ಕಿ.ಮೀ. ಮಾನವ ಸರಪಳಿ :-

ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸೆಪ್ಟೆಂಬರ್ 15ರಂದು ಜಿಲ್ಲೆಯ ಶಿರಾ ತಾಲೂಕು ತಾವರೆಕೆರೆ ಗ್ರಾಮ ಪಂಚಾಯಿತಿ ಉಜ್ಜನಕುಂಟೆ ಗ್ರಾಮದಿಂದ ತುಮಕೂರು ತಾಲೂಕು ಹಿರೇಹಳ್ಳಿ ಗ್ರಾಮ ಪಂಚಾಯಿತಿ ನಂದಿಹಳ್ಳಿ ಗ್ರಾಮದವರೆಗೆ 90 ಕಿ.ಮೀ. ಉದ್ದದ ಮಾನವ ಸರಪಳಿಯನ್ನು ನಿರ್ಮಿಸಲು ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಪೊಲೀಸ್ ಇಲಾಖೆಯಿಂದ ಪೂರ್ವ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸರ್ಕಾರ ನಿರ್ಣಯಿಸಿರುವ ಸ್ಥಳದಲ್ಲಿ ಬೆಳಿಗ್ಗೆ 8 ರಿಂದ ಪ್ರಾರಂಭವಾಗಿ 10 ಗಂಟೆವರೆಗೆ ಮಾನವ ಸರಪಳಿಯನ್ನು ನಿರ್ಮಿಸಲಾಗುವುದು. ಮಾನವ ಸರಪಳಿಯಲ್ಲಿ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿ-ಸಿಬ್ಬಂದಿ, ಪ್ರೌಢ ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು, ಸಂಘ-ಸಂಸ್ಥೆ, ದಲಿತ ಮತ್ತು ಮಹಿಳಾಪರ ಸಂಘಟನೆಗಳು, ಸ್ವಯಂ ಸೇವಾ ಸಂಸ್ಥೆಗಳು ಭಾಗವಹಿಸಲಿವೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಹಾದು ಹೋಗಲಿರುವ ಮಾನವ ಸರಪಳಿ ಕಾರ್ಯಕ್ರಮದ ಯಶಸ್ವಿಗಾಗಿ ಪ್ರತಿ 100 ಮೀಟರ್‍ಗೆ ಒಬ್ಬ ಸೆಕ್ಷನ್ ಅಧಿಕಾರಿಯಂತೆ ಒಟ್ಟು 900 ಅಧಿಕಾರಿಗಳನ್ನು ನೇಮಿಸಲಾಗಿದೆ. ಅಲ್ಲದೆ ಪ್ರತಿ ಕಿ.ಮೀ. ಗೆ ಒಬ್ಬ ನೋಡೆಲ್ ಅಧಿಕಾರಿಯಂತೆ 90 ತಾಲ್ಲೂಕು ಮಟ್ಟದ ಅಧಿಕಾರಿ, ಪ್ರತಿ 5 ಕಿ.ಮೀ.ಗೆ ಒಬ್ಬರಂತೆ 18 ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೇಮಿಸಲಾಗಿದೆ. ಶಿರಾ ಮತ್ತು ತುಮಕೂರು ತಾಲ್ಲೂಕಿನ ತಹಸೀಲ್ದಾರ್, ಕಾರ್ಯನಿರ್ವಾಹಕ ಅಧಿಕಾರಿಗಳು, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ, ಸ್ಥಳೀಯವಾಗಿ ಆಯಾ ತಾಲ್ಲೂಕು ವ್ಯಾಪ್ತಿಯ ಜವಾಬ್ದಾರಿಯನ್ನು ವಹಿಸಲಾಗಿದೆ ಹಾಗೂ ಪ್ರತಿ 30 ಕಿ.ಮೀ.ಗೆ ಒಬ್ಬರಂತೆ 3 ಮಂದಿ ಉಪ ವಿಭಾಗಾಧಿಕಾರಿಗಳನ್ನು ನೇಮಿಸಲಾಗಿದೆ ಎಂದು ನುಡಿದರು.

ಈ ಮಾನವ ಸರಪಳಿ ಕಾರ್ಯಕ್ರಮಕ್ಕೆ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆ ಸೇರಿದಂತೆ 330 ಗ್ರಾಮ ಪಂಚಾಯ್ತಿಯ ಎಲ್ಲಾ ಸಾರ್ವಜನಿಕ ಬಂಧುಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಜನ ಪ್ರತಿನಿಧಿಗಳು, ಕಲಾವಿದರಿಗೆ ಮಾಹಿತಿ ನೀಡಿ ಕಾರ್ಯಕ್ರಮದಲ್ಲಿ ಮುಕ್ತವಾಗಿ ಪಾಲ್ಗೊಳ್ಳುವಂತೆ ಆಹ್ವಾನಿಸಲಾಗಿದೆ ಎಂದು ತಿಳಿಸಿದರು.

ಸಂವಿಧಾನದಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಜೊತೆಗೆ ಪತ್ರಿಕೋದ್ಯಮವನ್ನೂ ಸಹ ಪ್ರಜಾಪ್ರಭುತ್ವದ ಒಂದು ಭಾಗವೆಂದು ಕರೆಯಲಾಗಿದೆ. ನಾನು ಬೇರೆ ದೇಶಗಳ ಸಂವಿಧಾನವನ್ನು ಓದಿದ್ದೇನೆ. ಭಾರತದ ಸಂವಿಧಾನಕ್ಕೆ ಬೇರೆ ದೇಶಗಳ ಸಂವಿಧಾನವನ್ನು ಹೋಲಿಸಲು ಸಾಧ್ಯವೇ ಇಲ್ಲ. ನಮಗೆ ಸಂವಿಧಾನವು ಭಗವದ್ಗೀತೆ, ಕುರಾನ್, ಬೈಬಲ್, ಗುರುಗ್ರಂಥ ಎಲ್ಲವೂ ಆಗಿದೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು, ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ, ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ, ಉಪವಿಭಾಗಾಧಿಕಾರಿಗಳಾದ ಗೌರವಕುಮಾರ್ ಶೆಟ್ಟಿ ಹಾಗೂ ಸಪ್ತಶ್ರೀ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *