ತುಮಕೂರು: ಆಪರೇಷನ್ ಸಿಂಧೂರ ದೇಶದ ಐತಿಹಾಸಿಕ ಯಶಸ್ಸು, ನಮ್ಮ ಮೇಲೆ ದಾಳಿ ಮಾಡಿದವರಿಗೆ ತಕ್ಕ ಉತ್ತರ ನೀಡುತ್ತೇವೆ ಎಂಬ ಸಂದೇಶ. ಆಪರೇಷನ್ ಸಿಂಧೂರ ವಿಜಯೋತ್ಸವ ದೇಶದ ಸೇನೆಯ ಪರಾಕ್ರಮಕ್ಕೆ ಸಲ್ಲಿಸುವ ಅಭಿನಂದನೆ ಎಂದು ಮೇಘಾಲಯ ರಾಜ್ಯ ರಾಜ್ಯಪಾಲ ಸಿ.ಹೆಚ್.ವಿಜಯಶಂಕರ್ ಹೇಳಿದರು.
ನಗರದ ಸರ್ಕಾರ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಆಪರೇಷನ್ ಸಿಂಧೂರ ವಿಜಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಏಪ್ರಿಲ್ 22ರಂದು ಪೆಹಲ್ಗಾಮ್‍ನಲ್ಲಿ ಭಯೋತ್ಪಾದಕರು ಅಮಾಯಕ ಪ್ರವಾಸಿಗರ ಮೇಲೆ ದಾಳಿ ನಡೆಸಿ ಹತ್ಯೆ ನಡೆಸಿದ ಕೃತ್ಯಕ್ಕೆ ಪ್ರತೀಕಾರವಾಗಿ ಭಯೋತ್ಪಾದಕರ ವಿರುದ್ಧ ನಡೆದ ಯಶಸ್ವಿ ದಾಳಿ ಎಂದರು.
ಪೆಹಲ್ಗಾಮ್ ದಾಳಿ ನಡೆದ ನಂತರ ಪ್ರಧಾನಿಯವರು ಮೂರೂ ವಿಭಾಗದ ಸೇನಾ ಮುಖ್ಯಸ್ಥರನ್ನು ಕರೆಸಿ, ದಾಳಿಗೆ ಪ್ರತೀಕಾರದ ತಂತ್ರ ರೂಪಿಸಿ ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಮುಗಿಸಿ ತಕ್ಕ ಉತ್ತರ ನೀಡುವ ಶಕ್ತಿ ತಮಗಿದೆ ಎಂಬ ಸಂದೇಶ ನೀಡಿದರು. ಈ ಕಾರ್ಯಾಚರಣೆಯಲ್ಲಿ ಸೇನೆಯ ಪರಾಕ್ರಮ, ಯಶಸ್ಸು ಅಭಿನಂದಿಸೋಣ, ಶೌರ್ಯ, ಏಕತೆ ದೇಶಭಕ್ತಿ ಹಿನ್ನೆಲೆಯಲ್ಲಿ ಆಪರೇಷನ್ ಸಿಂಧೂರ ವಿಜಯೋತ್ಸವ ನಡೆದಿದೆ ಎಂದು ಹೇಳಿದರು.
ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಮಾತನಾಡಿ, ಆಪರೇಷನ್ ಸಿಂಧೂರ ಭಯೋತ್ಪಾದನೆ ವಿರುದ್ಧ ಹೊಸ ಮಾನದಂಡ, ದೇಶದ ಮೇಲಿನ ದಾಳಿ, ಹಕ್ಕುಗಳ ರಕ್ಷಣೆಗೆ ಹಿಂಜರಿಯುವುದಿಲ್ಲ ಎಂಬುದು ಈ ಕಾರ್ಯಾಚರಣೆಯಲ್ಲಿ ಸಂದೇಶ ನೀಡಲಾಗಿದೆ. ಪ್ರಧಾನಿ ಮೋದಿಯವರ ನೇತೃತ್ವದ ಸರ್ಕಾದಲ್ಲಿ ದೇಶ ಸುಭದ್ರವಾಗಿದೆ ಎಂದರು.

ಪೆಹಲ್ಗಾಮ್‍ನಲ್ಲಿ ಭಯೋತ್ಪಾದಕರು ಧರ್ಮ ವಿಚಾರಿಸಿ ಹಿಂದುಗಳನ್ನು ಗುರಿಯಾಗಿಸಿ ಹತ್ಯೆ ಮಾಡಿ, ದೇಶದಲ್ಲಿ ಕೋಮು ಸೌಹಾರ್ದತೆ ಮುರಿಯುವ ಪ್ರಯತ್ನ ಮಾಡಿದ್ದರು. ಆದರೆ ನಮ್ಮ ಸೇನಾ ಪಡೆ ನಿಖರ ದಾಳಿ ನಡೆಸಿ ಒಂದೇ ಏಟಿಗೆ ಭಯೋತ್ಪಾದಕರನ್ನು ಧ್ವಂಸ ಮಾಡಿತು ಎಂದು ಹೇಳಿದರು.
ಶಾಸಕ ಬಿ.ಸುರೇಶ್‍ಗೌಡ ಮಾತನಾಡಿ, ಪೆಹಲ್ಗಾಮ್‍ನಲ್ಲಿ ದಾಳಿ ಮಾಡಿದ ಭಯೋತ್ಪಾದಕರು ಧರ್ಮ ಕೇಳಿ, ಕಲ್ಮಾ ಪಠಿಸಲು ಹೇಳು ಹಿಂದೂಗಳನ್ನೇ ಗುರುತಿಸಿ ಗುಂಡಿಕ್ಕಿ ಹತ್ಯೆ ಮಾಡಿದರು. ಈ ಕೃತ್ಯ ಕೇವಲ ಪೆಹಲ್ಗಾಮ್ ಪ್ರವಾಸಿರ ಮೇಲೆ ನಡೆದುದ್ದಲ್ಲ, ಇಡೀ ದೇಶದ ಮೇಲೆ ನಡೆದಂತೆ. ಮೋದಿ ಸರ್ಕಾರ ನಮ್ಮ ಬಲಿಷ್ಠ ರಕ್ಷಣಾ ಪಡೆ ಪ್ರತೀಕಾರದ ತಂತ್ರ ರೂಪಿಸಿ, ಪಾಕಿಸ್ತಾನದ ಭಯೋತ್ಪಾದಕರ ತರಬೇತಿ ಕೇಂದ್ರಗಳು, ಅಡಗುದಾಣಗಳನ್ನು ಗುರುತಿಸಿ ಧ್ವಂಸ ಮಾಡಿತು. ಇದು ಭಾರತೀಯ ಸೇನೆಯ ಸಾಮಥ್ರ್ಯ. ಅದರ ಯಶಸ್ಸನ್ನು ವಿಜಯೋತ್ಸವವಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯದ ಮಾಜಿ ನಿರ್ದೇಶಕ ಡಾ.ಪ್ರಹಲ್ಲಾದ್ ರಾಮ್‍ರಾವ್ ಮಾತನಾಡಿ, ಏಪ್ರಿಲ್ 22ರ ಪೆಹಲ್ಗಾಮ್ ದಾಳಿ ದೇಶದ ಇತಿಹಾಸದಲ್ಲಿ ಕರಾಳ ದಿನವಾಗಿ ಉಳಿಯುತ್ತದೆ ಹಾಗೇ ದಾಳಿಗೆ ಪ್ರತೀಕಾರವಾಗಿ ನಡೆದ ಆಪರೇಷನ್ ಸಿಂಧೂರದ ಯಶಸ್ಸು ಮುಂದಿನ ಪೀಳಿಗೆಗೆ ಪ್ರೇರಣೆಯಾಗುತ್ತದೆ ಎಂದರು.
ಪ್ರತಿಯೊಬ್ಬರೂ ದೇಶಕ್ಕೆ ಕೊಡುಗೆ ನೀಡಬೇಕು ಎಂಬ ಸಂಕಲ್ಪ ಮಾಡಬೇಕು. ಆಪರೇಷನ್ ಸಿಂಧೂರ ಯಶಸ್ಸು ಜಾಗತಿಕ ಮಟ್ಟದಲ್ಲಿ ಭಾರತದ ಶಕ್ತಿ ಸಾಮಥ್ರ್ಯ ಸಾಬೀತಾಗಿದೆ. ಆ ನಂತರದಿಂದ ಹೆಚ್ಚು ಕೈಗಾರಿಕಾ ಸಂಸ್ಥೆಗಳು ಭಾರತಕ್ಕೆ ಬರಲು ಆರಂಭಿಸಿವೆ. ಆಪರೇಷನ್ ಸಿಂಧೂರದ ಯಶಸ್ಸು ಹಲವು ರೀತಿಯಲ್ಲಿ ಭಾರತದ ಶಕ್ತಿ ಹೆಚ್ಚಿಸಿದೆ ಎಂದರು.
ಇಸ್ರೋ ಮಾಜಿ ಅಧ್ಯಕ್ಷ ಡಾ.ಎ.ಎಸ್.ಕಿರಣ್‍ಕುಮಾರ್ ಮಾತನಾಡಿ, ವಿಶ್ವದಲ್ಲಿ ಭಾರತ ಬಲಿಷ್ಠವಾಗಬೇಕಾದರೆ ನಾವು ವಿಜ್ಞಾನ ತಂತ್ರಜ್ಞಾನದಲ್ಲಿ ಪ್ರಗತಿ ಸಾಧಿಸಬೇಕು. ತಂತ್ರಜ್ಞಾನದಿಂದಲೇ ಆಪರೇಷನ್ ಸಿಂಧೂರ ಯಶಸ್ವಿಯಾಗಲು ಸಾಧ್ಯವಾಯಿತು. ಆಪರೇಷನ್ ಸಿಂಧೂರಕ್ಕೆ ಅಗತ್ಯ ಮಾಹಿತಿಯನ್ನು ಬಾಹ್ಯಾಕಾಶದ ಉಪಕರಣಗಳಿಂದ ಪಡೆಯಲು ಸಾಧ್ಯವಾಯಿತು. 2047ಕ್ಕೆ ಭಾರತ ವಿಶ್ವದಲ್ಲಿ ಎತ್ತರದ ಸ್ಥಾನಕ್ಕೆ ಏರಬೇಕೆಂದರೆ ತಂತ್ರಜ್ಞಾನದ ಸಾಮಥ್ರ್ಯ ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದರು.
ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಸಂಸ್ಥಾನದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸೇರಿದಂತೆ ವಿವಿಧ ಮಠಗಳ ಸ್ವಾಮೀಜಿಗಳು ಭಾಗವಹಿಸಿದ್ದರು.
ವಿಜಯೋತ್ಸವ ಆಚರಣಾ ಸಮಿತಿ ಅಧ್ಯಕ್ಷ, ಮಾಜಿ ಸಚಿವ ಸೊಗಡು ಶಿವಣ್ಣ ಅಧ್ಯಕ್ಷತೆವಹಿಸಿದ್ದರು. ಶಾಸಕ ಎಂ.ಟಿ.ಕೃಷ್ಣಪ್ಪ, ಎಂ.ಪಿ.ನಾಡಗೌಡ, ಡಾ.ಎಂ.ಆರ್.ಹುಲಿನಾಯ್ಕರ್, ಸ್ಫೂರ್ತಿ ಚಿದಾನಂದ್, ಆರ್.ಸಿ.ಆಂಜನಪ್ಪ, ಆಚರಣಾ ಸಮಿತಿಯ ಆಶಾ ಪ್ರಸನ್ನಕುಮಾರ್, ಸಂಪಿಗೆ ಜಗದೀಶ್, ಪ್ರಭಾಕರ್, ಡಾ.ಎಸ್.ಪರಮೇಶ್, ಪ್ರದೀಪ್‍ಕುಮಾರ್, ಧನಿಯಾಕುಮಾರ್ ಮೊದಲಾದವರು ಭಾಗವಹಿಸಿದ್ದರು.