ಹೆದ್ದಾರಿ ಭೂಸ್ವಾಧೀನ ಪ್ರಕ್ರಿಯೆಗೆ ವಿರೋಧ – ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ,ಪಡಿತರ ತೂಕ ಪರಿಶೀಲನೆ

ತುಮಕೂರು : ನಗರದ ಹೊರವಲಯದಲ್ಲಿರುವ ನಂದಿಹಳ್ಳಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಬೈರಸಂದ್ರ ಗ್ರಾಮದ ರೈತರು ಭೂಸ್ವಾಧೀನ ಪ್ರಕ್ರಿಯೆಗೆ ವಿರೋಧ ವ್ಯಕ್ತಪಡಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರೈತರ ಆತಂಕ, ಸಮಸ್ಯೆಗಳು ಹಾಗೂ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಎದುರಾಗುತ್ತಿರುವ ಅಡಚಣೆಗಳನ್ನು ಗಮನಿಸಿದ ಅವರು, ನ್ಯಾಯಸಮ್ಮತ ಹಾಗೂ ಕಾನೂನುಬದ್ಧ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ರೈತರಿಗೆ ಭರವಸೆ ನೀಡಿದರು.

ಕೆಸರುಮಡು ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿದ ಅವರು ಪಡಿತರ ವಿತರಣೆಯಲ್ಲಿ ತೂಕವನ್ನು ಪರಿಶೀಲಿಸಿದರು. ಪಡಿತರ ವಿತರಕನು ಎಲ್ಲಾ ಗ್ರಾಹಕರ ಬೆರಳಚ್ಚನ್ನು (Thumb impression) ಮುಂಚಿತವಾಗಿ ಪಡೆದು ಬಳಿಕ ಒಟ್ಟಾರೆ ಎಲ್ಲರಿಗೂ ಅಕ್ಕಿ ವಿತರಿಸುತ್ತಿರುವುದನ್ನು ಕಂಡು, ವಿತರಕನನ್ನು ತರಾಟೆಗೆ ತೆಗೆದುಕೊಂಡರು. ವಿತರಣೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಬೇಕು. ಪ್ರತಿ ಗ್ರಾಹಕನಿಗೂ ಅವರ ಹಕ್ಕಿನಂತೆ ಪ್ರತ್ಯೇಕವಾಗಿ ಪಡಿತರ ವಿತರಿಸಬೇಕು ಎಂದು ಸೂಚಿಸಿದರು.

ವಿತರಕನು ಸರಿಯಾದ ಪ್ರಮಾಣದಲ್ಲಿ ಅಕ್ಕಿ ಮತ್ತು ಇತರ ಸಾಮಾಗ್ರಿಗಳನ್ನು ವಿತರಿಸುತ್ತಿದ್ದಾನೆಯೇ ಎಂಬುದರ ಬಗ್ಗೆ ಗ್ರಾಹಕರಿಂದ ಅಭಿಪ್ರಾಯಗಳನ್ನು ಪಡೆದುಕೊಂಡರು. ಅಂಗಡಿಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದು, ದಾಸ್ತಾನು ಬಿಲ್‍ಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವಂತೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಭೂ ದಾಖಲೆಗಳ ಇಲಾಖೆ ಉಪನಿರ್ದೇಶಕ ಭಾವನಾ ಬಸವರಾಜು, ತಹಸೀಲ್ದಾರ್ ರಾಜೇಶ್ವರಿ, ವಿಶೇಷ ಭೂ ಸ್ವಾಧೀನ ಅಧಿಕಾರಿ ಧರ್ಮಪಾಲ್ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ ಭೂ ಸ್ವಾಧೀನ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *