ತುಮಕೂರು:ವಿಶ್ವ ಅಂಗಾಂಗ ದಾನದ ದಿನದ ಅಂಗವಾಗಿ ಶ್ರೀದೇವಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವತಿಯಿಂದ ಅಂಗಾಂಗ ದಾನದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ಒಂದು ವಾರಗಳ ಕಾಲ ವಿವಿಧ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀದೇವಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಜಾಗೃತಿ ಅಭಿಯಾನದ ಅಂಗವಾಗಿ ಆಗಸ್ಟ್ 12 ರಂದು ತುಮಕೂರಿನ ಟೌನಹಾಲ್‍ನ ಅಂಬೇಡ್ಕರ್ ಪ್ರತಿಮೆಯ ಮುಂಭಾಗದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಜಾಗೃತಿ ಜಾಥಾಕ್ಕೆ ಜಿಲ್ಲಾಧಿಕಾರಿಗಳ ಶುಭ ಕಲ್ಯಾಣ ಚಾಲನೆ ನೀಡಿದ್ದಾರೆ ಎಂದರು.
ಭಾರತೀಯ ಪರಂಪರೆಯಲ್ಲಿ ವಿದ್ಯಾದಾನ,ಅನ್ನದಾನ,ರಕ್ತದಾನಗಳಿಗೆ ಶ್ರೇಷ್ಠ ಸ್ಥಾನ ನೀಡಲಾಗಿತ್ತು.ಆದರೆ ವಿಜ್ಞಾನ, ತಂತ್ರಜ್ಞಾನ ಬೆಳೆದಂತೆ ಮನುಷ್ಯನ ಅಂಗಾಂಗಗಳ ದಾನ ಬಹಳ ಮಹತ್ವವನ್ನು ಪಡೆದುಕೊಳ್ಳುತ್ತಿದೆ.ವಿಶ್ವದಲ್ಲಿ ಅಂಕಿ ಅಂಶಗಳ ಪ್ರಕಾರ ಸುಮಾರು 06 ಲಕ್ಷ ಜನರು ಅಂಗಾಂಗ ಸಿಗದೆ ಸಾವನ್ನಪ್ಪುತಿದ್ದಾರೆ.ಭಾರತದಲ್ಲಿ ಪ್ರತಿವರ್ಷ 20 ಸಾವಿರ ಜನರು ಜೀವ ಕಳೆದುಕೊಳ್ಳುತಿದ್ದಾರೆ.ಧಾರ್ಮಿಕ ಭಾವನೆಗಳು,ಮೂಢನಂಬಿಕೆ ಮತ್ತಿತರರ ಕಾರಣಗಳಿಂದ ಜನರು ಸತ್ತ ಮೇಲು ತಮ್ಮ ಅಂಗಾಂಗ ದಾನ ಮಾಡಲು ಹಿಂದೆಟು ಹಾಕುತ್ತಿದ್ದಾರೆ.ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಆಗಸ್ಟ್ 13 ರನ್ನು ವಿಶ್ವ ಅಂಗಾಂಗ ದಾನದ ದಿನವನ್ನಾಗಿ ಘೋಷಿಸಿದೆ.ಶ್ರೀದೇವಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸಹ ಮಾನವನ ದೇಹದ ವಿವಿಧ ಅಂಗಾಂಗಗಳ ಕಸಿಗೆ ಇಂಡಿಯನ್ ಮೆಡಿಕಲ್ ಕೌನ್ಸಿಲ್‍ನಿಂದ ಅನುಮೋಧನೆ ಪಡೆದುಕೊಂಡಿದ್ದು,ಇದುವರೆಗೂ ರಕ್ತ ಸಂಬಂಧಿಗಳಿಂದ ಮಾತ್ರ ಅಂಗಾಂಗ ತೆಗೆದು, ಕಸಿ ಮಾಡುವ ಸೇವೆ ಒದಗಿಸುತ್ತಿದ್ದು, ಮುಂದಿನ ದಿನಗಳಲ್ಲಿ ದಾನಿಗಳಿಂದಲೂ ಪಡೆದು, ಅಗತ್ಯ ಇರುವವರಿಗೆ ಜೋಡಿಸುವ ಕೆಲಸ ಮಾಡಲಿದ್ದೇವೆ ಎಂದು ಡಾ.ಹುಲಿನಾಯ್ಕರ್ ತಿಳಿಸಿದರು.
ಶ್ರೀದೇವಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ನಿರ್ದೇಶಕ ಡಾ.ರಮಣ್ ಹುಲಿನಾಯ್ಕರ್ ಮಾತನಾಡಿ,ಜೀವಂತ ಇರುವ ವ್ಯಕ್ತಿ ತನ್ನ ದೇಹದ ಕೆಲ ಅಂಗಾಂಗಗಳನ್ನು ಇತರರಿಗೆ ದಾನ ಮಾಡಬಹುದು.ಆದರೆ ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ದೇಹದ ಅಂಗಾಂಗಗಳಿಂದ ಸುಮಾರು 08 ಜನರಿಗೆ ಜೀವದಾನ ಮಾಡಲು ಅವಕಾಶವಿದೆ. ಬೇಡಿಕೆ ಮತ್ತು ಪೂರೈಕೆ ನಡುವಿನ ಅಂತರವನ್ನು ಕಡಿಮೆ ಮಾಡುವ ಉದ್ದೇಶದಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ರಾಷ್ಟ್ರೀಯ ಅಂಗ ಮತ್ತು ಅಂಗಾಂಗ ಕಸಿ ಸಂಸ್ಥೆ(ನೋಟ್ಟೋ) ಹೆಚ್ಚು ಜಾಗೃತಿ ಮೂಡಿಸಲು ವ್ಯಾಪಕ ಪ್ರಚಾರ ಕೈಗೊಂಡಿದೆ.ಒಂದು ವರ್ಷದಿಂದ 75 ವರ್ಷದವರೆಗಿನ ವ್ಯಕ್ತಿಗಳು ಅಂಗಾಂಗ ದಾನ ಮಾಡಲು ಅವಕಾಶವಿದೆ.ಶ್ರೀದೇವಿ ಮೆಡಿಕಲ್ ಕಾಲೇಜು ಇದುವರೆಗೆ ಜಿಲ್ಲೆಯಲ್ಲಿ ಅತಿ ಹೆಚ್ಚು ಮೂತ್ರಪಿಂಡ ಕಸಿ ಮಾಡಿದೆ.ಹೈಟೆಕ್ ಓಟಿ, ಡಯಾಲಿಸಿಸ್, ಐಸಿಸಿ ಮತ್ತು ಡಯಾಗ್ನೇಸ್ ನೊಂದಿಗೆ ಒಳ್ಳೆಯ ಮೂತ್ರಪಿಂಡ ಕಸಿ ಮಾಡುವ ತಂಡವನ್ನು ಹೊಂದಿದೆ ಎಂದರು.
ವಿಶ್ವ ಅಂಗಾಂಗ ದಾನ ದಿನದ ಅಂಗವಾಗಿ ಶ್ರೀದೇವಿ ಕಾಲೇಜಿನಲ್ಲಿ ಆ.13 ರಂದು ತಜ್ಞರೊಂದಿಗೆ ಸಂವಾದ ಕಾರ್ಯಕ್ರಮವನ್ನು ಆಯೋಜಿಸಿದ್ದು, ಹಿರಿಯ ತಜ್ಞರಾದ ಡಾ.ಸುಂದರ್ ಶಂಕರನ್ ಅವರು ಮಾತನಾಡಲಿದ್ದಾರೆ.ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಗ್ರಾಮೀಣ ಭಾಗದಲ್ಲಿ ಶ್ರೀದೇವಿ ಆಸ್ಪತ್ರೆಯ ಕಡೆಯಿಂದ ಜಾಗೃತಿ ಶಿಬಿರಗಳನ್ನು ಸಹ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಡಾ.ರಮಣ್ ಹುಲಿನಾಯ್ಕರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹಿರಿಯ ತಜ್ಞರಾದ ಡಾ.ಯಶವಂತ್, ಡಾ.ಲಾವಣ್ಯ, ಎಂ.ಎಸ್.ಪಾಟೀಲ್,ಡಾ.ಮೋಹನ್,ಶ್ರೀದೇವಿ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಹರೇಂದ್ರÀ್ರಕುಮಾರ್ ಮತ್ತಿತರರಿದ್ದರು.