ತುಮಕೂರು: ಭಾರತದ ಸಂವಿಧಾನ ಜಗತ್ತಿನಲ್ಲೇ ಏಕೈಕ ಮಾನವೀಯ, ಸಮೃದ್ಧ, ಅಪ್ರತಿಮ ಸಂವಿಧಾನವಾಗಿದೆ. ಸಂವಿಧಾನದ ಮುಖ್ಯ ದೇಯೋದ್ದೇಶ ನ್ಯಾಯ, ಸ್ವಾತಂತ್ರ್ಯ, ಸಮಾನತೆಯನ್ನು ಪ್ರತಿಯೊಬ್ಬ ಭಾರತೀಯ ನಾಗರಿಕನಿಗೆ ದೊರೆಯುವಂತೆ ಮಾಡುವುದಾಗಿದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಡಾ. ಹೆಚ್. ಬಿ. ಪ್ರಭಾಕರ ಶಾಸ್ತ್ರಿ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಭಾನುವಾರ ನಡೆದ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ದೇಶದ ಸರ್ವೋತಮುಖ ಅಭಿವೃದ್ಧಿಯಲ್ಲಿ ಸಂವಿಧಾನದ ಪಾತ್ರ ಮಹತ್ವದ್ದು. ಸರ್ವರಿಗೂ ಆರ್ಥಿಕ, ಸಾಮಾಜಿಕ, ರಾಜಕೀಯ ಸಮಾನತೆ ನೀಡುವ ಆಶಯ ಹೊಂದಿದ ಸಂವಿಧಾನವನ್ನು ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಲಾಗುತ್ತಿದೆ. ಹೋರಾಟಗಳು, ಚಳುವಳಿಗಳು ಮೌಲ್ಯಯುತವಾಗಿರಬೇಕೆ ವಿನಾ ದಿಕ್ಕು ತಪ್ಪಬಾರದು ಎಂದರು.
ಶಿಕ್ಷಣದಲ್ಲಿ ಅಸಮಾನತೆ ಹೆಚ್ಚಿದೆ. ಪೇಪರ್ ಹಾಕುವ ಹುಡುಗ, ಕೂಲಿಕಾರರ ಮತ್ತು ಬಡ ಕುಟುಂಬದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಶಿಕ್ಷಣಕ್ಕೆ ಸಮಾನತೆ ತರಬೇಕಿದೆ. ಶಿಕ್ಷಣದಲ್ಲಿ ಸಮಾನತೆ ಎಲ್ಲಿದೆ ಎಂದು ಪ್ರಶ್ನಿಸಿದರು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಕುಲಪತಿ ಪ್ರೊ. ಎಂ ವೆಂಕಟೇಶ್ವರಲು, ವಿದೇಶಿಗರಿಗೆ ಭಾರತದ ಕುರಿತು ಒಲವು ಇದೆ. ನಮ್ಮ ಬದಲಾವಣೆ ದೇಶದ ಸುಧಾರಣೆಯಾಗಿದೆ. ಭಾರತದ ಕುರಿತು ಗರ್ವ ಪಡಬೇಕು. ಭಾರತಿಯೇರೆಲ್ಲ ಒಗ್ಗಟಿನಿಂದ ಐಕ್ಯತೆ ಬೆಳೆಸಿಕೊಳ್ಳಬೇಕು. ಇದರಿಂದ ದೇಶದ ಬೆಳವಣಿಗೆ ಸಾಧ್ಯ ಎಂದರು.
ಕುಲಸಚಿವೆ ನಾಹಿದಾ ಜûಮ್ ಜûಮ್, ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನಕುಮಾರ್ ಕೆ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸಂಯೋಜಕ ಡಾ. ಎ ಎಂ ಮಂಜುನಾಥ ಉಪಸ್ಥಿತರಿದ್ದರು. ಡಾ. ಗೀತಾ ವಸಂತ ನಿರೂಪಿಸಿದರು.