ಕಾವೇರಿ ಬಂದ್-ತುಮಕೂರು ಜಿಲ್ಲೆಯಲ್ಲಿ ಭಾಗಶಃ ಯಶಸ್ಸು

ತುಮಕೂರು- ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಇಂದು ನೀಡಿದ್ದ ಕರ್ನಾಟಕ ಬಂದ್‍ಗೆ ತುಮಕೂರು ಜಿಲ್ಲೆಯಲ್ಲಿ ಭಾಗಶಃ ಯಶಸ್ಸು ವ್ಯಕ್ತವಾಯಿತು.

ಜಿಲ್ಲೆಯಲ್ಲಿ ಸರ್ಕಾರಿ ಕಛೇರಿಗಳು, ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಿದವು, ಎಲ್ಲಿಯೂ ವಿದ್ಯಾರ್ಥಿಗಳು ಬಂದ್‍ನಲ್ಲಿ ಭಾಗವಹಿಸಿದ ಬಗ್ಗೆ ವರದಿಯಾಗಿಲ್ಲ, ಇನ್ನುಳಿದಂತೆ ಕನ್ನಡ ಪರ ಸಂಘಟನೆಗಳು, ರೈತ ಸಂಘಟನೆಗಳು ಬಂದ್‍ನಲ್ಲಿ ಭಾಗವಹಿಸಿ ಪ್ರತಿಭಟನೆ ಮಾಡಿದವು.

ಜಿಲ್ಲೆಯ ನಗರ, ಪಟ್ಟಣ ಪ್ರದೇಶಗಳಲ್ಲಿ ಬಂದ್‍ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ ಬಂದ್‍ನ ಯಾವುದೇ ಬಿಸಿ ತಟ್ಟಿಲ್ಲ. ಎಂದಿನಂತೆ ಎಲ್ಲ ಅಂಗಡಿ ಮುಂಗಟ್ಟುಗಳು ತೆರೆದು ವ್ಯಾಪಾರ ವಹಿವಾಟು ನಡೆಸಿದವು.

ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಸುಮಾರು 50ಕ್ಕೂ ಹೆಚ್ಚು ಕನ್ನಡ ಪರ ಸಂಘಟನೆಗಳು, ರೈತ ಸಂಘಟನೆಗಳು ಸೇರಿದಂತೆ ಹಲವು ಸಂಘಟನೆಗಳ ಕಾರ್ಯಕರ್ತರುಗಳು ಬೆಳಿಗ್ಗೆ 7 ಗಂಟೆಯಿಂದಲೇ ರಸ್ತೆಗಿಳಿದಿದ್ದು, ರಾಜ್ಯ ಸರ್ಕಾರ ಹಾಗೂ ತಮಿಳುನಾಡು ಮುಖ್ಯಮಂತ್ರಿ ವಿರುದ್ಧ ಘೋಷಣೆಗಳನ್ನು ಕೂಗಿದರು.

ನಗರದ ಪ್ರಮುಖ ರಸ್ತೆಗಳಲ್ಲಿ ಕನ್ನಡ ಸೇನೆಯ ಧನಿಯಾಕುಮಾರ್, ಶಂಕರ್, ರೈತ ಸಂಘಟನೆಯ ಗೋವಿಂದರಾಜು ಸೇರಿದಂತೆ ಮತ್ತಿತರರ ಹೋರಾಟಗಾರರ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಬೆಳಿಗ್ಗೆ 7 ಗಂಟೆಯಿಂದಲೇ ತುಮಕೂರು, ಕುಣಿಗಲ್, ತಿಪಟೂರು, ತುರುವೇಕೆರೆ, ಚಿಕ್ಕನಾಯಕನಹಳ್ಳಿ, ಗುಬ್ಬಿ, ಕೊರಟಗೆರೆ, ಮಧುಗಿರಿ, ಸಿರಾ ಹಾಗೂ ಪಾವಗಡ ತಾಲ್ಲೂಕಿನಲ್ಲಿ ಬಂದ್ ಬಿಸಿ ತಟ್ಟಿದ್ದು, ಸಾರಿಗೆ ಸಂಸ್ಥೆಗಳನ್ನು ಬಸ್‍ಗಳನ್ನು ಹೊರತುಪಡಿಸಿದರೆ ಉಳಿದಂತೆ ಎಲ್ಲಾ ಖಾಸಗಿ ವಾಹನಗಳು ಸಂಚಾರವನ್ನು ಸ್ಥಗಿತಗೊಳಿಸಿ ಬಂದ್‍ಗೆ ಬೆಂಬಲ ವ್ಯಕ್ತಪಡಿಸಿದ್ದವು.

ತುಮಕೂರು ನಗರದ ಪ್ರಮುಖ ವ್ಯಾಪಾರ ವಹಿವಾಟು ನಡೆಯುವ ಮಂಡಿಪೇಟೆ, ಎಂ.ಜಿ. ರಸ್ತೆ, ಎಸ್.ಎಸ್.ಪುರಂ, ಎಸ್‍ಐಟಿ ಮುಖ್ಯರಸ್ತೆ, ಬಿ.ಹೆಚ್. ರಸ್ತೆ, ಗುಬ್ಬಿ ಗೇಟ್‍ಗಳಲ್ಲಿ ಎಲ್ಲ ಅಂಗಡಿ ಮುಂಗಟ್ಟುಗಳು, ಹೋಟೆಲ್‍ಗಳು, ಬೀದಿಬದಿ ಅಂಗಡಿಗಳು, ಬೀದಿ ಬದಿ ಹೋಟೆಲ್‍ಗಳು ಸ್ವಯಂ ಪ್ರೇರಿತವಾಗಿ ತಮ್ಮ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿದ್ದವು.

ನಗರಗ ಹೊರವಲಯದಲ್ಲಿ ಸಣ್ಣ ಪುಟ್ಟ ಅಂಗಡಿಗಳು, ಹೋಟೆಲ್‍ಗಳು ಬೆಳಿಗ್ಗೆ 11 ಗಂಟೆಯ ವರೆಗೆ ಬಾಗಿಲು ತೆರೆದಿದ್ದವಾದರೂ 11 ಗಂಟೆ ನಂತರ ತಮ್ಮ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಬಂದ್ ಮಾಡಲಾಗಿತ್ತು.

ನಗರದ ಕೆಎಸ್ಸಾರ್ಟಿಸಿ ಮತ್ತು ಖಾಸಗಿ ಬಸ್ ನಿಲ್ದಾಣದಲ್ಲಿ ಬಸ್‍ಗಳು ಸಂಚರಿಸಲು ಸಿದ್ದವಾಗಿದ್ದವಾದರೂ ಪ್ರಯಾಣಿಕರ ಸಂಖ್ಯೆ ಮಾತ್ರ ವಿರಳವಾಗಿತ್ತು. ಆದರೆ ಸರ್ಕಾರಿ ಕಚೇರಿಗಳು, ಬ್ಯಾಂಕ್‍ಗಳು, ಶಾಲಾ-ಕಾಲೇಜುಗಳು ರಜೆ ಇಲ್ಲದೇ ಇರುವುದರಿಂದ ನೌಕರರು, ಶಿಕ್ಷಕರು, ವಿದ್ಯಾರ್ಥಿಗಳು ಮಾತ್ರ ಬಸ್‍ಗಳಲ್ಲಿ ಸಂಚರಿಸುತ್ತಿದ್ದ ದೃಶ್ಯ ಕಂಡು ಬಂತು.

ಬೆಳಿಗ್ಗೆ 9 ಗಂಟೆಯವರೆಗೆ ಅಲ್ಲೊಂದು ಇಲ್ಲೊಂದು ಎಂಬಂತೆ ಆಟೋ ರಿಕ್ಷಾಗಳು ರಸ್ತೆಗಿಳಿದಿದ್ದವು. ಆದರೆ 9 ಗಂಟೆ ನಂತರ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರ ಪ್ರತಿಭಟನೆಯ ಕಾವು ಏರುತ್ತಿದ್ದಂತೆ ಯಾವುದೇ ರೀತಿಯ ಆಟೋ ರಿಕ್ಷಾಗಳ ಸಂಚಾರವು ಕಂಡು ಬರಲಿಲ್ಲ.ಕೆಎಸ್ಸಾರ್ಟಿಸಿ ಮತ್ತು ಖಾಸಗಿ ಬಸ್ ನಿಲ್ದಾಣಗಳು ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿದ್ದವು.

ಬಂದ್ ಹಿನ್ನೆಲೆಯಲ್ಲಿ ತುರ್ತು ಸೇವೆಗಳಾದ ಸರ್ಕಾರಿ ಆಸ್ಪತ್ರೆಗಳು, ಖಾಸಗಿ ಆಸ್ಪತ್ರೆಗಳು, ಮೆಡಿಕಲ್ ಸ್ಟೋರ್‍ಗಳು, ಹಾಲಿನ ಮಳಿಗೆಗಳು, ತರಕಾರಿ ಅಂಗಡಿಗಳು ಎಂದಿನಂತೆ ತೆರೆದಿದ್ದವು. ಉಳಿದಂತೆ ಇತರೆ ಅಂಗಡಿಗಳು ಬಂದ್ ಆಗಿದ್ದರೆ ಪೆಟ್ರೋಲ್ ಬಂಕ್‍ಗಳು ಮಾತ್ರ ಕಾರ್ಯನಿರ್ವಹಿಸಿದವು.

ಕರ್ನಾಟ ಬಂದ್‍ಗೆ ಹೋಟೆಲ್ ಮಾಲೀಕರು, ಚಿತ್ರಮಂದಿರ ಮಾಲೀಕರು, ಕಾರ್ಮಿಕರು, ಎಪಿಎಂಸಿ ಹಮಾಲಿಗಳು ಸಹ ಬೆಂಬಲ ವ್ಯಕ್ತಪಡಿಸಿದ್ದಾರೆ.

ಅಣಕು ಶವಯಾತ್ರೆ

ನಗರದ ಟೌನ್‍ಹಾಲ್ ವೃತ್ತದಲ್ಲಿ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅಣಕು ಶವಯಾತ್ರೆ ನಡೆಸಿದ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಚಟ್ಟಕಟ್ಟಿ, ಚಪ್ಪಲಿಯಿಂದ ಹೊಡೆದು ಬಾಯಿ ಬಡಿದುಕೊಂಡು ಆಕ್ರೋಶ ಹೊರ ಹಾಕಿ, ಅಣಕು ಶವಕ್ಕೆ ಅಗ್ನಿಸ್ಪರ್ಶ ಮಾಡಿದರು.

ಶಾಲಾ-ಕಾಲೇಜುಗಳಗೆ ರಜೆ ಇಲ್ಲ
ತುಮಕೂರು ಜಿಲ್ಲೆಯಲ್ಲಿ ಬಂದ್ ಪ್ರಯುಕ್ತ ಯಾವುದೇ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿಲ್ಲ. ಆದರೆ ಕೆಲ ಶಾಸಗಿ ಶಾಲೆಗಳು ಮುನ್ನೆಚ್ಚರಿಕೆ ಕ್ರಮವಾಗಿ ಆನ್‍ಲೈನ್ ತರಗತಿಗಳನ್ನು ನಡೆಸಿದರೆ, ಸರ್ಕಾರಿ ಶಾಲಾ-ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಿದವು.

ಕನ್ನಡ ಪರ ಒಕ್ಕೂಟದ ಗೌರವಾಧ್ಯಕ್ಷ ಧನಿಯಾಕುಮಾರ್ ಮಾತನಾಡಿ, ಕಾವೇರಿ ನೀರಿನ ಜತೆಗೆ ಹೇಮಾವತಿ ನೀರು ಸಹ ತಮಿಳುನಾಡಿಗೆ ಹರಿದು ಹೋಗುತ್ತಿದೆ. ಇದು ಖಂಡನೀಯ. ರಾಜ್ಯದ 28 ಜನ ಸಂಸದರು ಸೀರೆ ಉಟ್ಟು ಬಳೆ ಹಾಕಿಕೊಂಡು ಮನೆಯಲ್ಲಿ ಇರುವುದು ಒಳಿತು. ಈ ಹೋರಾಟದಲ್ಲಿ ಯಾವೊಬ್ಬ ಸಂಸದರು ಭಾಗವಹಿಸಿಲ್ಲ ಎಂದು ಆಕ್ರೋಶ ಹೊರ ಹಾಕಿದರು.

ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ. ಹಾಗೂ ಅಡಿಷನಲ್ ಎಸ್ಪಿ ಮರಿಯಪ್ಪ ನೇತೃತ್ವದಲ್ಲಿ ಬಿಗಿ ಪೆÇಲೀಸ್ ಬಂದೋ ಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ಈ ಸಂಬಂಧ ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿ ಅವರಿಗೆ ಕಳುಹಿಸಲು ಜಿಲ್ಲಾಧಿಕಾರಿ ಶ್ರೀನಿವಾಸ ಅವರಿಗೆ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ರವೀಶ್,ತಾಲೂಕು ಘಟಕದ ಅಧ್ಯಕ್ಷ ಚಿಕ್ಕಬೋರೇಗೌಡ, ಯುವಘಟಕದ ಅಧ್ಯಕ್ಷ ಚಿರತೆ ಚಿಕ್ಕಣ್ಣ, ತಾಲೂಕು ಕಾರ್ಯದರ್ಶಿ ತಿಮ್ಮೇಗೌಡ, ಯುವಘಟಕದ ಜಿಲ್ಲಾ ಸಂಚಾಲಕ ಮಹೇಶ್, ಮುಖಂಡರಾದ ಕೃಷ್ಣಪ್ಪ, ನಾರಾಯಣಪ್ಪ, ರಂಗಸ್ವಾಮಯ್ಯ, ಮೋಹನ್, ಸುರೇಶ್ ಮತ್ತಿತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *