ಸ್ವಚ್ಚ ಪರಿಸರದಿಂದ ನೆಮ್ಮದಿಯ ಬದುಕು: ತರುನ್ನಂ ನಿಖತ್

ತುಮಕೂರು: ನಮ್ಮ ಮನಸ್ಸು ಖುಷಿಯಾಗಿ ಇರಬೇಕಾದರೆ ನಮ್ಮ ಸುತ್ತಮುತ್ತಲಿನ ಪರಿಸರ ಸುಂದರವಾಗಿರಬೇಕು. ಸ್ವಚ್ಚ ಪರಿಸರದಿಂದ ಆರೋಗ್ಯ ವೃದ್ದಿ ಜೊತೆಗೆ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯೆ ತರುನ್ನಂ ನಿಖತ್ ಹೇಳಿದರು.

ನಗರದಲ್ಲಿ ಬುಧವಾರ ಸರ್ಕಾರಿ ಚಿತ್ರಕಲಾ ಪದವಿ ಕಾಲೇಜು ಆಯೋಜಿಸಿದ್ದ ಪರಿಸರ ದಿನಾಚರಣೆ ಹಾಗೂ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ನಮ್ಮ ಸುತ್ತಲಿನ ಸುಂದರ ಪರಿಸರವನ್ನು ನಾವಿದ್ದಲ್ಲಿಯೇ ನಿರ್ಮಾಣ ಮಾಡಿಕೊಳ್ಳುವುದು ನಮ್ಮ ಜಾಣ್ಮೆಯಾಗಿರಬೇಕು. ನಾವು ಪರಿಸರ ಎಂದಾಕ್ಷಣ ಗಿಡಮರಗಳ ಬಗ್ಗೆ ಮಾತನಾಡುತ್ತೇವೆ. ಅದರಾಚೆಗೆ ಸ್ವಚ್ಛ ಪರಿಸರಕ್ಕೂ ನಾವು ಆದ್ಯತೆ ನೀಡಬೇಕಾಗಿದೆ. ಇವತ್ತು ವಿವಿಧ ಖಾಯಿಲೆಗಳು ಅಪ್ಪಳಿಸಿ ಎಳೆವಯಸ್ಸಿಗೆ ಜೀವ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿರುವುದು ಅಘಾತಕಾರಿ ವಿಷಯಗಳಲ್ಲೊಂದು. ಈ ನಿಟ್ಟಿನಲ್ಲಿ ನಾವು ಸ್ವಚ್ಚ ಪರಿಸರದಲ್ಲಿ ಬದುಕು ಕಟ್ಟಿಕೊಳ್ಳುತ್ತ ಮುಖಮಾಡಬೇಕಿದೆ. ಚಿತ್ರಕಲಾ ಪದವಿ ಕಾಲೇಜು ನಮ್ಮ ಕಟ್ಟಡದಲ್ಲಿ ಇರೋದ್ರಿಂದ ನಿಮ್ಮ ಕಲೆಯಿಂದ ನಮ್ಮ ಕಟ್ಟಡಕ್ಕೆ ಕಳೆ ಬಂದಿದೆ ಎಂದರು.

ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಪ್ರಾಚಾರ್ಯ ಕರಿಯಣ್ಣ ಮಾತನಾಡಿ, ತುಮಕೂರಿನಲ್ಲಿ ಸರ್ಕಾರಿ ಚಿತ್ರಕಲಾ ಕಾಲೇಜು ಇರೋದು ನಮ್ಮ ಹೆಮ್ಮೆ. ಕುಟುಂಬವನ್ನು ಪ್ರೀತಿಸಿದಷ್ಟೇ ಸಿಕ್ಕ ಉದ್ಯೋಗವನ್ನು ಪ್ರೀತಿಸಿ ಗೌರವಿಸುವ ಗುಣ ಬೆಳೆಸಿಕೊಳ್ಳಬೇಕಿದೆ ಎಂದು ಕಿವಿ ಮಾತು ಹೇಳಿದರು.

ಕಾಳಜಿ ಫೌಂಡೇಶನ್ ಕಾನೂನು ಸಲಹೆಗಾರರಾದ ಶಿವಕುಮಾರ್ ಮೇಷ್ಟ್ರುಮನೆ ಮಾತನಾಡಿ, ಸಮಾಜದ ಅಂಕುಡೊಂಕುಗಳನ್ನು ಚಿತ್ರಗಳ ಮೂಲಕ ತಿದ್ದುವ ಕೆಲಸ ಚಿತ್ರಕಲಾವಿದರಿಂದ ಆಗಬೇಕಿದೆ. ಸೃಜನಶೀಲ ಕಲಾತ್ಮಕ ವಿಷಯದಲ್ಲಿ ಪದವಿ ಪಡೆಯುವುದು ಉತ್ತಮ. ಆದಷ್ಡು ಚಿತ್ರಕಲೆ ಶಿಕ್ಷಣ ಪಡೆದವರು ನಿರುದ್ಯೋಗದಿಂದ ದೂರ ಉಳಿಯಲಿದ್ದಾರೆ ಎಂಬುದಂತು ಸತ್ಯ. ಹಾಗಾಗಿ ಈಗಿನ ಯುವಕರು ಶಿಕ್ಷಣ ಆಯ್ಕೆ ಮಾಡಿಕೊಳ್ಳುವಾಗ ಮುಂದಾಲೋಚನೆ ಬಹಳ ಮುಖ್ಯ ಎಂದು ಸಲಹೆ ನೀಡಿದರು.

ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಿ.ಎಲ್.ನಟರಾಜ್ ಮಾತನಾಡಿ, ಪರಿಸರ ದಿನಾಚರಣೆ ಇಂದಿನ ಒಂದು ದಿನಕ್ಕೆ ಸೀಮಿತವಾಗದೇ ಪ್ರತಿ ದಿನವೂ ಸ್ವಚ್ಚ ಪರಿಸರ, ಗಿಡ ನೆಡುವುದು, ಮರಗಳ ಸಂರಕ್ಷಣೆಯತ್ತ ನಾವು ಮುಖಮಾಡಬೇಕಿದೆ. ಕಲಾ ವಿದ್ಯಾರ್ಥಿಗಳು ಪರಿಸರಕ್ಕೆ ಸಂಬಂಧಿಸಿದಂತೆ ಚಿತ್ರಕೃತಿಗಳನ್ನು ರಚಿಸಿ ಪ್ರದರ್ಶನ ಮಾಡುವ ಮೂಲಕ ಮುನ್ನಲೆಗೆ ಬರಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸರ್ಕಾರಿ ಚಿತ್ರಕಲಾ ಪದವಿ ಕಾಲೇಜಿನ ಪ್ರಾಚಾರ್ಯ ಸಿ.ಸಿ.ಬಾರಕೇರ ಮಾತನಾಡಿ, ನನ್ನ ಊರು ಧಾರವಾಡ ಆಗಿದ್ದರೂ ಕೂಡ ಕಳೆದ ಹತ್ತು ವರ್ಷಗಳಿಂದ ಇದೇ ಕಾಲೇಜಿನಲ್ಲಿ ಉದ್ಯೋಗ ಮಾಡಿಕೊಂಡು ಬರುತ್ತಿದ್ದೇನೆ. ಆದರೆ ವಿವಿಯ ಆಡಳಿತ ಮಂಡಳಿಯ ಸಹಕಾರ ಪ್ರೋತ್ಸಾಹವನ್ನು ಮರೆಯಲು ಸಾಧ್ಯವಿಲ್ಲ. ಹಾಗೆಯೇ ಸ್ಥಳಿಯ ಸಂಘಟನೆಗಳು, ಹಳೆ ವಿದ್ಯಾರ್ಥಿ ಬಳಗದಿಂದ ಇಷ್ಟು ದಿನ ಯಾವುದೇ ತೊಂದರೆ ಇಲ್ಲದೆ ಕರ್ತವ್ಯ ನಿಭಾಯಿಸಿದ್ದೇವೆ. ಇದೀಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ನಮ್ಮ ಕಾಲೇಜು ಶಿಪ್ಟ್ ಆಗಿರುವುದರಿಂದ ಇನ್ನು ಹೆಚ್ಚಿನ ಕೆಲಸ ಮಾಡಲು ಸಾಧ್ಯವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಕಾಳಜಿ ಫೌಂಡೇಶನ್ ನಿರ್ದೇಶಕ ಎಂ.ಎಸ್.ಗಣೇಶ್ ಮಾರನಹಳ್ಳಿ, ಉಪನ್ಯಾಸಕರಾದ ಡಾ.ಸುರೇಂದ್ರನಾಥ್, ಆರ್.ರಂಗಸ್ವಾಮಿ, ಡಾ.ಸಂತೋಷ್ ಕುಮಾರ್, ಡಾ.ಶ್ವೇತ ಡಿ.ಎಸ್, ಸತ್ಯನಾರಾಯಣ ಟಿ.ಎಸ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *