ಶಾಂತಿಯುತ, ಯಶಸ್ವಿ ಚುನಾವಣೆ ಕಾರ್ಯಕ್ಕೆ ಡಿಸಿ-ಎಸ್‍ಪಿಗೆ ಭಾರೀ ಮೆಚ್ಚಿಗೆ ವ್ಯಕ್ತಪಡಿಸಿರುವ ಜನತೆ

ತುಮಕೂರು : ಕರ್ನಾಟಕದ ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳ ಚುನಾವಣೆಯು ಮುಗಿದಿದ್ದು, ಅದರಲ್ಲಿ ತುಮಕೂರು ಕ್ಷೇತ್ರವೂ ಒಂದು, ತುಮಕೂರು ಲೋಕಸಭಾ ಕ್ಷೇತ್ರದ ಚುನಾವಣೆಯು ಯಶಸ್ವಿ ಮತ್ತು ಶಾಂತಿಯುತವಾಗಿ ನಡೆಯಲು ಶ್ರಮಿಸಿದ ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಾರ್ಯಕ್ಕೆ ಜನರು ಮೆಚ್ಚಿಗೆ ವ್ಯಕ್ತ ಪಡಿಸಿದ್ದಾರೆ.

ಚುನಾವಣೆ ಪ್ರಕ್ರಿಯೇ ಪ್ರಾರಂಭವಾದಗಿನಿಂದ ಮುಗಿಯುವವರೆಗೂ ಈ ಇಬ್ಬರೂ ಅಧಿಕಾರಿಗಳು ಹಗಲು-ರಾತ್ರಿ ಕಾರ್ಯ ನಿರ್ವಹಿಸಿದ್ದನ್ನು ಕಂಡ ಜನರು ಇವರನ್ನು ತುಂಬಾ ಮೆಚ್ಚಿದ್ದಾರೆ. ಜಿಲ್ಲಾ ಚುನಾವಣಾಧಿಕಾರಿ ಶುಭಾ ಕಲ್ಯಾಣ್ ಅವರು ರಾತ್ರಿಯ ವೇಳೆಯಲ್ಲಿ ಸಹ ಚುನಾವಣಾ ಚೆಕ್ ಪೋಸ್ಟ್ ಗಳಿಗೆ ಭೇಟಿ ನೀಡಿದ್ದು, ಸೂಕ್ಷ್ಮ ಮತಗಟ್ಟಗಳೆಂದು ಗುರುತಿಸಿದ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ, ಗಡಿ ಪ್ರದೇಶದ ಚೆಕ್ ಪೋಸ್ಟ್ ಗಳಿಗೂ ತೆರಳಿ ಕಟ್ಟುನಿಟ್ಟಾಗಿ ತಪಾಷಣೆ ಮಾಡುವಂತೆ ಸಿಬ್ಬಂದಿಗಳಿಗೆ ಧೈರ್ಯ ತುಂಬಿದ್ದು, ಕೆಲವು ಕಡೆ ತಾವೇ ಖುದ್ದಾಗಿ ಮುಂದೆ ನಿಂತು ಪರಿಶೀಲನೆ ಮಾಡಿದ್ದು ತುಂಬಾ ಮೆಚ್ಚಿಗೆಗೆ ಪಾತ್ರವಾಗಿದೆ.

ಚುನಾವಣೆಗೆ ಬೇಕಾದ ತರಬೇತಿ, ಮತದಾನ ಹೆಚ್ಚಳಕ್ಕೆ ಗ್ರಾಮ ಪಂಚಾಯಿತಿ, ಪುರಸಭೆ, ನಗರಸಭೆ ಮತ್ತು ಮಹಾನಗರ ಪಾಲಿಕೆಗಳಿಂದ ಸ್ವೀಪ್ ಮೂಲಕ ವಿವಿಧ ಸಂಘ, ಸಂಸ್ಥೆಳಿಂದ ಜಾಥ, ಸೈಕ್ಲಿಂಗ್ ನಡೆಸಿದ್ದು, ಮತದಾನ ನಡೆಯುವ ಸರ್ಕಾರಿ ಶಾಲೆಗಳನ್ನು ಮಾದರಿ ಶಾಲೆಗಳನ್ನಾಗಿ ಮಾಡಿ ಸುಂದರ ಚಿತ್ರಗಳನ್ನು ಬರೆಸಿ ಗಮನ ಸೆಳೆಯುವಂತೆ ಮಾಡಲಾಗಿತ್ತು. ಜಿ.ನಾಗೇನಹಳ್ಳಿ ಶಾಲೆಯನ್ನು ಕಲ್ಪತರು ನಾಡಿನ ತೆಂಗಿನ ತೋಟದ ಚಿತ್ರಗಳನ್ನು ಬಿಡಿಸಿದ್ದಾರೆ.

ತೀತಾ ಗ್ರಾಮ ಪಂಚಾಯಿತಿಯ ಸರ್ಕಾರಿ ಶಾಲೆಯ ಗೋಡೆ ಮೇಲೆ ಮಂಗನಿಂದ ಮಾನವನಾಗಿ ಮತದಾನ ಮಾಡುವ ತನಕದ ಮಾನವನ ವಿಕಾಸದ ಚಿತ್ರಗಳು ಎಂತಹವರನ್ನೂ ಸೆಳೆಯುವಂತಿದೆ. ಎಲೆರಾಂಪುರ ಶಾಲೆಯ ಗೋಡಯ ಮೇಲೆ ನಮ್ಮ ಹಿರಿಯರು ಭತ್ತ ಕುಟ್ಟುತ್ತಿದ್ದ ರೀತಿ, ರಾಗಿ ಬೀಸುತ್ತಿರುವುದು, ಒಲೆಯಲ್ಲಿ ಅಡಿಗೆ ಮಾಡುವಂತಹ ಚಿತ್ರಗಳನ್ನು ಬಿಡಿಸಿದ್ದರೆ, ಜಲದಗೆರೆ ಶಾಲೆಯಲ್ಲಿ ಸಾಂಪ್ರದಾಯಕ ಮತಗಟ್ಟೆಗೆ ಸ್ವಾಗತ ಎಂದು ಬರೆಯಲಾಗಿತ್ತು. ಇದರಿಂದ ಮತದಾರರು ಶಾಲೆಗಳತ್ತ ಬಂದು ಮತ ಚಲಾಯಿಸಲು ಸಹಕಾರಿಯಾಯಿತೆನ್ನಲಾಗಿದೆ.

ಮತದಾನದಂದು ಹಲವಾರು ಶಾಲೆಗಳನ್ನು ಬಾಳೆ ಕಂದು ಮತ್ತು ತೋರಣಗಳಿಂದ ಸಿಂಗರಿಸಿ, ರಂಗೋಲಿ ಬಿಟ್ಟು ಮತದಾರರನ್ನು ಸ್ವಾಗತಿಸುತ್ತಿದ್ದದ್ದು ಮೆಚ್ಚಿಗೆ ಪಡೆದುಕೊಂಡಿತು. ವೃದ್ಧರು ಮತ್ತು ವಿಕಲಚೇತನರು ಮತದಾನಕ್ಕೆ ಬರಲು ವಾಹನದ ವ್ಯವಸ್ಥೆ, ವ್ಹೀಲ್‍ಚೇರ್ ವ್ಯವಸ್ಥೆಯು ಸಹ ಮತದಾನ ಹೆಚ್ಚಳಕ್ಕೆ ಸಹಕಾರಿಯಾಗಿದೆ, ಮೆಚ್ಚಿಗೆಗೆ ಕಾರಣವಾಗಿದೆ.

ಮತದಾನಕ್ಕೂ ಮುನ್ನ ಶಾಲೆಯ ಮುಂಭಾಗ ಸುಂದರವಾದ ರಂಗೋಲಿ ಬಿಟ್ಟು ಸಿಂಗರಿಸಿರುವುದು.

ಇದಕ್ಕೆಲ್ಲಾ ಜಿಲ್ಲಾಧಿಕಾರಿಗಳ ಸಹಕಾರ, ಬೆಂಬಲ, ಸಹೋದ್ಯೋಗಿಗಳಿಗೆ ಪ್ರೀತಿಯಿಂದ ಕಂಡಿದ್ದರಿಂದ ಇದೆಲ್ಲಾ ಸಾಧ್ಯವಾಯಿತೆಂದು ಹಲವಾರು ಅಧಿಕಾರಿಗಳು, ನೌಕರರು ಹೇಳುತ್ತಾರೆ.

ಇನ್ನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಅವರ ಜವಾಬ್ದಾರಿ ತುಂಬಾ ದೊಡ್ಡದು, ಒಂದು ಕಡೆ ಚುನಾವಣೆಗೆ ಭದ್ರತೆ ಒದಗಿಸಬೇಕು, ಮತ್ತೊಂದು ಕಡೆ ಸಾಮಾನ್ಯ ಜನರ ರಕ್ಷಣೆ, ಮತ್ತೊಂದು ಕಡೆ ಚುನಾವಣೆ ಪ್ರಚಾರ ಸಭೆಗಳಿಗೆ, ರ್ಯಾಲಿಗಳಿಗೆ, ರೋಡ್ ಶೋಗಳಿಗೆ ಬರುವ ಗಣ್ಯ ರಾಜಕಾರಣಿಗಳಿಗೆ, ಪ್ರಧಾನಿ, ಕೇಂದ್ರ ಗೃಹಸಚಿವರು, ಮುಖ್ಯಮಂತ್ರಿಗಳು, ರಾಷ್ಟ್ರಮ ರಾಜ್ಯಮಟ್ಟದ ನಾಯಕರುಗಳು ಬಂದಾಗ ಲೋಪವಾಗದಂತೆ ನೋಡಿಕೊಳ್ಳಬೇಕು.

ಇದರ ಜೊತೆಗೆ ಚುನಾವಣಾ ಚೆಕ್ ಪೋಸ್ಟ್‍ಗಳಲ್ಲಿ ತುಂಬಾ ಎಚ್ಚರಿಕೆಯಿಂದ ಮತ್ತು ಬದ್ಧತೆಯಿಂದ ಕೆಲಸ ನಿರ್ವಹಿಸಬೇಕು, ಹಣ, ಮದ್ಯ ಸಾಗಾಣಿಕೆಯಾಗದಂತೆ ನೋಡಿಕೊಳ್ಳಬೇಕು.

ಇದರ ಜೊತೆಗೆ ನಾಮ ಪತ್ರ ಸಲ್ಲಿಸುವಾಗ, ಪ್ರಚಾರಸಭೆಗಳಿಗೆ, ರ್ಯಾಲಿಗಳಿಗೆ ಬರುವ ಜನರನ್ನೂ ಸಹ ಯಾವುದೇ ಅನಾವುತವಾಗದಂತೆ ರಕ್ಷಣೆ, ಭದ್ರತೆ ನೀಡಬೇಕು ಮತ್ತು ಗಲಭೆ, ಗಲಾಟೆ, ಹೊಡೆದಾಟಗಳಾಗದಂತೆ ನೋಡಿಕೊಂಡಿರುವುದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಅವರಿಗೆ ಸಲ್ಲುತ್ತದೆ.

ಮತದಾನ ನಡೆಯುವ ದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮೇಲೆ ಬಹಳ ಜವಾಬ್ದಾರಿ ಮತ್ತು ಒತ್ತಡವಿರುತ್ತದೆ, ಚುನಾವಣೆಯ ದಿನ ಜಿಲ್ಲೆಯಲ್ಲಿ ಎಲ್ಲಿಯೂ ಯಾವುದೇ ಅನಾವುತವಾಗದೆ ಶಾಂತಿಯುತವಾಗಿ ಮತದಾನ ನಡೆಯುವಂತೆ ಮಾಡಲು ಪೊಲೀಸ್ ಇಲಾಖೆಯನ್ನು ಸಜ್ಜುಗೊಳಿಸಿದದ್ದು ತುಂಬಾ ಪ್ರಶಂಸೆ ಮತ್ತು ಮೆಚ್ಚಿಗೆಗೆ ಕಾರಣವಾಗಿದೆ.

ಎಸ್‍ಪಿಯವರು ಜಿಲ್ಲಾಧಿಕಾರಿಗಳ ಜೊತೆ ಹಲವಾರು ಕಡೆ ಭೇಟಿ ನೀಡಿ ಭದ್ರತೆ ಹೇಗಿರಬೇಕು, ಅಹಿತಕರ ಘಟನೆಗಳು ನಡೆಯದಂತೆ ಯಾವ ರೀತಿ ಮುಜಾಗ್ರತೆ ವಹಿಸಬೇಕೆಂಬುದನ್ನು ತಮ್ಮ ಪೊಲೀಸ್ ಸಿಬ್ಬಂದಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ನಿರ್ವಹಿಸಿದ್ದು ಎಂತಹವರೂ ಸಹ ಮೆಚ್ಚುವಂತಹವುದು.

ತಮ್ಮ ಕೈ ಕೆಳಗಿನ ಅಧಿಕಾರಿಗಳು ಎಲ್ಲಿಯೂ ಲೋಪವಾಗದಂತೆ ಚುನಾವಣೆ ನಡೆಸಿರುವುದಕ್ಕೆ ಪೊಲೀಸ್ ವರಿಷ್ಠಾಧಿಕಾರಿಗಳು ತಮ್ಮ ಸಿಬಂಧಿಯನ್ನು ಅಭಿನಂದಿಸಿದ್ದಾರೆ.

ಡಿಸಿ ಮತ್ತು ಎಸ್ಪಿಯವರ ಕಾರ್ಯಕ್ಕೆ ಜಿಲ್ಲೆಯ ಮತದಾರರು, ರಾಜಕೀಯ ನಾಯಕರು, ಅಧಿಕಾರಿಗಳು, ನೌಕರರು ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.

-ಹೆಚ್,ವಿ,ವೆಂಕಟಾಚಲ

Leave a Reply

Your email address will not be published. Required fields are marked *