ಬೆಂಗಳೂರು : ಒಳ ಮೀಸಲಾತಿಗೆ ಇಂದಿನ ಸಚಿವ ಸಂಪುಟ ಅನುಮೋದನೆ ನೀಡಲಿದೆ ಎಂಬ ತವಕ ಮತ್ತು ಭರವಸೆಯೊಂದಿಗೆ ರಾಜ್ಯದ ಮೂಲೆ ಮೂಲೆಯಿಂದ ಬಂದಿರುವ ಜನ ಸಾಗರ ಫ್ರೀಡಂ ಪಾರ್ಕ್‍ನಲ್ಲಿ ಹೋರಾಟದ ಹಾಡುಗಳೊಂದಿಗೆ ಧರಣಿ ನಡೆಸುತ್ತಾ ಇದ್ದಾರೆ.

ರಾಜ್ಯದ ಎಡಗೈ ಸಮುದಾಯ ಕಳೆದ 35 ವರ್ಷಗಳಿಂದ ಒಳ ಮೀಸಾಲತಿ ಜಾರಿಗೆ ಹೋರಾಟ ಮಾಡಿಕೊಂಡು ಬರುತ್ತಿದ್ದು, 2024ರ ಆಗಸ್ಟ್ 1ರಂದು ಸರ್ವೋಚ್ಚ ನ್ಯಾಯಾಲಯವು ಒಳ ಮೀಸಲಾತಿ ಕಲ್ಪಿಸಲು ಆಯಾ ರಾಜ್ಯ ಸರ್ಕಾರಗಳಿಗೆ ಸಂವಿಧಾನದಡಿಯಲ್ಲಿ ಅವಕಾಶವಿದೆ ಎಂದು ತೀರ್ಪು ನೀಡಿದ ನಂತರ ರಾಜ್ಯದಲ್ಲಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್ ನೇತೃತ್ವದಲ್ಲಿ ಏಕ ಸದಸ್ಯ ಆಯೋಗವನ್ನು ರಚಿಸಿ ಗಣತಿ ಮಾಡಿ ಒಳ ಮೀಸಲಾತಿ ಕಲ್ಪಿಸಿದ ಆಯೋಗದ ಅಂತಿಮ ವರದಿಯನ್ನು 2025ರ ಆಗಸ್ಟ್ 4ರಂದು ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.

ಸರ್ಕಾರವು ಆಗಸ್ಟ್ 16ರಂದು ಒಳ ಮೀಸಲಾತಿ ಸಂಬಂಧ ಕರೆದಿದ್ದ ಸಂಪುಟ ಸಭೆಯನ್ನು ಆಗಸ್ಟ್ 19ಕ್ಕೆ ಮುಂದೂಡಿತ್ತು. ಇಂದು ಸಂಜೆ 5 ಗಂಟೆಗೆ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆಯ ಬಹುದೆಂದು ಬೆಂಗಳೂರಿನ ಸ್ವಾತಂತ್ರ್ಯ ಚೌಕದಲ್ಲಿ ಎಡಗೈ ಸಮುದಾಯದ ಜನರು ಮಳೆ, ಚಳಿಯೆನ್ನದೆ ಕಾಯುತ್ತಿದ್ದಾರೆ.
ತಮ್ಮ 35 ವರ್ಷಗಳ ಕನಸ್ಸು ನನಸಾಗುವುದೆಂಬ ಬೆರಗುಗಣ್ಣಿನಿಂದ ಕಾಯುತ್ತಿದ್ದಾರೆ. ಒಂದು ವೇಳೆ ಇಂದು ಜಾರಿಯಾಗದಿದ್ದರೆ ಪ್ರತಿ ಪಕ್ಷಗಳು ಈ ಹೋರಾಟವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ಅದರ ಲಾಭ ಪಡೆಯಲು ತುದಿಗಾಲ ಮೇಲೆ ನಿಂತಿವೆ, ಅಲ್ಲದೆ ಎಡಗೈ ಸಮುದಾಯ ಇದುವರೆವಿಗೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾ ಬಂದಿದ್ದು, ಈಗ ಈ ಒಳ ಮೀಸಲಾತಿ ಜಾರಿಯಾಗದೆ ಇದ್ದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ್ತು ಸರ್ಕಾರಕ್ಕೆ ಹಿನ್ನಡೆಯಾಗುತ್ತದೆ.
ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಒಳ ಮೀಸಲಾತಿಯನ್ನು ಜಾರಿ ಮಾಡುವುದಾಗಿ ಹೇಳಿಕೋಡಿತ್ತು, ಆಗ ಸರ್ವೋಚ್ಚ ನ್ಯಾಯಾಲಯದ ತೀರ್ಪು ಇರದ ಕಾರಣ ಒಳಮೀಸಲಾತಿ ಜಾರಿ ಕಡತವನ್ನು ಕೇಂದ್ರ ಸರ್ಕಾರಕ್ಕೆ ಹೊತ್ತು ಹಾಕಿ ಕೈ ತೊಳದುಕೊಳ್ಳಲು ಮುಂದಾಗಿದ್ದ ಸರ್ಕಾರಕ್ಕೆ ಈಗ ತಾನೇ ಜಾರಿ ಮಾಡ ಬೇಕಾದ ಬಿಸಿ ತಟ್ಟಿದೆ.
ಅಲ್ಲದೆ ಎಂದೂ ಒಳ ಮೀಸಲಾತಿ ಪರ ಹೋರಾಟಕ್ಕಿಳಿಯದ ಬಲಗೈ ಮತ್ತು ಸ್ಪರ್ಶ ಜಾತಿಗಳು ಇನ್ನೂ ಹೆಚ್ಚಿನ ಜನಸಂಖ್ಯೆಯಿದ್ದು ಮೀಸಲಾತಿಯಲ್ಲಿ ಹೆಚ್ಚಳ ಮಾಡುವಂತೆ ಪಟ್ಟು ಹಿಡಿದಿದ್ದು, ಇಂದು ಸಂಜೆಯ ಸಂಪುಟ ಸಭೆಯ ನಿರ್ಣಯ ಏನಾಗಲಿದೆ ಎಂಬುದರ ಮೇಲೆ ಒಳಮೀಸಲಾತಿಯ ಜಾರಿ ನಿರ್ಧಾರವಾಗಲಿದೆ.