ತುಮಕೂರು- ಗ್ರಂಧಿಗೆ ಅಂಗಡಿ ಮತ್ತು ಗೋದಾಮಿನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‍ನಿಂದ ಬೆಂಕಿ ಹೊತ್ತಿಕೊಂಡ ಪರಿಣಾಮ ಅಂಗಡಿ ಮತ್ತು ಗೋದಾಮಿನಲ್ಲಿದ್ದ ಪಟಾಕಿಗಳು ಸೇರಿದಂತೆ ಇನ್ನಿತರೆ ವಸ್ತುಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ನಗರದ ಮಂಡಿಪೇಟೆಯ ನಡೆದು ಆತಂಕ ಸೃಷ್ಠಿಸಿತ್ತು.
ನಗರದ ಪ್ರಮುಖ ವ್ಯಾಪಾರ ವಹಿವಾಟಿನ ಕೇಂದ್ರವಾಗಿರುವ ಮಂಡಿಪೇಟೆಯಲ್ಲಿ ಮೆಟ್ರೋ ಮುಂಭಾಗ ಇರುವ ನೇತಾಜಿ ಟ್ರೇಡರ್ಸ್‍ನಲ್ಲಿ ಇಂದು ಮುಂಜಾನೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‍ನಿಂದ ಬೆಂಕಿ ಹೊತ್ತಿಕೊಂಡಿದೆ. ಈ ಅಂಗಡಿಗೆ ಹೊಂದಿಕೊಂಡಂತೆ ಹಿಂಭಾಗದಲ್ಲಿ ಗೋಡೌನ್ ಸಹ ಇದೆ. ಹಾಗಾಗಿ ಹೊತ್ತಿಕೊಂಡಿರುವ ಬೆಂಕಿ ಗೋಡೌನ್ ಹಾಗೂ ಅಕ್ಕಪಕ್ಕದ ಅಂಗಡಿ ಮಳಿಗೆಗಳಿಗೂ ಆವರಿಸಿದ್ದು, ಧಗಧಗನೆ ಹೊತ್ತಿ ಉರಿದಿದೆ.
ಈ ಅಂಗಡಿಯಲ್ಲಿ ಕೊಂಚ ಪ್ರಮಾಣದಲ್ಲಿ ಪಟಾಕಿ, ಗ್ರಂಧಿಗೆ, ಬಂಟಿಂಗ್ಸ್, ಧ್ವಜಗಳು ಸೇರಿದಂತೆ ಇನ್ನಿತರೆ ಸಾಮಗ್ರಿಗಳನ್ನು ಮಾರಾಟ ಮಾಡಲು ದಾಸ್ತಾನಿಡಲಾಗಿತ್ತು. ಇಂದು ಮುಂಜಾನೆ ಬೆಂಕಿ ಹೊತ್ತಿ ಉರಿಯುತ್ತಿರುವುದರಿಂದ ಪಟಾಕಿಗಳು ನಿರಂತರವಾಗಿ ಸ್ಫೋಟಗೊಳ್ಳುತ್ತಲೇ ಇದ್ದು, ಜನರಲ್ಲಿ ತೀವ್ರ ಆತಂಕ ಮೂಡಿಸಿತ್ತು.
ಈ ಪಟಾಕಿ ಅಂಗಡಿಗೆ ಹೊಂದಿಕೊಂಡಂತೆ ಹಿಂಭಾಗದಲ್ಲಿ ಮನೆಗಳು ಸಹ ಇದ್ದು, ಜನರು ವಾಸ ಮಾಡುತ್ತಿದ್ದಾರೆ. ಪಟಾಕಿಗಳು ನಿರಂತರವಾಗಿ ಶಬ್ದ ಮಾಡುತ್ತಾ ಸ್ಫೋಟಗೊಳ್ಳುತ್ತಿರುವಂತೆಯೇ ಬೆಂಕಿಯೂ ಧಗಧಗನೆ ಉರಿಯುತ್ತಿರುವುದರಿಂದ ಸ್ಥಳೀಯ ನಿವಾಸಿಗಳು ತೀವ್ರ ಭಯ ಭೀತರಾಗುವಂತೆ ಮಾಡಿತ್ತು.

ಪಟಾಕಿ ಅಂಗಡಿ ಧಗಧಗನೆ ಹೊತ್ತಿ ಉರಿಯುತ್ತಿರುವುದರಿಂದ ಮಂಡಿಪೇಟೆ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ದಟ್ಟವಾದ ಹೊಗೆ ಆವರಿಸಿತ್ತು.
ಮುಂಜಾನೆಯಿಂದಲೇ ಬೆಂಕಿ ಹೊತ್ತಿ ಉರಿಯುತ್ತಿರುವ ಬಗ್ಗೆ ಸುದ್ದಿ ತಿಳಿದ ಅಂಗಡಿ ಮಾಲೀಕ ಮೋಹನ್‍ಕುಮಾರ್ ಅವರು ಸ್ಥಳಕ್ಕೆ ಧಾವಿಸಿದರಾದರೂ ಅಷ್ಟರಲ್ಲಿ ಬೆಂಕಿಯ ಕೆನ್ನಾಲಿಗೆ ಇಡೀ ಅಂಗಡಿಯನ್ನು ರಾಚಿತ್ತು.
ಘಟನೆಯ ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಅಗ್ನಿಶಾಮದ ದಳದ ಸಿಬ್ಬಂದಿ ಮುಂಜಾನೆ 5.30ಕ್ಕೆ ಧಾವಿಸಿ ಬೆಂಕಿ ನಂದಿಸಲು ಮುಂದಾಗಿದ್ದಾರೆ. ಆದರೂ ಬೆಳಿಗ್ಗೆ 11 ಗಂಟೆಯಾದರೂ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲು ಹರಸಾಹಸಪಟ್ಟರು.
ಪಟಾಕಿ ಅಂಗಡಿಯಲ್ಲಿ ಮುಂಜಾನೆ ಬೆಂಕಿ ಹೊತ್ತಿಕೊಂಡಿರುವುದರಿಂದ ಯಾವುದೇ ರೀತಿಯ ಪ್ರಾಣಹಾನಿ ಸಂಭವಿಸಿಲ್ಲ. ಅಂಗಡಿ ಮತ್ತು ಗೋಡೌನ್ ಬಾಗಿಲು ಮುಚ್ಚಿಕೊಂಡು ಎಲ್ಲ ಕೆಲಸಗಾರರು ಮನೆಗೆ ಹೋಗಿದ್ದರಿಂದ ಸಂಭವಿಸಬಹುದಾದ ಸಾವು-ನೋವುಗಳು ತಪ್ಪಿದಂತಾಗಿದೆ. ಬೆಲೆಯ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ
ಈ ಬೆಂಕಿ ಅವಘಡದಿಂದ ಯಾವುದೇ ರೀತಿಯ ಅನಾಹುತಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಮಂಡಿಪೇಟೆಯ ಎರಡು ಕಡೆಗಳಲ್ಲಿ ರಸ್ತೆ ಬಂದ್ ಮಾಡಿ ಪೆÇಲೀಸರು ಬಿಗಿ ಪೆÇಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಘಟನೆಯ ಸುದ್ದಿ ತಿಳಿದ ಕೂಡಲೇ ಶಾಸಕ ಜಿ.ಬಿ. ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಘಟನೆ ನಡೆದ ಸ್ಥಳಕ್ಕೆ ಡಿವೈಎಸ್ಪಿ ಚಂದ್ರಶೇಖರ್, ನಗರಠಾಣೆ ಇನ್ಸ್‍ಪೆಕ್ಟರ್ ದಿನೇಶ್‍ಕುಮಾರ್ ಸೇರಿದಂತೆ ಹಿರಿಯ ಪೆÇಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ಶಶಿಧರ್ ಹಾಗೂ ಅಗ್ನಿಶಾಮಕ ಠಾಣಾಧಿಕಾರಿ ಅಡವೀಶ್ ನೇತೃತ್ವದಲ್ಲಿ 5 ವಾಹನಗಳಲ್ಲಿ ಮೊಕ್ಕಾಂ ಹೂಡಿದ್ದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಶ್ರಮಿಸಿದರು.