ವಿಕಲಚೇತನರಲ್ಲಿ ಹೃದಯಶ್ರೀಮಂತಿಕೆಯಿದೆ: ಜಪಾನಂದಜೀ

ತುಮಕೂರು: ವಿಕಲಚೇತನರಿಗೆ ಅಂಗ ವೈಕಲ್ಯ ಇರಬಹುದು. ಆದರೆ ಅವರಲ್ಲಿ ಹೃದಯವಂತಿಕೆಯಿದೆ. ನಾಗರಿಕರಾದ ನಾವು ಒಮ್ಮೆ ಹೃದಯ ಕೆದಕಿ ನೋಡಿಕೊಳ್ಳಬೇಕು. ಅಲ್ಲಿ ಶ್ರೀಮಂತಿಕೆಯೇ ಇಲ್ಲ. ಎಲ್ಲರೂ ಹೃದಯ ಶೂನ್ಯರಾಗಿದ್ದಾರೆ ಎಂದು ಪಾವಗಡ ಶ್ರೀ ರಾಮಕೃಷ್ಣ ಸೇವಾಶ್ರಮದ ಶ್ರೀ ಜಪಾನಂದಜೀ ಮಹಾರಾಜ್ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮೊಬಲಿಟಿ ಇಂಡಿಯಾ ಸಂಯುಕ್ತ ಆಶ್ರಯದಲ್ಲಿ ಬುಧವಾರ ನಡೆದ ‘ಹಿರಿಯ ನಾಗರಿಕರಿಗೆ ನೆರವು ಮತ್ತು ಸಾಮಾಜಿಕ ಆರೈಕೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಹೆತ್ತ ತಂದೆ-ತಾಯಿಯನ್ನು ಬೀದಿಪಾಲುಮಾಡುವ ಕೆಳಮಟ್ಟಕ್ಕೆ ಇಳಿದಿದ್ದೇವೆ. ಹಾಗಾದರೆ ಶಾಲೆ, ಕಾಲೇಜುಗಳಲ್ಲಿ ನಮಗೆ ನೀಡುವ ಶಿಕ್ಷಣ ಎಂಥದ್ದು ಪ್ರಶ್ನೆ ಹುಟ್ಟುತ್ತದೆ. ಶಾಲಾ ಕಾಲೇಜುಗಳಲ್ಲಿ ಶಿಕ್ಷಣಕ್ಕಿಂತ ಹೆಚ್ಚಾಗಿ ಸಂಸ್ಕಾರ ಕಲಿಸಬೇಕು ಎಂದರು.

ಪಾವಗಡ ಆಶ್ರಮದ ವತಿಯಿಂದ 19,000 ಕ್ಷಯ ರೋಗಿಗಳಿಗೆ ಚಿಕಿತ್ಸೆ ನೀಡಿದ್ದೇವೆ. ಎಲ್ಲವನ್ನು ಸರ್ಕಾರದ ಮೇಲೆ ಹಾಕಬೇಡಿ; ನಮ್ಮ ಕರ್ತವ್ಯವೂ ಇದೆ ಎನ್ನುವುದನ್ನು ಮರೆಯಬೇಡಿ ಎಂದರು.

ವಯಸ್ಸಾದವರನ್ನು ಮೂಲೆಗೆ ಕೂರಿಸಿ ಅವರಲ್ಲಿ ನಕಾರಾತ್ಮಕತೆಯನ್ನು ತುಂಬುತ್ತಿದ್ದೇವೆ. ವೃದ್ಧಾಪ್ಯದಲ್ಲಿರುವವರಿಗೆ, ವಿಕಲಚೇತನರಿಗೆ ಹಣದ ಅವಶ್ಯಕತೆಯಿಲ್ಲ. ಬದಲಾಗಿ ನಿಮ್ಮ ಪ್ರೀತಿ, ಕಾಳಜಿಯ ಅವಶ್ಯಕತೆಯಿದೆ. ಎಲ್ಲಿಯವರೆಗೂ ವಿಕಲಚೇತನರನ್ನು ಹಾಗೂ ವೃದ್ಧರನ್ನು ನಮ್ಮವರೆಂದು ತಿಳಿಯುವುದಿಲ್ಲವೋ ಅಲ್ಲಿಯವರೆಗೆ ಭಾರತ ಮಹಾನ್ ಆಗುವುದಿಲ್ಲ ಎಂದರು.

ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪೆÇ್ರ. ಎಂ ವೆಂಕಟೇಶ್ವರಲು ಅಧ್ಯಕ್ಷತೆ ವಹಿಸಿ ಮಾತನಾಡಿ, ಈಗಿನ ಯುವಕ ಯುವತಿಯರು ಮಾಲ್ ಕಲ್ಚರ್‍ಗಳನ್ನು ಅನುಸರಿಸುತ್ತಿರುವುದರಿಂದ ಅವರಿಗೆ ವೃದ್ಧರ, ವಿಕಲಚೇತನರ ಕಷ್ಟ ಕಾರ್ಪಣ್ಯಗಳು ಕಾಣುತ್ತಿಲ್ಲ. ಸಂಸ್ಕಾರವಿಲ್ಲದ ವಿದ್ಯೆ ಎಂದಿಗೂ ಶೂನ್ಯ ಎಂದರು.

ವಿಕಲಚೇತನರಿಗೆ ಹಾಗೂ ವೃದ್ಧರಿಗೆ ಸರ್ಕಾರ ನೀಡುತ್ತಿರುವ ಯೋಜನೆಗಳು ಸಂಪೂರ್ಣವಾಗಿ ತಲುಪುತ್ತಿಲ್ಲ. ಅನೇಕ ಸೌಲಭ್ಯಗಳು ದುರುಪಯೋಗವಾಗುತ್ತಿವೆ. ಕರ್ನಾಟಕದಲ್ಲಿ ಇಂಥವರಿಗಾಗಿ ಅತಿಹೆಚ್ಚು ಯೋಜನೆಗಳಿವೆ. ಇವುಗಳ ಜಾರಿಯಲ್ಲಿ ತುಮಕೂರು ವಿಶ್ವವಿದ್ಯಾನಿಲಯವು ಕೂಡ ಹೆಚ್ಚಿನ ಪ್ರಯತ್ನ ಮಾಡಲಿದೆ ಎಂದರು.

ಮೊಬಿಲಿಟಿ ಇಂಡಿಯಾ ಕಾರ್ಯಕಾರಿ ನಿರ್ದೇಶಕಿ ಅಲ್ಬಿನಾ ಶಂಕರ್ ಮಾತನಾಡಿ, ವಿಕಲಚೇತನರು ಮತ್ತು ವೃದ್ಧರಿಗೆ ಸ್ಟಿಕ್, ಕನ್ನಡಕ, ಕುರ್ಚಿಗಳಂತ ಸಾಮಾನ್ಯ ನೆರವು ನೀಡಿದರೆ ಸಾಕು, ಅವರು ಯಾರಿಗೂ ಕೈ ಚಾಚದೆ ಬದುಕುತ್ತಾರೆ. ಅವರು ಪ್ರೀತಿ ಕಾಳಜಿ ಹೊರತು ಇನ್ನೇನೆನ್ನೂ ಅಪೇಕ್ಷಿಸುವುದಿಲ್ಲ. ಇಂದು ಅವರಿಗಾಗುವ ಸಮಸ್ಯೆಗಳು ಮುಂದೆ ನಮಗೂ ಕಾಡುತ್ತವೆ ಎನ್ನುವುದನ್ನು ಮರೆಯಬೇಡಿ ಎಂದು ಕಿವಿಮಾತು ಹೇಳಿದರು.

ತುಮಕೂರು ವಿವಿ ಕುಲಸಚಿವೆ ನಾಹಿದಾ ಜûಮ್ ಜûಮ್, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಂಟಿ ನಿರ್ದೇಶಕ ನಟರಾಜ್ ಎಸ್., ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷ ಪೆÇ್ರ. ರಮೇಶ್ ಬಿ., ಹಿರಿಯ ಪ್ರಾಧ್ಯಾಪಕ ಪ್ರೊ. ಕೆ. ಜಿ. ಪರಶುರಾಮ, ವರದಕ್ಷಿಣೆ ವಿರೋಧಿ ವೇದಿಕೆಯ ಕಾರ್ಯದರ್ಶಿ ಸಾ. ಚಿ. ರಾಜಕುಮಾರ್, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಶಿಲ್ಪ ದೊಡ್ಡಮನಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *