
ತುಮಕೂರು : ಮಹಾನಗರ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕ ಸ್ಥಳ ಹಾಗೂ ರಸ್ತೆಯ ಬದಿಗಳಲ್ಲಿ ಯಾವುದೇ ಸಭೆ-ಸಮಾರಂಭ, ಹುಟ್ಟಿದ ಹಬ್ಬ ಹಾಗೂ ಇನ್ನಿತರ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್, ಹೋರ್ಡಿಂಗ್ಸ್, ಪೋಸ್ಟರ್ಸ್, ಕಟೌಟ್ಸ್, ಗೋಡೆ ಬರಹ, ನಾಮಫಲಕ, ಜಾಹೀರಾತು ಫಲಕ ಸೇರಿದಂತೆ ಇನ್ನಿತರೆ ಪ್ರಚಾರ ಸಾಮಗ್ರಿಗಳ ಅಳವಡಿಸುವ ಮುನ್ನ ಮಹಾನಗರ ಪಾಲಿಕೆಯಿಂದ ಕಡ್ಡಾಯವಾಗಿ ಪೂರ್ವಾನುಮತಿ ಪಡೆದುಕೊಳ್ಳಬೇಕು ಎಂದು ಪಾಲಿಕೆ ಆಯುಕ್ತ ಹೆಚ್.ವಿ.ದರ್ಶನ್ ತಿಳಿಸಿದ್ದಾರೆ.
ಪಾಲಿಕೆಯಿಂದ ಅನುಮತಿ ಪಡೆಯದೆ ನಗರ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್, ಇನ್ನಿತರೆ ಪ್ರಚಾರ ಸಾಮಗ್ರಿಗಳ ಅಳವಡಿಸುವುದನ್ನು ನಿಷೇಧಿಸಲಾಗಿದೆ. ನಿಷೇಧವನ್ನು ಉಲ್ಲಂಘಿಸಿ ಸಾರ್ವಜನಿಕ ಸ್ಥಳಗಳನ್ನು ಅಂದಗೆಡಿಸುವವರ ವಿರುದ್ಧ ಗಂಭೀರವಾಗಿ ಕ್ರಮ ಕೈಗೊಳ್ಳಲಾಗುವುದು.
ಮಹಾನಗರ ಪಾಲಿಕೆಯಿಂದ ಬಂಟಿಂಗ್ಸ್, ಹೋರ್ಡಿಂಗ್ಸ್, ಬಟ್ಟೆ ಬ್ಯಾನರ್, ಬಟ್ಟೆ ಬಾವುಟ ಹಾಗೂ ಬಟ್ಟೆ ಫ್ಲೆಕ್ಸ್‍ಗಳಿಗೆ ಮಾತ್ರ ಅನುಮತಿ ನೀಡಲಾಗುವುದು. ಅನುಮತಿ ಪಡೆಯುವ ಪ್ರಚಾರ ಸಾಮಾಗ್ರಿಗಳನ್ನು ಪ್ಲಾಸ್ಟಿಕ್ ಬಳಸಿ ತಯಾರಿಕೆ, ಮಾರಾಟ, ಬಳಕೆ ಮಾಡುವುದನ್ನು ನಿಷೇಧಿಸಲಾಗಿದೆ. ಅನುಮತಿ ನೀಡಿರುವ ಅಂತಿಮ ದಿನಾಂಕ/ಸಮಯದ ತರುವಾಯ ಪ್ರಚಾರ ಸಾಮಗ್ರಿ ಅಳವಡಿಸಿದವರೇ ಸ್ವತಃ ತೆರವುಗೊಳಿಸತಕ್ಕದ್ದು. ಇಲ್ಲವಾದಲ್ಲಿ 10,000 ರೂ.ಗಳ ದಂಡ ವಿಧಿಸಲಾಗುವುದು ಹಾಗೂ ಪಾಲಿಕೆ ವತಿಯಿಂದಲೇ ತೆರವುಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.