ದೈಹಿಕ ಚಟುವಟಿಕೆಯಿಂದ ಟೈಫ್-02 ಡಯಾಬಿಟಿಸ್ ತಡಗಟ್ಟಲು ಕರೆ

ತುಮಕೂರು: ಮಕ್ಕಳಲ್ಲಿ ಟೈಫ್-02 ಡಯಾಬಿಟಿಸ್ ಕಾಣಿಸಿಕೊಳ್ಳಲು ಪ್ರಮುಖ ಕಾರಣ ದೈಹಿಕ ಚಟುವಟಿಕೆ ಇಲ್ಲದ ಜೀವನ ಶೈಲಿ. ಇಂದಿನ ಮಕ್ಕಳು ಟಿ.ವಿ. ಮತ್ತು ಮೊಬೈಲ್‍ಗೆ ದಾಸರಾಗಿ ದೈಹಿಕ ಚಟುವಟಿಕೆಗಳನ್ನೇ ಮರೆತಿದ್ದಾರೆ. ಹಾಗಾಗಿ ವಿದ್ಯಾರ್ಥಿಗಳ ಫೋಷಕರು,ಶಿಕ್ಷಕರು ಇತ್ತ ಗಮನಹರಿಸಬೇಕಿದೆ.ಮಕ್ಕಳಿಗೆ ಶಾಲಾ,ಕಾಲೇಜುಗಳಲ್ಲಿ ಕನಿಷ್ಠ ದೈಹಿಕ ಚಟುವಟಿಕೆಗಳ ಕಡೆಗೆ ಗಮನಹರಿಸುವಂತೆ ಪಠ್ಯಕ್ರಮ ರೂಢಿಸಿಕೊಂಡರೆ ಮಕ್ಕಳು ಚಿಕ್ಕವಯಸ್ಸಿನಲ್ಲಿಯೇ ಮಧುಮೇಹಕ್ಕೆ ತುತ್ತಾಗುವುದನ್ನು ತಡೆಯಬಹುದು ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರುಳೀಧರ ಹಾಲಪ್ಪ ಹೇಳಿದರು.

ಮಕ್ಕಳ ದಿನಾಚರಣೆ,ವಿಶ್ವ ಮಧುಮೇಹ ದಿನದ ಅಂಗವಾಗಿ ಹಾಲಪ್ಪ ಪ್ರತಿಷ್ಠಾನ,ನೆಷ್ಟ್ ಚಾರಿಟಬಲ್ ಟ್ರಸ್ ವತಿಯಿಂದ, ಸಿದ್ದಾರ್ಥ ಮಡಿಕಲ್ ಕಾಲೇಜು ಸಹಯೋಗದಲ್ಲಿ ಆರೋಗ್ಯ ಶಿಬಿರದಲ್ಲಿ ಮಾತನಾಡುತ್ತಿದ್ದರು.

ನಗರದ ಡಾ.ಶ್ರೀಶಿವಕುಮಾರಸ್ವಾಮಿಜಿಗಳ ವೃತ್ತದಲ್ಲಿ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಹಾಗೂ ವಿಶ್ವ ಮಧುಮೇಹ ದಿನಾಚರಣೆಯನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದ ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರುಳೀಧರ ಹಾಲಪ್ಪ,ಸ್ವಾತಂತ್ರ ಭಾರತದ ಮೊದಲ ಪ್ರಧಾನಿ,ಮಕ್ಕಳನ್ನು ಹೆಚ್ಚು ಪ್ರೀತಿಸುತಿದ್ದ ಚಾಚಾ ನೆಹರು ಅವರು,ತನ್ನ ಜನ್ಮ ದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸುವಂತೆ ನೀಡಿದ ಸಲಹೆಯಂತೆ ಪ್ರತಿವರ್ಷ ನವೆಂಬರ್ 14ನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ.ಇಂದು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ನಮ್ಮ ಪ್ರತಿಷ್ಠಾನದ ವತಿಯಿಂದ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದೆ ಎಂದರು.

ಇಂದು ಮಧುಮೇಹವೆಂಬ ರೋಗ ಚಿಕ್ಕಮಕ್ಕಳನ್ನು ಅತಿಯಾಗಿ ಕಾಡುತ್ತಿದೆ.ಮೂವತ್ತು ವರ್ಷದ ಒಳಗಿನ ಮಕ್ಕಳಲ್ಲಿ ಟೈಪ್-2 ಡಯಾಬಿಟಿಸ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು,ಇದಕ್ಕೆ ಮಾತ್ರೆಯಿಲ್ಲ.ಇನ್ಸೂಲಿನ್ ಒಂದೇ ಮದ್ದು.ಇದನ್ನು ಅರಿತಂತೆ ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಸರಕಾರ 2023ರ ಡಿಸೆಂಬರ್ 01 ರಿಂದ ಮೂವತ್ತು ವರ್ಷದ ಒಳಗಿನ ಎಲ್ಲಾ ಮಧುಮೇಹ ರೋಗಿಗಳಿಗೆ ಉಚಿತವಾಗಿ ಇನ್ಸೂಲಿನ್ ಸರಬರಾಜು ಮಾಡಲು ತೀರ್ಮಾನಿಸಿದೆ.ಇದಕ್ಕಾಗಿ ಸರಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ,ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಆರೋಗ್ಯ ಮಂತ್ರಿಗಳಾದ ದಿನೇಶಗುಂಡೂರಾವ್ ಅವರುಗಳನ್ನು ಅಭಿನಂದಿಸುವುದಾಗಿ ತಿಳಿಸಿದರು.

ಮಾಜಿ ಶಾಸಕ ಹೆಚ್.ನಿಂಗಪ್ಪ ಮಾತನಾಡಿ,ನೆಹರು ಆಧುನಿಕ ಭಾರತದ ನಿಮಾತೃ.ಒಂದು ಸಣ್ಣ ವಸ್ತುವಿಗೂ ವಿದೇಶದ ಕಡೆ ನೋಡಬೇಕಾಗಿದ್ದಂತಹ ಸಂದರ್ಭದಲ್ಲಿ ದೇಶದ ಚುಕ್ಕಾಣಿ ಹಿಡಿದು ಹಲವಾರು ಕೈಗಾರಿಕೆಗಳು,ನೀರಾವರಿ ಯೋಜನೆ ಗಳ ಮೂಲಕ ದೇಶವನ್ನು ಅಭಿವೃದ್ದಿಪಥದತ್ತ ತೆಗೆದುಕೊಂಡು ಹೋದವರು.ಅಂತಹವರ ಜನ್ಮದಿನವನ್ನು ಮಕ್ಕಳ ದಿನವಾಗಿ ಆಚರಿಸುತ್ತಿರುವುದು ಸಂತೋಷದ ವಿಚಾರ.ಇದರ ಜೊತೆಗೆ ಹಾಲಪ್ಪ ಪ್ರತಿಷ್ಠಾನದ ರೈತರೊಂದಿಗೆ ನಾವು ಕಾರ್ಯಕ್ರಮದ ಜೊತೆಗೆ, ವಿಶ್ವ ಮಧುಮೇಹದಿನದ ಅಂಗವಾಗಿ ಹಮ್ಮಿಕೊಂಡಿರುವ ಆರೋಗ್ಯ ಶಿಬಿರದ ಪ್ರಯೋಜನವನ್ನು ಹೆಚ್ಚು ಜನರು ಪಡೆದುಕೊಳ್ಳುವಂತಾಗಲಿ ಎಂದು ಶುಭ ಹಾರೈಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಅಹಮದ್ ಮಾತನಾಡಿ,ಭಾರತ ಇತ್ತೀಚಿನ ದಿನಗಳಲ್ಲಿ ಡಯಾಬಿಟಿಸ್ ರೋಗದ ಕ್ಯಾಪಿಟಲ್ ಆಗುತ್ತಿದೆ.ಅಂಕಗಳ ಹಿಂದೆ ಬಿದ್ದ ವಿದ್ಯಾರ್ಥಿಗಳು ಆಟೋಟಗಳನ್ನು ಮರೆತು ಮೊಬೈಲ್, ಟಿ.ವಿ.ಗಳಿಗೆ ಅಂಟಿ ಕುಳಿತ ಪರಿಣಾಮ ಚಿಕ್ಕವಯಸ್ಸಿಗೆ ಹಲವಾರು ಮಾರಾಣಾಂತಿಕ ಕಾಯಿಲೆಗಳಿಗೆ ತುತ್ತಾಗುತಿದ್ದಾರೆ.ಈ ಬಗ್ಗೆ ಪೋಷಕರು ಹೆಚ್ಚಿನ ಗಮನಹರಿಸುವ ಅಗತ್ಯವಿದೆ ಎಂದರು.

ಮುಖಂಡರಾದ ಷಣ್ಮುಖಪ್ಪ,ಸಿದ್ದಲಿಂಗೇಗೌಡ,ನಿವೃತ್ತ ಅಧಿಕಾರಿ ಗೋವಿಂದೇಗೌಡ,ನಟರಾಜು,ಆದಿಲ್,ರೇವಣ್ಣಸಿದ್ದಯ್ಯ, ಪಿ.ಎನ್.ರಾಮಯ್ಯ,ಶ್ರೀಮತಿ ಗೀತಾ,ಕಲ್ಪನ.ಟಿ.ಆರ್,ವಸುಂಧರ್ ಎನ್.ಎಸ್,ಸಿದ್ದಾರ್ಥ ಮಡಿಕಲ್ ಕಾಲೇಜು ಪಿ.ಆರ್.ಓ ರಾಘವೇಂದ್ರ, ವೈದ್ಯರಾದ ಡಾ.ಅಕ್ಷಯ್, ಡಾ.ಸದ್ಗುಣ ಹಾಗೂ ಶುಶ್ರೂಕ ಸಿಬ್ಬಂದಿಗಳು ನಾಗರಿಕರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *