ತುಮಕೂರು ವಿವಿ ಬಿದರಕಟ್ಟೆ ಕ್ಯಾಂಪಸ್‍ನಲ್ಲಿ 20,000 ಗಿಡ ನೆಡುವ ಯೋಜನೆ

ತುಮಕೂರು: ಬಿದರಕಟ್ಟೆಯಲ್ಲಿ ನಿರ್ಮಾಣವಾಗಿರುವ ವಿಶ್ವವಿದ್ಯಾನಿಲಯದ ನೂತನ ಕ್ಯಾಂಪಸ್ ‘ಜ್ಞಾನಸಿರಿ’ಯಲ್ಲಿ 20,000 ಗಿಡಗಳನ್ನು ನೆಡುವ ಗುರಿ ಹೊಂದಿದ್ದು, ಮುಂಬರುವ ದಿನಗಳಲ್ಲಿ ಪರಿಸರ ಸ್ನೇಹಿ ಕ್ಯಾಂಪಸ್ ಅನ್ನು ಕಾಣಬಹುದು ಎಂದು ವಿವಿ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಹೇಳಿದರು.

ತುಮಕೂರು ವಿಶ್ವವಿದ್ಯಾನಿಲಯದ ಬಿದರಕಟ್ಟೆ ಕ್ಯಾಂಪಸ್‍ನಲ್ಲಿ ಸ್ನಾತಕೋತ್ತರ ಪರಿಸರ ವಿಜ್ಞಾನ ಅಧ್ಯಯನ ಮತ್ತು ಸಂಶೋಧನಾ ವಿಭಾಗವು ಬುಧವಾರ ‘ಭೂ ಪುನಃಸ್ಥಾಪನೆ, ಮರುಭೂಮೀಕರಣ ಮತ್ತು ಬರ ಸ್ಥಿತಿಸ್ಥಾಪಕತ್ವ’ ಎಂಬ ಘೋಷವಾಕ್ಯದೊಂದಿಗೆ ಆಯೋಜಿಸಿದ್ದ ‘ವಿಶ್ವಪರಿಸರ ದಿನ’ ಆಚರಣೆಯನ್ನು ಗಿಡ ನೆಡುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.

ವಿಪೆÇ್ರೀ ಸಂಸ್ಥೆಯು ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಜ್ಞಾನಸಿರಿ ಕ್ಯಾಂಪಸ್‍ನಲ್ಲಿ ಜೀವವೈವಿಧ್ಯ ಅಭಯಾರಣ್ಯವನ್ನು ಸ್ಥಾಪಿಸುವ ಒಪ್ಪಂದಕ್ಕೆ ಸಹಿ ಹಾಕಿದ್ದು, ಮುಂದಿನ ವಾರದಲ್ಲಿ ಕ್ಯಾಂಪಸ್‍ನ ವಿಜ್ಞಾನ ಕೇಂದ್ರದಲ್ಲಿ 400 ಗಿಡಗಳನ್ನು ನೆಡಲಾಗುತ್ತಿದೆ ಎಂದು ತಿಳಿಸಿದರು.

‘ಪ್ರಕೃತಿಯೊಂದಿಗೆ ಜ್ಞಾನ’ ಪರಿಕಲ್ಪನೆಯಲ್ಲಿ ಹಸಿರು ಗ್ರಂಥಾಲಯವನ್ನು ನಿರ್ಮಿಸುವ ಯೋಜನೆಯೂ ಪ್ರಗತಿಯಲ್ಲಿದ್ದು, ಮಾಲಿನ್ಯ ರಹಿತ ಕ್ಯಾಂಪಸ್ ಇದರ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.

ವೃಕ್ಷಮಿತ್ರ ಹಾಗೂ ನಿವೃತ್ತ ಪ್ರಾಧ್ಯಾಪಕ ಪ್ರೊ. ಕೆ. ಸಿದ್ದಪ್ಪ ಅವರ ನೇತೃತ್ವದಲ್ಲಿ 20 ಬೇವಿನ ಸಸಿಗಳನ್ನು ನೆಡಲಾಯಿತು. ಮುಂಬರುವ ದಿನಗಳಲ್ಲಿ ವಿವಿಯ ನೂತನ ಕ್ಯಾಂಪಸ್‍ಗೆ 20,000 ಸಸಿ ಪೂರೈಸುವುದಾಗಿ ಭರವಸೆ ನೀಡಿದರು.

ವಿವಿಯ ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನಕುಮಾರ್ ಕೆ., ಕಾರ್ಯಪಾಲಕ ಅಭಿಯಂತರರಾದ ಸುರೇಶ್ ಜಿ. ಆರ್., ಸ್ನಾತಕೋತ್ತರ ಪರಿಸರ ವಿಜ್ಞಾನ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಂಯೋಜಕ ಡಾ. ದ್ವಾರಕಾನಾಥ್ ವಿ., ವಿಜ್ಞಾನ ನಿಕಾಯದ ಡೀನ್ ಪ್ರೊ. ಮನೋಹರ ಶಿಂಧೆ, ಇನ್ನಿತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *